
ಹೆಣ್ಣು ಹುಟ್ಟಿದರೆ ಮನೆಗೆ ಮಹಾಲಕ್ಷ್ಮಿ ಬಂದಳು ಎಂದು ಅನೇಕರು ಖುಷಿ ಪಡುತ್ತಾರೆ. ಹೆಣ್ಣು ಹೆತ್ತವರು ಯಾರೂ ಹಾಳಾಗಿಲ್ಲ, ಹೆಣ್ಣಿಗೆ ಕೊಡಬೇಕಾದ ಗೌರವ ಕೊಟ್ಟು ಸಲಹಿದವರೆಲ್ಲಾ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಆದರೆ ಸಾಲು ಸಾಲು ಹೆಣ್ಣು ಮಕ್ಕಳ ಹೆತ್ತರೆ ಭಾರತದಲ್ಲಿ ಖುಷಿ ಪಡುವವರಿಗಿಂತ ಅಳುವವರೇ ಹೆಚ್ಚು. ವೇದ ಪುರಾಣಗಳು ಏನೇ ಹೇಳಿದರು ಪೋಷಕರು ಈ ಮಕ್ಕಳನ್ನು ಸಾಕುವುದು ಹೇಗೋ ಎಂದು ಚಿಂತೆ ಮಾಡಲು ಶುರು ಮಾಡುತ್ತಾರೆ. ಮತ್ತೊಂದೆಡೆ ಕುಲ ಉದ್ಧಾರಕನಾಗಿ ಬಹುತೇಕರು ಗಂಡು ಮಗುವನ್ನು ಬಯಸುವುದರಿಂದಾಗಿ ಒಂದರ ನಂತರ ಒಂದು ಹೆಣ್ಣು ಮಗು ಜನಿಸಿದರೆ ಖುಷಿ ಪಡುವುದಕ್ಕಿಂತಲೂ ರೋದಿಸುವವರೇ ಹೆಚ್ಚು.
ಅದೇ ರೀತಿ ಇಲ್ಲೊಂದು ಕಡೆ 4ನೇ ಮಗುವೂ ಹೆಣ್ಣಾಯ್ತು ಎಂದು ಪೋಷಕರು ರೋದಿಸುತ್ತಿದ್ದರೆ ಆಗಷ್ಟೇ ಜನಿಸಿದ ಕಂದ ಇದ್ಯಾವುದರ ಅರಿವಿಲ್ಲದೇ ಚಿಂತೆಯಿಂದ ಗಲ್ಲಕ್ಕೆ ಕೈಯಿಟ್ಟು ಚಿಂತೆಯಿಂದ ನೋಡುತ್ತಿದೆ. ಈ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತಾಯಿ ಹಾಗೂ ಮಗುವಿನ ಕುಟುಂಬದವರು ತಮ್ಮ ಮನೆಯಲ್ಲಿ ಜನಿಸಿದ 4ನೇ ಮಗುವನ್ನು ಬಹಳ ದುಃಖದಿಂದ ಬರಮಾಡಿಕೊಳ್ತಿರುವ ವೀಡಿಯೋ ಇದಾಗಿದೆ. ವೀಡಿಯೋ ನೋಡಿದ ಅನೇಕರು ತನ್ನ ಆಗಮನವನ್ನು ನೋಡಿ ಪೋಷಕರು ಅಳುತ್ತಿರುವುದಕ್ಕೆ ಬೇಸರಪಡುತ್ತಿರುವ ಮಗುವನ್ನು ನೋಡಿ ದುಃಖಿತರಾಗಿದ್ದಾರೆ.
ಮಗುಜನಿಸಿದ್ದಕ್ಕೆ ಖುಷಿ ಪಡದ ತಾಯಿ
ಆದರೆ ಈ ವೀಡಿಯೋದಲ್ಲಿ ಆಗಷ್ಟೇ ಜನಿಸಿದ ಮಗುವಿನ ರಿಯಾಕ್ಷನ್ ನೋಡಿದ್ರೆ ಎಂಥವರಿಗೂ ಕರುಳು ಕಿವಿಚಿದಂತಾಗುವುದು ಗ್ಯಾರಂಟಿ. ಮಗುವಿಗೆ ಪೋಷಕರು ತನ್ನನ್ನು ನೋಡಿ ದುಃಖಿಸ್ತಿದ್ದಿರೋದು ಗೊತ್ತಾಗ್ತಿದೆ ಎಂಬಂತಿದೆ ಆ ಕಂದನ ರಿಯಾಕ್ಷನ್. ಆಸ್ಪತ್ರೆ ಸಿಬ್ಬಂದಿ ಈ ಪುಟ್ಟ ಕಂದ ಹಾಗೂ ತಾಯಿಯ ದೃಶ್ಯವನ್ನು ಸೆರ ಹಿಡಿದಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ತಾಯಿಯ ಪಕ್ಕದಲೇ ಮಗುವನ್ನು ಮಲಗಿಸಲಾಗಿದೆ. ಆದರೆ ತಾಯಿಗೆ ಮಗು ಜನಿಸಿದ ಖುಷಿ ಇಲ್ಲ, ಕಾರಣ ಆಕೆ ಹೆಣ್ಣು ಮಗು.
