ಒಡಿಶಾದ ಚಿಲಿಕಾ ಸರೋವರದಲ್ಲಿ ಅಪರೂಪದ ವಿದ್ಯಮಾನ: ಸುರುಳಿ ಸುತ್ತಿ ಆಕಾಶಕ್ಕೆ ಚಿಮ್ಮಿದ ನೀರು

Published : Oct 12, 2025, 11:47 AM IST
Waterspout Over Chilika Lake

ಸಾರಾಂಶ

India's Largest Saltwater Lake: ಒಡಿಶಾದ ಚಿಲಿಕಾ ಸರೋವರದಲ್ಲಿ ಅಪರೂಪದ ಸುಂಟರಗಾಳಿಯೊಂದು ಸೃಷ್ಟಿಯಾಗಿ, ನೀರನ್ನು ಆಕಾಶದೆತ್ತರಕ್ಕೆ ಚಿಮ್ಮಿಸಿದೆ. ಸ್ಥಳೀಯವಾಗಿ 'ಹಾಥಿಸುಂಧ' ಎಂದು ಕರೆಯಲ್ಪಡುವ ಈ ವಿದ್ಯಮಾನದ ವೀಡಿಯೋ ವೈರಲ್ ಆಗಿದ್ದು, ಇದು ಭಾರತದಲ್ಲಿ ಅತ್ಯಂತ ಅಪರೂಪದ ಘಟನೆಯಾಗಿದೆ.

ಒಡಿಶಾದ ಚಿಲಿಕಾ ಸರೋವರದಲ್ಲಿ ಅಪರೂಪದ ವಿದ್ಯಮಾನ

ಭುವನೇಶ್ವರ: ಒಡಿಶಾದ ಚಿಲಿಕಾ ಸರೋವರದಲ್ಲಿ ಅಪರೂಪದ ವಿದ್ಯಮಾನವೊಂದು ನಡೆದಿದ್ದು, ಇದರ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿವೆ. ಚಿಲಿಕಾ ಸರೋವರದ ಮೇಲೆ ಸುಂಟರಗಾಳಿ ಎದ್ದ ಪರಿಣಾಮ ನೀರು ಸುರುಳಿ ಸುರುಳಿಯಾಗಿ ಆಕಾಶದೆತ್ತರಕ್ಕೆ ಏರಿದ್ದು, ಈ ಅಪರೂಪದ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ಪ್ರಕ್ರಿಯೆ ಅಲ್ಲಿದ್ದ ಪ್ರವಾಸಿಗರಲ್ಲಿ ಕೆಲ ಕಾಲ ಭಯ ಸೃಷ್ಟಿಸಿತ್ತು. 2018 ಹಾಗೂ 19ರಲ್ಲೂ ಇಲ್ಲಿ ಇಂತಹದ್ದೇ ಘಟನೆ ನಡೆದಿತ್ತು.

ಸುರುಳಿ ಸುರುಳಿಯಾಗಿ ನಭಕ್ಕೆ ಚಿಮ್ಮಿದ ನೀರು

ಶುಕ್ರವಾರ ಒಡಿಶಾದ ಚಿಲಕಾ ಸರೋವರದಲ್ಲಿ ಈ ಘಟನೆ ನಡೆದಿದ್ದು, ಸರೋವರದ ತೀರದಲ್ಲಿ ಪ್ರವಾಸಿಗರು ಈ ದೃಶ್ಯ ನೋಡಿ ಭಯಗೊಂಡಿದ್ದರು. ನೂರಾರು ಪ್ರವಾಸಿಗರು ಅಲ್ಲಿದ್ದಾಗಲೇ ದೇವಿ ಕಾಳಿಜೈ ದೇವಾಲಯದ ನೈಋತ್ಯಕ್ಕೆ ಸುಳಿಗಾಳಿ ರೂಪುಗೊಂಡು ನೀರನ್ನು ಆಕಾಶದೆತ್ತರಕ್ಕೆ ಚಿಮ್ಮಿಸಿತ್ತು. ಗಾಳಿಯ ಒತ್ತಡದಲ್ಲಿನ ಹಠಾತ್ ಬದಲಾವಣೆಯಿಂದಾಗಿ, ನೀರಿನ ಚಿಲುಮೆಯು ಹಲವಾರು ನಿಮಿಷಗಳ ಕಾಲ ಆಕಾಶದ ಕಡೆಗೆ ಏರಿ ಕ್ರಮೇಣ ಕಣ್ಮರೆಯಾಗಿದೆ.

ಪ್ರವಾಸಿಗರ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆ 

ಅನೇಕ ಪ್ರವಾಸಿಗರು ಈ ಅಪರೂಪದ ವಿದ್ಯಮಾನವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿವೆ. ಗಾಳಿಯ ಒತ್ತಡದಿಂದ ರೂಪುಗೊಂಡ ಈ ಅಪರೂಪದ ದೃಶ್ಯಾವಳಿಯನ್ನು ಸ್ಥಳೀಯರು ಹಾಥಿಸುಂಧ ಎಂದು ಕರೆಯುತ್ತಾರೆ. ಈ ನೀರು ಸುರುಳಿಯಾಗಿ ಆನೆ ಸೊಂಡಿಲಿನಂತೆ ಕಾಣುತ್ತಿದ್ದಿದ್ದರಿಂದ ಅಲ್ಲಿನ ಜನ ಹಾಥಿಸುಂದ ಎಂದು ಕರೆದಿದ್ದಾರೆ ಎಂದು ವರದಿಯಾಗಿದೆ. 2018 ಮತ್ತು 2019 ರಲ್ಲಿಯೂ ಚಿಲಿಕಾ ಸರೋವರದಲ್ಲಿ ಇದೇ ರೀತಿಯ ನೀರಿನ ಚಿಲುಮೆಗಳು ಸೃಷ್ಟಿಯಾಗಿದ್ದವು. ಆದರೆ ಈ ಬಾರಿ ಸುಂಟರಗಾಳಿಯಿಂದ ರೂಪುಗೊಂಡ ನೀರಿನ ಸುರುಳಿಯೂ ಬೃದಹಾಕಾರವಾಗಿತ್ತು. ಆಕಾಶದೆತ್ತರೆಕ್ಕೆ ಸುರುಳಿಯಾಗಿ ಸಾಗುವ ಮೂಲಕ ನೋಡುಗರಿಗೆ ಅಚ್ಚರಿಯುಂಟು ಮಾಡಿತ್ತು.

ಆದರೆ ಭಾರತದಲ್ಲಿ ಇಂತಹ ನೀರಿನ ಸುರುಳಿ ಆಕಾಶಕ್ಕೇರುವ ದೃಶ್ಯಾವಳಿಗಳು ಬಹಳ ಅಪರೂಪ, ಸಾಮಾನ್ಯವಾಗಿ ಅಮೆರಿಕ ಮತ್ತು ಕೆನಡಾದ ಕರಾವಳಿ ಪ್ರದೇಶಗಳಲ್ಲಿ ಇಂತಹ ದೃಶ್ಯಗಳು ಕಂಡುಬರುತ್ತವೆ ಎಂದು ಹವಾಮಾನ ತಜ್ಞ ವಿಶ್ವಜಿತ್ ಸಾಹು ಹೇಳಿದ್ದಾರೆ. ಭಾರತದಲ್ಲಿ ಅವುಗಳ ಸೃಷ್ಟಿ ಬಹಳ ಅಪರೂಪ, ಆದರೂ ಕೆಲವೊಮ್ಮೆ ಅವು ಬಂಗಾಳ ಕೊಲ್ಲಿಯ ಬಳಿ ರೂಪುಗೊಳ್ಳುತ್ತವೆ. ಒಡಿಶಾದಲ್ಲಿ ಇಂತಹ ಘಟನೆಗಳು ಅತ್ಯಂತ ಅಪರೂಪ. ಬೆಚ್ಚಗಿನ, ಆರ್ದ್ರ ಗಾಳಿಯು ಏರಿದಾಗ ಮತ್ತು ತಂಪಾದ, ಶುಷ್ಕ ಗಾಳಿಯನ್ನು ಭೇಟಿಯಾದಾಗ ನೀರಿನ ಬಿರುಗಾಳಿಯು ರೂಪುಗೊಳ್ಳುತ್ತದೆ, ಇದು ಸುಂಟರಗಾಳಿಯಂತೆಯೇ ತಿರುಗುವ ಮೇಲ್ಮುಖ ಸುಳಿಯನ್ನು ಸೃಷ್ಟಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಒಡಿಶಾದಲ್ಲಿರುವ ಭಾರತದ ಅತಿದೊಡ್ಡ ಉಪ್ಪುನೀರಿನ ಸರೋವರವಿದು:

