ಸಂಸತ್ತಿನಲ್ಲಿ ಇಂದಿನಿಂದ ಬೆಲೆ ಏರಿಕೆ ಚರ್ಚೆ, 15 ದಿನಗಳ ಬಿಕ್ಕಟ್ಟು ಅಂತ್ಯ ಸಾಧ್ಯತೆ

Published : Aug 01, 2022, 09:59 AM IST
 ಸಂಸತ್ತಿನಲ್ಲಿ ಇಂದಿನಿಂದ ಬೆಲೆ ಏರಿಕೆ ಚರ್ಚೆ, 15 ದಿನಗಳ ಬಿಕ್ಕಟ್ಟು ಅಂತ್ಯ ಸಾಧ್ಯತೆ

ಸಾರಾಂಶ

ಸಂಸತ್ತಿನಲ್ಲಿ ಬೆಲೆಯೇರಿಕೆ ಬಗ್ಗೆ ಚರ್ಚೆ.  15 ದಿನಗಳ ಬಿಕ್ಕಟ್ಟು ಅಂತ್ಯ ನಿರೀಕ್ಷೆ. ಮುಂದಿನ ವಾರ ಅಗ್ನಿಪಥದ ಬಗ್ಗೆಯೂ ಚರ್ಚೆಗೆ ಕಾಂಗ್ರೆಸ್‌ ಬೇಡಿಕೆ ಸಾಧ್ಯತೆ.

ನವದೆಹಲಿ (ಆ.1): ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳಲ್ಲಿ ಉಂಟಾಗಿದ್ದ 2 ವಾರದ ಬಿಕ್ಕಟ್ಟು ಸೋಮವಾರದಿಂದ ಶಮನಗೊಳ್ಳುವ ಸಾಧ್ಯತೆ ಇದೆ. ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಬೆಲೆ ಏರಿಕೆಯ ಕುರಿತಾಗಿ ಸೋಮವಾರದಿಂದ ಚರ್ಚೆ ಆರಂಭವಾಗಲಿದೆ. ಉದ್ಧವ್‌ ಠಾಕ್ರೆ ಬಣದಲ್ಲಿರುವ ಶಿವಸೇನೆಯ ಸಂಸದ ವಿನಾಯಕ್‌ ರಾವುತ್‌ ಮತ್ತು ಕಾಂಗ್ರೆಸ್‌ನ ಮನೀಶ್‌ ತಿವಾರಿ ಬೆಲೆ ಏರಿಕೆ ಚರ್ಚೆಯನ್ನು ಆರಂಭಿಸಲಿದ್ದಾರೆ. ಹಾಗಾಗಿ ಈ ವಾರದಿಂದ ಉಪಯುಕ್ತ ಚರ್ಚೆ ನಡೆಯಬಹುದು ಎಂದು ಭರವಸೆಯಿಡಲಾಗಿದೆ. ಸೋಮವಾರ ಲೋಕಸಭೆಯಲ್ಲಿ ಮತ್ತು ಮಂಗಳವಾರ ರಾಜ್ಯಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆ ನಡೆಯಲಿದೆ. ಅಗತ್ಯ ವಸ್ತು ಬೆಲೆ ಏರಿಕೆ ಹಾಗೂ ಜಿಎಸ್‌ಟಿ ಹೇರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಈ ವೇಳೆ, ರಾಜ್ಯಸಭೆ ಉಪ ಸಭಾಪತಿಗಳ ಮುಖದ ಮೇಲೆ ಕಾಗದ ಎಸೆದ ಆಪ್‌ ಸಂಸದ ಸಂಜಯ ಸಿಂಗ್‌ ಅವರನ್ನು ಶುಕ್ರವಾರದವರೆಗೆ ಸದನದಿಂದ ಅಮಾನತು ಮಾಡಲಾಗಿತ್ತು. ಇದರೊಂದಿಗೆ ರಾಜ್ಯಸಭೆಯಲ್ಲಿ ಅಮಾನತಾದ ಸಂಸದರ ಸಂಖ್ಯೆ 20ಕ್ಕೇರಿತ್ತು.

ಕಾಂಗ್ರೆಸ್‌ನಿಂದ ಅಗ್ನಿಪಥ ಚರ್ಚೆ ಬೇಡಿಕೆ: ಸೈನ್ಯಕ್ಕೆ ಸೇರ್ಪಡೆಯಾಗುವುದಕ್ಕಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ನೂತನ ಯೋಜನೆಯಾಗಿರುವ ಅಗ್ನಿಪಥ ಯೋಜನೆಯ ಕುರಿತಾಗಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್‌ ಬೇಡಿಕೆ ಇಡುವ ಸಾಧ್ಯತೆ ಇದೆ. ಈ ಯೋಜನೆ ಘೋಷಣೆಯಾದ ಬಳಿಕ ದೇಶಾದ್ಯಂತ ಹಲವು ಹಿಂಸಾಚಾರ ಘಟನೆಗಳು ನಡೆದಿದ್ದವು. ಆದರೆ ವಿಷಯ ಕೋರ್ಟಲ್ಲಿರುವ ಕಾರಣ ಸರ್ಕಾರ ಇದಕ್ಕೆ ಒಪ್ಪುವುದು ಅನುಮಾನ.

