
ನನಗಿನ್ನೂ 40 ವರ್ಷ ಆಗಿಲ್ಲ, ಈಗಲೇ ಏಕೆ ಹೃದಯದ ಬಗ್ಗೆ ಯೋಚಿಸಬೇಕು? ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಹೃದಯದ ಸಮಸ್ಯೆಗಳು ಕೇವಲ ವಯ್ಯಸ್ಸಾದವರಿಗೆ ಮಾತ್ರ ಬರುತ್ತದೆ ಎಂಬ ಕಾಲ ಹೊರಟುಹೋಗಿದೆ. ಇತ್ತೀಚಿನ ದಿನಗಳಲ್ಲಿ 30-40ರ ವಯಸ್ಸಿನವರಲ್ಲಿ ಹೃದಯಾಘಾತ ಆಗುತ್ತಿರುವ ಸುದ್ದಿಗಳು ಸಾಮಾನ್ಯವಾಗಿಬಿಟ್ಟಿವೆ. ಇವುಗಳನ್ನು ನೋಡಿದಾಗ “ನನಗೂ ಏನಾದರೂ ಸಮಸ್ಯೆ ಆಗಬಹುದಾ? ಎಂಬ ಭಯ ಕಾಡುವುದು ಸಹಜ.
ಯುವಜನರಲ್ಲಿ ಆಗುತ್ತಿರುವ ಈ ಸಮಸ್ಯೆಗೆ ಒಂದೇ ನಿಖರವಾದ ಕಾರಣ ಇಲ್ಲ. ವೈದ್ಯಕೀಯವಾಗಿ ನೋಡಿದರೆ ಹೃದಯದ ಸಮಸ್ಯೆಗಳಿಗೆ ಹಲವಾರು ಕಾರಣಗಳಿವೆ. ಇತಿಹಾಸವನ್ನು ನೋಡಿದರೆ, ಸರಿಸುಮಾರು 3 ಲಕ್ಷ ವರ್ಷಗಳಿಂದ ಮನುಷ್ಯನ ದೇಹವು, ಕಾಡಿನಲ್ಲಿ ಶಿಕಾರಿ ಮಾಡಿ ಜೀವಿಸುವುದು, ಆಹಾರ ಲಭ್ಯತೆ ಸರಿಯಾಗಿ ಇಲ್ಲದಿರುವುದು ಹಾಗೂ ಕಠಿಣ ದೈಹಿಕ ಶ್ರಮದ ಪರಿಸ್ಥಿತಿಗಳಿಗೆ ಹೊಂದಿಕೊಂಡು ಉತ್ತಮವಾಗಿ ಬದುಕುಳಿಯುವಂತೆ ರೂಪುಗೊಂಡಿದೆ. ಆದರೆ ಹಲವು ದಶಕಗಳಿಂದ ಈ ಶೈಲಿಯಲ್ಲಿ ಬದಲಾವಣೆಗಳಾಗಿವೆ.
ಈ ನಾನಾ ಕಾರಣಗಳಿಂದ ಚಿಕ್ಕ ವಯ್ಯಸ್ಸಿನಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕೊಲೆಸ್ಟ್ರಾಲ್, ದೇಹದಲ್ಲಿ ಹಾರ್ಮೋನ್‌ಗಳ ಅಸಮತೋಲನೆ ಮುಂತಾದ ತೊಂದರೆಗಳು ಶುರುವಾಗುತ್ತವೆ. ಈ ತೊಂದರೆಗಳು ಮುಂದೆ ಹೃದಯದ ರೋಗಕ್ಕೆ ಕಾರಣವಾಗುತ್ತವೆ. ವಿಪರ್ಯಾಸ ಏನೆಂದರೆ ಈ ತೊಂದರೆಗಳು ಸಹಜವಾಗಿ ಏನೂ ಲಕ್ಷಣಗಳನ್ನು ತೋರುವುದಿಲ್ಲ, ಬೇರೆ ಯಾವುದೋ ತೊಂದರೆಗೆ ವೈದ್ಯರ ಬಳಿ ತೋರಿಸಲು ಹೋದಾಗಲೇ ಈ ಸಮಸ್ಯೆಗಳು ಇರುವುದು ತಿಳಿದುಬರುತ್ತದೆ.
25 ವರ್ಷ ದಾಟಿದ ಮೇಲೆ ಯಾವುದೇ ತೊಂದರೆ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಬಿಪಿ, ಶುಗರ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಿ. ಹೃದಯವನ್ನು ಆರೋಗ್ಯವಾಗಿಡಲು ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ, ಸಣ್ಣ ಬದಲಾವಣೆಗಳು ಕೂಡ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ಅವುಗಳೇನೆಂದರೆ,
ಸ್ವಲ್ಪ ದೂರ ನಡೆದರೂ ಏದುಸಿರು ಅಥವಾ ಸುಸ್ತು, ಕಾರಣವಿಲ್ಲದೆ ಬೆವರು, ಎದೆ ಭಾಗದಲ್ಲಿ ನೋವು, ಭಾರ ಎನಿಸುವುದು, ಕುತ್ತಿಗೆ, ದವಡೆ ಮತ್ತು ಎಡತೋಳಿಗೆ ನೋವು ಹರಡುವುದು, ಎದೆ ಉರಿ – ಇವುಗಳು ಕಂಡುಬಂದಲ್ಲಿ ತಡ ಮಾಡದೆ ವೈದ್ಯರನ್ನು ಭೇಟಿಯಾಗಬೇಕು .
ಹೃದಯದ ಆರೋಗ್ಯ ಎಂದರೆ 40 ದಾಟಿದ ಮೇಲೆ ಯೋಚಿಸುವ ವಿಷಯವಲ್ಲ, ಇಂದಿನಿಂದಲೇ ಆರಂಭಿಸಬೇಕಾದ ಹೂಡಿಕೆ. ಹೃದಯದ ಬಗ್ಗೆ ಭಯಪಡುವುದಕ್ಕಿಂತ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಹೃದಯದ ರೋಗಗಳನ್ನು ತಡೆಗಟ್ಟಿರಿ.
ಲೇಖಕರು: ಡಾ|| ಆದರ್ಶ್ ಕಳ್ಳಿಮಠ, ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ, ಎಸ್ ಡಿ ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ , ಹಾಸನ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.