ಬಿಹಾರದಲ್ಲಿ ಮಹಾ ಘಠಬಂಧನ - ಎನ್‌ಡಿಎ ನೇರ ಫೈಟ್‌

Kannadaprabha News   | Kannada Prabha
Published : Oct 07, 2025, 04:24 AM IST
Bihar Chief Minister Nitish Kumar garlanded during 'worker dialogue program' in Nalanda on Sunday.

ಸಾರಾಂಶ

ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು, ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಠಬಂಧನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ಪಟನಾ: ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು, ಚುನಾವಣಾ ಕದನದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಠಬಂಧನ್ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ಎನ್‌ಡಿಎ ಕೂಟದಲ್ಲಿ ಜೆಡಿಯು, ಬಿಜೆಪಿ, ಚಿರಾಗ್‌ ಪಾಸ್ವಾನ್‌ ಅವರ ಲೋಕಜನಶಕ್ತಿ (ರಾಮ್‌ವಿಲಾಸ್), ಜೀತನ್‌ರಾಂ ಮಾಂಝಿ ಅವರ ಹಮ್‌, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕಸಮತಾ ಪಕ್ಷ ಕಣದಲ್ಲಿವೆ.

ಇನ್ನು ಮಹಾಘಠಬಂಧನದಲ್ಲಿ ಆರ್‌ಜೆಡಿ, ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳಿವೆ.

ಇನ್ನು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಕೂಡ ತನ್ನ ಚೊಚ್ಚಲ ಪ್ರವೇಶ ಮಾಡಲಿದ್ದು, ರಾಜ್ಯದ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇದೇ ವೇಳೆ ಕಳೆದ ಬಾರಿ ಕಾಂಗ್ರೆಸ್‌ಗೆ ಏಟು ಕೊಟ್ಟಿದ್ದ ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಕೂಡ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದು, ಮುಸ್ಲಿಂ ಮತಗಳನ್ನು ಕಸಿದು ಕಾಂಗ್ರೆಸ್-ಆರ್‌ಜೆಡಿ ಕೂಟಕ್ಕೆ ಹೊಡೆತ ನೀಡಲಿದೆಯೇ ಎಂಬುದು ಕುತೂಹಲಕಾರಿಯಾಗಿದೆ. ಇದಲ್ಲದೆ, ಆರ್‌ಜೆಡಿಯಿಂದ ಲಾಲು ಪುತ್ರ ತೇಜ್‌ಪ್ರತಾಪ್‌ ಯಾದವ್‌ರನ್ನು ಹೊರದಬ್ಬಲಾಗಿತ್ತು. ಅವರು ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದಾಗಿ ಹೇಳಿದ್ದು, ಯಾವ ರೀತಿ ಪ್ರಭಾವ ಬೀರಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಈಗಾಗಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಎನ್‌ಡಿಎ ಮತ್ತು ವಿರೋಧ ಪಕ್ಷಗಳು ಬೃಹತ್ ಪ್ರಚಾರಗಳನ್ನು ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ಎರಡೂ ಮೈತ್ರಿಕೂಟಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿವೆ.

ಮತದಾರ ಪಟ್ಟಿ ಪರಿಷ್ಕರಣೆ, ಮತಚೋರಿ, ಬಿಹಾರದ ಆರ್ಥಿಕ ಪರಿಸ್ಥಿತಿ- ಇವು ಪ್ರಮುಖ ಚುನಾವಣಾ ವಿಷಯಗಳಾಗಿವೆ.

ಹಾಲಿ ಬಲಾಬಲ:

ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದೆ. ಇದರಲ್ಲಿ ಬಿಜೆಪಿ 80, ಜೆಡಿಯು 45, ಎಚ್‌ಎಎಂ (ಎಸ್) 4 ಮತ್ತು ಇಬ್ಬರು ಸ್ವತಂತ್ರರಿದ್ದಾರೆ.

ವಿರೋಧ ಪಕ್ಷವು 111 ಸ್ಥಾನಗಳನ್ನು ಹೊಂದಿದೆ. ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ (ಎಂಎಲ್) 11, ಸಿಪಿಎಂ 2 ಮತ್ತು ಸಿಪಿಐ 2 ಸ್ಥಾನ ಹೊಂದಿವೆ.

ಒಂದೇ ಅವಧಿ: ನಿತೀಶ್‌ 3 ಬಾರಿ ಸಿಎಂ

ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಬಿಹಾರದಲ್ಲಿ 2020ರ ವಿಧಾನಸಭಾ ಚುನಾವಣೆಗಳು 3 ಹಂತಗಳಲ್ಲಿ ನಡೆದಿದ್ದವು. ಆಗ ಹಾಲಿ ಅಧಿಕಾರದಲ್ಲಿದ್ದ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಂಡಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಸರ್ಕಾರವನ್ನು ರಚಿಸಿದ್ದರು. ಆದರೆ ಇದಾದ ನಂತರ 2 ತಿರುವುಗಳು ಸಂಭವಿಸಿದ್ದವು.

ಆದರೆ, 2022ರಲ್ಲಿ, ನಿತೀಶ್ ಕುಮಾರ್ ಎನ್‌ಡಿಎ ಜತೆಗಿನ ಸಂಬಂಧವನ್ನು ಕಡಿತಗೊಳಿಸಿ ಆರ್‌ಜೆಡಿ ನೇತೃತ್ವದ ‘ಮಹಾಘಠಬಂಧನ್’ ಜತೆ ಸರ್ಕಾರವನ್ನು ರಚಿಸಿದ್ದರು.

