ಮಕ್ಕಳ ಆರೋಗ್ಯ ಹದಗೆಟ್ಟರೆ ಅವರನ್ನು ಸಂಭಾಳಿಸೋದು ಕಷ್ಟ. ಅದ್ರಲ್ಲೂ ಔಷಧಿ ಅಂದ್ರೆ ಮಾರು ದೂರ ಓಡುವ ಮಕ್ಕಳಿದ್ರೆ ಕಥೆ ಮುಗಿದಂತೆ. ಔಷಧಿ ಸೇವನೆ ವೇಳೆ ಮನೆಯಲ್ಲೊಂದು ಯುದ್ಧ ನಡೆದಿರುತ್ತೆ. ಮಕ್ಕಳು ಯಾವುದೇ ಹಠ ಮಾಡ್ದೆ ಔಷಧಿ ಸೇವಿಸಲು ಪಾಲಕರು ಕೆಲ ಟ್ರಿಕ್ಸ್ ಅನುಸರಿಸಬೇಕು.
ಔಷಧಿ – ಮಾತ್ರೆ ಅಂದ್ರೆ ಯಾರಿಗೆ ಇಷ್ಟವಾಗುತ್ತೆ ಹೇಳಿ? ದೊಡ್ಡವರೆ ಔಷಧಿ ಅಂದ್ರೆ ಮೂಗು ಮುರಿತಾರೆ. ಸ್ವಲ್ಪ ಆರಾಮಾಗ್ತಿದ್ದಂತೆ ಮಾತ್ರೆ, ಔಷಧಿ ಮೂಲೆ ಸೇರುತ್ತೆ. ಇನ್ನು ಮಕ್ಕಳ ಸ್ಥಿತಿ ಕೇಳೋದೆ ಬೇಡ. ನಿತ್ಯದ ತಿಂಡಿ, ಹಣ್ಣುಗಳನ್ನು ತಿನ್ನಿಸೋದೆ ಅವರಿಗೆ ಕಷ್ಟ. ಹಾಗಿರುವಾಗ ಕಹಿ ಕಹಿ ಔಷಧಿ ಸುಲಭದ ಮಾತಲ್ಲ. ಮಕ್ಕಳಿಗೆ ಔಷಧಿ ತಿನ್ನಿಸುವ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ನೀವು ಅವರಿಗೆ ಸುಲಭವಾಗಿ ಮೆಡಿಸಿನ್ ನೀಡಬಹುದು. ಮಗು ಔಷಧಿ ಸೇವಿಸ್ತಿಲ್ಲ, ಇದು ಕಷ್ಟದ ಕೆಲಸ ಎನ್ನುವ ಪಾಲಕರು ಕೆಲವು ಸೃಜನಶೀಲ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.
ಮಗು (Child) ವಿಗೆ ಸುಲಭವಾಗಿ ಔಷಧಿ (Medicine) ಸೇವನೆ ಮಾಡ್ಬೇಕೆಂದ್ರೆ ಹೀಗೆ ಮಾಡಿ : ಮಗುವಿಗೆ ಔಷಧವನ್ನು ಹೇಗೆ ನೀಡುತ್ತೀರಿ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಇಷ್ಟು ದಿನ ನೀವು ತಿನ್ನಿಸುತ್ತಿದ್ದ ವಿಧಾನವನ್ನು ಬದಲಿಸಿ. ಚಮಚದಲ್ಲಿ ಮಗುವಿಗೆ ಔಷಧಿ ನೀಡ್ತಿದ್ದರೆ ಅದನ್ನು ಬದಲಿಸಿ. ಡ್ರಾಪರ್ (Dropper) ಅಥವಾ ಓರಲ್ ಸಿರಿಂಜ್ ಮೂಲಕ ಔಷಧವನ್ನು ನೀಡಲು ಪ್ರಯತ್ನಿಸಿ. ಒಂದ್ವೇಳೆ ಇದ್ಯಾವುದೇ ವಿಧಾನ ವರ್ಕ್ ಆಗ್ತಿಲ್ಲ ಎಂದಾದ್ರೆ ಬೇರೆ ವಿಧಾನವನ್ನು ಅಳವಡಿಸಿಕೊಳ್ಳಿ. ಹೊಸ ಹೊಸ ವಿಧಾನದ ಮೂಲಕ ನೀವು ಮಗುವಿಗೆ ಔಷಧಿ ನೀಡಲು ಪ್ರಯತ್ನಿಸುತ್ತಿರಬೇಕು. ಒಟ್ಟಿನಲ್ಲಿ ಮಗು ಔಷಧಿ ಸೇವನೆ ಮಾಡೋದು ಮುಖ್ಯ.
ಮಕ್ಕಳ ಜೊತೆ ಪ್ರಯಾಣಿಸುವಾಗ ಮೆಡಿಕಲ್ ಕಿಟ್‌ನಲ್ಲಿ ಈ ವಸ್ತುಗಳಿರಲಿ
ಗಿಫ್ಟ್ ಆಸೆ ತೋರಿಸಿ : ಮಕ್ಕಳು ಗಿಫ್ಟ್ ಆಸೆಗೆ ತಮಗಿಷ್ಟವಿಲ್ಲದ ಕೆಲಸ ಕೂಡ ಮಾಡ್ತಾರೆ. ಹಾಗಾಗಿ ಔಷಧಿ ಸೇವನೆ ಮಾಡಿದ್ರೆ ಗಿಫ್ಟ್ ನೀಡ್ತೇನೆಂದು ನೀವು ಹೇಳಬಹುದು. ಹಾಗಂತ ಮಕ್ಕಳಿಗೆ ಔಷಧಿ ತಿಂದ ನಂತ್ರ ಆರೋಗ್ಯಕ್ಕೆ ಹಾನಿಯಾಗುವ ಆಹಾರವನ್ನು ನೀಡಬೇಡಿ. ಸಿಹಿ ಪದಾರ್ಥವನ್ನು ಕೂಡ ನೀಡಬಾರದು. ನೀವು ಪುಸ್ತಕ, ಸ್ಟಿಕರ್, ಆಟಿಕೆ ವಸ್ತುಗಳನ್ನು ನೀಡಬಹುದು. ಇಲ್ಲವೆ ವಾಕಿಂಗ್ ಸೇರಿದಂತೆ ಪಾರ್ಕ್ ಅಥವಾ ಮಕ್ಕಳ ಇಷ್ಟದ ಜಾಗಕ್ಕೆ ಕರೆದುಕೊಂಡು ಹೋಗುವ ಆಫರ್ ನೀಡಬಹುದು.
