china ದೇಶದಿಂದ ಭಾರತದ ಗಡಿಯೊಳಗೆ ಮತ್ತೊಂದು ಹಳ್ಳಿ ನಿರ್ಮಾಣ!

By Kannadaprabha NewsFirst Published Nov 19, 2021, 10:27 AM IST
Highlights
  •  ಭಾರತದ ಗಡಿಯೊಳಗೆ ಚೀನಾದಿಂದ ಮತ್ತೊಂದು ಹಳ್ಳಿ ನಿರ್ಮಾಣ!
  •  100 ಮನೆಗಳ ನಂತರ ಇದೀಗ 60 ಮನೆಗಳ ಹಳ್ಳಿ
  •  ಅರುಣಾಚಲ ಪ್ರದೇಶದೊಳಗೆ ನಿರ್ಮಾಣ: ವರದಿ
  •  ಭಾರತ್‌ ಮ್ಯಾಫ್ಸ್‌ ಪ್ರಕಾರ ಈ ಜಾಗ ಭಾರತದ್ದು

ನವದೆಹಲಿ (ನ.19): ಅರುಣಾಚಲ ಪ್ರದೇಶದೊಳಗೆ (Arunachal pradesh) ಭಾರತದ ಭೂಭಾಗವನ್ನು ಅತಿಕ್ರಮಿಸಿಕೊಂಡು ಅಕ್ರಮವಾಗಿ 100 ಮನೆಗಳ ಹಳ್ಳಿಯೊಂದನ್ನು (Village) ಚೀನಾ (China) ನಿರ್ಮಾಣ ಮಾಡಿದೆ ಎಂಬ ವರದಿಗಳ ಬೆನ್ನಲ್ಲೇ ಇದೀಗ 60 ಮನೆಗಳ ಇನ್ನೊಂದು ಹಳ್ಳಿಯನ್ನು ಕೂಡ ಚೀನಾ ನಿರ್ಮಾಣ ಮಾಡಿದೆ ಎಂದು ಹೇಳಲಾಗಿದೆ. ಉಪಗ್ರಹ ಚಿತ್ರಗಳನ್ನಾಧರಿಸಿ, ತಜ್ಞರಿಂದ ನಕ್ಷೆಗಳ ವಿಶ್ಲೇಷಣೆ ನಡೆಸಿ ಎನ್‌ಡಿಟೀವಿ (NDTV) ಈ ಕುರಿತು ವರದಿ ಮಾಡಿದೆ.

ಅರುಣಾಚಲ ಪ್ರದೇಶದ (Arunachal pradesh) ಶಿಯೋಮಿ ಜಿಲ್ಲೆಯಲ್ಲಿ ಭಾರತ (India) ಮತ್ತು ಚೀನಾ (China) ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಮತ್ತು ಅಂತಾರಾಷ್ಟ್ರೀಯ ಗಡಿಯ (border) ನಡುವೆ 60 ಮನೆಗಳ ಹಳ್ಳಿ ನಿರ್ಮಾಣವಾಗಿದ್ದು, ಅಲ್ಲಿನ ಕಟ್ಟಡಗಳ ಮೇಲೆ ಚೀನಾದ ಧ್ವಜ (China flag) ಹಾರಿಸಲಾಗಿದೆ. ಈ ಹಳ್ಳಿಯು ಹಿಂದೆ ಅರುಣಾಚಲದಲ್ಲಿ ಚೀನಾ ನಿರ್ಮಾಣ ಮಾಡಿದೆ ಎನ್ನಲಾಗಿದ್ದ 100 ಮನೆಗಳ ಹಳ್ಳಿಯಿಂದ ಪೂರ್ವಕ್ಕೆ 93 ಕಿ.ಮೀ. ದೂರದಲ್ಲಿದೆ. ಅಲ್ಲದೆ, ಇದು ಅಂತಾರಾಷ್ಟ್ರೀಯ ಗಡಿಯಿಂದ ಭಾರತದ ಒಳಗೆ 6 ಕಿ.ಮೀ. ದೂರದಲ್ಲಿದೆ ಎನ್ನಲಾಗಿದೆ.

2019ರಲ್ಲಿ ಇರಲಿಲ್ಲ, ಈಗ ಇದೆ:  ಉಪಗ್ರಹ (Satellite) ಚಿತ್ರಗಳನ್ನು ಒದಗಿಸುವ ಜಗತ್ತಿನ ಎರಡು ಪ್ರತಿಷ್ಠಿತ ಕಂಪನಿಗಳಾದ ಮ್ಯಾಕ್ಸರ್‌ ಟೆಕ್ನಾಲಜೀಸ್‌ ಹಾಗೂ ಪ್ಲಾನೆಟ್‌ ಲ್ಯಾಬ್ಸ್‌ಗಳು (planet labs) ನೀಡಿದ ಚಿತ್ರದಲ್ಲಿ ಈ ಹೊಸ ಹಳ್ಳಿ ಕಾಣಿಸಿಕೊಂಡಿದೆ. 2019ರ ಚಿತ್ರಗಳಲ್ಲಿ ಈ ಹಳ್ಳಿ ಇರಲಿಲ್ಲ. ಈಗ ಪಡೆದ ಚಿತ್ರದಲ್ಲಿ ಹಳ್ಳಿ ಪ್ರತ್ಯಕ್ಷವಾಗಿದೆ. ಆದರೆ, ಇಲ್ಲಿ ಜನರು ವಾಸಿಸುತ್ತಿದ್ದಾರೆಯೇ ಇಲ್ಲವೇ ಎಂಬುದು ಕಾಣಿಸುತ್ತಿಲ್ಲ. ಮನೆಗಳ ಟೆರೇಸ್‌ ಮೇಲೆ ಚೀನಾದ ಬೃಹತ್‌ ಧ್ವಜ ಹಾರಿಸಲಾಗಿದೆ. ಇದು ತನ್ನ ಪ್ರದೇಶ ಎಂದು ಚೀನಾ ಪ್ರತಿಪಾದಿಸುವುದರ ದ್ಯೋತಕ ಇದಾಗಿದೆ.

