
ಇದೇ ಬರುವ ಭಾನುವಾರ ಏಪ್ರಿಲ್ 5ನೇ ತಾರೀಕಿಗೆ, ರಾತ್ರಿ 9 ಗಂಟೆಗೆ ಮನೆಯ ಬಾಲ್ಕನಿಗಳಲ್ಲಿ 9 ದೀಪಗಳನ್ನು 9 ನಿಮಿಷ ಹೊತ್ತಿಸಿ ಇಡಲು ಕರೆ ನೀಡಿದ್ದಾರೆ ಪ್ರಧಾನಿ ಮೋದಿ ಹೇಳಿದ್ದಾರೆ. ಈ ಕರೆಯ ಹಿಂದಿನ ಸೈಂಟಿಫಿಕ್ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಅವರು ಹೇಳಿಲ್ಲ. 9 ಗಂಟೆಗೇ ಯಾಕೆ? 9 ನಿಮಿಷವೇ ಯಾಕೆ? ಇದನ್ನೂ ಅವರು ಹೇಳಿಲ್ಲ. ಆದರೆ ನಮಗಾಗಿ, ನಾವೊಬ್ಬರೇ ಅಲ್ಲ. ನಮ್ಮೊಂದಿಗೆ ಎಲ್ಲ ಭಾರತೀಯರೂ ಇದ್ದಾರೆ. ಭಾರತೀಯರ ಏಕತೆಯ ಮಂತ್ರ ಸಾರಲು ಈ ಪ್ರಯೋಗವೆಂದಷ್ಟೇ ಹೇಳಿದ್ದಾರೆ.
ಹೀಗೆ ದೀಪ ಹಚ್ಚುವುದರಿಂದ ಏನಾಗುತ್ತದೆ? ಕೆಲವು ವೈಜ್ಞಾನಿಕ ಕಾರಣಗಳು ಇವೆ. ಈ ಹಿಂದಿನ ಬಾರಿ ದೇಶದ ಎಲ್ಲರೂ ಜೊತೆಯಾಗಿ ಚಪ್ಪಾಳೆ ತಟ್ಟಿ ಎಂದು ಮೋದಿ ಹೇಳಿದಾಗ, ಎಲ್ಲರೂ ಹಾಗೇ ಮಾಡಿದ್ದರು, ಅದರಿಂದ, ಕೊರೊನಾ ಎದುರಿಸಲು ದುಡಿಯುತ್ತಿರುವ ವೈದ್ಯರು, ನರ್ಸ್‌ಗಳಿಗೆ ಒಂದು ಬಗೆಯ ಹುರುಪು ಬಂದಿತ್ತು. ತಾವು ಮಾಡುತ್ತಿರುವ ಕೆಲಸ ದೇಶಕ್ಕಾಗಿ, ಇದರಲ್ಲಿ ದೇಶದ ಪ್ರಜೆಗಳಲ್ಲ ನಮ್ಮ ಜತೆಗಿದ್ದಾರೆ ಎಂಬ ಭಾವನೆ ಮೂಡಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಆಗಿತ್ತು. ಈಗಲೂ ಹಾಗೇ ಆಗುವುದರಲ್ಲಿ ಸಂಶಯವಿಲ್ಲ. ಇದೂ ಕೂಡ ವೈದ್ಯ ಸಮುದಾಯದಲ್ಲಿ ಒಂದು ಬಗೆಯ ಆತ್ಮವಿಶ್ವಾಸ, ಆತ್ಮಾಭಿಮಾನ ಮೂಡಿಸುವಂಥ ಸಂಗತಿ. ಇದನ್ನು ಈಗಾಗಲೇ ಇಟಲಿಯ ಜನ ಮಾಡಿ ತೋರಿಸಿದ್ದಾರೆ. ಅಲ್ಲೂ ಕೂಡ ನಿಗದಿತ ದಿನದಂದು ಜನ ದೀಪ ಉರಿಸಿ, ಮೊಬೈಲ್ ಟಾರ್ಚ್ ಬೆಳಗಿಸಿ ವೈದ್ಯ ಸಮುದಾಯಕ್ಕೆ ನಮನ ಸಲ್ಲಿಸಿದ್ದರು. ಇದೊಂದು ಬಗೆಯ ಸಮೂಹ ಆತ್ಮಭಿಮಾನ ವೃದ್ಧಿ ಕಾರ್ಯಕ್ರಮ.
