
ಶಾಲೆಗೆ ರಜೆ ಬಂತು ಅಂದ್ರೆ ಮುಗೀತು, ಬೆಳಿಗ್ಗೆ ಉಪಹಾರ ಮುಗಿಸಿ ಮನೆಯಿಂದ ಹೊರಬಿದ್ರೆ ವಾಪಸ್ ಮನೆಗೆ ಬರೋದು ಸಂಜೆ. ಇಡೀ ದಿನ ಒಂದಾದ್ಮೇಲೆ ಒಂದು ಆಟವಾಡ್ತಾ ಸಮಯ ಕಳೆಯೋದೇ ಮಕ್ಕಳಿಗೆ ತಿಳಿತಿರಲಿಲ್ಲ. ಈಗಿನ ಮಕ್ಕಳಿಗೆ ಸಮಯ ಕಳೆಯೋದೇ ಕಷ್ಟವಾಗಿದೆ. ಮೊಬೈಲ್ ಬಿಟ್ರೆ ಟಿವಿ, ಟಿವಿ ಬಿಟ್ರೆ ಮೊಬೈಲ್. ಶಾಲೆ ರಜೆ ಇದೆ ಅಂದ್ರೆ ಮಕ್ಕಳನ್ನು ಎಂಗೇಜ್ ಮಾಡಲು ಪಾಲಕರು ಬೇಸಿಗೆ ಶಿಬಿರ, ಬೇರೆ ಬೇರೆ ಕ್ಲಾಸ್ ಗೆ ಹಾಕ್ತಾರೆ. ಹಿಂದಿನ ಕಾಲದಲ್ಲಿ ಯಾವೆಲ್ಲ ಸಾಂಪ್ರದಾಯಿಕ ಆಟಗಳಿದ್ದವು ಎಂಬುದನ್ನು ಮಕ್ಕಳಿಗೆ ಚಿತ್ರ ತೋರಿಸಿ, ಯುಟ್ಯೂಬ್ ತೋರಿಸಿ ಹೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಭಾರತ (India)ದ ಸಾಂಪ್ರದಾಯಿಕ ಆಟದಲ್ಲಿ ಲಗೋರಿ ಕೂಡ ಸೇರಿದೆ. ಲಗೋರಿ (Lagori) ಬಗ್ಗೆ ಅನೇಕರಿಗೆ ತಿಳಿದೇ ಇಲ್ಲ. ಲಗೋರಿ, ಭಾರತದ ಜಾನಪದ ಕ್ರೀಡೆ (Sports). ಇದನ್ನು ಬೇರೆ ಬೇರೆ ರಾಜ್ಯದಲ್ಲಿ ಭಿನ್ನ ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಇದೊಂದು ಗುಂಪಿನ ಆಟ. ಲಗೋರಿ ಆಟವಾಡೋಕೆ ಲಗೋರಿ ಕಾಯಿ ಬೇಕು. ಈಗ ಅದಕ್ಕೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಲಗೋರಿ ಕಾಯಿ ಅಥವಾ ಚಪ್ಪಟೆ ಕಲ್ಲು ಅಥವಾ ಚಪ್ಪಟೆಯಾಕಾರದ ವಸ್ತು ಆನ್ಲೈನ್ ನಲ್ಲಿ ಕೂಡ ಲಭ್ಯವಿದೆ. ಈ ಆಟಕ್ಕೆ ಐದರಿಂದ 7 ಲಗೋರಿ ಕಾಯಿ ಬೇಕು. ಇದ್ರ ಜೊತೆ ರಬ್ಬರ್ ಚೆಂಡು.
