
ನವದೆಹಲಿ (ಫೆ.20): ಭವ್ಯವಾದ ಹಿಮಾಲಯದ ಬೆಟ್ಟಗಳ ನಡುವೆ ಇರುವ, ಆಧುನಿಕ ಇಂಜಿನಿಯರಿಂಗ್ ಅಚ್ಚರಿ ಎನಿಸಿಕೊಂಡಿರುವ ಸಾಧನೆ ಮಂಗಳವಾರ ಅನಾವರಣಗಿಂದಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇರುವ ಚೆನಾಬ್ ರೈಲು ಸೇತುವೆಗೆ ಮೋದಿ ಮಂಗಳವಾರ ಚಾಲನೆ ನೀಡಿದರು. ಇದು ಚೆನಾಬ್ ನದಿಯಿಂದ ಬರೋಬ್ಬರಿ 359 ಮೀಟರ್ ಎತ್ತರದಲ್ಲಿದೆ. ಐಫೆಲ್ ಟವರ್‌ಗಿಂತಲೂ ಎತ್ತರವಾಗಿ ನಿಂತಿರುವ ಚೆನಾಬ್ ಸೇತುವೆಯು ಉಕ್ಕಿನ ಕಮಾನಿನ ವಿನ್ಯಾಸವನ್ನು ಹೊಂದಿದೆ. ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ಕಮಾನು-ಆಕಾರದ ಉಕ್ಕಿನ ರಚನೆಯು ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶದ ವಿಭಾಗಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆಯು ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಚೆನಾಬ್ ಸೇತುವೆಯ ನಿರ್ಮಾಣವು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ (USBRL) ಯೋಜನೆಯ ಭಾಗವಾಗಿ 2002 ರಲ್ಲಿ ಪ್ರಾರಂಭವಾಯಿತು ಮತ್ತು ಆಗಸ್ಟ್ 2022 ರಲ್ಲಿ ಪೂರ್ಣಗೊಂಡಿತು.
ಭಾರತೀಯ ರೈಲ್ವೆಯ ವೀಡಿಯೊ ಪ್ರಕಾರ, ಹೊಸದಾಗಿ ಉದ್ಘಾಟನೆಗೊಂಡ ರೈಲು ಮಾರ್ಗವು ಈ ಆಯಕಟ್ಟಿನ ಮಹತ್ವದ ಪ್ರದೇಶದಲ್ಲಿ ನೆಲೆಸಿರುವ ಸಶಸ್ತ್ರ ಪಡೆಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೆ ಕೊಡುಗೆ ನೀಡುತ್ತದೆ. ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯು ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ, ವಂದೇ ಭಾರತ್ ಮೆಟ್ರೋ ರೈಲು ಜಮ್ಮು ಮತ್ತು ಶ್ರೀನಗರ ನಡುವೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ.
ಚೆನಾಬ್ ಸೇತುವೆಯನ್ನು ಗಂಟೆಗೆ 266 ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ತೀವ್ರತೆಯ ವಲಯದ ಭೂಕಂಪನ ಸಹಿಸಿಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಇದು 120 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಚೆನಾಬ್‌ನ ಎರಡೂ ದಡಗಳಾದ ಕೌರಿ ಎಂಡ್ ಮತ್ತು ಬಕ್ಕಲ್ ಎಂಡ್‌ನಲ್ಲಿ ಬೃಹತ್ ಕೇಬಲ್ ಕ್ರೇನ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಸೇತುವೆಯ ಸುಂದರ ನೋಟವನ್ನು ನೀಡಿದೆ.
ಫೆಬ್ರವರಿ 20 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಬನಿಹಾಲ್-ಸಂಗಲ್ದನ್ ರೈಲ್ವೆ ಮಾರ್ಗವನ್ನು ಉದ್ಘಾಟಿಸಿದರು ಮತ್ತು ಬಾರಾಮುಲ್ಲಾ ನಿಲ್ದಾಣದಿಂದ ಕಾಶ್ಮೀರ ಕಣಿವೆಯಲ್ಲಿ ಮೊದಲ ವಿದ್ಯುತ್ ರೈಲಿಗೆ ಚಾಲನೆ ನೀಡಿದರು. 15,863 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗವು ಪ್ರಾದೇಶಿಕ ಸಾರಿಗೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 48 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಈ ರೈಲುಮಾರ್ಗವು ರಾಂಬನ್ ಜಿಲ್ಲೆಯ ಬನಿಹಾಲ್‌ನಿಂದ ದೋಡಾ ಜಿಲ್ಲೆಯ ಸಂಗಲ್ದಾನ್‌ಗೆ ಸಂಪರ್ಕ ಕಲ್ಪಿಸುತ್ತದೆ.
ಚೆನಾಬ್ ಸೇತುವೆಯ ಬಗ್ಗೆ ತಿಳಿದುಕೊಳ್ಳಬೇಕಾದ 9 ವಿಷಯಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