ಪಾಕ್‌ಗೆ ಶಾಕ್‌: ಸಿಂಧು ನದಿಗೆ ಭಾರತ ಡ್ಯಾಂ, ನದಿ ಒಪ್ಪಂದ ಸ್ಥಗಿತ ಬಳಿಕ ಮೊದಲ ಅಣೆಕಟ್ಟು

Published : Sep 06, 2026, 07:31 AM IST
Indus Rock Dam

ಸಾರಾಂಶ

ಲಡಾಖ್‌ನ ಗಡಿ ಭಾಗದಲ್ಲಿ, ಸಿಂಧೂ ನದಿಗೆ ಅಡ್ಡಲಾಗಿ ಭಾರತವು ತನ್ನ ಮೊದಲ ನೈಸರ್ಗಿಕ 'ರಾಕ್ ಚೆಕ್ ಡ್ಯಾಂ' ಅನ್ನು ನಿರ್ಮಿಸಿದೆ. ಸಿಮೆಂಟ್ ಬಳಸದೆ, ಕೇವಲ ಬಂಡೆಗಲ್ಲುಗಳಿಂದ ನಿರ್ಮಿಸಲಾದ ಈ ಅಣೆಕಟ್ಟು, ಸ್ಥಳೀಯ ರೈತರ ನೀರಿನ ಸಮಸ್ಯೆ ನೀಗಿಸಿ, ಒಣ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ.

ಲೇಹ್ (ಸೆ.6): ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿದ್ದ ಭಾರತ, ಇದೀಗ ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟೆಯೊಂದನ್ನು (ಚೆಕ್‌ ಡ್ಯಾಂ) ಕಟ್ಟಿದೆ. ಲಡಾಖ್‌ ಗಡಿ ಭಾಗದಲ್ಲಿ ಕೃಷಿ ಸಮುದಾಯದ ನೀರಿನ ಕೊರತೆ ನೀಗಿಸಲು ಹಾಗೂ ಸಿಂಧೂ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಇದನ್ನು ನಿರ್ಮಿಸಿದೆ. ವಿಶೇಷವೆಂದರೆ ಲೇಹ್‌ನ ಉಪಶಿ ಬಳಿ ಸಿಂಧೂ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಡ್ಯಾಂ, ಭಾರತದ ಮೊದಲ ನೈಸರ್ಗಿಕ ‘ರಾಕ್ ಚೆಕ್ ಡ್ಯಾಮ್’ ಎಂಬ ದಾಖಲೆಗೂ ಪಾತ್ರವಾಗಿದೆ.

ಸಿಮೆಂಟ್‌ ಬಳಸದೆ, ಕೇವಲ ನೈಸರ್ಗಿಕ ಬಂಡೆಗಲ್ಲುಗಳನ್ನು ಜೋಡಿಸಿ ನಿರ್ಮಿಸಲಾಗಿರುವ ಈ ಅಣೆಕಟ್ಟು ನದಿಯ ನೀರಿನ ಮಟ್ಟವನ್ನು ಸುಮಾರು 10 ಅಡಿಗಳಷ್ಟು ಹೆಚ್ಚಿಸಿದೆ. ಇದರಿಂದಾಗಿ ಬಿತ್ತನೆ ಸಮಯದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯ ರೈತರಿಗೆ ಜಮೀನುಗಳಿಗೆ ನೀರುಣಿಸಲು ಅನುಕೂಲವಾಗಲಿದೆ.

ವರ್ಷಗಳಿಂದ ಸಿಂಧೂ ನದಿಯು ಆಳವಾದ ಕಂದಕಗಳಲ್ಲಿ ತಗ್ಗಿನಲ್ಲಿ ಹರಿಯುತ್ತಿದ್ದ ಕಾರಣ, ಬಿತ್ತನೆ ಅವಧಿಯಲ್ಲಿ ಪಂಪ್‌ಗಳ ಮೂಲಕ ನೀರೆತ್ತುವುದು ರೈತರಿಗೆ ದುಸ್ತರವಾಗಿತ್ತು. ಸಿಂಧೂ ನೀರು ಹಂಚಿಕೆ ನಿಯಮಗಳ ಮಿತಿ ಮತ್ತು ನೀರಿನ ಅಭಾವದಿಂದ ಕೃಷಿ ಭೂಮಿಗಳು ಒಣಗಿ, ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ನೂತನ ಶಿಲಾ ಅಣೆಕಟ್ಟು ಸುಮಾರು 4 ಕೋಟಿ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ‘ಇಗೂ ಫೇ’ ನೀರಾವರಿ ಕಾಲುವೆಯ ಮೂಲಕ ಒಣ ಭೂಮಿಗಳಿಗೆ ನೀರುಣಿಸುತ್ತಿದೆ.

ಸಮುದ್ರಮಟ್ಟದಿಂದ 11400 ಅಡಿ ಎತ್ತರದಲ್ಲಿ ನಿರ್ಮಿಸಿರುವ ಈ ಡ್ಯಾಂ 200 ಅಡಿ ಉದ್ದ ಹೊಂದಿದ್ದು, 30 ಅಡಿ ಅಗಲವಿದೆ. 180 ಮೆಟ್ರಿಕ್‌ ಟನ್‌ ತೂಕದ ಕಲ್ಲುಗಳನ್ನು ಬಳಸಿ ಕೇವಲ 7 ದಿನಗಳಲ್ಲಿ ನಿರ್ಮಿಸಲಾಗಿದೆ.

ಲಡಾಖ್ ಆಡಳಿತವು ಸಿಂಧೂ ನದಿಯುದ್ದಕ್ಕೂ ಇಂತಹ ಇನ್ನಷ್ಟು ಚೆಕ್ ಡ್ಯಾಂಗಳನ್ನು ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಹಲವೆಡೆ ಕಾಮಗಾರಿ ಆರಂಭವಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಜಲ ಭದ್ರತೆ ಮತ್ತು ನೀರಾವರಿ ವಿಸ್ತರಣೆಗಾಗಿ ಒಟ್ಟು 36 ಚೆಕ್ ಡ್ಯಾಂ ಯೋಜನೆಗಳ ನಿರ್ಮಾಣಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 56 ಕೋಟಿ ರೂ.ಗೂ ಅಧಿಕ ವೆಚ್ಚದ ಈ ಯೋಜನೆಯಲ್ಲಿ ಲೇಹ್ ಭಾಗದಲ್ಲಿ 7 ಹಿಮಾಲಯನ್ ರಾಕ್ ಚೆಕ್ ಡ್ಯಾಂಗಳು ಹಾಗೂ ಕಾರ್ಗಿಲ್ ಭಾಗದಲ್ಲಿ 29 ಚೆಕ್ ಡ್ಯಾಂಗಳು ಒಳಗೊಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಹ್ಯಾಕಾಶ ಕ್ಷೇತ್ರ ಖಾಸಗಿ ಕ್ಷೇತ್ರಕ್ಕೆ ತೆರೆದ ಕೇಂದ್ರ ಸರ್ಕಾರ: ಇಸ್ರೋದ 9 ಸಂಘಟನೆ ಪ್ರಶ್ನೆ
ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