ಪಾಕಿಸ್ತಾನ ರಕ್ತದಾಹಕ್ಕೆ ಅಧಿಕಾರಿ, ಯೋಧ ಸೇರಿ 7 ಬಲಿ: ಕ್ಷಿಪಣಿ, ಡ್ರೋನ್‌ ಭಾಗಗಳು ಪತ್ತೆ

Published : May 11, 2025, 07:03 AM IST
ಪಾಕಿಸ್ತಾನ ರಕ್ತದಾಹಕ್ಕೆ ಅಧಿಕಾರಿ, ಯೋಧ ಸೇರಿ 7 ಬಲಿ: ಕ್ಷಿಪಣಿ, ಡ್ರೋನ್‌ ಭಾಗಗಳು ಪತ್ತೆ

ಸಾರಾಂಶ

ಭಾರತ ನೀಡುವ ಪ್ರತೀಕಾರದ ಹೊಡೆತ ಸಹಿಸುವುದು ಅಸಾಧ್ಯವೆಂದು ತಿಳಿದರೂ, ಪಾಕಿಸ್ತಾನ ಹಗಲು-ರಾತ್ರಿ ಅಪ್ರಚೋದಿತ ದಾಳಿ ಮುಂದುವರೆಸಿದೆ. 

ಶ್ರೀನಗರ (ಮೇ.11): ಭಾರತ ನೀಡುವ ಪ್ರತೀಕಾರದ ಹೊಡೆತ ಸಹಿಸುವುದು ಅಸಾಧ್ಯವೆಂದು ತಿಳಿದರೂ, ಪಾಕಿಸ್ತಾನ ಹಗಲು-ರಾತ್ರಿ ಅಪ್ರಚೋದಿತ ದಾಳಿ ಮುಂದುವರೆಸಿದೆ. ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರ ಮತ್ತು ಗುಜರಾತ್‌ನ 26 ನಗರಗಳ ಮೇಲೆ ದಾಳಿ ನಡೆಸಿದ್ದ ಪಾಕ್‌, ಶನಿವಾರ ನಸುಕಿನಲ್ಲೂ ನಡೆಸಿದ ಶೆಲ್‌ ದಾಳಿಗೆ ಕಾಶ್ಮೀರದಲ್ಲಿ ಸರ್ಕಾರಿ ಅಧಿಕಾರಿ ರಾಜ್‌ಕುಮಾರ್‌ ಥಾಪಾ ಎಂಬುವರು ಸೇರಿ 7 ಜನ ಬಲಿಯಾಗಿದ್ದಾರೆ. ಇನ್ನು ರಾಜಸ್ಥಾನ, ಪಂಜಾಬ್‌ ಮೇಲೆ ಬೆಳಗ್ಗಿನವರೆಗೂ ಅದು ಡ್ರೋನ್‌ ದಾಳಿ ನಡೆಸಿದೆ.

ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್‌ ಪಡೆಗಳು, ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ, ಉರಿ, ಪಂಜಾಬ್‌ ಸೇರಿದಂತೆ ಹಲವು ಕಡೆಗಳಲ್ಲಿ ನಾಗರಿಕರು ಮತ್ತು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಶನಿವಾರ ಬೆಳಗ್ಗೆ ದಾಳಿ ನಡೆಸಿವೆ. ಪಾಕ್‌ ನಡೆಸಿದ ಬಹುತೇಕ ದಾಳಿ ಗುರಿ ತಲುಪುವುದನ್ನು ಭಾರತದ ಬಲಿಷ್ಠ ರಕ್ಷಣಾ ವ್ಯವಸ್ಥೆಗಳು ತಡೆದವಾದರೂ, ಜಮ್ಮುವಿನಲ್ಲಿ ನಡೆದ ಶೆಲ್‌ ದಾಳಿಗೆ 2 ವರ್ಷದ ಪುಟ್ಟ ಬಾಲಕಿ, ಓರ್ವ ಅಧಿಕಾರಿ ಸೇರಿ 7 ಮಂದಿ ಮೃತಪಟ್ಟಿದ್ದಾರೆ. 8 ಬಿಎಸ್‌ಎಫ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಅತ್ತ ಹಿಮಾಚಲ ಪ್ರದೇಶದಲ್ಲಿ ಕ್ಷಿಪಣಿ ಮತ್ತು ಡ್ರೋನ್‌ನ ಭಾಗಗಳನ್ನು ಹೋಲುವ ವಸ್ತುಗಳು ಪತ್ತೆಯಾಗಿವೆ.