ತಾಯಿ ಹಾಗೂ ಮಗುವಿನ ಬಂಧ ಜನ್ಮಜನ್ಮಾಂತರವನ್ನು ಮೀರಿದ್ದು, ಆದರೆ ಇಲ್ಲಿ ಆಸ್ಪತ್ರೆ ಸಿಬ್ಬಂದಿ ಆಗಷ್ಟೇ ಜನಿಸಿದ ಆ ಕಂದನನ್ನು ತಬ್ಬಿಕೊಳ್ಳುವಂತೆ ತಾಯಿಗೆ ಮನವಿ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ತಾಯಿ ಮುಖವನ್ನು ಮತ್ತೊಂದೆಡೆ ತಿರುಗಿಸಿದ್ದರೆ ಇತ್ತ ಆಗಷ್ಟೇ ಜನಿಸಿದ ಕಂದ ತಾಯಿಯನ್ನೇ ಚಿಂತೆಯಿಂದ ದಿಟ್ಟಿಸಿ ನೋಡುತ್ತಿದೆ. ಇದನ್ನು ನೋಡಿ ನರ್ಸ್ ಮಗುವನ್ನು ತಬ್ಬಿಕೊಳ್ಳುವಂತೆ ತಾಯಿಗೆ ಹೇಳುತ್ತಾರೆ. ಆ ಮಗು ನನ್ನನ್ನು ಅಮ್ಮ ಸ್ವೀಕರಿಸುತ್ತಾರೋ ಇಲ್ಲವೋ ಎಂದು ಚಿಂತಿಗೀಡಾಗಿದೆ ಎಂದು ಹೇಳುತ್ತಿದ್ದಾರೆ. ಮಗೂ ನಿನ್ನನ್ನು ನಿನ್ನ ಅಮ್ಮ ಸ್ವೀಕರಿಸುತ್ತಾಳೆ ಎಂದು ಆಸ್ಪತ್ರೆಯ ನರ್ಸ್ ವೀಡಿಯೋದಲ್ಲಿ ಹೇಳುವುದನ್ನು ಕೇಳಬಹುದಾಗಿದೆ.
ಮಗುವಿನ ಮುಖ ನೋಡಿ ದುಃಖಿತರಾದ ನೆಟ್ಟಿಗರು:
ಈ ವೀಡಿಯೋದಲ್ಲಿ ಮಗುವಿನ ಮುಖ ಹಾಗೂ ಅದರ ಪ್ರತಿಕ್ರಿಯೆ ನೋಡಿದವರೆಲ್ಲರೂ ಮನೆಯವರ ಪ್ರತಿಕ್ರಿಯೆ ನೋಡಿ ಬೇಜಾರಾಗಿದ್ದಾರೆ. ಅನೇಕರು ತಾವು ಆ ಮಗುವನ್ನು ದತ್ತು ಪಡೆಯುವುದಾಗಿ ಹೇಳಿದ್ದಾರೆ. ಈ ಪುಟ್ಟ ಕಂದನ ನೋಟ ನನ್ನ ಎದೆ ಒಡೆಯುವಂತೆ ಮಾಡುತ್ತಿದೆ ನಾನು ಒಂದು ಹೆಣ್ಣು ಮಗುವಿಗಾಗಿ ವರ್ಷಗಳ ಕಾಲ ಬೇಡಿದೆ ಆದರೆ ಸಿಗಲಿಲ್ಲ, ಆದರೆ ಯಾರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೋ ಅವರು ಅದಕ್ಕೆ ಕೊಡಬೇಕಾದ ಮಾನ್ಯತೆ ಕೊಡುತ್ತಿಲ್ಲ ಎಂದು ದುಃಖಿತಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಬಹಳ ಬೇಸರದ ವಿಚಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇಲ್ಲಿ 4ನೇ ಮಗು ಹೆಣ್ಣಾಗಿದ್ದಾಕ್ಕೆ ಪೋಷಕರು ದುಃಖಿತರಾಗಿದ್ದಾರೆ. ಆದರೆ ಕೆಲವು ಕಡೆ 2ನೇ ಬಾರಿ ಹೆಣ್ಣು ಮಗು ಜನಿಸಿದರು ಅನೇಕರು ಅಳಲು ಶುರು ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಬೇಸರದ ವಿಚಾರ ಈ ಮಗುವಿಗೆ ಒಳ್ಳೆಯ ಭವಿಷ್ಯ ಸಿಗುವಂತಾಗಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ನೋಡಿ ಯಾರೂ ಏಕೆ ಸಂತೋಷವಾಗಿಲ್ಲ ಎಂದು ಕೇಳಲು ಅವಳು ಬಯಸುತ್ತಿರುವಂತೆ ಮಗು ಕಣ್ಣು ಮಿಟುಕಿಸುತ್ತಿರುವುದನ್ನು ನೋಡುವುದಕ್ಕೆ ದುಃಖವಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ ಆಗಷ್ಟೇ ಜನಿಸಿದ ಮಗುವಿಗೆ ಪೋಷಕರು ತನ್ನನ್ನು ನೋಡಿ ದುಃಖಿಸ್ತಾರೋ ಖುಷಿ ಪಡ್ತಾರೋ ಎಂಬುದರ ಅರಿವಿರುವುದಿಲ್ಲ, ಆದರೆ ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ಮಗುವೊಂದು ತಾಯಿಯ ಗರ್ಭದಲ್ಲಿದ್ದಾಗ ಹಾಗೂ ಅದು ಜನಿಸಿದ ಕೆಲ ಸಮಯದವರೆಗೂ ಅದಕ್ಕೆ ಹಿಂದಿನ ಜನ್ಮದ ನೆನಪುಗಳಿರುವುದು ಕ್ರಮೇಣ ಆ ನೆನಪುಗಳು ಮಾಸುವುದು. ನಮ್ಮ ಹಿಂದಿನ ಜನ್ಮದ ಕರ್ಮವನ್ನಾಧರಿಸಿ ನಮಗೆ ಮಕ್ಕಳು ಪತಿ ಪತ್ನಿ ಪಶು ಸಿಗುವುದು ಎಂಬ ನಂಬಿಕೆ ಇದೆ. ಹೀಗಾಗಿಯೇ ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಸಂಸ್ಖೃತ ಮಾತಿದೆ.ಅಂದರೆ ಋಣವಿಲ್ಲದೆ ಯಾವ ಬಂಧಗಳೂ ಗಟ್ಟಿಯಾಗುವುದಿಲ್ಲ. ಪಶು (ಜಾನುವಾರು), ಪತ್ನಿ (ಹೆಂಡತಿ), ಮತ್ತು ಸುತಾಲಯ (ಮಕ್ಕಳು) ಇವೆಲ್ಲವೂ ಹಿಂದಿನ ಜನ್ಮದ ಋಣದ ಫಲವಾಗಿ ನಮ್ಮ ಜೊತೆಗಿರುವ ಸಂಬಂಧಗಳೇ ಎಂಬುದನ್ನು ಇದು ಸೂಚಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ತಮ್ಮ ಋಣವನ್ನು ತೀರಿಸಿಕೊಳ್ಳಲು ಈ ಸಂಬಂಧಗಳನ್ನು ಪಡೆಯುತ್ತಾನೆ.
ಇದನ್ನೂ ಓದಿ: ಕಸ ಎಸಿಬೇಡಿ ಎಂದ ವಿದೇಶಿ ಯುವತಿಗೆ ಕಿರುಕುಳ: ಮಕ್ಕಳ ವರ್ತನೆಗೆ ಆಘಾತಗೊಂಡ ವಿದೇಶಿ ಯುವತಿ
ಇದನ್ನೂ ಓದಿ: ಒಡಿಶಾದ ಚಿಲಿಕಾ ಸರೋವರದಲ್ಲಿ ಅಪರೂಪದ ವಿದ್ಯಮಾನ: ಸುರುಳಿ ಸುತ್ತಿ ಆಕಾಶಕ್ಕೆ ಚಿಮ್ಮಿದ ನೀರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