
ಚೆನ್ನೈ: ತಮಿಳುನಾಡಿನಲ್ಲಿ ಉದ್ಯೋಗಕ್ಕಾಗಿ ಲಂಚ ಹಗರಣ ನಡೆದಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯವೂ ತಮಿಳುನಾಡು ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ತಮಿಳುನಾಡು ರಾಜ್ಯದ ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್, ವಾಟರ್ ಸಪ್ಲೈ ಡಿಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ನೇಮಕಾತಿ ನಡೆದಿದ್ದು, ಇಲ್ಲಿ ಉದ್ಯೋಗ ಗಿಟ್ಟಿಸಿದ ಅಂದಾಜು 150 ಜನರು 25ರಿಂದ 35 ಲಕ್ಷ ಲಂಚ ಪಾವತಿ ಮಾಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇವರಿಗಾಗಿ ನೇಮಕಾತಿ ಪ್ರಕ್ರಿಯೆಯನ್ನೇ ಅಡಿಮೇಲು ಮಾಡಲಾಗಿದೆ. ಈ ನೇಮಕಾತಿ ಪತ್ರಗಳನ್ನು ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರೇ ಆಗಸ್ಟ್‌ನಲ್ಲಿ ಅಭ್ಯರ್ಥಿಗಳಿಗೆ ಹಸ್ತಾಂತರ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಈಗ ಜಾರಿ ನಿರ್ದೇಶನಾಲಯವೂ ತಮಿಳುನಾಡು ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ರಿಯಲ್ ಎಸ್ಟೇಟ್ ಸಂಸ್ಥೆ ಟಿವಿಹೆಚ್ ಮತ್ತು ಡಿಎಂಕೆ ಸಚಿವ ಕೆ.ಎನ್. ನೆಹರು ಅವರಿಗೆ ಸಂಬಂಧಿಸಿದ ಪ್ರತ್ಯೇಕ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುವಾಗ ಈ ಹಗರಣ ಬೆಳಕಿಗೆ ಬಂದಿದ್ದಾಗಿ ತನಿಖಾ ಸಂಸ್ಥೆ ಹೇಳಿದೆ. ಜಾರಿ ನಿರ್ದೇಶನಾಲಯದ ಪ್ರಕಾರ ಸಹಾಯಕ ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಮತ್ತು ಪಟ್ಟಣ ಯೋಜನಾ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಬಯಸಿದ್ದ ಅಭ್ಯರ್ಥಿಗಳಿಂದ 25 ರಿಂದ 35 ಲಕ್ಷ ರೂ.ಗಳವರೆಗೆ ಲಂಚ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ವರ್ಷದ ಆಗಸ್ಟ್ 6 ರಂದು ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.
2024-2025 ಮತ್ತು 2025-2026 ಬ್ಯಾಚ್‌ಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ಮಾಡಲಾಗಿದೆ. ಲಂಚ ನೀಡಿದ ಆಯ್ದ ವ್ಯಕ್ತಿಗಳಿಗೆ ಪರೀಕ್ಷಾ ವಿವರಗಳನ್ನು ಮುಂಚಿತವಾಗಿ ಪಡೆಯಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ನೀಡಿದ ಲಂಚದ ಹಣವನ್ನು ನಗದು ರೂಪದಲ್ಲಿ ನಿರ್ವಹಿಸಲಾಗಿದೆ ಮತ್ತು ಅದರ ಮೂಲವನ್ನು ಮರೆಮಾಡಲು ಹವಾಲಾ ಮಾರ್ಗಗಳ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಇಡಿ ಹೇಳಿದೆ.
ತಮಿಳುನಾಡು ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಹಣ ಪಾವತಿಸಿದ ಸುಮಾರು 150 ಅಭ್ಯರ್ಥಿಗಳನ್ನು ಸರ್ಕಾರಿ ಹುದ್ದೆಗಳಿಗೆ ಯಶಸ್ವಿಯಾಗಿ ನೇಮಿಸಲಾಗಿದೆ ಎಂಬುದಕ್ಕೆ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಹಲವಾರು ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳು ಈ ಅಕ್ರಮದಲ್ಲಿ ಸಂಬಂಧ ಹೊಂದಿದ್ದು, ಅವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
ಎಫ್‌ಐಆರ್ ದಾಖಲಿಸಲು ತಮಿಳುನಾಡು ಪೊಲೀಸರಿಗೆ ಇಡಿ ಸೂಚನೆ
ರಾಜ್ಯ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ ನಂತರವೇ ಪ್ರಕರಣದ ತನಿಖೆಯನ್ನು ಪ್ರಾರಂಭಿಸಲು ಸಾಧ್ಯವಾಗುವುದರಿಂದ ಇಡಿ, ತಮಿಳುನಾಡು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ. ಅಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ, ಇಡಿಯ ಪತ್ರವು ಆಪಾದಿತರ ಹಣಕಾಸಿನ ಹಾದಿಗಳು ಮತ್ತು ಮಧ್ಯವರ್ತಿಗಳು ಮತ್ತು ಇಲಾಖಾ ಅಧಿಕಾರಿಗಳ ನಡುವಿನ ಒಪ್ಪಂದವನ್ನು ಸೂಚಿಸುವ ಸಂವಹನಗಳ ವಿವರಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಡಿಎಂಕೆ ನೇತೃತ್ವದ ಸರ್ಕಾರಕ್ಕೆ ರಾಜಕೀಯವಾಗಿ ಸೂಕ್ಷ್ಮ ಎನಿಸಿರುವ ಈ ಸಮಯದಲ್ಲಿ ಈ ಬೆಳವಣಿಗೆ ಸಂಭವಿಸಿದ್ದು, ರಾಜ್ಯದ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಮೂಡಿದೆ. ತಮಿಳುನಾಡು ಪೊಲೀಸರು ಜಾರಿ ನಿರ್ದೇಶನಾಲಯದ ಪತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ರಾಫೆಲ್‌ನಲ್ಲಿ ಹಾರಿ ಹೊಸ ದಾಖಲೆ ನಿರ್ಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮ
ಇದನ್ನೂ ಓದಿ: ರೂಲ್ಸ್ ಬ್ರೇಕ್ ಮಾಡಿದ ಟ್ರಾಫಿಕ್ ಪೊಲೀಸರ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