
ಮೃತಪಟ್ಟವರ ಖಾತೆಯಲ್ಲಿದ್ದ ಹಣವನ್ನು ನೀವು ಪಡೆಯಬೇಕೆಂದರೆ ಅದಕ್ಕೆ ಅಗತ್ಯವಾದ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ. ವಿಶೇಷವಾಗಿ ಮರಣಪತ್ರವನ್ನು ನೀವು ನೀಡಬೇಕು. ಆದರೆ ಇದರ ಅರಿವಿಲ್ಲದ ವ್ಯಕ್ತಿಯೊಬ್ಬರು ತಮ್ಮ ಮೃತಪಟ್ಟ ಸೋದರಿಯ ಖಾತೆಯಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ಬಿಡಿಸಿಕೊಳ್ಳುವುದಕ್ಕೆ ಬ್ಯಾಂಕ್‌ಗೆ ಹೋಗಿದ್ದಾರೆ. ಆಮೇಲೆ ಆಗಿದ್ದೇನು? ಇಲ್ಲಿದೆ ಡಿಟೇಲ್ ಸ್ಟೋರಿ..
ಒಡಿಶಾದಲ್ಲಿ ಆದಿವಾಸಿ ವ್ಯಕ್ತಿಯೊಬ್ಬರು ತಮ್ಮ ಸೋದರಿಯ ಖಾತೆಯಲ್ಲಿದ್ದ 20 ಸಾವಿರ ರೂಪಾಯಿ ಹಣವನ್ನು ವಾಪಸ್ ಪಡೆಯುವುದಕ್ಕೆ ಆಕೆಯ ಹೂತ್ತಿದ್ದ ಶವವನ್ನು ಹೊರತೆಗೆದು ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ತಂದಂತಹ ಆಘಾತಕಾರಿ ಘಟನೆ ನಡೆದಿದೆ. ಒಡಿಶಾದ ಕಿಯೊಂಝರ್ ಜಿಲ್ಲೆಯ ಪಟನಾ ಬ್ಲಾಕ್‌ನಲ್ಲಿರುವ ಮಲಿಪೊಸಿ ಪ್ರದೇಶದಲ್ಲಿ ಬರುವ ಒಡಿಶಾ ಗ್ರಾಮೀಣ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದೆ.
ಹೀಗೆ ಸೋದರಿಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ತಂದಂತಹ ವ್ಯಕ್ತಿಯನ್ನು 50 ವರ್ಷದ ಜೀತು ಮುಂಡ ಎಂದು ಗುರುತಿಸಲಾಗಿದೆ. ಈತ ಡಿಯನಲಿ ಗ್ರಾಮದ ನಿವಾಸಿಯಾಗಿದ್ದಾರೆ. 2 ತಿಂಗಳ ಹಿಂದೆ ಇವರ ಅಕ್ಕ 56 ವರ್ಷದ ಕರ್ಲಾ ಮುಂಡಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅದಕ್ಕೂ ಮೊದಲು ಅವರು ಜಾನುವಾರುಗಳನ್ನು ಮಾರಾಟ ಮಾಡಿದ್ದು, ಅವರಿಗೆ ಸ್ವಲ್ಪ ಹಣ ಸಿಕ್ಕಿತ್ತು. ಆ ಹಣವನ್ನು ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿ ಇರಿಸಿದ್ದರು. ಅವರಿಗೆ ಬೇರೆ ಯಾರು ಕಾನೂನುಬದ್ಧ ಉತ್ತರಾಧಿಕಾರಿ ಇಲ್ಲದೇ ಇರುವುದರಿಂದ ಸೋದರ ಜೀತು ಮುಂಡಾ ಅವರು ಬ್ಯಾಂಕ್‌ಗೆ ಹೋಗಿ ತನ್ನ ಸೋದರಿ ಕರ್ಲಾ ಮುಂಡಾ ಖಾತೆಯಲ್ಲಿರುವ ಹಣ ನೀಡುವಂತೆ ಕೇಳಿದ್ದಾರೆ. ಆದರೆ ಈ ಸಮಯದಲ್ಲಿ ಬ್ಯಾಂಕ್ ಅಧಿಕಾರಿಗಳು ತಮ್ಮ ಸೋದರಿಯ ಮರಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ.
ಆದರೆ ಮುಂಡಾ ಅವರಿಗೆ ಹಣ ಡ್ರಾ ಮಾಡುವುದಕ್ಕೆ ಬೇಕಾದ ಅಗತ್ಯವಾದ ದಾಖಲೆಗಳನ್ನು ಪಡೆಯುವುದಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಸಹೋದರಿ ಹೂತ್ತಿಟ್ಟ ಶವವನ್ನು ಮತ್ತೆ ಬಗೆದು ಮೇಲೆತ್ತಿ ಅಸ್ಥಿಪಂಜರವನ್ನು ತೆಗೆದುಕೊಂಡು ಹೆಗಲಮೇಲೆ ಹೊತ್ತುಕೊಂಡು ಬ್ಯಾಂಕ್‌ಗೆ ಬಂದಿದ್ದಾರೆ.
