Madhya Pradesh: ರಾಮನವಮಿ ವೇಳೆ ಕೋಮು ಘರ್ಷಣೆ; 8ನೇ ತರಗತಿ ಬಾಲಕನಿಗೆ 2.9 ಲಕ್ಷ ರೂ. ದಂಡ..!

By BK Ashwin  |  First Published Oct 19, 2022, 2:42 PM IST

ಮಧ್ಯ ಪ್ರದೇಶದಲ್ಲಿ 12 ವರ್ಷದ ಬಾಲಕನಿಗೆ ಸ್ಥಳಿಯ ಆಡಳಿತ 2.9 ಲಕ್ಷ ರೂ. ದಂಡ ಕಟ್ಟುವಂತೆ ನೋಟಿಸ್‌ ನೀಡಿದೆ. ಹಾಗೂ, ಕಾರ್ಮಿಕನಾಗಿರುವ ತಂದೆಗೆ ಸಹ ಪ್ರತ್ಯೇಕವಾಗಿ 4.8 ಲಕ್ಷ ರೂ. ದಂಡವನ್ನು ಹಾಕಿದೆ. 


ಮಧ್ಯ ಪ್ರದೇಶದ (Madhya Pradesh) ಖಾರ್ಗೋನ್‌ನಲ್ಲಿ (Khargone) ರಾಮನವಮಿ (Ram Navami) ವೇಳೆ ನಡೆದ ಗಲಭೆಯ ಸಮಯದಲ್ಲಿ ನಡೆದ ನಷ್ಟವನ್ನು ಸರಿದೂಗಿಸಿಕೊಳ್ಳುವ ಭಾಗವಾಗಿ ಸ್ಥಳೀಯ ಆಡಳಿತ (Administration) 12 ವರ್ಷದ ಬಾಲಕನಿಗೆ (Boy) 2.9 ಲಕ್ಷ ರೂ. ದಂಡ ಹಾಕಿದೆ. ಈ ಸಂಬಂಧ ಸ್ಥಳೀಯ ಆಡಳಿತ ನೋಟಿಸ್‌ (Notice) ಅನ್ನೂ ನೀಡಿದೆ. ಇಷ್ಟೇ ಅಲ್ಲ, ದಿನಗೂಲಿ ಕಾರ್ಮಿಕನಾಗಿರುವ (Labourer) ಆತನ ತಂದೆಗೂ ಸಹ ಪ್ರತ್ಯೇಕವಾಗಿ ನೋಟಿಸ್‌ ನೀಡಿದ್ದು, ಅವರಿಗೆ ಸಹ 4.8 ಲಕ್ಷ ರೂ. ದಂಡ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಇನ್ನು, 8ನೇ ತರಗತಿ ಓದುತ್ತಿರುವ ಬಾಲಕನ ವಿರುದ್ಧ ನೋಟಿಸ್‌ ಹಾಕಲು ಕಾರಣ, ಆತನ ನೆರೆಹೊರೆಯವರು ಕೊಟ್ಟ ದೂರಂತೆ. ಮಹಿಳೆಯೊಬ್ಬರು ಹಾಗೂ ಆತನ ನೆರೆಹೊರೆಯವರು ಈ ಸಂಬಂಧ ದೂರು ನೀಡಿದ್ದು, ತಮ್ಮ ಮನೆಗಳಲ್ಲಿ ಕಳ್ಳತನ ಮಾಡಿದವರು ಹಾಗೂ ದಾಳಿ ಮಾಡಿದ ತಂಡದಲ್ಲಿ 12 ವರ್ಷದ ಬಾಲಕನೂ ಇದ್ದ ಎಂದು ದೂರು ನೀಡಿದ್ದರು ಎಂದು ವರದಿಯಾಗಿದೆ. 

Tap to resize

Latest Videos

ಇದನ್ನು ಓದಿ: ಖಾರ್ಗೋನ್‌ನಲ್ಲಿ ಮನೆ ಧ್ವಂಸಗೊಂಡವರಿಗೆ ಮನೆ: ಬುಲ್ಡೋಜರ್‌ ಬಳಕೆಗೆ ಸಿಎಂ ಸಮರ್ಥನೆ
 
ಆದರೆ, ತನ್ನ ಮಗ ಯಾವ ತಪ್ಪನ್ನೂ ಮಾಡಿಲ್ಲವೆಂದು ಕಾಲು ಖಾನ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ಅಷ್ಟು ದೊಡ್ಡ ಮೊತ್ತದ ಹಣವನ್ನು ಕಟ್ಟಲು ಸಾದ್ಯವಿಲ್ಲದ ಕಾರಣ ತಮ್ಮನ್ನು ಬಂಧಿಸಬಹುದು ಎಂದು ಅವರು ಆತಂಕಕ್ಕೀಡಾಗಿದ್ದಾರೆ. ನನ್ನ ಪುತ್ರ ಇನ್ನೂ ಅಪ್ರಾಪ್ತ ಬಾಲಕ. ಗಲಾಟೆಗಳು ನಡೆದಾಗ ನಾವು ಮನೆಯಲ್ಲಿ ಮಲಗಿದ್ದೆವು. ನಮಗೆ ನ್ಯಾಯ ಬೇಕು ಎಂದೂ ಕಾಲು ಖಾನ್‌ ಹೇಳಿಕೊಂಡಿದ್ದಾರೆ. 