ಪಾಕಿಸ್ತಾನದ ಕಪಟ ಕದನ ವಿರಾಮ: 4 ರಾಜ್ಯಗಳಲ್ಲಿ ಡ್ರೋನ್ ಮೊರೆತ, ಗಡಿಯಲ್ಲಿ ಶೆಲ್‌ ದಾಳಿ

ಮತ್ತೆ ಕದನ ವಿರಾಮ ಉಲ್ಲಂಘನೆ: ಪಾಕ್‌ ಪಡೆಗಳು ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಬಳಿ ಕನದ ವಿರಾಮದ ಉಲ್ಲಂಘನೆಯನ್ನು ಮುಂದುವರೆಸಿವೆ. ಜಮ್ಮು ಕಾಶ್ಮೀರದ ಉರಿ, ಗುರೆಜ್‌, ಬಂಡಿಪೊರ ಬಳಿ ಈ ಉಲ್ಲಂಘನೆಯಾಗಿದ್ದು, ಬಾರಾಮುಲ್ಲಾ ಜಿಲ್ಲೆಯ ಛರುಂದಾ ಮತ್ತು ಹತ್ಲಂಗಾ ಪ್ರದೇಶಗಳನ್ನು ಗುರಿಯಾಗಿಸಿ ಶೆಲ್‌ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ಶ್ರೀನಗರದ ಮೇಲೆ ದಾಳಿ: ಶನಿವಾರ ಬೆಳಗಿನ ಜಾವವೇ ಪಾಕಿಸ್ತಾನದ ಕಡೆಯಿಂದ ಶ್ರೀನಗರದ ಮೇಲೆ ಶೆಲ್‌ಗಳು ಹಾರತೊಡಗಿದ್ದು, ಮದ್ಯಾಹ್ನ 11.45ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದೆ. ಕೂಡಲೇ ಸೈರನ್‌ ಮೊಳಗತೊಡಗಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ವಿಮಾನ ನಿಲ್ದಾಣ ಸೇರಿ ಇನ್ನೂ ಕೆಲ ಪ್ರಮುಖ ಸ್ಥಳಗಳ ಬಳಿ ನಡೆದ ಸ್ಫೋಟದಿಂದ ಜನರೂ ಆತಂಕಗೊಂಡಿದ್ದಾರೆ. ಅತ್ತ ಇಲ್ಲಿನ ಹಳೆಯ ಏರ್‌ಫೀಲ್ಡ್‌ ಬಳಿ ಡ್ರೋನ್‌ ಒಂದನ್ನು ವಾಯು ರಕ್ಷಣಾ ವ್ಯವಸ್ಥೆ ಹೊಡೆದು ಹಾಕಿದೆ.

