
ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಹಾಕಿ ಕ್ರೀಡೆಯ ಗುಂಪುಗಳು ಪ್ರಕಟಗೊಂಡಿದ್ದು, ಭಾರತ ಪುರುಷರ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಎಫ್‌ಐಎಚ್ ವಿಶ್ವ ರ್‍ಯಾಂಕಿಂಗ್ ಆಧಾರದಲ್ಲಿ ಗುಂಪುಗಳನ್ನು ವಿಂಗಡಿಸಲಾಗಿದೆ.
ಭಾರತದ ಜೊತೆ ಗುಂಪಿನಲ್ಲಿ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್, ಐರ್ಲೆಂಡ್ ತಂಡಗಳಿವೆ. ‘ಎ’ ಗುಂಪಿನಲ್ಲಿ ನೆದರ್‌ಲೆಂಡ್ಸ್, ಜರ್ಮನಿ, ಬ್ರಿಟನ್, ಸ್ಪೇನ್, ಫ್ರಾನ್ಸ್, ದ.ಆಫ್ರಿಕಾ ಸ್ಥಾನ ಪಡೆದಿವೆ. ಒಲಿಂಪಿಕ್ಸ್ ಹಾಕಿ ಜು.27ರಿಂದ ಆ.9ರ ವರೆಗೆ ನಡೆಯಲಿದೆ.
ಮುಂಬೈ ಮ್ಯಾರಥಾನ್: ಕುಸಿದು ಬಿದ್ದು ಎರಡು ಸಾವು
ಮುಂಬೈ: ಭಾನುವಾರ ನಡೆದ ಮುಂಬೈ ಮಾರಥಾನ್ ವೇಳೆ ಕುಸಿದು ಬಿದ್ದು ಇಬ್ಬರು ಮೃತಪಟ್ಟಿದ್ದು, 22 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಲ್ಕತಾದ ಸುವ್ರದೀಪ್ ಬ್ಯಾನರ್ಜಿ(40) ಹಾಗೂ ಮುಂಬೈನ ರಾಜೇಂದ್ರ ಬೋರಾ(74) ಓಟದ ವೇಳೆ ಕುಸಿದು ಬಿದ್ದು ಮೃತಪಟ್ಟರು. 22 ಜನ ನಿರ್ಜಲೀಕರಣದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Ranji Trophy: ಕರ್ನಾಟಕ vs ಗೋವಾ ಪಂದ್ಯ ಡ್ರಾನಲ್ಲಿ ಅಂತ್ಯ
ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಇಂದಿನಿಂದ
ಜಕಾರ್ತ: ಇಂಡೋನೇಷ್ಯಾ ಮಾಸ್ಟರ್ಸ್ 500 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಎಚ್ ಎಸ್ ಪ್ರಣಯ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಲಕ್ಷ್ಯ ಸೆನ್, ಕಿದಂಬಿ ಶ್ರೀಕಾಂತ್,ಪ್ರಿಯಾನ್ಶು ರಾಜಾವತ್ ಕೂಡಾ ಕಣದಲ್ಲಿದ್ದಾರೆ. ಆದರೆ ಸತತ ಟೂರ್ನಿಗಳ ಒತ್ತಡದಿಂದಾಗಿ ತಾರಾ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಎಎಫ್‌ಸಿ ಏಷ್ಯನ್ ಫುಟ್ಬಾಲ್: ಇಂದು ಭಾರತ vs ಸಿರಿಯಾ
ಅಲ್ ಖೋರ್(ಕತಾರ್): 2 ಸೋಲಿನೊಂದಿಗೆ ನಾಕೌಟ್ ಹಾದಿಯನ್ನು ಕಠಿಣಗೊಳಿಸಿರುವ ಭಾರತ ತಂಡ, ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಸಿರಿಯಾ ವಿರುದ್ಧ ಸೆಣಸಾಡಲಿದೆ. ದೊಡ್ಡ ಅಂತರದಲ್ಲಿ ಗೆದ್ದರೆ ಮಾತ್ರ ಭಾರತಕ್ಕೆ ಪ್ರಿ ಕ್ವಾರ್ಟರ್ ಫೈನಲ್‌ಗೇರುವ ಅವಕಾಶ ಸಿಗಲಿದ್ದು, ಸೋತರೆ ಹೊರಬೀಳಲಿದೆ.
‘ಬಿ’ ಗುಂಪಿನಲ್ಲಿ ಭಾರತ ಅಂಕ ಖಾತೆ ತೆರೆಯದೆ ಕೊನೆ ಸ್ಥಾನದಲ್ಲಿದ್ದು, ಸಿರಿಯಾ(01 ಅಂಕ) 3ನೇ ಸ್ಥಾನದಲ್ಲಿದೆ. ಪ್ರತಿ 6 ಗುಂಪುಗಳಿಂದ ಅಗ್ರ-2 ತಂಡಗಳು ಮತ್ತು ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ 6 ತಂಡಗಳ ಪೈಕಿ 4 ಶ್ರೇಷ್ಠ ತಂಡಗಳು ಪ್ರಿ ಕ್ವಾರ್ಟರ್‌ಗೇರಲಿವೆ. ಹೀಗಾಗಿ ಭಾರತಕ್ಕೆ ಗುಂಪಿನಲ್ಲಿ 3ನೇ ಸ್ಥಾನಿಯಾಗಬೇಕಿದ್ದರೆ ಸಿರಿಯಾ ವಿರುದ್ಧ ಗೆಲ್ಲಲೇಬೇಕು.
ಪಂದ್ಯ: ಸಂಜೆ 5ಕ್ಕೆ
ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18
ಏಷ್ಯನ್ ಮ್ಯಾರಥಾನ್: ಚಿನ್ನ ಗೆದ್ದ ಮಾನ್ ಸಿಂಗ್
ಹಾಂಗ್‌ಕಾಂಗ್: ಇಲ್ಲಿ ನಡೆದ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಾನ್ ಸಿಂಗ್ ಚಿನ್ನ ಗೆದ್ದಿದ್ದು, ಕೂಟದಲ್ಲಿ ಚಿನ್ನ ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾನ್ 2 ತಾಸು 14.19 ನಿಮಿಷಗಳಲ್ಲಿ ಗುರಿ ತಲುಪಿದರು. ಕರ್ನಾಟಕದ ಬೆಳ್ಳಿಯಪ್ಪ 2 ಗಂಟೆ 20:20 ನಿಮಿಷದಲ್ಲಿ ಕ್ರಮಿಸಿ 6ನೇ ಸ್ಥಾನಿಯಾದರು. ಮಾನ್‌ಗೂ ಮುನ್ನ ಗೋಪಿ ಥೋನಕಲ್ 2017ರ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.