
ಚೆನ್ನೈ(ಆ.09) ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಇಂದು ಚೆನ್ನೈನಲ್ಲಿ ನಡೆದ ಅಂತಿಮ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ದ 4-0 ಅಂತರಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಹೀನಾಯ ಸೋಲಿನಿಂದ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲು ಸಿಡಿಸಿದರೆ, ಜುಗರಾಜ್ ಸಿಂಗ್ ಹಾಗೂ ಅಕ್ಷದೀಪ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ ಅದ್ಧೂರಿ ಗೆಲುವಿನ ಸಂಭ್ರಮ ಆಚರಿಸಿದೆ.
ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ ಆರಂಭದಿಂದಲೇ ನಿಯಂತ್ರಣ ಸಾಧಿಸಿತ್ತು. ಪಾಕಿಸ್ತಾನಕ್ಕೆ ಹೆಚ್ಚಿನ ಅವಕಾವನ್ನೇ ನೀಡಲಿಲ್ಲ. ಆರಂಭಿಕ 12 ನಿಮಿಷದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಭಾರತ ಹಾಗೂ ಪಾಕಿಸ್ತಾನ ಡೆಫೆನ್ಸ್ ಆಟಕ್ಕೆ ಹೆಚ್ಚು ಒತ್ತು ನೀಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದರಿಂದ ಭಾರತ ಖಾತೆ ತೆರೆಯಿತು.
ಕಿರಿಯರ ಮಹಿಳಾ ಹಾಕಿ ತಂಡಕ್ಕೆ ತುಷಾರ್ ಖಾಂಡೇಕರ್ ಕೋಚ್
ಮರುಕ್ಷಣದಲ್ಲೇ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇತ್ತ ಪಾಕಿಸ್ತಾನ ಗೋಲು ಸಿಡಿಸುವ ಪ್ರಯತ್ನ ಮಾಡಿದರೂ, ಭಾರತದ ಭದ್ರಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. 23ನೇ ನಿಮಿಷದಲ್ಲಿ ಜುಗರಾಜ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ 3-0 ಅಂತರ ಕಾಪಾಡಿಕೊಂಡಿತು.
ಅಂತಿಮ ಹಂತದಲ್ಲಿ ಮನ್ದೀಪ್ ಸಿಂಗ್ ನೀಡಿದ ಅತ್ಯತ್ತಮ ಪಾಸನ್ನು ಅಕ್ಷದೀಪ್ ಸಿಂಗ್ ಗೋಲಾಗಿ ಪರಿವರ್ತಿಸಿ ಭಾರತ 4-0 ಅಂತರದ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ ಗೆಲುವಿನ ಸಂಭ್ರಮ ಆಚರಿಸಿತು. ಏಷ್ಯನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತ ಸೋಲಿಲ್ಲದ ಸರದಾರನಾಗಿ ಸೆಮಿಫೈನಲ್ ಪ್ರವೇಶ ಪಡೆಯಿತು. ಇತ್ತ ಹೀನಾಯ ಸೋಲು ಕಂಡ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿತ್ತು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ ಹೋರಾಟ ನಡೆಸಲಿದೆ. ಇನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ಹಾಗೂ ಮಲೇಷಿಯಾ ಹೋರಾಟ ನಡೆಸಲಿದೆ.
ಭಾರತ ಹಾಕಿ ಆಯ್ಕೆ ಸಮಿತಿಯಲ್ಲಿ ರಾಜ್ಯದ ಮೂವರಿಗೆ ಸ್ಥಾನ
ಮೊದಲ ಪಂದ್ಯದಲ್ಲಿ ಚೀನಾವನ್ನು 7-2ರಿಂದ ಮಣಿಸಿದರೂ, ಜಪಾನ್ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟಿತ್ತು. ಮೊದಲ ಪಂದ್ಯದ ದ್ವಿತೀಯಾರ್ಧದಲ್ಲಿ ಮಂಕಾಗಿದ್ದ ಭಾರತ, ಜಪಾನ್ ವಿರುದ್ಧ 15 ಪೆನಾಲ್ಟಿ ಕಾರ್ನರ್ ಸಿಕ್ಕರೂ ದಾಖಲಾಗಿದ್ದು ಕೇವಲ ಒಂದೇ ಒಂದು ಗೋಲು. ಮಲೇಷಿಯಾ ವಿರುದ್ದ ಭಾರತ ದಿಟ್ಟ ಹೋರಾಟ ನೀಡಿತ್ತು. ಇದೀಗ ಪಾಕಿಸ್ತಾನ ವಿರುದ್ದ ಅದ್ವಿತೀಯ ಪ್ರದರ್ಶನ ನೀಡಿದೆ.
ಏಷ್ಯನ್ ಚಾಂಪಿಯನ್‌ಶಿಪ್ ಟೂರ್ನಿ 2011ರಲ್ಲಿ ಆರಂಭಗೊಂಡಿದ್ದು, ಇದೇ ಮೊದಲ ಬಾರಿ ಭಾರತ ಆತಿಥ್ಯ ವಹಿಸುತ್ತಿದೆ. ಭಾರತ ಈವರೆಗೆ 3 ಬಾರಿ ಚಾಂಪಿಯನ್ ಎನಿಸಿಕೊಂಡಿದೆ. 2011, 2016ರಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ, 2018ರಲ್ಲಿ ಪಾಕಿಸ್ತಾನ ಜೊತೆ ಟ್ರೋಫಿ ಹಂಚಿಕೊಂಡಿತ್ತು. ಪಾಕ್ ಕೂಡಾ 3 ಬಾರಿ ಚಾಂಪಿಯನ್ ಆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.