ಮಾವೋವಾದಿಗಳ ಹಾವಳಿಯಿಂದ ರಾಮನಿಗೆ ಮುಕ್ತಿ ನೀಡಿದ ಸಿಆರ್‌ಪಿಎಫ್‌ ಯೋಧರು: 21 ವರ್ಷಗಳ ಬಳಿಕ ಮತ್ತೆ ಪೂಜೆ

By Anusha Kb  |  First Published Apr 9, 2024, 4:01 PM IST

ಛತ್ತೀಸ್‌ಗಢದ ರಾಯ್‌ಪುರದಲ್ಲಿ 21 ವರ್ಷಗಳ ಹಿಂದೆ ಮಾವೋವಾದಿ ನಕ್ಸಲರ ಹಾವಳಿಯಿಂದಾಗಿ ಮುಚ್ಚಲ್ಪಟ್ಟಿದ್ದ ಶ್ರೀರಾಮ ಮಂದಿರವನ್ನು ಮತ್ತೆ ತೆರೆಯಲಾಗಿದ್ದು, ಭಾರಿ ಬಿಗಿ ಭದ್ರತೆಯಲ್ಲಿ ದೇಗುಲದಲ್ಲಿ ಪೂಜೆ ನಡೆದಿದೆ.


ರಾಯ್‌ಪುರ: ಛತ್ತೀಸ್‌ಗಢದ ರಾಯ್‌ಪುರದಲ್ಲಿ 21 ವರ್ಷಗಳ ಹಿಂದೆ ಮಾವೋವಾದಿ ನಕ್ಸಲರ ಹಾವಳಿಯಿಂದಾಗಿ ಮುಚ್ಚಲ್ಪಟ್ಟಿದ್ದ ಶ್ರೀರಾಮ ಮಂದಿರವನ್ನು ಮತ್ತೆ ತೆರೆಯಲಾಗಿದ್ದು, ಭಾರಿ ಬಿಗಿ ಭದ್ರತೆಯಲ್ಲಿ ದೇಗುಲದಲ್ಲಿ ಪೂಜೆ ನಡೆದಿದೆ. ನಿನ್ನೆ ಪ್ರಧಾನಿ ನರೇಂದ್ರ ಛತ್ತೀಸ್‌ಗಡದ ಬಸ್ತಾರ್‌ನಲ್ಲಿ ಮಾತನಾಡುತ್ತಾ,  500 ವರ್ಷಗಳ ಹಿಂದಿನ ರಾಮಮಂದಿರದ ಕನಸನ್ನು ನಮ್ಮ ಸರ್ಕಾರ ನನಸು ಮಾಡಿತ್ತು ಎಂದು ಹೇಳುತ್ತಿದ್ದ ಸಮಯದಲ್ಲಿಯೇ ಆ ಪ್ರದೇಶದಿಂದ 180 ಕಿಲೋ ಮೀಟರ್ ದೂರದ ರಾಮಮಂದಿರದಲ್ಲಿ 21 ವರ್ಷದ ಬಳಿಕ ದೇಗುಲದ ಗಂಟೆಗಳು ಮೊಳಗಲು ಆರಂಭಿಸಿದವು. ಛತ್ತೀಸ್‌ಗಢದಲ್ಲಿ ನಕ್ಸಲರು ತೀವ್ರವಾಗಿ ಭಾದಿಸುತ್ತಿರುವ ಸುಕ್ಮಾ ಜಿಲ್ಲೆಯಲ್ಲಿ ಈ ದೇಗುಲವಿದೆ. ಮಾವೋವಾದಿ ನಕ್ಸಲರ ಆದೇಶದಂತೆ 21 ವರ್ಷಗಳ ಹಿಂದೆ ಸುಕ್ಮಾದ  ಕೆರ್ಲಪೆಂಡಾ ಗ್ರಾಮದಲ್ಲಿದ್ದ ಈ ಶ್ರೀರಾಮ ಮಂದಿರವನ್ನು ಮುಚ್ಚಲಾಗಿತ್ತು. ಆದರೆ ಈಗ ಭದ್ರತಾಪಡೆಗಳು ಈ ದೇಗುಲವನ್ನು ಮತ್ತೆ ತೆರೆದು ಶ್ರೀರಾಮನಿಗೆ ಪೂಜೆ ಸಲ್ಲಿಸಿದ್ದಾರೆ.

