ಧರ್ಮಪುರಿ: ಹೋರಿಗಳನ್ನು ಬಳಸಿ ಆಡುವ ಗ್ರಾಮೀಣ ಕ್ರೀಡೆ ಜಲ್ಲಿಕಟ್ಟು ಆಡುವ ವೇಳೆ ಆಟ ಪಕ್ಕದಲ್ಲಿ ನಿಂತು ಆಟ ನೋಡುತ್ತಿದ್ದ ಬಾಲಕನೋರ್ವನನ್ನು ಹೋರಿ ತಿವಿದು ಸಾಯಿಸಿದ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ. ಜಿಲ್ಲಾ ಆಡಳಿತದ ಅಧಿಕಾರಿಗಳ ಪ್ರಕಾರ ಧರ್ಮಪುರಿ (Dharmapuri) ಜಿಲ್ಲೆಯ ಥಡಂಗಮ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಶನಿವಾರ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿತ್ತು. ಈ ಅವಘಡದಲ್ಲಿ ಮೃತಪಟ್ಟ ಬಾಲಕನನ್ನು 14 ವರ್ಷ ಪ್ರಾಯದ ಗೋಕುಲ್ (Gokul) ಎಂದು ಗುರುತಿಸಲಾಗಿದೆ. ಈತ ಪಲಕೊಡ್ಡೆ (Palacodde) ನಿವಾಸಿಯಾಗಿದ್ದು, ಘಟನೆ ನಡೆಯುವ ವೇಳೆ ಈತ ವೀಕ್ಷಕರ ಗ್ಯಾಲರಿ ಸಮೀಪದಲ್ಲಿದ್ದ ಎಂದು ತಿಳಿದು ಬಂದಿದೆ.
ಜಲ್ಲಿಕಟ್ಟು ಆಟದ ಕೊನೆಹಂತದಲ್ಲಿದ್ದಾಗ ಗೂಳಿ ಪಳಗಿಸುವ ತಂಡ ತಮ್ಮ ಗೂಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ವಿಫಲವಾದಾಗ, ಕೆರಳಿದ ಗೂಳಿ ಸ್ಪರ್ಧಾಕಣದಿಂದ ಹೊರಬಂದು ಪಕ್ಕದಲ್ಲಿ ನಿಂತಿದ್ದ ಬಾಲಕ ಗೋಕುಲ್‌ನ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದೆ. ಹೋರಿ ತಿವಿದಿದ್ದರಿಂದ ಗಂಭೀರ ಗಾಯಗೊಂಡ ಬಾಲಕನಿಗೆ ರಕ್ತಸ್ರಾವವಾಗಿದ್ದು, ಕೂಡಲೇ ಆತನನ್ನು ಧರ್ಮಪುರಿಯ ಮೆಡಿಕಲ್ ಕಾಲೇಜು ( Dharmapuri Medical College) ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
Shivamogga: ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರ ಸಾವು
ಈ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 622 ಹೋರಿಗಳು (bulls) ಹಾಗೂ 700 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯನ್ನು ತಮಿಳುನಾಡು (Tamil Nadu) ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಎಂಆರ್‌ಕೆ ಪನ್ನೀರ್‌ಸೆಲ್ವಂ (Panneerselvam) ಅವರು ಉದ್ಘಾಟಿಸಿದ್ದರು. ಮೃತ ಬಾಲಕ ಗೋಕುಲ್ ತನ್ನ ಪೋಷಕರೊಂದಿಗೆ ಈ ಸ್ಪರ್ಧೆ ನೋಡಲು ಹೋಗಿದ್ದ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವರ್ಷ ತಮಿಳುನಾಡಿನಲ್ಲಿ ವಿವಿಧೆಡೆ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಈಗಾಗಲೇ ಮೂವರು ಮೃತಪಟ್ಟಿದ್ದು, ಗೋಕುಲ್ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಮೃತಪಟ್ಟ ನಾಲ್ಕನೇ ವ್ಯಕ್ತಿಯಾಗಿದ್ದಾನೆ.
ಜಲ್ಲಿಕಟ್ಟು ಎಂದರೇನು?
ತಮಿಳುನಾಡಿನಾದ್ಯಂತ ಜನಪ್ರಿಯವಾಗಿರುವ ಗ್ರಾಮೀಣ ಕ್ರೀಡೆ ಜಲ್ಲಿಕಟ್ಟು ಜನವರಿ ಮಧ್ಯದಲ್ಲಿ ಪೊಂಗಲ್ ಸುಗ್ಗಿಯ ಸಮಯದಲ್ಲಿ ಆಡುವ ಜನಪ್ರಿಯ ಕ್ರೀಡೆಯಾಗಿದೆ. ಈ ಸ್ಪರ್ಧೆಯಲ್ಲಿ ಹೋರಿ ಪಳಗಿಸುವವನು ಗೂಳಿಯ ಬೆನ್ನಿನ ಮೇಲೆ ಮೇಲೆ ಇರುವ ಭುಜವನ್ನು ಹಿಡಿದುಕೊಳ್ಳಬೇಕು. ಇದರ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ನಾಲ್ಕು ದಿನಗಳ ಸುಗ್ಗಿಯ ಹಬ್ಬದ ಮೂರನೇ ದಿನವಾದ ಮಟ್ಟು ಪೊಂಗಲ್‌ನ ಭಾಗವಾಗಿ ಇದನ್ನು ತಮಿಳುನಾಡಿನಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ; ವ್ಯಕ್ತಿಯನ್ನು ಕಿಮೀಗಟ್ಟಲೆ ಎಳೆದುಕೊಂಡು ಹೋದ ಹೋರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