ಒಡಿಶಾದಲ್ಲಿರುವ ಭಾರತದ ಅತಿದೊಡ್ಡ ಉಪ್ಪುನೀರಿನ ಸರೋವರವಾದ ಚಿಲಿಕ ಸರೋವರವನ್ನು ಸಾಮಾನ್ಯವಾಗಿ ಭಾರತದ ನೀರಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಪುರಿ, ಗಂಜಾಂ ಮತ್ತು ಖೋರ್ಧಾ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಇದು ಭುವನೇಶ್ವರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ ಮತ್ತು ಬಂಗಾಳಕೊಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಸರೋವರವು 225 ಕ್ಕೂ ಹೆಚ್ಚು ಮೀನು ಪ್ರಭೇದಗಳಿಗೆ ನೆಲೆಯಾಗಿದೆ ಮತ್ತು ಚಳಿಗಾಲದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತದೆ, ಅವುಗಳಲ್ಲಿ ಫ್ಲೆಮಿಂಗೋಗಳು, ಸೈಬೀರಿಯನ್ ಬಾತುಕೋಳಿಗಳು ಮತ್ತು ಬಿಳಿ ಹೊಟ್ಟೆಯ ಸಮುದ್ರ ಹದ್ದುಗಳು ಸೇರಿವೆ.

100 ಕ್ಕೂ ಹೆಚ್ಚು ಹಳ್ಳಿಗಳ 1.5 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯಕ್ಕಾಗಿ ಚಿಲಿಕದಲ್ಲಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ, ಇದು ಸ್ಥಳೀಯ ಆರ್ಥಿಕತೆಯ ಅತ್ಯಗತ್ಯ ಭಾಗವಾಗಿದೆ. ಈ ಸರೋವರವು 70 ಕಿ.ಮೀ ಉದ್ದ ಮತ್ತು 30 ಕಿ.ಮೀ ಅಗಲವನ್ನು ಹೊಂದಿದ್ದು, 40 ಕ್ಕೂ ಹೆಚ್ಚು ಸಣ್ಣ ನದಿಗಳು ಮತ್ತು ಮಳೆನೀರಿನ ತೊರೆಗಳಿಂದ ಪೋಷಿಸಲ್ಪಡುತ್ತದೆ.

ಚಿಲಿಕ ಸರೋವರವು ಆರು ದೊಡ್ಡ ದ್ವೀಪಗಳನ್ನು ಸೃಷ್ಟಿಸಿವೆ, ಪರಿಕುಡ್, ಫುಲ್ಬರಿ, ಬೆರಾಹ್‌ಪುರ, ನುವಾಪಾರ, ನಲಬಾಡ ಮತ್ತು ತಂಪಾರ ಇವು ಆ ದ್ವೀಪಗಳಾಗಿದ್ದು, ಇವೆಲ್ಲವೂ ಪುರಿ ಜಿಲ್ಲೆಯ ಕೃಷ್ಣ ಪ್ರಸಾದ್ ಕಂದಾಯ ಪ್ರದೇಶದ ಭಾಗವಾಗಿದೆ. ಸರೋವರದ ಮಧ್ಯದಲ್ಲಿರುವ ದೇವಿ ಕಾಳಿಜೈ ದೇವಾಲಯವು ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರಮಣೀಯ ಮತ್ತು ಜೀವವೈವಿಧ್ಯ ಸರೋವರಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ದೋಣಿ ವಿಹಾರ ಮತ್ತು ಪರಿಸರ ಪ್ರವಾಸೋದ್ಯಮವು ಪ್ರಮುಖ ಆಕರ್ಷಣೆಗಳಾಗಿವೆ.

ಇದನ್ನೂ ಓದಿ: ಹೆಸರು ಬರೆಯುವ ಮೊದಲೇ ಹಲವರ ಉಸಿರು ನಿಲ್ಲಿಸಿದ: ದೇಶದ ಅತ್ಯಂತ ಕಿರಿಯ ಸೀರಿಯಲ್ ಕಿಲ್ಲರ್ ಕತೆ
ಇದನ್ನೂ ಓದಿ: ದೀಪಾವಳಿಗೆ ಮನೆ ಕ್ಲೀನ್ ಮಾಡ್ತಿದ್ದ ಅಮ್ಮನಿಗೆ ಸಿಕ್ತು ಬಂಡಲ್‌ಗಟ್ಟಲೇ 2 ಸಾವಿರ ರೂ. ನೋಟು: ಮುಂದೇನು?

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?