ಬಿಸಿ ನೀರು ಸ್ನಾನದಿಂದ ಪುರುಷರ ಲೈಂಗಿಕ ಶಕ್ತಿ ಢಮಾರ್?

Published : Mar 23, 2026, 08:34 PM IST
hot water bath

ಸಾರಾಂಶ

ಅತಿಯಾದ ಬಿಸಿ ನೀರಿನ ಸ್ನಾನದಿಂದ (hot water bath) ಪುರುಷರ ಲೈಂಗಿಕ ಶಕ್ತಿಗೆ ಅಪಾಯವಿದೆ ಎನ್ನಲಾಗುತ್ತದೆ. ಇದೊಂದು ಜನಪ್ರಿಯ ನಂಬಿಕೆ. ಆದರೆ ಸತ್ಯ ಏನು? ತಣ್ಣೀರಿನಿಂದ ಹೆಚ್ಚು ಲಾಭವಾ? ಇಲ್ಲಿದೆ ವಿವರ. 

ಚಳಿಗಾಲದಲ್ಲಿ ಬಿಸಿಬಿಸೀ ನೀರಿನಲ್ಲಿ ಸ್ನಾನ ಮಾಡುವುದು ಮಜಾ ಕೊಡುತ್ತದೆ. ಬೇಸಿಗೆಯಲ್ಲಿ ಹೆಚ್ಚಿನವರು ತಣ್ಣೀರು ಸ್ನಾನ ಮಾಡುತ್ತಾರೆ. ದೇಹ ತಂಪಾಗಲಿ ಎಂದು. ಆದರೆ ಬೇಸಿಗೆಯಲ್ಲೂ ಬಿಸಿಬಿಸೀ ನೀರು ಮೀಯುವವರು ಇದ್ದಾರೆ. ಹೀಗೆ ಯಾವಾಗಲೂ ಸಿಕ್ಕಾಪಟ್ಟೆ ಬಿಸಿ ನೀರು ಮೀಯುವುದರಿಂದ ಪುರುಷರ ಸಂತಾನಶಕ್ತಿಯೇ ಕಡಿಮೆಯಾಗುತ್ತದೆ ಎಂದು ಹೆದರಿಸುವವರೂ ಇದ್ದಾರೆ. ಹಾಗಾದರೆ ಸತ್ಯ ಏನು? ನೋಡೋಣ.

ತೀವ್ರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷರ ಲೈಂಗಿಕ ಶಕ್ತಿ ನೇರವಾಗಿ ಕಡಿಮೆಯಾಗುತ್ತದೆ ಎಂಬುದು ಸರಿಯಾದ ಹೇಳಿಕೆ ಅಲ್ಲ. ಆದರೆ ಕೆಲವು ಪ್ರಮುಖ ವಿಷಯಗಳನ್ನು ಗಮನಿಸಬೇಕು. ಮುಖ್ಯವಾಗಿ ವೃಷಣಗಳ ತಾಪಮಾನ. ವೃಷಣಗಳು ದೇಹದ ಹೊರಗೆ ಇರುವುದಕ್ಕೆ ಮುಖ್ಯ ಕಾರಣ — ದೇಹದೊಳಗಿನಕ್ಕಿಂತ ಸ್ವಲ್ಪ ಕಡಿಮೆ ತಾಪಮಾನದಲ್ಲಿ ವೀರ್ಯ ಉತ್ಪಾದನೆ ಉತ್ತಮವಾಗಿರುತ್ತದೆ. ತುಂಬಾ ಬಿಸಿ ನೀರು (hot water) ಆಗಾಗ್ಗೆ ಬಳಸಿದರೆ ಸ್ಪರ್ಮ್ ಉತ್ಪಾದನೆ ತಾತ್ಕಾಲಿಕವಾಗಿ ಕಡಿಮೆಯಾಗಬಹುದು. ಸ್ಪರ್ಮ್ ಗುಣಮಟ್ಟಕ್ಕೂ ಸ್ವಲ್ಪ ಪರಿಣಾಮ ಬೀಳಬಹುದು.