ಔಷಧಿ ರುಚಿ ಬದಲಿಸಿ : ಕೆಲ ಔಷಧಿ ವಾಸನೆಯೇ ವಾಕರಿಕೆ ಬರುವಂತಿರುತ್ತದೆ. ಅದನ್ನು ಹತ್ತಿರ ತಂದ್ರೆ ಮಕ್ಕಳು ಓಡಿ ಹೋಗ್ತಾರೆ. ಹಾಗಾಗಿ ನೀವು ಔಷಧಿ ರುಚಿಯನ್ನು ಸ್ವಲ್ಪ ಬದಲಿಸಬಹುದು. ಔಷಧಿಗೆ ಸ್ವಲ್ಪ ಸಕ್ಕರೆ ಬೆರೆಸಿ ನೀಡಬಹುದು. ಆದ್ರೆ ಯಾವುದೇ ವಸ್ತುವನ್ನು ಸೇರಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಕೆಲವೊಂದು ಆಹಾರ, ಔಷಧಿ ಜೊತೆ ಬೆರೆತು ಕೆಮಿಕಲ್ ರೂಪ ಪಡೆಯುತ್ತದೆ. ಇದು ಮಕ್ಕಳ ಆರೋಗ್ಯ ಹಾಳು ಮಾಡುತ್ತದೆ.
ಮಕ್ಕಳ ಗಮನ : ಕೆಲ ಪಾಲಕರು, ಊಟವಾದ್ಮೇಲೆ ಔಷಧಿ ಸೇವಿಸಬೇಕೆಂದು ಊಟಕ್ಕಿಂತ ಮೊದಲೇ ಆಜ್ಞೆ ಮಾಡಲು ಶುರು ಮಾಡ್ತಾರೆ. ಇದು ಮಕ್ಕಳನ್ನು ಡಿಸ್ಟರ್ಬ್ ಮಾಡುತ್ತದೆ. ಜೊತೆಗೆ ನೀವು ಔಷಧಿ ನೀಡ್ತಿರಿ ಎಂದಾಗ ಅದು ಗಲಾಟೆ ಶುರು ಮಾಡಬಹುದು. ಹಾಗಾಗಿ ಮಕ್ಕಳ ಗಮನ ಬೇರೆ ಕಡೆ ಹೊರಳಿಸಿ ನೀವು ಔಷಧಿ ನೀಡಬೇಕು. ಅವರ ನೆಚ್ಚಿನ ಕೆಲಸದಲ್ಲಿ ಬ್ಯುಸಿಯಿದ್ದಾಗ, ಕಾರ್ಟೂನ್ ನೋಡ್ತಿರುವಾಗ ನೀವು ಮೆಡಿಸಿನ್ ನೀಡಬಹುದು.
ಮಾತ್ರೆಯನ್ನು ಹೀಗೆ ನೀಡಿ : ಮಾತ್ರೆ ನುಂಗುವುದು ಕಷ್ಟ. ಮಕ್ಕಳ ಗಂಟಲಿನಲ್ಲಿ ಅದು ಅಂಟಿಕೊಂಡ್ರೆ ಮತ್ತಷ್ಟು ಕಹಿಯೆನ್ನಿಸುತ್ತದೆ. ಹಾಗಾಗಿ ನೀವು ಮಕ್ಕಳಿಗೆ ಆದಷ್ಟು ಮಾತ್ರೆ ನೀಡಬೇಡಿ. ಮಾತ್ರೆ ನೀಡುವುದು ಅನಿವಾರ್ಯ ಎಂದಾಗ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ನೀಡಬಹುದು. ಮಾತ್ರೆ ನೀರನ್ನು ಸೇವನೆ ಮಾಡಿದ ನಂತ್ರ ಮಕ್ಕಳಿಗೆ ನೀವು ಸಕ್ಕರೆ ಅಥವಾ ಸಿಹಿ ತಿಂಡಿ ನೀಡಬಹುದು.
ಮಕ್ಕಳಿಗೆ ಮನೆಯಲ್ಲಿರೋ ಔಷಧಿ ನೀಡುವ ಮುನ್ನ ಇರಲಿ ಎಚ್ಚರ
ಊಟವಾದ ತಕ್ಷಣ ಔಷಧಿ ನೀಡ್ಬೇಡಿ : ಊಟವಾದ ತಕ್ಷಣ ಮಕ್ಕಳಿಗೆ ಅಪ್ಪಿತಪ್ಪಿಯೂ ಔಷಧಿ ನೀಡಬೇಡಿ. ಔಷಧಿ ಅವರಿಗೆ ಇಷ್ಟವಾಗಿಲ್ಲವೆಂದ್ರೆ ವಾಕರಿಸುತ್ತಾರೆ. ಇದ್ರಿಂದ ತಿಂದ ಆಹಾರವೆಲ್ಲ ವಾಪಸ್ ಬರುತ್ತದೆ.