Asia Cup Hockey: ಜಪಾನ್‌ ವಿರುದ್ಧ ಭಾರತಕ್ಕೆ 2-1 ಜಯ

By Kannadaprabha NewsFirst Published May 29, 2022, 9:23 AM IST
Highlights

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತದಿಂದ ಭರ್ಜರಿ ಪ್ರದರ್ಶನ

* ಜಪಾನ್‌ ವಿರುದ್ಧ ಶುಕ್ರವಾರ 2-1 ಗೋಲುಗಳಿಂದ ಗೆಲುವು

* ಗ್ರೂಪ್‌ ಹಂತದ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

ಜಕಾರ್ತ(ಮೇ.29): ಏಷ್ಯಾ ಕಪ್‌ ಹಾಕಿ ಟೂರ್ನಿಯ (Asia Cup Hockey Tournament) ಸೂಪರ್‌-4ರ ಹಂತದಲ್ಲಿ ಹಾಲಿ ಚಾಂಪಿಯನ್‌ ಭಾರತ (Indian Men's Hockey Team), ಜಪಾನ್‌ ವಿರುದ್ಧ ಶುಕ್ರವಾರ 2-1 ಗೋಲುಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಗುಂಪು ಹಂತದ ಪಂದ್ಯದಲ್ಲಿ ಜಪಾನ್‌ ವಿರುದ್ಧ 2-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿತು.

8ನೇ ನಿಮಿಷದಲ್ಲಿ ಮನ್‌ಜೀತ್‌ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ 18ನೇ ನಿಮಿಷದಲ್ಲಿ ತಕುಮಾ ನಿವಾಸ್‌ ಬಾರಿಸಿದ ಗೋಲು ಜಪಾನ್‌ ಸಮಬಲ ಸಾಧಿಸಲು ನೆರವಾಯಿತು. ಪವನ್‌ ರಾಜಾಭಾರ್‌ 35ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಜಪಾನ್‌ಗೆ ಹಲವು ಪೆನಾಲ್ಟಿಕಾರ್ನರ್‌ ಅವಕಾಶಗಳು ಸಿಕ್ಕರೂ ಗೋಲು ದಾಖಲಿಸಲು ವಿಫಲವಾಯಿತು. ಶುಕ್ರವಾರ ನಡೆದ ಮಲೇಷ್ಯಾ-ದ.ಕೊರಿಯಾ ನಡುವಿನ ಮತ್ತೊಂದು ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು. ಭಾರತ 2ನೇ ಪಂದ್ಯದಲ್ಲಿ ಭಾನುವಾರ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ.

India defeated Japan by one goal in today's Hero Asia Cup 2022, which was held in Jakarta, Indonesia.

Comment "Bharat Mata Ki Jai"

IND 2-1 JPN pic.twitter.com/87SMwAuzaH

— Hockey India (@TheHockeyIndia)

ಸರ್ಫಿಂಗ್‌: ಕರ್ನಾಟಕದ ರಮೇಶ್‌ ಸೆಮೀಸ್‌ಗೆ

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ಇಂಡಿಯಾ ಓಪನ್‌ ಸರ್ಫಿಂಗ್‌ನಲ್ಲಿ ಕರ್ನಾಟಕದ ಸರ್ಫರ್‌ಗಳು ಪ್ರಾಬಲ್ಯ ಮೆರೆದಿದ್ದು, ಕೂಟದ ಕೊನೆ ದಿನವಾದ ಭಾನುವಾರ ಹಲವು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಶನಿವಾರ ರಾಜ್ಯದ ಇಶಿತಾ ಮಾಳವಿಯಾ ಹಾಗೂ ಸಿಂಚನಾ ಗೌಡ ಫೈನಲ್‌ಗೆ, ರಮೇಶ್‌ ಬುಧಿಯಾಳ್‌ ಅವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳೆಯರ ಓಪನ್‌ ಸಫ್‌ರ್‍ ವಿಭಾಗದಲ್ಲಿ ಇಶಿತಾ 6.17 ಅಂಕ ಗಳಿಸಿದರೆ, ಸಿಂಚನಾ 7.30 ಅಂಕ ಪಡೆದು ಫೈನಲ್‌ ಅರ್ಹತೆ ಗಿಟ್ಟಿಸಿಕೊಂಡರು. ಪುರುಷರ ವಿಭಾಗದಲ್ಲಿ ರಮೇಶ್‌ 14.33 ಅಂಕಗಳೊಂದಿಗೆ ಸೆಮೀಸ್‌ ಪ್ರವೇಶಿಸಿದರು. ಹವಾಮಾನ ವೈಪರೀತ್ಯದಿಂದ ಶನಿವಾರ ನಡೆಯಬೇಕಿದ್ದ ಸೆಮಿಫೈನಲ್‌ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಯಿತು.