ಆದರೆ 2024ರಲ್ಲಿ ನಾಟಕೀಯ ವಿದ್ಯಮಾನದಲ್ಲಿ ಕುಮಾರ್ ಮತ್ತೊಂದು ಬದಲಾವಣೆ ಮಾಡಿದ್ದರು. ‘ಮಹಾಘಠಬಂಧನ್’ನಿಂದ ಏಕಾಏಕಿ ಹೊರಬಂದು ಪುನಃ ಎನ್‌ಡಿಎ ಜತೆಗಿನ ಮೈತ್ರಿಗೆ ಮರಳಿದ್ದರು. ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿ ಮತ್ತೆ ತಾವೇ ಮುಖ್ಯಮಂತ್ರಿ ಆಗಿದ್ದರು.

7 ರಾಜ್ಯಗಳಲ್ಲಿ ನ.11ರಂದು ಉಪ ಚುನಾವಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಜಾರ್ಖಂಡ್‌, ಮಿಜೋರಾಂ, ಪಂಜಾಬ್‌, ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಖಾಲಿ ಇರುವ ಕೆಲ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನ.11ರಂದು ನಡೆಯಲಿದ್ದು, ನ.14ರಂದು ಮತಎಣಿಕೆ ನಡೆಯಲಿದೆ.

ಬಿಹಾರ ಚುನಾವಣೆ ವೇಳೆ ಇಸಿಐ ನೆಟ್‌ ಆ್ಯಪ್‌ ಲೋಕಾರ್ಪಣೆ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ಸೂಪರ್‌ ಆ್ಯಪ್‌ ‘ಇಸಿಐ ನೆಟ್‌’ ಅನ್ನು ಪರಿಚಯಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.ಚುನಾವಣೆಗೆ ಸಂಬಂಧಿಸಿದ ಎಲ್ಲ 40 ಆ್ಯಪ್‌ಗಳನ್ನು ಕ್ರೋಡೀಕರಿಸಿ ‘ಇಸಿಐ ನೆಟ್‌’ ಆ್ಯಪ್‌ ಅನ್ನು ರೂಪಿಸಲಾಗಿದೆ. ಬೂತ್‌ ಹಂತದ ಅಧಿಕಾರಿಗಳಿಂದ ಹಿಡಿದು ಮುಖ್ಯ ಚುನಾವಣಾ ಅಧಿಕಾರಿಗಳ ವರೆಗೆ ಬಳಸಬಹುದಾದ ಆ್ಯಪ್‌ ಇಸಿಐ ನೆಟ್‌ ಆಗಿದೆ. ಚುನಾವಣೆ ಮೇಲೆ ನಿಗಾ, ಮತದಾರರ ನಿರ್ವಹಣೆ ಮತ್ತು ಸಂವಹನ ಹಾಗೂ ವರದಿ ಮಾಡುವ ಡಿಜಿಟಲ್‌ ವೇದಿಕೆಗಳನ್ನೆಲ್ಲ ಒಂದು ಕಡೆ ಸೇರಿಸಿಕೊಂಡು ಈ ಆ್ಯಪ್‌ ಸಿದ್ಧಪಡಿಸಲಾಗಿದೆ. ಈ ಮೂಲಕ ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಲಭ್ಯತೆ ಮತ್ತು ದಕ್ಷತೆ ವಿಚಾರದಲ್ಲಿ ಹೊಸ ಅಧ್ಯಾಯವನ್ನು ತೆರೆದಂತಾಗಲಿದೆ ಎಂದು ಆಯೋಗ ಹೇಳಿದೆ.

ವಿಶೇಷವೆಂದರೆ ಮತದಾನ ಪ್ರಮಾಣದ ವಿವರವನ್ನು ಮತಗಟ್ಟೆ ಅಧಿಕಾರಿಯು ಪ್ರತಿ 2 ಗಂಟೆಗೊಮ್ಮೆ ಈ ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದಾಗಿದೆ. ಈ ಆ್ಯಪ್‌ ಮೂಲಕವೇ ಮತದಾನ, ಮತಎಣಿಕೆ ಪ್ರಕ್ರಿಯೆಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.

ಬುರ್ಖಾಧಾರಿ ಮತದಾರರ ಗುರುತಿಗೆ ಅಂಗನವಾಡಿ ಸಿಬ್ಬಂದಿ

ಪಟನಾ: ‘ಬುರ್ಖಾ ಧರಿಸಿದ ಮತದಾರರ ಗುರುತನ್ನು ಪರಿಶೀಲನೆಗೆ ಸಹಾಯ ಮಾಡಲು ಬಿಹಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಎಲ್ಲಾ ಮತಗಟ್ಟೆಗಳಲ್ಲಿ ನಿಯೋಜಿಸಲಾಗುತ್ತದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ಹೇಳಿದ್ದಾರೆ. ಬುರ್ಖಾ ಧರಿಸಿ ಮತವಂಚನೆ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ನಿಗಾ ಇರಿಸಿ ಎಂದು ಇತ್ತೀಚೆಗೆ ಬಿಜೆಪಿ ಮನವಿ ಮಾಡಿತ್ತು. ಹೀಗಾಗಿ ಆಯೋಗ ಈ ಕ್ರಮ ಜರುಗಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!