ಲೈಂಗಿಕ ಆಸಕ್ತಿ (libido) ಅಥವಾ ನಿಮಿರುವಿಕೆ ಮೇಲೆ ಬಿಸಿ ನೀರಿನ ನೇರ ಪರಿಣಾಮ ಸಾಮಾನ್ಯವಾಗಿ ಇರುವುದಿಲ್ಲ. ಆದರೆ, ದೀರ್ಘಕಾಲ ತುಂಬಾ ಬಿಸಿ ಸ್ನಾನದಿಂದ ದೇಹದ ಮೇಲೆ ಒತ್ತಡ ಬಿದ್ದು ಹಾರ್ಮೋನ್‌ಗಳಿಗೆ ಸಣ್ಣ ಮಟ್ಟದ ಪರಿಣಾಮ ಸಾಧ್ಯ. ಯಾವಾಗ ಸಮಸ್ಯೆ ಆಗಬಹುದು ಎಂದರೆ, ದಿನವೂ ತುಂಬಾ ಬಿಸಿ ನೀರಿನಲ್ಲಿ ಹೆಚ್ಚು ಸಮಯ (15–20 ನಿಮಿಷಕ್ಕಿಂತ ಹೆಚ್ಚು) ಸ್ನಾನ ಮಾಡಿದರೆ. ಸೌನಾ, ಸ್ಟೀಮ್ ಬಾತ್ ಹೆಚ್ಚು ಬಳಸಿದರೆ.

ತಾತ್ಕಾಲಿಕ ಬಂಜೆತನಕ್ಕೆ ಆಹ್ವಾನ

2007ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಹೆಚ್ಚಾದ ಬಿಸಿ ನೀರಿನ ಸ್ನಾನ ಪುರುಷ ಬಂಜೆತನಕ್ಕೆ ಕಾರಣವಾಗಬಹುದು. ನೀರಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು, 30 ನಿಮಿಷಕ್ಕಿಂತ ಹೆಚ್ಚು ಸಮಯ ಸ್ನಾನ ಮಾಡಿದರೆ ವೀರ್ಯಾಣುಗಳ ಗುಣಮಟ್ಟ ಮತ್ತು ಅವುಗಳ ಸಂಖ್ಯೆ ಎರಡೂ ಕೂಡ ತಾತ್ಕಾಲಿಕವಾಗಿ ಕುಸಿಯಬಹುದು. ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ನಿಲ್ಲಿಸಿದ ತಿಂಗಳುಗಳ ಬಳಿಕ ವೀರ್ಯಾಣುಗಳ ಸಂಖ್ಯೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಇದರ ಜೊತೆಗೆ ಬಿಗಿಯಾದ ಬಟ್ಟೆ ಧರಿಸುವುದು, ಧೂಮಪಾನ ಮಾಡುವುದು ಮತ್ತು ಇತರ ಕೆಲವು ಜೀವನಶೈಲಿ ವೀರ್ಯಾಣುಗಳ ಸಂಖ್ಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಹಾಗಾದರೆ ಸುರಕ್ಷಿತ ಯಾವುದು? ಮಧ್ಯಮ ಬಿಸಿ ನೀರು ಉತ್ತಮ. ಹೆಚ್ಚು ಬಿಸಿ ನೀರನ್ನು ನಿರಂತರವಾಗಿ ಬಳಸಬೇಡಿ. ಸಂತಾನೋತ್ಪತ್ತಿ ಬಗ್ಗೆ ಯೋಚಿಸುತ್ತಿದ್ದರೆ ವಿಶೇಷವಾಗಿ ಜಾಗ್ರತೆ ಬೇಕು.