ನೆರವು ಕೇಳಿದವನ ಮನೆಗೆ 2 ಗಂಟೇಲಿ ಅಕ್ಕಿ ಕಳುಹಿಸಿದ ಪ್ರಧಾನಿ ಮೋದಿ
ಆದರೆ ಮೋದಿಯವರು ರಾತ್ರಿ 9 ಗಂಟೆಗೇ, 9 ದೀಪಗಳನ್ನು, 9 ನಿಮಿಷ ಉರಿಸಲು ಹೇಳಿರುವುದೇಕೆ? ಇದರಲ್ಲಿ ನಾವು ಪಕ್ಕನೆ ಊಹಿಸಲಾಗದ ಯಾವುದೇ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ ಭಾರತೀಯ ಪರಂಪರೆ, ಸಂಪ್ರದಾಯ, ಸನಾತನತೆಗಳ ಅರಿವು ಇರುವವರಿಗೆ ಇದು ಹೊಸದೇನೂ ಅಲ್ಲ. 9 ಏನನ್ನು ಸಂಕೇತಿಸುತ್ತದೆ ಎಂದು ನೋಡಿ. ನಮ್ಮಲ್ಲಿ ಒಂಬತ್ತು ಎಂದರೆ ಸಂಸ್ಕೃತದಲ್ಲಿ ನವ. ನವ ಎಂದರೆ ಹೊಸತು ಎಂಬ ಅರ್ಥವೂ ಇದೆ. ಇಂದಿನಿಂದ ಹಳೆಯ ಚಿಂತೆ ನೀಗಿ ಹೊಸ ವಾತಾವರಣ ಮೂಡಿಬರುತ್ತದೆ ಎಂಬ ಸೂಚನೆಯೇ ಈ ನವದೀಪಗಳ ರಹಸ್ಯ. ಜೊತೆಗೆ ನವ ಎಂಬುದು ನವದುರ್ಗೆಯರ ಜೊತೆಗೆ ಕೂಡ ಸೇರಿಕೊಂಡಿದೆ. ನಮ್ಮಲ್ಲಿ ನವರಾತ್ರಿ ಸಂದರ್ಭದಲ್ಲಿ ದಿನಕ್ಕೊಬ್ಬರಂತೆ ನವದುರ್ಗೆಯರ ಪೂಜೆ ಮಾಡುವುದು ನಿಮಗೆ ಗೊತ್ತೇ ಇದೆ ತಾನೆ. ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಕೂಷ್ಮಾಂಡಾ, ಸ್ಕಂದಮಾತಾ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ಮತ್ತು ಸಿದ್ಧಿದಾತ್ರಿ ಎಂಬಿವರೇ ಒಂಬತ್ತು ದುರ್ಗೆಯರು. ಮನುಷ್ಯರಿಗೆ ಸಕಲ ಸೌಭಾಗ್ಯಗಳನ್ನು ಕೊಡುವವರೂ ಇವರೇ. ಅವನಿಗೆ ಬರುವ ಸಕಲ ರೋಗ ರುಜಿನಗಳನ್ನು ನಿವಾರಣೆ ಮಾಡುವವರೂ ಇವರೇ. ಈ ಮಾತೆಯರನ್ನು ಪೂಜಿಸುವುದರಿಂದ ಸಕಲ ಸಂಕಷ್ಟ ನಿವಾರಣೆ ಎಂಬುದೇ ನವರಾತ್ರಿಯ ರಹಸ್ಯ. ಆದರೆ ನವರಾತ್ರಿ ಇನ್ನೂ ದೂರದಲ್ಲಿದೆ. ನವ ದುರ್ಗೆಯರ ಶಕ್ತಿಗಳನ್ನು ಎಚ್ಚರಿಸಿ, ಅವರು ನಮ್ಮ ಕೂಗನ್ನು ಕೇಳಿಸಿಕೊಳ್ಳುವಂತೆ ಮಾಡುವುದು ಹೇಗೆ? ಅದಕ್ಕೆ ಭಾರತೀಯರೆಲ್ಲರೂ ಒಟ್ಟಾಗಿ ಒಂದು ಮೊರೆಯನ್ನಿಡುವುದು ಅಗತ್ಯವಾಗುತ್ತದೆ. ಇದೇ ಈ ಒಂಬತ್ತು ದೀಪಗಳ ರಹಸ್ಯ ಎಂದು ಹಿಂದೂ ಧರ್ಮ ತತ್ವಶಾಸ್ತ್ರಜ್ಞರು ಹೇಳುತ್ತಾರೆ.
ಕೊರೋನಾ ತಾಂಡವ: ಯುವಜನರ ಉಳಿಸಲು ಸಾವನ್ನು ಅಪ್ಪಿಕೊಂಡ 90ರ ವೃದ್ಧೆ!
ದೀಪ ಉರಿಸುವುದು ಎಲ್ಲ ವಿಧದಿಂದಲೂ ಒಳಿತು ಎಂಬುದು ಧರ್ಮಜ್ಞರ ಮಾತ್ರವಲ್ಲ, ವಿಜ್ಞಾನಿಗಳ ಅಭಿಮತ ಕೂಡ. ದೀಪ ಉರಿಸುವುದರಿಂದ ವಾತಾವರಣದಲ್ಲಿ ಇರುವ ಎಲ್ಲ ನೆಗೆಟಿವ್ ಶಕ್ತಿಗಳು ಇಲ್ಲವಾಗುತ್ತವೆ. ಕೊರೊನಾ ವೈರಸ್ ಬದುಕುವುದು ತಂಪು ವಾತಾವರಣದಲ್ಲಿ. ವಾತಾವರಣದ ತಂಪನ್ನು ದೂರ ಮಾಡುವಂತೆ ಎಲ್ಲ ಭಾರತೀಯರೂ ಒಟ್ಟಾಗಿ ದೀಪ ಬೆಳಗಿದಾಗ, ಉಂಟಾಗುವ ಪ್ರಭೆ ಹಾಗೂ ಉಷ್ಣತೆಯಲ್ಲಿ ಕೊರೊನಾ ವೈರಸ್ ನಾಶವಾಗಲೂಬಹುದು ಎಂದು ಆಶಾವಾದಿಗಳಾದ ಸಾಂಪ್ರದಾಯಿಕ ಹಿಂದೂ ಧಾರ್ಮಿಕರ ಅಭಿಮತ.
ಏನಿಲ್ಲವಾದರೂ ನಮಗಾಗಿ ದುಡಿಯುತ್ತಿರುವ ವೈದ್ಯ ಸಮುದಾಯದ ಜೊತೆಗೆ ನಿಂತಂತಾಗುತ್ತದೆ ಅಲ್ಲವೇ?
"
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.