ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನವನ್ನು ಹೊರದಬ್ಬಿದ ಭಾರತ..!

Published : Aug 10, 2023, 09:57 AM IST
ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನವನ್ನು ಹೊರದಬ್ಬಿದ ಭಾರತ..!

ಸಾರಾಂಶ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮುಂದುವರೆದ ಭಾರತದ ಜಯದ ನಾಗಾಲೋಟ ಬದ್ದ ಎದುರಾಳಿ ಪಾಕಿಸ್ತಾನ ಎದುರು 4-0 ಅಂತರದ ಜಯಭೇರಿ ಅಜೇಯವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

ಚೆನ್ನೈ(ಆ.10): 7ನೇ ಆವೃತ್ತಿಯ ಏಷ್ಯನ್‌ ಪುರುಷರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನವನ್ನು ಬದ್ಧವೈರಿ ಭಾರತ ತಂಡ ಹೊರಗಟ್ಟಿದೆ. ಬುಧವಾರ ರೌಂಡ್‌ ರಾಬಿನ್‌ ಮಾದರಿಯ ಕೊನೆಯ ಪಂದ್ಯದಲ್ಲಿ 3 ಬಾರಿ ಚಾಂಪಿಯನ್‌ ಭಾರತ ತಂಡ ಪಾಕಿಸ್ತಾನ ವಿರುದ್ದ 4-0 ಗೋಲುಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಭಾರತ ಅಜೇಯವಾಗಿ, ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿಯೇ ಅಂತಿಮ 4ರ ಘಟ್ಟ ಪ್ರವೇಶಿಸಿದೆ. ಇನ್ನು ನಿರ್ಣಾಯಕ ಘಟ್ಟದಲ್ಲಿ ಹೀನಾಯ ಸೋಲು ಕಂಡ ಮೂರು ಬಾರಿಯ ಚಾಂಪಿಯನ್‌ ಪಾಕಿಸ್ತಾನ, ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ತನ್ನ ಅಭಿಯಾನ ಕೊನೆಗೊಳಿಸಿತು. ಪಾಕ್ ಸೆಮೀಸ್‌ಗೇರಬೇಕಿದ್ದರೆ ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಬೇಕಿತ್ತು.

ಪಂದ್ಯದ ಆರಂಭದಲ್ಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಭಾರತ ತಂಡಕ್ಕೆ 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆ ಒದಗಿಸಿದರು. 23ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದು ಹರ್ಮನ್‌, ಭಾರತ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ನೆರವಾದರು. 36ನೇ ನಿಮಿಷದಲ್ಲಿ ಜುಗ್ರಾಜ್‌ ಸಿಂಗ್ ಹೊಡೆದ ಪೆನಾಲ್ಟಿ ಕಾರ್ನರ್ ಗೋಲು ಹಾಗೂ 55ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್ ಬಾರಿಸಿದ ಗೋಲು ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿತು. ಶುಕ್ರವಾರ ಸೆಮೀಸ್‌ನಲ್ಲಿ ಭಾರತ ತಂಡ, ಜಪಾನ್‌ ವಿರುದ್ದ ಸೆಣಸಾಡಲಿದೆ.

ದಾಖಲೆಯ 6ನೇ ಬಾರಿ ಸೆಮಿಫೈನಲ್‌ಗೇರಿದ ಭಾರತ

ಟೂರ್ನಿಯ ಇತಿಹಾಸದಲ್ಲಿ ಭಾರತ ಹಾಕಿ ತಂಡವು  ಒಟ್ಟಾರೆ 6ನೇ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತು. 2011ರ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡ 2012ರಲ್ಲಿ ಪಾಕಿಸ್ತಾನ ವಿರುದ್ದ ಸೋತು ರನ್ನರ್ ಅಪ್ ಆಗಿತ್ತು. 2013ರಲ್ಲಿ ಸೆಮೀಸ್‌ಗೇರಲು ವಿಫಲವಾಗಿದ್ದ ಭಾರತ, 2016ರಲ್ಲಿ ಮತ್ತೆ ಟ್ರೋಫಿ ಗೆದ್ದಿತ್ತು. ಬಳಿಕ 2018ರಲ್ಲಿ ಪಾಕ್‌ ಜತೆ ಟ್ರೋಫಿ ಹಂಚಿಕೊಂಡಿತ್ತು. 2021ರಲ್ಲಿ ಭಾರತ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ODI World Cup 2023 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಇಂಡೋ-ಪಾಕ್ ಪಂದ್ಯ ಸೇರಿ 9 ಮ್ಯಾಚ್‌ ವೇಳಾಪಟ್ಟಿ ಬದಲು

ಮಲೇಷ್ಯಾ, ಜಪಾನ್ ಸೆಮೀಸ್‌ಗೆ ಲಗ್ಗೆ..!

ರೌಂಡ್ ರಾಬಿನ್‌ ಮಾದರಿಯ ಕೊನೆಯ ಪಂದ್ಯದಲ್ಲಿ ಬುಧವಾರ ಜಪಾನ್ ಹಾಗೂ ಮಲೇಷ್ಯಾ ತಂಡಗಳು ಜಯ ಗಳಿಸಿದವು. ದಿನದ ಮೊದಲ ಪಂದ್ಯದಲ್ಲಿ ಚೀನಾವನ್ನು ಜಪಾನ್ ತಂಡ 2-1 ಗೋಲುಗಳಿಂದ ಮಣಿಸಿ 5 ಅಂಕ ಸಂಪಾದಿಸಿ 4ನೇ ಸ್ಥಾನ ಪಡೆಯಿತು. ನಂತರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯಾ ವಿರುದ್ದ ಮಲೇಷ್ಯಾ 1-0 ಅಂತರದಲ್ಲಿ ಜಯಭೇರಿ ಬಾರಿಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು.

ಸೆಮಿಫೈನಲ್ ವೇಳಾಪಟ್ಟಿ
ಆಗಸ್ಟ್‌ 11: ಮಲೇಷ್ಯಾ-ಕೊರಿಯಾ- ಸಂಜೆ 6 ಕ್ಕೆ
ಆಗಸ್ಟ್ 11: ಭಾರತ-ಜಪಾನ್‌- ಸಂಜೆ 8.30ಕ್ಕೆ 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೋಹರ್‌ ಕಪ್: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!
ಕ್ರಿಕೆಟ್ ಆಯ್ತು, ಈಗ ಭಾರತ-ಪಾಕ್ ಹಾಕಿಯಲ್ಲೂ ನೋ ಹ್ಯಾಂಡ್ ಶೇಕ್ ?