Asia Cup Hockey: ಭಾರತ-ಮಲೇಷ್ಯಾ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

By Kannadaprabha NewsFirst Published May 30, 2022, 9:01 AM IST
Highlights

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ಎದುರು ಭಾರತ ರೋಚಕ ಡ್ರಾ

* ಪೆನಾಲ್ಟಿ ಕಾರ್ನರ್‌ ಮೂಲಕ ಪಂದ್ಯ ಡ್ರಾ ಮಾಡಿಕೊಂಡ ಮಲೇಷ್ಯಾ

* ಜಪಾನ್‌ ವಿರುದ್ಧ ಗೆದ್ದಿದ್ದ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ

ಜಕಾರ್ತ(ಮೇ.30): ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ (Asia Cup Hockey Tournament) ಭಾರತ ತಂಡದ ಫೈನಲ್‌ ಪ್ರವೇಶಕ್ಕೆ ಮಲೇಷ್ಯಾದ ರಾಜಿ ರಹೀಮ್‌ ಅಡ್ಡಿಯಾದರು. ಭಾನುವಾರ ನಡೆದ ಸೂಪರ್‌-4 ಹಂತದ ಪಂದ್ಯದಲ್ಲಿ ಉಭಯ ತಂಡಗಳು 3-3ರಲ್ಲಿ ಡ್ರಾಗೆ ತೃಪ್ತಿಪಟ್ಟವು. ರಹೀಂ ಹ್ಯಾಟ್ರಿಕ್‌ ಗೋಲು(12, 21, 56ನೇ ನಿಮಿಷ) ಬಾರಿಸಿ ತಂಡದ ಫೈನಲ್‌ ಆಸೆಯನ್ನು ಜೀವಂತವಾಗಿರಿಸಿದರು. ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್‌ ಮೂಲಕವೇ ದಾಖಲಾದವು.

ಒಂದು ಹಂತದಲ್ಲಿ 0-2 ಗೋಲುಗಳಿಂದ ಹಿಂದಿದ್ದ ಭಾರತ ಹಾಕಿ ತಂಡದ ಪರ ವಿಷ್ಣುಕಾಂತ್‌(32ನೇ ನಿಮಿಷ,), ಕನ್ನಡಿಗ ಎಸ್‌.ವಿ.ಸುನಿಲ್‌ (SV Sunil) (53ನೇ ನಿಮಿಷ,) ಮತ್ತು ನೀಲಂ ಸಂಜೀವ್‌(55ನೇ ನಿಮಿಷ,) ಗೋಲು ಬಾರಿಸಿದರು. ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ ಗೆದ್ದಿದ್ದ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಭಾನುವಾರದ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ 3-1 ಗೋಲುಗಳಲ್ಲಿ ಜಪಾನ್‌ ವಿರುದ್ಧ ಗೆದ್ದು ಮೊದಲ ಸ್ಥಾನಕ್ಕೇರಿತು. ಕೊರಿಯಾ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 2-2ರ ಡ್ರಾ ಸಾಧಿಸಿತ್ತು. ಜಪಾನ್‌ ಈಗಾಗಲೇ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದು, ಭಾರತವನ್ನು ಹಿಂದಿಕ್ಕಿ ಮಲೇಷ್ಯಾ ಫೈನಲ್‌ಗೇರಬೇಕಿದ್ದರೆ ಜಪಾನ್‌ (Japan) ವಿರುದ್ಧ ಕನಿಷ್ಠ 2 ಗೋಲುಗಳ ಅಂತರದಲ್ಲಿ ಗೆಲ್ಲಬೇಕಿದೆ. ಜೊತೆಗೆ ಭಾರತ ಹಾಗೂ ಕೊರಿಯಾ ನಡುವಿನ ಪಂದ್ಯ ಡ್ರಾ ಆಗಬೇಕಿದೆ.

Here are some snaps 📸 from an intense match against Malaysia in the Hero Asia Cup 2022 being played in Jakarta, Indonesia! pic.twitter.com/fRgcZmTRgK

— Hockey India (@TheHockeyIndia)

ಖೇಲೋ ಇಂಡಿಯಾ: ರಾಜ್ಯದ 191 ಕ್ರೀಡಾಪಟುಗಳು ಭಾಗಿ

ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕದ 191 ಕ್ರೀಡಾಪಟುಗಳು ಹಾಗೂ 58 ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದೆ. ಈ ಬಾರಿ ಕ್ರೀಡಾಕೂಟ ಜೂನ್‌ 4ರಿಂದ 13ರ ವರೆಗೆ ನಡೆಯಲಿದ್ದು, ಹರಾರ‍ಯಣದ ಪಂಚಕುಲ ಆತಿಥ್ಯ ವಹಿಸಲಿದೆ. 

French Open : ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ನಂ.1 ಟೆನಿಸಿಗ ಜೋಕೋವಿಚ್

ಅಂಬಾಲ, ಶಾಹ್‌ಬಾದ್‌, ದೆಹಲಿ ಹಾಗೂ ಚಂಡೀಗಢದಲ್ಲೂ ಕೆಲ ಸ್ಪರ್ಧೆಗಳು ನಡೆಯಲಿವೆ. ಕಳೆದ ವರ್ಷ ಅಸ್ಸಾಂನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ ಒಟ್ಟು 80 ಪದಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಕೂಟದಲ್ಲಿ ಸುಮಾರು 8000 ಕ್ರೀಡಾಪಟುಗಳು ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪ್ಯಾರಾ ಕ್ಯಾನೊಯ್‌ ವಿಶ್ವಕಪ್‌: ಪ್ರಾಚಿ ಯಾದವ್‌ಗೆ ಕಂಚು

ನವದೆಹಲಿ: ಪ್ಯಾರಾ ಕ್ಯಾನೊಯ್‌ ವಿಶ್ವಕಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪ್ರಾಚಿ ಯಾದವ್‌ ಪಾತ್ರರಾಗಿದ್ದಾರೆ. ಪೋಲೆಂಡ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಮಹಿಳಾ ವಿಭಾಗದ ವಿಎಲ್‌2 200 ಮೀ. ಸ್ಪರ್ಧೆಯಲ್ಲಿ 1 ನಿಮಿಷ 4.71 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಪ್ರಾಚಿ ಕಂಚಿನ ಪದಕವನ್ನು ಜಯಿಸಿದರು. ಕೆನಡಾದ ಬ್ರಿಯಾನ್ನ ಬೆಳ್ಳಿ ಗೆದ್ದರೆ, ಆಸ್ಪ್ರೇಲಿಯಾದ ಸುಸಾನ್‌ ಬಂಗಾರಕ್ಕೆ ಮುತ್ತಿಕ್ಕಿದರು. ಇನ್ನು, ಕೆಎಲ್‌3 ಪುರುಷರ 200 ಮೀ.ನಲ್ಲಿ ಮನೀಶ್‌ ಕೌರವ್‌ ಹಾಗೂ ವಿಎಲ್‌2 ಪುರುಷರ 200 ಮೀ.ನಲ್ಲಿ ಮಂಜೀತ್‌ ಸಿಂಗ್‌ ಫೈನಲ್‌ ಪ್ರವೇಶಿಸಿದ್ದಾರೆ.

click me!