ಆಪ್‌ ಪಕ್ಷದ ಕುಲ್ದೀಪ್‌ಗೆ ಚಂಡೀಗಡ ಮೇಯರ್ ಕಿರೀಟ, ಸುಪ್ರೀಂ ತೀರ್ಪಿನಿಂದ ಬಿಜೆಪಿಗೆ ಮುಖಭಂಗ!

By Suvarna NewsFirst Published Feb 20, 2024, 4:59 PM IST
Highlights

ಚಂಡಿಗಡ ಮೇಯರ್ ಚುನಾವಣೆ ಕುಸ್ತಿಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ರಿಟರ್ನಿಂಗ್‌ ಆಫೀಸರ್‌ ಅಸಿಂಧುಗೊಳಿಸಿದ್ದ 8 ಮತಗಳನ್ನು ಎಣಿಕೆ ಮಾಡಿದ ಸುಪ್ರೀಂ ಕೋರ್ಟ್ ಆಮ್ ಆದ್ಮಿ ಪಕ್ಷದ ಕುಲ್ದೀಪ್ ಮೇಯರ್ ಎಂದು ತೀರ್ಪು ನೀಡಿದೆ. ಇದರೊಂದಿಗೆ ತಿರುಚಿದ ಮತಗಳಿಂದ ಮೇಯರ್ ಪಟ್ಟ ಕಸಿದಿದ್ದ ಬಿಜೆಪಿಗೆ ಮುಖಭಂಗವಾಗಿದೆ.

ನವದೆಹಲಿ(ಫೆ.20) ಚಂಡಿಗಡ ಮೇಯರ್ ಚುನಾವಣೆಯ ಕಾನೂನು ಹೋರಾಟದಲ್ಲಿ ಆಮ್ ಆದ್ಮಿಗೆ ಅತೀ ದೊಡ್ಡ ಗೆಲುವು ಸಿಕ್ಕಿದೆ. ಬಿಜೆಪಿ ಕುತಂತ್ರದಿಂದ ಮೇಯರ್ ಪಟ್ಟ ಕೈತಪ್ಪಿದ್ದ ಆಮ್ ಆದ್ಮಿ ಪಾರ್ಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಇದೀಗ ಗದ್ದುಗೆ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಂಡೀಗಡ ಮೇಯರ್ ಚುನಾವಣೆಯಲ್ಲಿ 8 ಮತಗಳನ್ನು ಅಸಿಂಧು ಎಂದು ಘೋಷಿಸಿದ್ದ ರಿಟರ್ನಿಂಗ್‌ ಆಫೀಸರ್‌, ಬಿಜೆಪಿಯ ಮನೋಜ್‌ ಸೋಂಕರ್‌ಗೆ ಮೇಯರ್ ಪಟ್ಟ ಕಟ್ಟಿದ್ದರು. ಆದರೆ ಸುಪ್ರೀಂ ಕೋರ್ಟ್ 8 ಮತಗಳನ್ನು ಸಿಂಧುಗೊಳಿಸಿ ತೀರ್ಪು ಪ್ರಕಟಿಸಿದೆ. ಆಮ್ ಆದ್ಮಿಯ ಕುಲ್ದೀಪ್ ಮೇಯರ್ ಆಗಿ ಹೊರಹೊಮ್ಮಿದ್ದಾರೆ. ಇತ್ತ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸೇರಿದ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಈ ವೇಳೆ ರಿಟರ್ನಿಂಗ್ ಆಫೀಸರ್ ಅನಿಲ್ ಮಾಸ್ಹ್ ಅಸಿಂಧುಗೊಳಿಸಿದ್ದ 8 ಮತಗಳನ್ನು ಸಿಂಧುಗೊಳಿಸಿದ ಸುಪ್ರೀಂ ಕೋರ್ಟ್, ಮರು ಮತ ಎಣಿಕೆ ಮಾಡಿತ್ತು. ಈ ವೇಳೆ ಆಪ್‌ನ ಕುಲ್ದೀಪ್ ಕುಮಾರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 

