
ಪಹಲ್ಗಾಮ್ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳು ತಮ್ಮ ತಮ್ಮ ವಾಯುಪ್ರದೇಶವನ್ನು ಶತ್ರು ರಾಷ್ಟ್ರಗಳಿಗೆ ಪರಸ್ಪರ ಮುಚ್ಚಿವೆ. ಇದರಿಂದಾಗಿ ಪಾಕಿಸ್ತಾನದ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳು ಹಾಗೂ ಭಾರತದ ವಾಯುಪ್ರದೇಶದಲ್ಲಿ ಪಾಕಿಸ್ತಾನದ ವಿಮಾನಗಳು ಹಾರುವಂತಿಲ್ಲ, ಇದರಿಂದ ಎರಡೂ ದೇಶಗಳಿಗೂ ಭಾರಿ ನಷ್ಟವಾಗುತ್ತಿದೆ. ಭಾರತದ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ ಇಂಡಿಯಾವೊಂದಕ್ಕೆ ಈ ನಿರ್ಧಾರದಿಂದ ಬರೋಬ್ಬರಿ 4000 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ವರದಿಯಾಗಿದೆ.
ಏರ್ ಇಂಡಿಯಾದ ಸಿಇಒ ಕಂಪಬೆಲ್ ವಿಲ್ಸನ್ ಅವರೇ ಈ ವಿಚಾರವನ್ನು ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಡೆಸಿದ ಪಹಲ್ಗಾಮ್ ದಾಳಿಯಿಂದಾಗಿ ಒಬ್ಬ ವಿದೇಶಿ ಸೇರಿ 26 ಭಾರತೀಯರು ಸಾವನ್ನಪ್ಪಿದ್ದರು. ಈ ಕೃತ್ಯದ ನಂತರ ಭಾರತ ಪಾಕಿಸ್ತಾನಕ್ಕೆ ತನ್ನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಿತ್ತು. ಇದಾದ ನಂತರ ಪಾಕಿಸ್ತಾನವೂ ಕೂಡ ಭಾರತದ ನಡೆಗೆ ಪ್ರತಿಯಾಗಿ ತನ್ನ ದೇಶದ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳಿಗೆ ಹಾರಾಟ ನಿಷೇಧಿಸಿತ್ತು. ಹೀಗಾಗಿ ಈ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳು ಸುತ್ತುಬಳಸಿ ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಇದರಿಂದ ಭಾರತವೂ ಸೇರಿದಂತೆ ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳಿಗೂ ನಷ್ಟ ಆಗುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾದ ಸಿಇಒ ಕಂಪ್‌ಬೆಲ್ ವಿಲ್ಸನ್ ಅವರು ಮಾತನಾಡಿದ್ದು, ಪಾಕಿಸ್ತಾನವೂ ಭಾರತದ ವಿಮಾನಯಾನ ಸಂಸ್ಥೆಗೆ ತನ್ನ ವಾಯುಪ್ರದೇಶದಲ್ಲಿ ಹಾರಾಟ ನಿಷೇಧ ನಿರಂತರ ಮುಂದುವರೆಸಿರುವುದರಿಂದ ಏರ್ ಇಂಡಿಯಾಗೆ ಅಂದಾಜು 4,000 ಕೋಟಿ ನಷ್ಟ ಆಗಿದೆ. ಅಹ್ಮದಾಬಾದ್ ಏರ್ ಕ್ರಶ್‌ನಿಂದ ಸಂಭವಿಸಿದ ನಷ್ಟದ ಜೊತೆಗೆ ಪ್ರಕ್ಷುಬ್ಧ ವರ್ಷದಲ್ಲಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆ ಮತ್ತು ಆರ್ಥಿಕ ಸವಾಲುಗಳನ್ನು ಇದು ಉಲ್ಬಣಗೊಳಿಸಿದೆ ಎಂದಿದ್ದಾರೆ.
ಪಾಕಿಸ್ತಾನದ ವಾಯುಪ್ರದೇಶ ಹೇರಿರುವ ನಿರ್ಬಂಧದಿಂದ ಏರ್ ಇಂಡಿಯಾವನ್ನು ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕೆ ತೆರಳುವ ವಿಮಾನಗಳ ಮಾರ್ಗ ಬದಲಾಯಿಸುವಂತಾಗಿದೆ. ಇದರಿಂದಾಗಿ ಇಂಧನ ಬಳಕೆ, ಸಿಬ್ಬಂದಿ ವೆಚ್ಚ ಮತ್ತು ವಿಮಾನ ಹಾರಾಟದ ಸಮಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ವಿಲ್ಸನ್ ಹೇಳಿದ್ದಾರೆ.
ಪಾಕ್ ವಾಯುಪ್ರದೇಶ ಮುಚ್ಚುವಿಕೆಯಿಂದ ಏರ್ ಇಂಡಿಯಾಗೆ 4000 ಕೋಟಿ ರೂಪಾಯಿಗಳ ನಷ್ಟ ದೊಡ್ಡ ಪರಿಣಾಮ ಬೀರುತ್ತದೆ. ಈ ನಿರ್ಬಂಧಗಳಿಂದ ಎರಡೂ ದೇಶಗಳಿಂದ ನೋಂದಾಯಿಸಲ್ಪಟ್ಟ ಅಥವಾ ನಿರ್ವಹಿಸಲ್ಪಡುವ ವಾಣಿಜ್ಯ ಮತ್ತು ಮಿಲಿಟರಿ ವಿಮಾನಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಏರ್ ಇಂಡಿಯಾದ ಅತ್ಯಂತ ಲಾಭದಾಯಕ ಅಂತರರಾಷ್ಟ್ರೀಯ ವಲಯಗಳಲ್ಲಿ ಒಂದಾದ ಯುರೋಪ್ ಮತ್ತು ಯುಎಸ್‌ಗೆ ಭಾರತವನ್ನು ಸಂಪರ್ಕಿಸುವ ಮಾರ್ಗಗಳು ಹೆಚ್ಚು ಪರಿಣಾಮ ಬೀರಿವೆ, ಹಾರಾಟದ ಅವಧಿ ಸರಾಸರಿ 60-90 ನಿಮಿಷಗಳಷ್ಟು ಹೆಚ್ಚಾಗಿದೆ ಎಂದು ಕಂಪಬೆಲ್ ವಿಲ್ಸನ್ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಉದ್ಯೋಗಕ್ಕಾಗಿ ಲಂಚ ಎಫ್‌ಐಆರ್ ದಾಖಲಿಸಲು ತಮಿಳುನಾಡು ಪೊಲೀಸರಿಗೆ ಇಡಿ ಸೂಚನೆ
ಇದನ್ನೂ ಓದಿ: ರಾಫೆಲ್‌ನಲ್ಲಿ ಹಾರಿ ಹೊಸ ದಾಖಲೆ ನಿರ್ಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