
ಜೈಪುರ : ಜೈಪುರದ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಐಸಿಯುನಲ್ಲಿದ್ದ 6 ರೋಗಿಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಸ್ಟೋರೇಜ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ 11 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಟ್ರಾಮಾ ಕೇಂದ್ರದ ಉಸ್ತುವಾರಿ ಡಾ. ಅನುರಾಗ್ ಧಾಕಡ್ ಹೇಳಿದ್ದಾರೆ. ಕೆಲ ಸಿಬ್ಬಂದಿಗಳು ತಕ್ಷಣ ತೆರಳಿ, ಬೆಂಕಿ ಕಾಣಿಸಿಕೊಂಡಿದ್ದ ಐಸಿಯುನಲ್ಲಿದ್ದ 4 ರೋಗಿಗಳನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು ಮೃತಪಟ್ಟಿದ್ದಾರೆ. ಇತರ 14 ರೋಗಿಗಳನ್ನು ಬೇರೆ ಐಸಿಯು ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಬೆಂಕಿ ಅವಘಡದಿಂದಾಗಿ ವಿವಿಧ ದಾಖಲೆಗಳು, ಐಸಿಯು ಉಪಕರಣಗಳು, ರಕ್ತದ ಮಾದರಿ ಟ್ಯೂಬ್‌ಗಳು ಸೇರಿದಂತೆ ಇತರ ವಸ್ತುಗಳು ಸುಟ್ಟುಹೋಗಿವೆ ಎಂದು ಧಾಕಡ್ ತಿಳಿಸಿದ್ದಾರೆ.
ರೋಗಿಗಳ ರಕ್ಷಣೆ ಬದಲು ತಾವೇ ಓಡಿದ ಸಿಬ್ಬಂದಿ!
ಘಟನೆ ಕುರಿತು ಪ್ರತಿಕ್ರಿಯಿಸಿರುವ ರೋಗಿಗಳ ಕುಟುಂಬಸ್ಥರು, ‘ನಾವು ಹೊಗೆಯನ್ನು ಗಮನಿಸಿ ತಕ್ಷಣ ಸಿಬ್ಬಂದಿಗೆ ಮಾಹಿತಿ ನೀಡಿದ್ದೇವೆ, ಆದರೆ ಅವರು ಗಮನ ಹರಿಸಲಿಲ್ಲ. ಬೆಂಕಿ ಹೊತ್ತಿಕೊಂಡಾಗ, ತಾವೇ ಮೊದಲು ಓಡಿಹೋದರು. ಈಗ ನಮ್ಮ ರೋಗಿಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.ದುರಂತರ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ತನಿಖೆಗಾಗಿ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸ್ಥಳಕ್ಕೆ ಸಿಎಂ ಭಜನ್‌ಲಾಲ್ ಶರ್ಮಾ, ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭೇಟಿ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