ಇದನ್ನೂ ಓದಿ: ವೈಟ್‌ಹೌಸ್ ಗುಂಡಿನ ದಾಳಿಯ ನಡುವೆ ವೈನ್ ಬಾಟಲ್ ಎತ್ತಿದ ಮಹಿಳೆ: ವೀಡಿಯೋ ವೈರಲ್
ಈ ಬಗ್ಗೆ ಮಾಧ್ಯಮಗಳು ಅವರ ಬಳಿ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ, ನಾನು ಸೋದರಿಯ ಖಾತೆಯಲ್ಲಿದ್ದ ಹಣ ಪಡೆಯುವುದಕ್ಕಾಗಿ ಹಲವು ಬಾರಿ ನಾನು ಬ್ಯಾಂಕ್‌ಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿದ್ದ ಜನರು ಯಾರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದೆಯೋ ಹಣ ಡ್ರಾ ಮಾಡುವುದಕ್ಕೆ ಅವರನ್ನೇ ಕರೆದುಕೊಂಡು ಬರುವಂತೆ ಹೇಳಿದರು. ನಾನು ಆಕೆ ಸಾವನ್ನಪ್ಪಿದ್ದಾರೆ ಎಂದು ಹೇಳಿದರೂ ಅವರು ನನ್ನ ಮಾತು ಕೇಳುವುದಕ್ಕೆ ಸಿದ್ಧರಿರಲಿಲ್ಲ. ಹೀಗಾಗಿ ನಾನು ಹತಾಶೆಯಿಂದ ಆಕೆಯ ಸಮಾಧಿಯಿಂದ ಶವವನ್ನು ಹೊರ ತೆಗೆದು ಆಕೆ ಸತ್ತಿದ್ದಾಳೆ ಎಂದು ತೋರಿಸುವುದಕ್ಕೆ ಆಕೆಯ ಅಸ್ಥಿಪಂಜರನವನ್ನು ತೆಗೆದುಕೊಂಡು ಬಂದಿದ್ದೇನೆ ಇದೇ ಆಕೆ ಸಾವಿಗೀಡಾಗಿದ್ದಾಳೆ ಎಂಬುದಕ್ಕೆ ಇರುವ ಸಾಕ್ಷಿ ಎಂದು ಅನಕ್ಷರಸ್ಥನೂ ಆಗಿರುವ ಜಿತು ಮುಂಡಾ ಹೇಳಿದ್ದಾರೆ.
ಜೀತು ಅವರು ಬ್ಯಾಂಕ್‌ಗೆ ಶವ ತಂದಿದ್ದನ್ನು ನೋಡಿ ಗಾಬರಿಯಾದ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಪಟನಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಅವರು ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಿರಣ್ ಪ್ರಸಾದ್ ಸಾಹು, ಜೀತು ಒಬ್ಬ ಅನಕ್ಷರಸ್ಥ ಆದಿವಾಸಿ ವ್ಯಕ್ತಿ. ಅವರಿಗೆ ನಾಮಿನಿಯ ಬಗ್ಗೆಯಾಗಲಿ ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಯ ಬಗೆಯಾಗಲಿ ಗೊತ್ತಿಲ್ಲ. ಮೃತ ವ್ಯಕ್ತಿಯ ಖಾತೆಯಿಂದ ಹಣ ತೆಗೆಯುವ ಪ್ರಕ್ರಿಯೆಯ ಬಗ್ಗೆ, ಬ್ಯಾಂಕ್ ಅಧಿಕಾರಿಗಳು ಕೂಡ ಸರಿಯಾಗಿ ವಿವರಿಸಿ ಅರ್ಥ ಮಾಡಿಸುವುದಕ್ಕೆ ವಿಫಲರಾಗಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಪ್ರಶ್ನಿಸಿದ್ದಕ್ಕೆ ತೀವ್ರ ಆಕ್ರೋಶ
ಆದರೆ ನಂತರ ಪೊಲೀಸರು ಜೀತು ಅವರಿಗೆ ಅವರ ಮೃತ ಸೋದರಿಯ ಖಾತೆಯಲ್ಲಿದ್ದ ಹಣವನ್ನು ತೆಗೆಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ನಂತರ ಜೀತು ಮೊಂಡಾ ಅವರ ಸೋದರಿ ಕರ್ಲಾ ಮೊಂಡಾ ಅವರ ಶವವನ್ನು ಪೊಲೀಸರ ಸಮ್ಮುಖದಲ್ಲೇ ಮತ್ತೆ ಸ್ಮಶಾನದಲ್ಲಿ ಹೂಳಲಾಯ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ವಿಭಾಗ ಅಭಿವೃದ್ಧಿ ಅಧಿಕಾರಿ ಮಾನ್ಸ ದಂಡಪತ್ ಮಾತನಾಡಿ, ಜೀತು ಮುಂಡಾ ಅವರು ತನ್ನ ಮೃತ ಸೋದರಿಯ ಕಾನೂನಾತ್ಮಕ ಉತ್ತರಾಧಿಕಾರ ಪಡೆಯಲು ಯಾರ ಬಳಿಯೂ ಕೇಳಿಲ್ಲ. ಇವತ್ತೇ ನನಗೆ ಈ ವಿಚಾರ ಗೊತ್ತಾಗಿದೆ. ಈ ಸಮಸ್ಯೆ ಪರಿಹರಿಸಲು ಏನು ಮಾಡುವುದಕ್ಕೆ ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಹೇಳಿದರು. ಈ ನಡುವೆ ಬ್ಯಾಂಕ್ ಮೂಲಗಳ ಪ್ರಕಾರ, ಕರ್ಲಾ ಮುಂಡಾ ಅವರ ಬ್ಯಾಂಕ್ ಖಾತೆಯ ಉತ್ತರಾಧಿಕಾರಿಯೂ ಸಾವನ್ನಪ್ಪಿದ್ದಾರೆ. ಹೀಗಾಗಿ ಈಗ ಜೀತು ಮುಂಡಾ ಮಾತ್ರವೇ ಕರ್ಲಾ ಮುಂಡಾ ಅವರ ಖಾತೆಯಲ್ಲಿರುವ ಹಣಕ್ಕೆ ವಾರಸುದಾರರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