Ghee Use: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂದ್ರೆ ಏನಾಗುತ್ತೆ ಗೊತ್ತಾ?

By Suvarna News  |  First Published May 18, 2022, 6:42 PM IST

ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ತಿನ್ನುವುದು ಇನ್ನಷ್ಟು ಉತ್ತಮ. ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ದೇಹದೊಳಗಿನ ನೋವು ಶಮನವಾಗುತ್ತದೆ, ಕೋಶಗಳಿಗೆ ಚೈತನ್ಯ ದೊರೆಯುತ್ತದೆ. 
 


ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದ ಹಲವಾರು ಆಹಾರಗಳು ನಿಮಗೆ ಗೊತ್ತಿರಬಹುದು. ಅದನ್ನು ಪಾಲನೆ ಮಾಡುತ್ತಿರಲೂಬಹುದು. ಹಾಗೆಯೇ, ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾದ ಆಹಾರ (Food)ಗಳನ್ನೂ ಅರಿತಿರಬೇಕಲ್ಲವೇ? ಬೆಳಗ್ಗೆ ಎದ್ದಾಕ್ಷಣ ನೀರು (Water) ಕುಡಿಯುವುದು, ನೀರು-ಜೇನುತುಪ್ಪ ಬೆರೆಸಿ ಕುಡಿಯುವುದು, ಹಣ್ಣಿನ ಜ್ಯೂಸ್ (Juice) ಹೀಗೆಯೇ ಹಲವರು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ, ಎಲ್ಲಕ್ಕಿಂತ ಉತ್ತಮವೆಂದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ (Empty Stomach) ಒಂದು ಚಮಚ ತುಪ್ಪ (Ghee) ಸೇವಿಸುವುದು. ನಿಮಗೆ ಅಚ್ಚರಿಯಾಗಬಹುದು, ಹಲವರು ಮುಖವನ್ನೂ ಮುರಿಯಬಹುದು. ಖಾಲಿ ಹೊಟ್ಟೆಗೆ ತುಪ್ಪ ಸೇವಿಸುವುದು ಹೇಗಪ್ಪಾ ಎಂದು. ಆದರೆ, ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವುದರಿಂದ ದೇಹಾರೋಗ್ಯ ಉತ್ತಮಗೊಳ್ಳುತ್ತದೆ. ದೇಹಕ್ಕೆ ಬೇಕಾದ ಕೆಲವು ಅಂಶಗಳು ದೊರೆಯುವುದರಿಂದ ಹೀಲಿಂಗ್ (Healing) ಪ್ರಕ್ರಿಯೆ ಶುರುವಾಗುತ್ತದೆ. 

ಶುದ್ಧ ತುಪ್ಪದ ಸೇವನೆಯಿಂದ ಆರೋಗ್ಯಕ್ಕೆ ಭಾರೀ ಲಾಭವಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಚರ್ಮ (Skin), ತಲೆಬುರುಡೆ (Scalp) ಸೇರಿದಂತೆ ವಿವಿಧ ಅಂಗಾಂಗಗಳಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ತುಪ್ಪ ಒದಗಿಸುತ್ತದೆ. ಮೂಳೆಗಳಿಗೂ (Bone) ತುಪ್ಪ ಬಲ ನೀಡುತ್ತದೆ. ಹೀಗಾಗಿ, ಮಕ್ಕಳು, ವೃದ್ಧರಿಗೆ ತುಪ್ಪವನ್ನು ಹೆಚ್ಚಾಗಿ ನೀಡುವುದನ್ನು ಕಾಣಬಹುದು. ಹೀಗಾಗಿಯೇ, ದಿನಕ್ಕೆ ಒಂದು ಚಮಚ ತುಪ್ಪವನ್ನಾದರೂ ಸೇವಿಸಬೇಕು ಎನ್ನುವ ಅಲಿಖಿತ ನಿಯಮ ಅನೇಕ ಸಮುದಾಯಗಳಲ್ಲಿ ಚಾಲ್ತಿಯಲ್ಲಿದೆ. 

Tap to resize

Latest Videos

ಆಹಾರ ತಜ್ಞೆ ಭಕ್ತಿ ಕಪೂರ್ (Bhakti Kapoor) ಎನ್ನುವವರ ಪ್ರಕಾರ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅನೇಕ ಲಾಭಗಳಿವೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವನೆ ಮಾಡುವುದರಿಂದ ಆಗುವ ಮುಖ್ಯ ಆರು ಲಾಭಗಳ ಬಗ್ಗೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ರಾತ್ರಿ ಅನ್ನ ತಿನ್ನೋದ್ರಿಂದ ಇಷ್ಟೆಲ್ಲಾ ತೊಂದ್ರೆಯಾಗುತ್ತಂತೆ ನೋಡಿ !

