ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಇಂದು ಭಾರತ vs ದಕ್ಷಿಣ ಕೊರಿಯಾ ಸೆಮೀಸ್

By Kannadaprabha NewsFirst Published Sep 16, 2024, 12:25 PM IST
Highlights

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿಂದು ಭಾರತ ಹಾಕಿ ತಂಡವು ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಹುಲುನ್‌ಬ್ಯುರ್ (ಚೀನಾ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಸೋಮವಾರ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಸವಾಲನ್ನು ಎದುರಿಸಲಿದೆ. ರೌಂಡ್ ರಾಬಿನ್ ಹಂತದಲ್ಲಿ ಸತತ 5 ಪಂದ್ಯ ಗಳನ್ನು ಗೆದ್ದಿರುವ ಭಾರತ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದು ತನ್ನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ, ಚೀನಾ ವಿರುದ್ಧ 3-0 ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿತ್ತು. ಬಳಿಕ ಜಪಾನ್ ಹಾಗೂ ಮಲೇಷ್ಯಾ ತಂಡಗಳನ್ನು ಕ್ರಮವಾಗಿ 5-1, 8-1 ಗೋಲುಗಳಿಂದ ಮಣಿಸಿತ್ತು. ಆನಂತರ, ದಕ್ಷಿಣ ಕೊರಿಯಾವನ್ನು 3-1ರಲ್ಲಿ ಸೋಲಿಸಿದ್ದ ಭಾರತ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 2-1 ಗೋಲುಗಳಲ್ಲಿ ಮಣಿಸಿ ಅಜೇಯವಾಗಿ ಉಳಿದಿತ್ತು. ಪ್ರತಿ ಪಂದ್ಯದಲ್ಲೂ ಭಾರತ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು, ಎದುರಾಳಿಗಳ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದೆ.

Latest Videos

ವಿರಾಟ್‌ ಕೊಹ್ಲಿ ನನ್ನ ನಾಯಕತ್ವದಡಿ ಆಡಿದ್ದಾರೆ, ಆದ್ರೂ ಯಾರೂ ಮಾತಾಡಲ್ಲ: ಲಾಲೂ ಪುತ್ರ ತೇಜಸ್ವಿ ಯಾದವ್‌!

ಪ್ಯಾರಿಸ್ ಗೇಮ್ಸ್‌ನಲ್ಲಿ ಫೀಲ್ಡ್ ಗೋಲುಗಳ ಕೊರತೆ ತಂಡವನ್ನು ಬಲವಾಗಿ ಕಾಡಿತ್ತು. ಆದರೆ, ಆ ಸಮಸ್ಯೆ ಈ ಟೂರ್ನಿಯಲ್ಲಿ ಕಂಡುಬಂದಿಲ್ಲ. ಸುಜೀತ್ ಸಿಂಗ್‌, ಅಭಿಷೇಕ್, ಉತ್ತಮ್ ಸಿಂಗ್, ಗುರ್ಜೋತ್ ಸಿಂಗ್, ಅರೈಜೀತ್ ಸಿಂಗ್ ಹುಂಡಲ್ ಒಳಗೊಂಡ ಫಾರ್ವಡ್ ಲೈನ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದೆ. ಯುವ ಮಿಡ್ ಫೀಲ್ಡರ್ ರಾಜ್‌ಕುಮಾರ್ ಪಾಲ್, ಅನುಭವಿಗಳಾದ ಮನ್‌ ಪ್ರೀತ್ ಸಿಂಗ್, ಉಪನಾಯಕ ವಿವೇಕ್ ಸಾಗರ್ ಪ್ರಸಾದ್ ಹಾಗೂ ನೀಲಕಂಠ ಶರ್ಮಾ ಜೊತೆಗೂಡಿ ತಂಡಕ್ಕೆ ಅಗತ್ಯ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಭಾರತದ ರಕ್ಷಣಾ ಪಡೆಯ ಗುಣಮಟ್ಟ ಪಂದ್ಯದಿಂದ ಪಂದ್ಯಕ್ಕೆ ಸುಧಾರಿಸುತ್ತಿದೆ. ಗೋಲ್‌ಕೀಪರ್‌ಗಳಾದ ಕೃಷನ್ ಬಹದ್ದೂರ್‌ ಪಾಠಕ್ ಹಾಗೂ ಸೂರಜ್ ಕರ್ಕೇರಾ, ಟೂರ್ನಿಯಲ್ಲಿ ಒಟ್ಟು ಕೇವಲ 4 ಗೋಲು ಬಿಟ್ಟುಕೊಟ್ಟಿದ್ದಾರೆ. ಇನ್ನು, ವಿಶ್ವ ಶ್ರೇಷ್ಠ ಡ್ರ್ಯಾಗ್ ಫ್ಲಿಕರ್‌ಗಳಲ್ಲಿ ಒಬ್ಬರಾದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡವನ್ನು ಉತ್ತಮವಾಗಿ ಮುನ್ನಡೆಸುವುದರ ಜೊತೆಗೆ 5 ಪೆನಾಲ್ಟಿ ಕಾರ್ನ‌್ರಗಳನ್ನು ಗೋಲಾಗಿ ಪರಿವರ್ತಿಸಿದ್ದಾರೆ. 

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಬಾರಿ ಚಾಂಪಿಯನ್, 1 ಬಾರಿ ರನ್ನರ್-ಅಪ್ ಆಗಿರುವ ಭಾರತ, 6ನೇ ಬಾರಿಗೆ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತ, ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಗುರಿ ಹೊಂದಿದೆ.

ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು? ಇಲ್ಲಿಯವರೆಗೂ ಯಾರಿಗೂ ಆ ರೆಕಾರ್ಡ್‌ ಬ್ರೇಕ್‌ ಮಾಡೋಕಾಗಿಲ್ಲ!

ಇನ್ನು, ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಆತಿಥೇಯ ಚೀನಾ ಸವಾಲು ಎದುರಾಗಲಿದೆ. ಮಂಗಳವಾರ ಫೈನಲ್ ಪಂದ್ಯ ನಡೆಯಲಿದೆ.

ಭಾರತ-ಕೊರಿಯಾ ಪಂದ್ಯ: ಮಧ್ಯಾಹ್ನ 3.30ಕ್ಕೆ,
ನೇರ ಪ್ರಸಾರ: ಸೋನಿ ಲಿವ್
 

click me!