
ಭುವನೇಶ್ವರ(ಮೇ.10): ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಆಸಾನಿ’ ಚಂಡಮಾರುತ ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿಗೆ ಹತ್ತಿರವಾಗಿದ್ದು ಗರಿಷ್ಠ 105 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಹಾಗೂ ಒಡಿಶಾ, ಬಂಗಾಳ ಹಾಗೂ ಆಂಧ್ರಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಭಾರಿ ವರ್ಷಧಾರೆ ಕಾರಣ ವಿಶಾಖಪಟ್ಟಣಂ ಬಂದರನ್ನು ಮುಚ್ಚಲಾಗಿದ್ದು, ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಇಂಡಿಗೋ ತನ್ನ 23 ವಿಮಾನಗಳನ್ನು ರದ್ದು ಮಾಡಿರುವುದಾಗಿ ಹೇಳಿದೆ.
‘ಆಸಾನಿ’ಯಿಂದಾಗಿ ಪೂರ್ವ ಕರಾವಳಿಗೆ ಭಾರಿ ಮಳೆ ಭೀತಿ!
‘ಸದ್ಯ ಆಸಾನಿ (ಸಿಂಹಳಿ ಭಾಷೆಯಲ್ಲಿ ಕ್ರೋಧ ಎಂದರ್ಥ) ಆಂಧ್ರ ಪ್ರದೇಶದ ಕಾಕಿನಾಡದಿಂದ 300 ಕಿ.ಮೀ ಮತ್ತು ಒಡಿಶಾದ ಗೋಪಾಲಪುರದಿಂದ 510 ಕಿ.ಮೀ ದೂರದಲ್ಲಿದೆ. ಗಂಟೆಗೆ 20 ಕಿ.ಮೀ ವೇಗದಲ್ಲಿ ಕರಾವಳಿಯತ್ತ ಧಾವಿಸುತ್ತಿದೆ. ಈ ಚಂಡಮಾರುತ ತೀರಕ್ಕೆ ಅಪ್ಪಳಿಸುವುದಿಲ್ಲ ಬದಲಾಗಿ ಮರಳಿ ಬಂಗಾಳ ಕೊಲ್ಲಿಯತ್ತ ನುಗ್ಗಿ ದುರ್ಬಲಗೊಳ್ಳುತ್ತದೆ’ ಎಂದು ಐಎಂಡಿ ಹೇಳಿದೆ.
ಪೂರ್ವ ಕರಾವಳಿಯ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದ ಬಳಿಯೇ ಹಾದು ಹೋಗುವ ಕಾರಣ ಈ ಚಂಡಮಾರುತದಿಂದಾಗಿ ಈ ರಾಜ್ಯಗಳಲ್ಲಿ ಮಂಗಳವಾರ ಭಾರೀ ಮಳೆ ಆಗುತ್ತಿದೆ. ರಸ್ತೆ ಸಾರಿಗೆ, ರೈಲು ಸಾರಿಗೆ ಹಾಗೂ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ. ಬೇಸಿಗೆ ಇದ್ದರೂ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿದು, ಚಳಿಗಾಲ ಹಾಗೂ ಮಳೆಗಾಲದಲ್ಲಿರುವ ತಾಪಮಾನ ಸೃಷ್ಟಿಯಾಗಿದೆ.
ಎನ್‌ಡಿಆರ್‌ಫ್‌ನಿಂದ 50 ತಂಡ ನೇಮಕ:
ಚಂಡಮಾರುತದಿಂದ ಸಂಕಷ್ಟಕ್ಕೀಡಾಗುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು 50 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ 22 ತಂಡಗಳು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿವೆ.
ಅಸಾನಿ ಚಂಡಮಾರುತದ ಆರ್ಭಟ: ಅಲ್ಲಲ್ಲಿ ಮಳೆ
ನೌಕಾದಳದಿಂದ ಸಹಕಾರ:
ಆಸಾನಿಯಿಂದಾಗಿ ತೊಂದರೆಗೊಳಗಾಗುವ ತೀರ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭಾರತೀಯ ನೌಕಾಪಡೆಯ ಪೂರ್ವ ಕಮಾಂಡ್ ಕೈಜೋಡಿಸಿದೆ. ಭಾರಿ ಮಳೆಯಿಂದಾಗಿ ವಿಶಾಖಪಟ್ಟಣಂ ಭಾಗದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ.