Health Tips : ಮಲವಿಸರ್ಜನೆ ವೇಳೆ ನೋವಾಗ್ತಿದ್ಯ? ಹೀಗೆ ಮಾಡಿ
ಲಗೋರಿ ಆಟ ಆಡಲು ನಿಯಮವಿದೆ. ಆಟಗಾರರು ತಂಡ ರಚಿಸಿಕೊಳ್ಳಬೇಕಾಗುತ್ತದೆ. ನಂತ್ರ ಎರಡೂ ತಂಡದ ಆಟಗಾರರು ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾರು ಮೊದಲು ಆಡಬೇಕು ಎಂದು ನಿರ್ಧರಿಸಬೇಕು. ನಿರ್ಧಾರವಾದ್ಮೇಲೆ ಆ ತಂಡದ ಆಟಗಾರರು ಬಾಲ್ ಹಾಕಲು ಸಿದ್ಧರಾಗಬೇಕು. ಇತ್ತ ಒಂದು ಸಮತಟ್ಟಾದ ಜಾಗದಲ್ಲಿ ಲಗೋರಿ ಕಾಯಿಯನ್ನು ಒಂದರ ಮೇಲೆ ಒಂದರಂತೆ ಇಡಬೇಕು. ಅದರ ಸುತ್ತ ಒಂದು ಗೋಲ ಗೆರೆ ಎಳೆಯಬೇಕು. ಇದಾದ್ಮೇಲೆ ಲಗೋರಿ ಕಾಯಿಯಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಗೆರೆ ಎಳೆಯಬೇಕು. ಗೆರೆ ಎಳೆದ ಜಾಗದಲ್ಲಿ ನಿಂತು, ಲಗೋರಿ ಕಾಯಿಗೆ ಬಾಲ್ ಎಸೆಯಬೇಕು. ಬಾಲ್ ಲಗೋರಿ ಕಾಯಿಗೆ ಟಚ್ ಆಗಿ ಅದು ಬಿದ್ರೆ, ಅದನ್ನು ಬಾಲ್ ಎಸೆದ ತಂಡದವರೇ ಕಟ್ಟಬೇಕು. ಆದ್ರೆ ಮತ್ತೆ ಲಗೋರಿ ಕಾಯಿಯನ್ನು ಒಂದರ ಮೇಲೆ ಒಂದು ಇಡದಂತೆ ಇನ್ನೊಂದು ತಂಡ ನೋಡಿಕೊಳ್ಳಬೇಕು. ಬಾಲನ್ನು ತಂಡದ ಆಟಗಾರರಿಗೆ ಹೊಡೆದು ಅವರನ್ನು ಓಡಿಸಬೇಕು. ಬಾಲ್ ಬೆನ್ನಿಗೆ ತಾಗದಂತೆ ನೋಡಿಕೊಂಡು ಕಾಯಿ ಕಟ್ಟುವುದು ಇವರ ಜವಾಬ್ದಾರಿಯಾಗಿರುತ್ತದೆ. ಒಂದ್ವೇಳೆ ಬಾಲ್ ಲಗೋರಿ ಕಾಯಿಗೆ ಟಚ್ ಆಗದೆ, ಅದು ಬಿದ್ದಿಲ್ಲವೆಂದ್ರೆ, ಈ ಬಾಲನ್ನು ಇನ್ನೊಂದು ತಂಡದ ಆಟಗಾರ ಕ್ಯಾಚ್ ಹಿಡಿದ್ರೆ ಬಾಲ್ ಹಾಕಿದ ಆಟಗಾರ ಔಟ್ ಆಗ್ತಾನೆ. ಹೀಗೆ ಆಟ ಮುಂದುವರೆಯುತ್ತದೆ.
Beauty Tips : ಬೇಸಿಗೆಯಲ್ಲಿ ಹಿಮ್ಮಡಿ ಒಡೆಯುವುದೇಕೆ?
ಇದು ಬರೀ ಆಟ ಮಾತ್ರವಲ್ಲ. ದೈಹಿಕ ವ್ಯಾಯಾಮ ನೀಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಗುರಿಯಿಟ್ಟು ಲಗೋರಿ ಕಾಯಿ ಬೀಳಿಸೋದು, ಅದನ್ನು ಮತ್ತೆ ಕಟ್ಟಲು ಪ್ರಯತ್ನಿಸೋದು, ಕಟ್ಟುವಾಗ ಬಾಲ್ ಟಚ್ ಆಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳೋದು ಹೀಗೆ ಈ ಆಟ ದೈಹಿಕ ವ್ಯಾಯಾಮದ ಜೊತೆ ಮಾನಸಿಕ ಆರೋಗ್ಯ, ಏಕಾಗ್ರತೆಗೆ ಸಹಾಯ ಮಾಡುತ್ತದೆ. ಬರೀ ಲಗೋರಿ ಮಾತ್ರವಲ್ಲ, ಚಿನ್ನಿದಾಂಡು, ಕಲ್ಲಾಟ, ಕುಂಟಾಟ, ಹುಲಿ – ಹಸು ಆಟ, ಚನ್ನೆ ಮಣೆ, ಕವಡೆಯಾಟ ಹೀಗೆ ನಾನಾ ಆಟಗಳಿದ್ದು, ಅವೆಲ್ಲವೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಲಗೋರಿ ಫೋಟೋ ಒಂದನ್ನು ಅಪ್ಲೋಡ್ ಮಾಡಿರುವ ಸತ್ಯೇನ್ ಕುಮಾರ್ ಎಂಬುವವರು ಇದು ಯಾವ ಆಟ ಗೊತ್ತಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಆಯಾ ಪ್ರದೇಶದಲ್ಲಿ ಇದಕ್ಕೆ ಏನೆಂದು ಕರೆಯಲಾಗುತ್ತದೆ ಎಂದು ಬರೆದಿದ್ದಾರೆ. ಮಹಿಳೆಯೊಬ್ಬರು ಇದನ್ನು ಇರಾನಿಯನ್ ಸಾಂಪ್ರದಾಯಿಕ ಆಟವೆಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.