ರಾಜ್ಯಸಭೆಯ ಉತ್ಪಾದಕತೆ ಶೇ.16ಕ್ಕೆ ಕುಸಿತ: ಮುಂಗಾರು ಅಧಿವೇಶ ಆರಂಭದಿಂದಲೂ ಪ್ರತಿಭಟನೆಗೆ ಒಳಗಾಗಿರುವುದರಿಂದ 2ನೇ ವಾರದ ಅಂತ್ಯಕ್ಕೆ ರಾಜ್ಯಸಭೆಯ ಉತ್ಪಾದಕತೆ ಕೇವಲ ಶೇ.16ರಷ್ಟಿದೆ. ಅಲ್ಲದೇ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಗಳು ಅಂಗೀಕಾರ ಪಡೆದುಕೊಂಡಿಲ್ಲ. 10 ದಿನಗಳಲ್ಲಿ ರಾಜ್ಯಸಭೆಯ ಕಲಾಪ ಕೇವಲ 11 ಗಂಟೆ 8 ನಿಮಿಷಗಳ ಕಾಲ ಮಾತ್ರ ನಡೆದಿದೆ. ಇದನ್ನು ಪ್ರಜಾಪ್ರಭುತ್ವದ ವಿನಾಶ ಎಂದು ಕರೆದಿರುವ ಸಭಾಧ್ಯಕ್ಷ ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಮೃತಿ ರಾಷ್ಟ್ರಪತಿ ಕ್ಷಮೆ ಕೋರಬೇಕು: ಲೋಕಸಭೆ ಸ್ಪೀಕರ್‌ಗೆ ಚೌಧರಿ ಪತ್ರ
ಲೋಕಸಭೆಯಲ್ಲಿ ಸಂಸದೆ ಸ್ಮೃತಿ ಇರಾನಿ ಅವರು ‘ರಾಷ್ಟ್ರಪತಿ ದ್ರೌಪದಿ ಮುರ್ಮು’ ಎಂದು ಹೇಳುವ ಬದಲು ಕೇವಲ ‘ದ್ರೌಪದಿ ಮುರ್ಮು’ ಎಂದಷ್ಟೇ ಹೇಳಿ ರಾಷ್ಟ್ರಪತಿಯನ್ನು ಅವಮಾನಿಸಿದ್ದಾರೆ. ಹಾಗಾಗಿ ಅವರು ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸಂಸದ ಅಧೀರ್‌ ರಂಜನ್‌ ಚೌಧುರಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

‘ನನಗೆ ಹಿಂದಿ ಸರಿಯಾಗಿ ಬರದ ಕಾರಣ ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದು ಹೇಳಿದ್ದೆ. ಆದರೆ ಸ್ಮೃತಿ ಇರಾನಿ ಅವರು ಅಧಿವೇಶನದಲ್ಲಿ ರಾಷ್ಟ್ರಪತಿ ಅವರ ಹೆಸರು ಬಳಸುವಾಗೆಲ್ಲಾ ದ್ರೌಪದಿ ಮುರ್ಮು ಎಂದಷ್ಟೇ ಬಳಸುತ್ತಿದ್ದಾರೆ. ರಾಷ್ಟ್ರಪತಿ, ಮೇಡಂ ಅಥವಾ ಶ್ರೀಮತಿ ಯಾವುದನ್ನು ಹೆಸರಿಗೆ ಮೊದಲು ಬಳಸುತ್ತಿಲ್ಲ. ಇದು ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಮಾಡಿದ ಅವಮಾನವಾಗಿದೆ. ಹಾಗಾಗಿ ಸ್ಮೃತಿ ಅವರು ಬೇಷರತ್‌ ಆಗಿ ಕ್ಷಮೆಯಾಚಿಸಬೇಕು’ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಬೆಲೆ ಏರಿಕೆ ನಡುವೆಯೂ ಮೋದಿ ಮೇಲೆ ಜನರ ಒಲವು, ಇಂದೇ ಚುನಾವಣೆ ಆದರೂ ಮೋದಿಯೇ ಗೆಲ್ಲೋದು!

ಚೌಧುರಿ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದು ಕರೆದಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದರು ಚೌಧುರಿ ಮತ್ತು ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸುತ್ತಾ ಸಂಸದರ ಹಕ್ಕು ಕಸಿಯುತ್ತಿದೆ : ಪ್ರಹ್ಲಾದ್‌ ಜೋಶಿ ಆಕ್ರೋಶ

ಜು.18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಈವರೆಗೆ 10 ದಿನಗಳ ಕಲಾಪ ಸಂಪೂರ್ಣ ವ್ಯರ್ಥವಾಗಿದೆ. ಗುರುವಾರಕ್ಕಿಂತ ಹಿಂದಿನ ಕಲಾಪಗಳು ಜಿಎಸ್‌ಟಿ ಏರಿಕೆ ವಿಷಯದಲ್ಲಿ ವ್ಯರ್ಥವಾಗಿದ್ದರೆ, ಗುರುವಾರದ ಕಲಾಪ ‘ರಾಷ್ಟ್ರಪತ್ನಿ’ ವಿವಾದದಿಂದ ವ್ಯರ್ಥವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!