ಅರಬ್ಬಿ ಸಮುದ್ರ ಪ್ರಕ್ಷುಬ್ಧ: ಮಲ್ಪೆ ಬೀಚಿಗೆ ಪ್ರವಾಸಿಗರಿಗೆ ನಿರ್ಬಂಧ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಪ್ರಭಾವ ಬೀರಿದ್ದು, ಭಾನುವಾರ ರಾತ್ರಿಯಿಂದ ಸಮುದ್ರವು ಭಾರೀ ಪ್ರಕ್ಷುಬ್ಧವಾಗಿದೆ. ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಭಾನುವಾರ ಸಂಜೆಯಿಂದಲೇ ಸಮುದ್ರದಲ್ಲಿ ಭಾರಿ ಅಲೆಗಳು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಮುದ್ರದಲ್ಲಿ ಎಲ್ಲಾ ರೀತಿಯ ಮನರಂಜನಾ ಸಾಹಸ ಕ್ರೀಡೆಗಳನ್ನು ಭಾನುವಾರ ಸಂಜೆಯಿಂದಲೇ ಸ್ಥಗಿತಗೊಳಿಸಲಾಗಿದೆ.
ವಿಶ್ವಪ್ರಸಿದ್ಧ ಸೈಂಟ್ ಮೇರೀಸ್ ದ್ವೀಪಕ್ಕೂ ಪ್ರವಾಸಿಗರ ಭೇಟಿ ರದ್ದುಗೊಳಿಸಲಾಗಿದೆ. ಇದರಿಂದ ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದ ನೂರಾರು ಮಂದಿ ಪ್ರವಾಸಿಗರಿಗೆ ನಿರಾಶೆಯಾಗಿದೆ.
ತೇಲುವೆ ಸೇತುವೆ ನಾಶ:
ಕಳೆದ ಶುಕ್ರವಾರವಷ್ಟೇ ಉದ್ಘಾಟನೆಯಾಗಿದ್ದ 80 ಲಕ್ಷ ರು. ವೆಟ್ಟದ ರಾಜ್ಯದ ಪ್ರಥಮ ತೇಲುವ ಸೇತುವೆಯು ಚಂಡಮಾರುತದಿಂದ ನಾಶವಾಗಿದೆ. ಅದರ ಫೈಬರ್ ಬಾಕ್ಸ್‌ಗಳು ಸಮುದ್ರದಲ್ಲಿ ತೇಲಾಡುತ್ತಿವೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಆದರೆ ಮಲ್ಪೆ ಅಭಿವೃದ್ಧಿ ಸಮಿತಿ ನಿರ್ವಾಹಕ ಸುದೇಶ್ ಶೆಟ್ಟಿಈ ವದಂತಿಯನ್ನು ನಿರಾಕರಿಸಿದ್ದಾರೆ. ಭಾನುವಾರವೇ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಿದ್ದುದರಿಂದ ಸೇತುವೆಯ ಮೇಲೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಸೋಮವಾರ ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಕಳಚಲಾಗಿದೆ. ಆಗ ಸೇತುವೆಯ ಕೆಲವು ಭಾಗಗಳು ಸಮುದ್ರದಲ್ಲಿ ತೇಲಾಡಿದ್ದು, ಯಾರೋ ಅದನ್ನು ವಿಡಿಯೋ ಮಾಡಿ ವದಂತಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಚಂಡಮಾರುತದ ಹಿನ್ನೆಲೆಯಲ್ಲಿ ಮುಂದಿನ 3 ದಿನಗಳ ಕಾಲ ಪ್ರವಾಸಿಗರು ಮಲ್ಪೆ ಸಮುದ್ರ ತೀರಕ್ಕೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