ಸಮರ್ಪಕ ರಸ್ತೆಗಳಿಲ್ಲದ ಈ ಸ್ಥಳ ನಕ್ಸಲ್ ಪೀಡಿತ ಪ್ರದೇಶವೂ ಮಾವೋವಾದಿ ಉಗ್ರರ ಭದ್ರಕೋಟೆಯಾಗಿದೆ. ಈ ಕುಗ್ರಾಮವೂ 2010ರಲ್ಲಿ 76 ರಕ್ಷಣಾ ಸಿಬ್ಬಂದಿಯ ಹತ್ಯಾಕಾಂಡ ನಡೆದ ತಾಡ್ಮೆಟ್ಲಾ ಗ್ರಾಮದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿದೆ ಹಾಗೂ 2021ರ ಏಪ್ರಿಲ್‌ನಲ್ಲಿ 22 ಯೋಧರ ಸಾವಿಗೆ ಕಾರಣವಾದ ತೆಕುಲ್ಗುಡಾ ಗ್ರಾಮಕ್ಕೆ ಸಮೀಪದಲ್ಲಿದೆ.

Tap to resize

Latest Videos

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಇಡಿ ಸ್ಫೋಟದಲ್ಲಿ 10 ಜವಾನರು ಹುತಾತ್ಮ; ಚಾಲಕನೂ ಬಲಿ

ಇಲ್ಲಿ ಮಾವೋವಾದಿಗಳ ಭಯ ಎಷ್ಟಿತ್ತೆಂದರೆ, ಒಮ್ಮೆ  ಮಾವೋವಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡದಂತೆ ಗ್ರಾಮಸ್ಥರಿಗೆ ಆದೇಶಿಸಿದ ನಂತರ ಇಲ್ಲಿ ಯಾರೊಬ್ಬರೂ ಕೂಡ ದೇವಸ್ಥಾನದ ಸಮೀಪಕ್ಕೂ ಹೋಗಲು ಧೈರ್ಯ ಮಾಡಿರಲಿಲ್ಲ, ಒಬ್ಬ ವ್ಯಕ್ತಿಯ ಹೊರತುಪಡಿಸಿ ಮತ್ಯಾರೂ ಕೂಡ ಈ ದೇವಸ್ಥಾನದ ಸಮೀಪವೂ ಸುಳಿದಿರಲಿಲ್ಲ, ಆದರೆ ಓರ್ವ ಒಂಟಿ ವ್ಯಕ್ತಿ ಮಾತ್ರ ಪ್ರತಿದಿನವೂ ದೇಗುಲದ ಸಮೀಪಕ್ಕೆ ಬಂದು ಮುಚ್ಚಿದ ಬಾಗಿಲಿನ ಮುಂದೆ ದೀಪ ಬೆಳಗಿಸಿ ಹೊರಟು ಹೋಗುತ್ತಿದ್ದ.

ಆದರೆ ಶನಿವಾರ ಅಂದರೆ ಏಪ್ರಿಲ್ 6 ರಂದು 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಗುಲದ ಒಳಗೆ ಸೂರ್ಯನ ಬೆಳಕು ಹರಿದಿತ್ತು. ಈ ಅಪೂರ್ವ ಕ್ಷಣಕ್ಕೆ ಭಾರಿ ಭದ್ರತೆ ನೀಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಜವಾನರ ಭದ್ರತೆಯಲ್ಲಿ ಸ್ಥಳೀಯರು ದೇಗುಲವನ್ನು ತೊಳೆದು ಸ್ವಚ್ಛಗೊಳಿಸಿದರು. ಬಳಿಕ ಶ್ರೀರಾಮ, ಸೀತೆ ಲಕ್ಷಣರ ಪ್ರತಿಮೆಗಳಿರುವ ಅಮೃತಶಿಲೆಯ ವಿಗ್ರಹಗಳನ್ನು ತೊಳೆದು ಪೂಜೆ ಸಲ್ಲಿಸಿದರು.