Asia Cup Hockey Championship: ಸೂಪರ್‌ 4ರಲ್ಲಿಂದು ಭಾರತ-ಜಪಾನ್‌ ಸೆಣಸಾಟ

ಇನ್ನು, ಕೂಟದಲ್ಲಿ ತಮಿಳುನಾಡಿನ ಸರ್ಫರ್‌ಗಳು ಕೂಡಾ ಅತ್ಯುತ್ತಮ ಪ್ರದರ್ಶನ ತೋರಿದ್ದು, ಹಾಲಿ ಚಾಂಪಿಯನ್‌ ಸೃಷ್ಟಿಸೆಲ್ವಂ ಫೈನಲ್‌ ಪ್ರವೇಶಿಸಿದರು. ಗೋವಾದ ಸುಗರ್‌ ಬನಾರ್ಸೆ ಕೂಡಾ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅಂಡರ್‌-16 ಬಾಲಕರ ವಿಭಾಗದಲ್ಲಿ ತಮಿಳುನಾಡಿನ ಸರ್ಫರ್‌ಗಳು ಕ್ಲೀನ್‌ಸ್ವೀಪ್‌ ಸಾಧನೆ ಮಾಡಿದ್ದು, ಭಾನುವಾರ ಫೈನಲ್‌ ಹಣಾಹಣಿ ನಡೆಯಲಿದೆ.

ಚೆಸ್‌ ಒಲಿಂಪಿಯಾಡ್‌ಗೆ 187 ದೇಶಗಳು: ದಾಖಲೆ!

ಚೆನ್ನೈ: ಜುಲೈ 28ರಿಂದ ಆಗಸ್ಟ್‌ 10ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ 44ನೇ ವಿಶ್ವ ಚೆಸ್‌ ಒಲಿಂಪಿಯಾಡ್‌ನಲ್ಲಿ ದಾಖಲೆಯ 187 ದೇಶಗಳ 343 ತಂಡಗಳು ಭಾಗವಹಿಸಲಿವೆ ಎಂದು ಭಾರತೀಯ ಚೆಸ್‌ ಫೆಡರೇಶನ್‌(ಎಐಸಿಎಫ್‌) ಮಾಹಿತಿ ನೀಡಿದೆ. ವಿಶ್ವದ ಅತೀ ದೊಡ್ಡ ಚೆಸ್‌ ಕೂಟವಾಗಿರುವ ಒಲಿಂಪಿಯಾಡ್‌ನಲ್ಲಿ ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಮುಕ್ತ ವಿಭಾಗದಲ್ಲಿ 189 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 154 ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದು ಎಐಸಿಎಫ್‌ ತಿಳಿಸಿದೆ. 2018ರಲ್ಲಿ ಜಾರ್ಜಿಯಾದಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ 179 ದೇಶಗಳು ಸ್ಪರ್ಧೆ ನಡೆಸಿದ್ದು ಈವರೆಗಿನ ದಾಖಲೆಯಾಗಿದೆ. ಭಾರತ ಈ ಬಾರಿ ಆತಿಥ್ಯ ವಹಿಸುತ್ತಿರುವ ಕಾರಣ 2 ತಂಡಗಳನ್ನು ಆಡಿಸುವ ಅವಕಾಶ ಪಡೆದಿದೆ.


 

click me!