ತುಪ್ಪವು ಸಣ್ಣ ಕರುಳಿನ ಹೀರಿಕೊಳ್ಳುವ ಗುಣವನ್ನು ಸುಧಾರಿಸುತ್ತದೆ. ಹಾಗೂ ಗ್ಯಾಸ್ಟ್ರೊಇಂಟೆಸ್ಟೈನಲ್ (Gastrointestinal) ವ್ಯವಸ್ಥೆಯ ಆಸಿಡಿಕ್ (Acidic) ಪಿಎಚ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಹಸುವಿನ ತುಪ್ಪ ಆಂಟಿಆಕ್ಸಿಡಂಟ್ (Antioxidant)ಗಳನ್ನು ಹೊಂದಿರುವ ನೈಸರ್ಗಿಕ ಸಂಪನ್ಮೂಲ ಆಗಿದೆ. ಡಿಎನ್ಎಗಳಿಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ (Free Radicals) ಗಳ ವಿರುದ್ಧ ಈ ಅಂಶ ಹೋರಾಡುತ್ತದೆ. ಹಾಗೂ ಉತ್ಕರ್ಷಣಶೀಲ ಅಥವಾ ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ದೇಹಕ್ಕೆ ಭಾರೀ ಲಾಭವಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದಾಗ ದೇಹದ ನೋವು ನಿವಾರಣೆಯಾಗುವ ಪ್ರಕ್ರಿಯೆಗೆ ಉತ್ತೇಜನ ದೊರೆಯುತ್ತದೆ. ತುಪ್ಪದಲ್ಲಿರುವ ಅಂಶಗಳಿಂದ ಕೋಶಗಳು ಪುನರ್ ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಆಂತರಿಕ ನೋವು ನಿವಾರಣೆ ಶೀಘ್ರವಾಗಿ ಆಗುತ್ತದೆ. ಹಾಗೆಯೇ, ತೂಕ ಕಳೆದುಕೊಳ್ಳಲು ಬಯಸುವವರು ಬೆಳಗ್ಗೆ ತುಪ್ಪ ತಿನ್ನಬೇಕು. ಏಕೆಂದರೆ, ಬೊಜ್ಜನ್ನು ಕರಗಿಸಲು ಸಹ ತುಪ್ಪ ಅನುಕೂಲ. ಕರುಳಿನ ಸಮಸ್ಯೆ ಎದುರಿಸುತ್ತಿದ್ದರೆ ಬೆಳಗ್ಗೆ ತುಪ್ಪ ತಿಂದರೆ ಸಮಸ್ಯೆ ನಿವಾರಣೆಯಾಗುತ್ತದೆ. 

ಇದನ್ನೂ ಓದಿ: ಕೇವಲ ಒಂದು ಚಿಟಿಕೆ ಸುಣ್ಣದಿಂದ, ದೇಹವು ಸೂಪರ್ ಆಕ್ಟಿವ್ ಆಗಿರುತ್ತೆ!

ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂದರೆ ಆಗುವ ಪ್ರಯೋಜನಗಳು:
•    ತುಪ್ಪ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ.
•    ಜೀರ್ಣ (Digestive) ವ್ಯವಸ್ಥೆಯನ್ನು ಉತ್ತಮಗೊಳಿಸುವ, ಹೊಟ್ಟೆಯಲ್ಲಿರುವ ವಿಷಕಾರಿ (Toxic) ಅಂಶಗಳನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ತನ್ಮೂಲಕ ಹೊಟ್ಟೆಯನ್ನು ಶುದ್ಧ ಮಾಡುತ್ತದೆ.
•     ತುಪ್ಪ ಫಿಲ್ಲರ್ (Filler) ನಂತೆ ಕೆಲಸ ಮಾಡುತ್ತದೆ ಹಾಗೂ ದೀರ್ಘ ಸಮಯವರೆಗೆ ಹೊಟ್ಟೆ ತುಂಬಿಕೊಂಡಿರುವಂತೆ ಭಾಸವಾಗುತ್ತದೆ. ಇದರಿಂದ ಹೆಚ್ಚುವರಿ ಆಹಾರ ಸೇವನೆ ಕಡಿಮೆಯಾಗುತ್ತದೆ. 
•    ಮೂಳೆಯ ಶಕ್ತಿಯನ್ನು ವರ್ಧಿಸುತ್ತದೆ, ದೇಹಕ್ಕೆ ಬಲ ನೀಡುತ್ತದೆ.
•    ಕರುಳಿಗೆ (Gut) ಪೂರಕವಾಗಿರುವ ಎಂಝೈಮುಗಳನ್ನು (Enzyme) ಹೊಂದಿರುತ್ತದೆ. ಹೀಗಾಗಿ, ಮಲಬದ್ಧತೆಯಂತಹ ಸಮಸ್ಯೆ ಇರುವುದಿಲ್ಲ.
•    ತುಪ್ಪದ ಸೇವನೆಯಿಂದ ಮಿದುಳಿನ (Brain) ಬೆಳವಣಿಗೆಗೆ ಸಹಾಯವಾಗುತ್ತದೆ. ಇದರಿಂದ ಏಕಾಗ್ರತೆಯ (Concentration) ಸಮಸ್ಯೆ ಉಂಟಾಗುವುದಿಲ್ಲ. 

click me!