ಈ ಬದಲಾವಣೆಗೆ ಕಾರಣವಾಗಿರುವುದು ಕೆಲವು ದಿನಗಳ ಹಿಂದೆ  ಕೆರ್ಲಪೆಂಡಾ ಮತ್ತು ಲಖಪಾಲ್ ಗ್ರಾಮಗಳ ನಡುವೆ 10 ಕಿಮೀ ಅಂತರದಲ್ಲಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಸ್ಥಾಪಿಸಲಾದ ಸಿಆರ್‌ಪಿಎಫ್ ಶಿಬಿರ. 2003 ರಲ್ಲಿ ಈ ಪ್ರದೇಶದಲ್ಲಿ ಮಾವೋವಾದಿಗಳು  ಅತ್ಯಂತ ಸಕ್ರಿಯವಾಗಿದ್ದಾಗ, ದೇವಾಲಯವನ್ನು ಮುಚ್ಚುವಂತೆ ಗ್ರಾಮಸ್ಥರಿಗೆ ಆದೇಶಿಸಿದ್ದರು. ಯಾರೂ ದೇಗುಲವನ್ನು ತೆರೆಯಬಾರದು ಅಥವಾ ಪೂಜೆಗೆ ಭೇಟಿ ನೀಡಬಾರದು ಎಂದು ಎಚ್ಚರಿಸಿದರು.  ಈ ಪ್ರದೇಶವು ಮಾವೋವಾದಿಗಳ ಪ್ರಮುಖ ವಲಯವಾಗಿದ್ದು, ಆ ದೇವಸ್ಥಾನದಲ್ಲಿ ಅವರು ಶಿಬಿರ ನಡೆಸುತ್ತಿದ್ದರು. ಸಭೆಗಳನ್ನು ನಡೆಸಿ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದರು ಇದೇ ಕಾರಣಕ್ಕೆ ಗ್ರಾಮಸ್ಥರಿಗೆ ಈ ಪ್ರದೇಶಕ್ಕೆ ಬರದಂತೆ ಬೆದರಿಸಿದ್ದರು ಎಂದು ಸುಕ್ಮಾ ಎಸ್ಪಿ ಕಿರಣ್ ಚವಾಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ನಾಪತ್ತೆಯಾಗಿರುವ ಯೋಧ ನಕ್ಸಲರ ಒತ್ತೆಯಾಳು? ಬಿಡಿಸಿಕೊಡುವಂತೆ ಪ್ರಧಾನಿಗೆ ಪುತ್ರಿ ಮನವಿ!

ಆದರೆ ಇಲ್ಲಿ ಸಿಆರ್‌ಪಿಎಫ್ ಶಿಬಿರ ತೆರೆದ ನಂತರ ಎಂದಿಗೂ ಹೊರಗಿನವರೊಂದಿಗೆ ಮಾತುಕತೆ ನಡೆಸದ ಆದಿವಾಸಿಗಳು ಭದ್ರತಾಪಡೆಯ ಸಂಪರ್ಕಕ್ಕೆ ಬಂದಿದ್ದು,  ಗ್ರಾಮದ ಜನರ ಮನವೊಲಿಸುವಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಯಶಸ್ವಿಯಾದರು. 74ನೇ ಬೆಟಾಲಿಯನ್‌ನ ಸಿಆರ್‌ಪಿಎಫ್ ಕಮಾಂಡೆಂಟ್ ಹಿಮಾಂಶು ಪಾಂಡೆ ಈ ಬಗ್ಗೆ ಮಾತನಾಡಿ, ಇಲ್ಲಿ ಮಾರ್ಚ್ 11 ರಂದು ಸಿಆರ್‌ಪಿಎಫ್ ಹೊಸ ಶಿಬಿರವನ್ನು ತರೆಯಲಾಯ್ತು. ಈ ಪ್ರದೇಶದಲ್ಲಿ ಪಾಳುಬಿದ್ದ ದೇಗುಲವನ್ನು ರಕ್ಷಣಾ ಸಿಬ್ಬಂದಿ ಗಮನಿಸಿದ್ದರು. ಈ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ 2003ರಲ್ಲಿ ಈ ದೇವಾಲಯವನ್ನು ನಕ್ಸಲರು ಬಲವಂತವಾಗಿ ಮುಚ್ಚಿಸಿದರು ಎಂದು ತಿಳಿಸಿದರು. ಅಲ್ಲದೇ ಗ್ರಾಮಸ್ಥರ ಮನವಿಯಂತೆ ಈಗ ನಾವು ಭಾರಿ ಭದ್ರತೆಯಲ್ಲಿ ದೇಗುಲವನ್ನು ಮತ್ತೆ ಆರಂಭಿಸಿದ್ದೇವೆ. ದೇಗುಲದ ಸ್ವಚ್ಛಗೊಳಿಸಲು ಸಹಾಯ ಮಾಡಿದ್ದೇವೆ ಎಂದು ಹೇಳಿದರು. 

ಲಖಪಾಲ್ ಭದ್ರತಾ ಶಿಬಿರದ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ರವಿಕುಮಾರ್ ಮೀನಾ ಮಾತನಾಡಿ, ಸಿಆರ್‌ಪಿಎಫ್‌ ಪಡೆಗಳು ಆಯೋಜಿಸಿದ್ದ ವೈದ್ಯಕೀಯ ಶಿಬಿರದಲ್ಲಿ ದೇವಾಲಯವನ್ನು ಮತ್ತೆ ತೆರೆಯಲು ಮನವಿ ಬಂದಿತ್ತು. ಸೋಮವಾರ ದೇವಸ್ಥಾನದ ಮುಂಭಾಗದಲ್ಲಿ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು ಎಂದರು.

click me!