ಜಾಗ ಚೀನಾದ್ದು ಎಂದ ಭಾರತೀಯ ಸೇನೆ:  ಭಾರತ ಸರ್ಕಾರದ ಅಧಿಕೃತ ಡಿಜಿಟಲ್‌ ನಕ್ಷೆಯಾಗಿರುವ ಭಾರತ್‌ ಮ್ಯಾಫ್ಸ್‌ನಲ್ಲಿ (Map) ಈ ಪ್ರದೇಶವನ್ನು ಭಾರತದ ಭೂ ಭಾಗ ಎಂದು ಗುರುತಿಸಲಾಗಿದೆ. ಸರ್ವೇಯರ್‌ ಜನರಲ್‌ ಆಫ್‌ ಇಂಡಿಯಾ ತಯಾರಿಸಿದ ನಕ್ಷೆ ಇದಾಗಿದೆ. ಈ ಕುರಿತು ಭಾರತೀಯ ಸೇನೆಯನ್ನು ಸಂಪರ್ಕಿಸಿದಾಗ, ‘ಈ ಪ್ರದೇಶ ಎಲ್‌ಎಸಿಯ (LAC) ಉತ್ತರದಲ್ಲಿ ಚೀನಾದೊಳಗೆ (China) ಬರುತ್ತದೆ’ ಎಂಬ ಉತ್ತರ ದೊರೆತಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ. ಅರುಣಾಚಲದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಯಾವುದೇ ಉತ್ತರ ನೀಡಿಲ್ಲ ಎಂದು ವರದಿ ಹೇಳಿದೆ.

ಈ ವರ್ಷದ ಜುಲೈನಲ್ಲೇ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ನ್ಯೂಸ್‌ ಏಜೆನ್ಸಿ ಈ ಹಳ್ಳಿಯ ಚಿತ್ರವನ್ನು ಪ್ರಕಟಿಸಿತ್ತು. ಅದೇ ಸಮಯದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ನಿರ್ಮಿಸಿರುವ ರೈಲ್ವೆ ನಿಲ್ದಾಣದ ಪರಿಶೀಲನೆಗೆ ಆಗಮಿಸಿದ್ದರು. ಆ ಜಾಗದಿಂದ ಹಳ್ಳಿಯು 33 ಕಿ.ಮೀ. ದೂರದಲ್ಲಿದೆ ಎಂದು ಹೇಳಲಾಗಿದೆ.

ಎಲ್ಲಿ ನಿರ್ಮಾಣ?

ಅರುಣಾಚಲ ಪ್ರದೇಶದ ಶಿಯೋಮಿ ಜಿಲ್ಲೆಯಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಅಂತಾರಾಷ್ಟ್ರೀಯ ಗಡಿಯ ನಡುವೆ ಭಾರತದೊಳಗೆ 6 ಕಿ.ಮೀ. ದೂರದಲ್ಲಿ. ಇಲ್ಲಿ 60 ಮನೆಗಳನ್ನು ಚೀನಾ ನಿರ್ಮಿಸಿದೆ. ಈ ಹಿಂದೆ ಚೀನಾ ನಿರ್ಮಿಸಿದ್ದ 100 ಮನೆಗಳ ಹಳ್ಳಿಯಿಂದ ಈ ಪ್ರದೇಶವು ಪೂರ್ವಕ್ಕೆ 93 ಕಿ.ಮೀ. ದೂರದಲ್ಲಿದೆ.

ಭಾರತದ ಗಡಿಯೊಳಗೆ ಚೀನಾದಿಂದ ಮತ್ತೊಂದು ಹಳ್ಳಿ ನಿರ್ಮಾಣ!

- 100 ಮನೆಗಳ ನಂತರ ಇದೀಗ 60 ಮನೆಗಳ ಹಳ್ಳಿ

- ಅರುಣಾಚಲ ಪ್ರದೇಶದೊಳಗೆ ನಿರ್ಮಾಣ: ವರದಿ

- ಭಾರತ್‌ ಮ್ಯಾಫ್ಸ್‌ ಪ್ರಕಾರ ಈ ಜಾಗ ಭಾರತದ್ದು

click me!