ಕಾಶ್ಮೀರದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ ಎಂದು ವಿಶ್ವಸಂಸ್ಥೆಯಲ್ಲಿ ಪಾಕ್‌ ಕ್ಯಾತೆ: ಭಾರತ ಕೆಂಡಾಮಂಡಲ

By Kannadaprabha NewsFirst Published Mar 9, 2023, 9:32 AM IST
Highlights

ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ವ್ಯಾಪಕ ದೌರ್ಜನ್ಯವಾಗ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಬಿಲಾವಲ್‌ ಭುಟ್ಟೋ ಕ್ಯಾತೆ ತೆಗೆದಿದ್ದು, ಈ ಹೇಳಿಕೆ ಪ್ರತಿಕ್ರಿಯಿಸಲು ಸಹ ಅನರ್ಹ ಎಂದು ಪಾಕ್‌ ಕಾಶ್ಮೀರ ಕ್ಯಾತೆಗೆ ಭಾರತ ಕೆಂಡಾಮಂಡಲವಾಗಿದೆ.

ವಿಶ್ವಸಂಸ್ಥೆ (ಮಾರ್ಚ್‌ 9, 2023): ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೆ ಕಾಶ್ಮೀರ ವಿಷಯವನ್ನು ಕೆದಕಿದೆ. ಮಹಿಳೆಯರು, ಶಾಂತಿ ಮತ್ತು ಭದ್ರತೆಯ ಕುರಿತ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಕಾಶ್ಮೀರ ವಿವಾದ ಪ್ರಸ್ತಾಪಿಸಿ, ‘ಕಾಶ್ಮೀರದಲ್ಲಿ ಮಹಿಳೆಯರ ಸ್ಥಿತಿ ಅಪಾಯಕಾರಿಯಾಗಿದೆ’ ಎಂದಿದ್ದಾರೆ. ಭಾರತ ಇದನ್ನು ಇದೇ ವೇದಿಕೆಯಲ್ಲಿ ತೀವ್ರವಾಗಿ ಖಂಡಿಸಿದ್ದು, ‘ಇಂತಹ ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರಗಳು ಪ್ರತಿಕ್ರಿಯಿಸಲು ಸಹ ಅನರ್ಹ’ ಎಂದಿದೆ.

ಮೊದಲು ಬಿಲಾವಲ್‌ ಭುಟ್ಟೋ ಮಾತನಾಡಿ, ‘ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳು ಅಪಾಯದಲ್ಲಿವೆ. ವಿಶೇಷವಾಗಿ ಮಹಿಳೆಯರ ಸ್ಥಿತಿ ಅಪಾಯದಲ್ಲಿದ್ದು, ಅವರ ಮೇಲೆ ದೌರ್ಜನ್ಯಗಳು ನಡಯುತ್ತಿವೆ. ‘ವಿದೇಶಿ ಆಕ್ರಮಿತ’ ಭಾಗಗಳಲ್ಲಿನ ಮಹಿಳೆಯರ ಮೇಲಿನ ಅಪರಾಧದ ಮೇಲ್ವಿಚಾರಣೆ ನಡೆಸಲು ಕಾರ್ಯತಂತ್ರವೊಂದರ ಅಗತ್ಯವಿದೆ. ವಿಶೇಷವಾಗಿ ಭಾರತ ಆಕ್ರಮಿತ ಕಾಶ್ಮೀರದಲ್ಲಿ ಇದು ಆಗಬೇಕಿದೆ’ ಎಂದರು.

ಇದನ್ನು ಓದಿ: ಭೂಕಂಪದಲ್ಲಿ ನೆರವಿಗೆ ಬಂದ ಭಾರತಕ್ಕೆ ಟರ್ಕಿ ಮಿತ್ರದ್ರೋಹ: ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿ ಪಾಕ್‌ಗೆ ಬೆಂಬಲ

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಅವರು, ‘ಇವು ಆಧಾರರಹಿತ, ಕ್ಷುಲ್ಲಕ ಮತ್ತು ರಾಜಕೀಯ ಪ್ರೇರಿತ ಹೇಳಿಕೆಗಳು. ಈ ಟೀಕೆಗಳನ್ನು ನಾನು ತಳ್ಳಿಹಾಕುತ್ತೇನೆ. ನನ್ನ ನಿಯೋಗವು ಇಂತಹ ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರಗಳು, ಪ್ರತಿಕ್ರಿಯಿಸಲು ಸಹ ಅನರ್ಹವೆಂದು ಪರಿಗಣಿಸುತ್ತದೆ’ ಎಂದರು.

‘ನಮ್ಮ ಗಮನವು ಧನಾತ್ಮಕವಾಗಿದ್ದು, ಯಾವತ್ತೂ ಮುಂದಾಲೋಚನೆಯತ್ತ ಗಮನ ಹರಿಸುತ್ತೇವೆ. ಮಹಿಳೆಯರು ಮತ್ತು ಅವರ ಭದ್ರತಾ ಕಾರ್ಯಸೂಚಿಯ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇವೆ’ ಎಂದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಪ್ರದೇಶಗಳು ಭಾರತದ ಭಾಗವಾಗಿವೆ ಮತ್ತು ಯಾವಾಗಲೂ ಇರುತ್ತವೆ ಎಂದು ಭಾರತವು ಈ ಹಿಂದೆ ಪಾಕಿಸ್ತಾನಕ್ಕೆ ತಿಳಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ:ತುರ್ತು ಶಸ್ತ್ರಚಿಕಿತ್ಸೆಗೂ ಔಷಧ ಇಲ್ಲದ ದುಸ್ಥಿತಿ

click me!