 12 ವರ್ಷದ ಬಾಲಕ ತಮ್ಮ ಮನೆಗಳನ್ನು ದರೋಡೆ ಮಾಡಿದ್ದಾನೆ ಹಾಗೂ ದಾಳಿ ಮಾಡಿದ್ದಾನೆ ಎಂದು ದೂರುದಾರರು ಹಾಗೂ ಇತರೆ ನೆರೆಹೊರೆಯವರು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆ ಸಾರ್ವಜನಿಕ ಆಸ್ತಿಗೆ ಹಾನಿಯ ತಡೆಗಟ್ಟುವಿಕೆ ಮತ್ತು ಮರುಪಡೆಯುವಿಕೆ ಕಾಯಿದೆ ಅಡಿಯಲ್ಲಿ ಕ್ಲೈಮ್ಸ್ ಟ್ರಿಬ್ಯೂನಲ್ ಈ ದಂಡದ ನೋಟಿಸ್‌ಗಳನ್ನು ಬಾಲಕ ಹಾಗೂ ಆತನ ತಂದೆಗೆ ಕಳಿಸಿದೆ ಎಂದು ವರದಿಗಳು ಹೇಳುತ್ತಿವೆ. ಈ ಕಾಯ್ದೆಯಡಿ ಪ್ರತಿಭಟನೆಗಳು, ಮುಷ್ಕರಗಳು ಅಥವಾ ಹಿಂಸಾಚಾರದ ಸಮಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಉದ್ದೇಶಪೂರ್ವಕ ಹಾನಿಯಾದರೆ ರಾಜ್ಯ ಸರ್ಕಾರ ಹಣವನ್ನು ರಿಕವರಿ ಮಾಡಬಹುದಾಗಿದೆ.. 

ಇದನ್ನೂ ಓದಿ: ಖಾರ್ಗೋನ್ ಕೋಮುಘರ್ಷಣೆಯ ವೇಳೆ ಹಿಂದೂ ಸ್ನೇಹಿತನಿಂದ ಮುಸ್ಲಿಂ ವ್ಯಕ್ತಿಯ ರಕ್ಷಣೆ!

ಇನ್ನು, ಈ ಕಾಯ್ದೆಯಡಿ ಸ್ಥಳೀಯ ಆಡಳಿತ ಆರೋಪಿಗೆ ಸೇರಿದ ಆಸ್ತಿಗಳನ್ನು ಕೆಡವಬಹುದಾಗಿದೆ ಅಥವಾ ಹರಾಜು ಹಾಕಬಹುದಾಗಿದೆ. ಹಾಗೂ, ಕ್ಲೈಮ್ಸ್ ಟ್ರಿಬ್ಯೂನಲ್ ನೀಡುವ ನೋಟಿಸ್‌ಗಳನ್ನು ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನೆ ಮಾಡಬಹುದು ಎಂದೂ ತಿಳಿದುಬಂದಿದೆ. 

ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ರಾಮ ನವಮಿ ಹಬ್ಬದ ಸಮಯದಲ್ಲಿ, ಎರಡು ಸಮುದಾಯಗಳ ನಡುವೆ ದೊಡ್ಡ ಮಟ್ಟದ ಘರ್ಷಣೆಗಳು ನಡೆದಿದ್ದವು. ಮಧ್ಯ ಪ್ರದೇಶದ ಖಾರ್ಗೋನ್‌ ಜಿಲ್ಲೆಯಲ್ಲಿ ರಾಮ ನವಮಿ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ ನಂತರ ಈ ಘರ್ಷಣೆಗಳು ನಡೆದಿದ್ದವು. ಈ ಜಗಳಗಳೇ ಗಲಭೆಗೆ ಕಾರಣವಾಗಿದ್ದು, ಆಸ್ತಿಗಳಿಗೆ ಬೆಂಕಿ ಹಚ್ಚುವುದು ಹಾಗೂ ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿತ್ತು. ನಂತರ ಇಡೀ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು. 

ಇದನ್ನೂ ಓದಿ: ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಆರೋಪಿಗಳಿಗೆ ಬುಲ್ಡೋಜರ್ ಡ್ರಿಲ್!

click me!