ಹಾಗಾದರೆ ತಣ್ಣೀರು ಸ್ನಾನ ಉತ್ತಮವೋ? ಹೌದು. ತಣ್ಣೀರು ಸ್ನಾನ ದೇಹಕ್ಕೆ ಹಲವಾರು ಲಾಭಗಳನ್ನು ಕೊಡಬಹುದು. ತಣ್ಣೀರು ದೇಹಕ್ಕೆ ತಾಕಿದಾಗ ರಕ್ತ ನಾಳಗಳು ಕಿರಿದಾಗುತ್ತವೆ. ನಂತರ ಮತ್ತೆ ವಿಸ್ತಾರವಾಗುತ್ತವೆ. ಇದರಿಂದ ರಕ್ತ ಸಂಚಾರ ಉತ್ತಮವಾಗುತ್ತದೆ. ತಣ್ಣೀರು ಸ್ನಾನ ಮಾಡಿದಾಗ ದೇಹ ಅಲರ್ಟ್‌ ಆಗುತ್ತದೆ. ಒತ್ತಡ ಕಡಿಮೆಯಾಗಿ, ಮೂಡ್‌ ಸುಧಾರಿಸುತ್ತದೆ. ಬೆಳಗ್ಗೆ ಸ್ನಾನ ಮಾಡಿದರೆ ದಿನವಿಡೀ ಫ್ರೆಶ್‌ ಫೀಲ್‌ ಇರುತ್ತದೆ.

ಕೆಲವು ಅಧ್ಯಯನಗಳು ಹೇಳುವಂತೆ ತಣ್ಣೀರು ಸ್ನಾನದಿಂದ ರೋಗ ಪ್ರತಿರೋಧ ಶಕ್ತಿ ಉತ್ತಮವಾಗುತ್ತದೆ. ಸ್ನಾಯು ನೋವು ಕಡಿಮೆಯಾಗುತ್ತದೆ. ವ್ಯಾಯಾಮದ ನಂತರ ತಣ್ಣೀರು ಸ್ನಾನ ಮಾಡಿದರೆ ಸ್ನಾಯು ಉರಿಯೂತ ಕಡಿಮೆ. ಆದ್ದರಿಂದ ಅಥ್ಲೀಟ್ಸ್‌ ಹೆಚ್ಚು ಇದನ್ನು ಬಳಸುತ್ತಾರೆ. ಸಂಜೆ ಸ್ವಲ್ಪ ತಣ್ಣೀರು ಸ್ನಾನ ಮಾಡಿದರೆ ದೇಹ ರಿಲ್ಯಾಕ್ಸ್‌ ಆಗುವುದರಿಂದ ನಿದ್ರೆಯ ಗುಣಮಟ್ಟ ಉತ್ತಮವಾಗುತ್ತದೆ. ಆದರೆ ತುಂಬಾ ಚಳಿ ಇದ್ದಾಗ ದಿಡೀರ್‌ ಕೋಲ್ಡ್‌ ಬಾತ್‌ ಅಪಾಯಕರ. ಹೃದಯ ಸಮಸ್ಯೆ ಇದ್ದವರು ತಣ್ಣೀರು ಸ್ನಾನ ನಿಧಾನವಾಗಿ ಶುರು ಮಾಡಬೇಕು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Akshay Kumar: ಸಂಜೆ 6:30ಕ್ಕೆ ಊಟ ಮುಗಿಸಿ, ಫಿಟ್ ಆಗಿರಿ: ನಟ ಅಕ್ಷಯ್ ಕುಮಾರ್ ಸೀಕ್ರೆಟ್ ರಿವೀಲ್
Chia Seeds: ಎರಡೇ ವಾರ ಚಿಯಾ ಸೀಡ್ಸ್ ನೆನೆಸಿದ ನೀರು ಕುಡಿದು ನೋಡಿ, ಬದಲಾವಣೆ ನೀವೇ ಗಮನಿಸಿ!