ಶೆಲ್‌ ದಾಳಿಗೆ 7 ಸಾವು: ಜಮ್ಮುವಿನಲ್ಲಿ ಶನಿವಾರ ಬೆಳಗ್ಗೆ ನಡೆದ ಶೆಲ್‌ ದಾಳಿಯಲ್ಲಿ ಓರ್ವ ಸರ್ಕಾರಿ ಅಧಿಕಾರಿ, 2 ವರ್ಷದ ಕಂದ ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ. ರಜೌರಿಯಲ್ಲಿದ್ದ ತಮ್ಮ ನಿವಾಸಕ್ಕೆ ಅಪ್ಪಳಿಸಿದ ಶೆಲ್‌ನಿಂದ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತರಾದ ರಾಜ್‌ಕುಮಾರ್‌ ಥಾಪಾ ಮತ್ತು ಇನ್ನಿಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಥಾಪಾ ಕೊನೆಯುಸಿರೆಳೆದಿದ್ದಾರೆ. ಅವರ ಅಗಲುವಿಕೆಗೆ ಸಿಎಂ ಒಮರ್‌ ಅಬ್ದುಲ್ಲಾ ಸಂತಾಪ ಸೂಚಿಸಿದ್ದು, ‘ನಿನ್ನೆಯಷ್ಟೇ ಅವರು ನನ್ನೊಂದಿಗೆ ಸಭೆಯೊಂದರಲ್ಲಿ ಭಾಗಿಯಾಗಿದ್ದರು’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅತ್ತ ಪ್ರತ್ಯೇಕ ದಾಳಿಗಳಲ್ಲಿ 2 ವರ್ಷದ ಆಯಿಷಾ ನೂರ್‌ ಸೇರಿದಂತೆ 4 ಮಂದಿ ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಿಎಂ ಅಬ್ದುಲ್ಲಾ 10 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ,

ಅನುಮಾನಾಸ್ಪದ ವಸ್ತು ಪತ್ತೆ: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೇಹದ್‌ ಗ್ರಾಮದಲ್ಲಿ ಕ್ಷಿಪಣಿಯ ಭಾಗವನ್ನು ಹೋಲುವ ವಸ್ತುವೊಂದು ಪತ್ತೆಯಾಗಿದೆ. ಅತ್ತ ಕಂಗ್ರಾ ಜಿಲ್ಲೆಯ ಇಂದೋರಾದಲ್ಲಿ ಮಿಸೈಲ್‌ ಮತ್ತು ಡ್ರೋನ್‌ನ ಅವಶೇಷಗಳಂತಹ ವಸ್ತುಗಳು ಕಂಡುಬಂದಿವೆ. ಪ್ರಾಥಮಿಕ ತನಿಖೆಯಲ್ಲಿ ಅವುಗಳು ನಿಷ್ಕ್ರಿಯಗೊಂಡಿವೆ ಎಂದು ತಿಳಿದುಬಂದಿದ್ದು, ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಪ್ರದೇಶವನ್ನು ಸುತ್ತುವರೆದಿರುವ ಪೊಲೀಸರು, ಅಂತಹ ಅನುಮಾನಾಸ್ಪದ ವಸ್ತುಗಳ ಹತ್ತಿರ ಹೋಗದಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ದೆಹಲಿ ಮೇಲೆ ಕ್ಷಿಪಣಿ ದಾಳಿಗೆ ಪಾಕ್ ಯತ್ನ ವಿಫಲ: ಪಂಜಾಬ್‌ ಮೇಲಿದ್ದಾಗ ಧ್ವಂಸ

ಅಮೃತಸರದಲ್ಲೂ ಡ್ರೋನ್‌ ನಾಶ: ಪಂಜಾಬ್‌ನ ಅಮೃತಸರದ ಖಾಸಾ ಸೇನಾ ದಂಡು ಪ್ರದೇಶ(ಕಂಟೋನ್ಮೆಂಟ್‌)ದ ಮೇಲೆ ಹಾರುತ್ತಿದ್ದ ಪಾಕಿಸ್ತಾನಿ ಡ್ರೋನ್‌ ಒಂದನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ, ‘ಬೆಳಗ್ಗೆ 5ರ ಸುಮಾರಿಗೆ ಹಲವು ವೈರಿ ಡ್ರೋನ್‌ಗಳು ಖಾಸಾ ಕಂಟೋನ್ಮೆಂಟ್‌ ಪ್ರದೇಶದ ಮೇಲೆ ಹಾರಾಟ ನಡೆಸುತ್ತಿದ್ದುದು ಕಂಡುಬಂದಿತ್ತು. ನಮ್ಮ ವಾಯು ರಕ್ಷಣಾ ಘಟಕಗಳು ಅವುಗಳನ್ನು ತಕ್ಷಣ ನಾಶಪಡಿಸಿದವು’ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ
ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