ಕಟಕಟೆಯಲ್ಲಿ ಚುನಾವಣಾಧಿಕಾರಿ ನಿಲ್ಲಿಸಿ ಸುಪ್ರೀಂಕೋರ್ಟ್‌ ಛೀಮಾರಿ: ಇತಿಹಾಸದಲ್ಲೇ ಇದೇ ಮೊದಲು

ಇತ್ತೀಚೆಗೆ ನಡೆದ ಚಂಡೀಗಡ ಮೇಯರ್ ಚುನಾವಣೆ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಮೇಯರ್‌ ಚುನಾವಣೆ ವೇಳೆ ಬಿಜೆಪಿಯ ಮನೋಜ್  ಸೋಂಕರ್‌ 16 ಮತ ಪಡೆದಿದ್ದರೆ, ಆಪ್‌ನ ಕುಲದೀಪ್‌ ಕುಮಾರ್‌ 12 ಮತ ಪಡೆದಿದ್ದರು. 8 ಮತಗಳು ತಿರಸ್ಕೃತಗೊಂಡಿದ್ದವು. ಇದರಿಂದ ಆಪ್‌- ಕಾಂಗ್ರೆಸ್‌ಗೆ ಹೆಚ್ಚಿನ ಸದಸ್ಯರ ಬೆಂಬಲವಿದ್ದರೂ ಬಿಜೆಪಿ ಅಭ್ಯರ್ಥಿ ಜಯಿಸಿದ್ದರು.  ಈ ನಡುವೆ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಅದರ ಬೆನ್ನಲ್ಲೇ ರಿಟರ್ನಿಂಗ್‌ ಆಫೀಸರ್‌ ಕೆಲ ಮತಚೀಟಿಗಳನ್ನು ತಿರುಚಿದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿತ್ತು.

ಈ ವಿಡಿಯೋ ಗಮನಿಸಿದ್ದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ಸಿಂಗ್‌, ಇದು ಪ್ರಜಾಪ್ರಭುತ್ವದ ಅಣಕ ಮತ್ತು ಕಗ್ಗೊಲೆ. ಇಂಥದ್ದನ್ನೆಲ್ಲಾ ನಡೆಯಲು ಬಿಡುವುದಿಲ್ಲ. ಈ ಅಧಿಕಾರಿಯನ್ನು ವಿಚಾರಣೆ ನಡೆಸಲೇಬೇಕು. ಸುಪ್ರೀಂಕೋರ್ಟ್ ಇದನ್ನೆಲ್ಲಾ ನೋಡುತ್ತಿದೆ ಎಂದು ಆತನಿಗೆ ಹೇಳಿ ಎಂದು ಸಾಲಿಸಿಟರ್‌ ಜನರಲ್‌ಗೆ ಸೂಚಿಸಿತ್ತು. ಅಲ್ಲದೆ ಎಲ್ಲಾ ದಾಖಲೆಗಳೊಂದಿಗೆ ಫೆ.20ರಂದು ಖುದ್ದು ಹಾಜರಾಗಿ ಸ್ಪಷ್ಟನೆ ನೀಡುವಂತೆ ಅಧಿಕಾರಿಗೆ ಸೂಚಿಸಿತ್ತು. ಇದರಿಂದ ಕೋರ್ಟ್‌ಗೆ ಹಾಜರಾಗಿ ದಾಖಲೆ ನೀಡಿದ್ದರು. 

ಲೋಕಸಭಾ ಚುನಾವಣೆಗೆ ಬಿಜೆಪಿ ರಣತಂತ್ರ! 5 ವರ್ಷಗಳ ಬಳಿಕ ಕನ್ನಡಿಗರಿಗೆ ಬೆಳಗಾವಿ ಮೇಯರ್ ಸ್ಥಾನ!
 

click me!