ಒಂದು ದೇಶದ ಆರ್ಥಿಕತೆಗೆ ಹೇಗೆ ಸರಿಯಾದ ನಿರ್ವಹಣೆ ಬೇಕೋ, ಹಾಗೆಯೇ ನಮ್ಮ ದೇಹವೆಂಬ ಅದ್ಭುತ ಯಂತ್ರ ಸರಿಯಾಗಿ ಕೆಲಸ ಮಾಡಲು 'ನಿದ್ದೆ' ಎಂಬ ರೀಚಾರ್ಜ್ ಅತಿ ಮುಖ್ಯ. ಜಪಾನೀಯರು ದಿನಕ್ಕೆ ಕೇವಲ 4 ಗಂಟೆ ಮಲಗಿದ್ದರೂ ಫುಲ್ ಎನರ್ಜಿಯಿಂದ ಇರುತ್ತಾರೆ. ಆದರೆ ನಾವು 8-10 ಗಂಟೆ ಮಲಗಿದರೂ ಬೆಳಗ್ಗೆ ಎದ್ದಾಗ ಸುಸ್ತಾಗಿರುತ್ತೇವೆ. ಜಪಾನೀಯರ ಈ ಚೈತನ್ಯದ ಹಿಂದಿರುವ ರಹಸ್ಯ ನಿದ್ದೆಯ ಪ್ರಮಾಣವಲ್ಲ, ಬದಲಾಗಿ ನಿದ್ದೆಯ ಗುಣಮಟ್ಟ. ನಿಮ್ಮ ಸ್ಲೀಪಿಂಗ್ ಪ್ಯಾಟರ್ನ್ ರಿಸೆಟ್ ಮಾಡಲು ಜಪಾನೀಯರ ಈ 7 ಸ್ಲೀಪಿಂಗ್ ಹ್ಯಾಬಿಟ್ಸ್ ಇಲ್ಲಿವೆ.
ಗಾಢ ನಿದ್ರೆ ಬರಬೇಕಾದರೆ ದೇಹದ ಒಳ ಉಷ್ಣಾಂಶ 2 ರಿಂದ 3 ಡಿಗ್ರಿ ಇಳಿಯಬೇಕು. ಜಪಾನೀಯರು ತಮ್ಮ ಮಲಗುವ ಕೋಣೆಯನ್ನು ಉದ್ದೇಶಪೂರ್ವಕವಾಗಿ 15 ರಿಂದ 20 ಡಿಗ್ರಿ ಸೆಲ್ಸಿಯಸ್ ನಡುವೆ ತಂಪಾಗಿ ಇಡುತ್ತಾರೆ. ಕೋಣೆ ಬಿಸಿಯಾಗಿದ್ದರೆ ದೇಹವನ್ನು ತಂಪು ಮಾಡಲು ಮೆದುಳು ವಿಪರೀತ ಶ್ರಮಪಡಬೇಕಾಗುತ್ತದೆ, ಇದರಿಂದ ಬೆಳಗ್ಗೆ ಎದ್ದಾಗ ಆಯಾಸವಾಗುತ್ತದೆ.
ಜಪಾನೀಯರು ಅತಿ ಮೃದುವಾದ ಹಾಸಿಗೆಗಿಂತ 'ಪುಟನ್' ಮತ್ತು 'ತತಾಮಿ' ಎಂಬ ಸ್ವಲ್ಪ ಗಟ್ಟಿಯಾದ ಹಾಸಿಗೆಯ ಮೇಲೆ ಮಲಗುತ್ತಾರೆ. ಹಾಸಿಗೆ ಅತಿ ಮೃದುವಾಗಿದ್ದರೆ ಬೆನ್ನುಮೂಳೆಯನ್ನು ಸರಿದೂಗಿಸಲು ದೇಹವು ರಾತ್ರಿ ಇಡೀ ಸಣ್ಣ ಸಣ್ಣ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತದೆ (Micro-wakings). ಗಟ್ಟಿಯಾದ ಹಾಸಿಗೆಯಿಂದ ಬೆನ್ನು ನೇರವಾಗಿರುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.
ಮಲಗುವ 1 ರಿಂದ 1.5 ಗಂಟೆ ಮುಂಚೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಜಪಾನೀಯರ ಹಳೆಯ ಸಂಪ್ರದಾಯ. ಇದರಿಂದ ರಕ್ತನಾಳಗಳು ಹಿಗ್ಗಿ ದೇಹದ ಉಷ್ಣಾಂಶ ವೇಗವಾಗಿ ಹೊರಹೋಗುತ್ತದೆ. ದೇಹದ ಒಳ ಉಷ್ಣತೆ ಥಟ್ಟನೆ ಇಳಿಯುವುದು ಮೆದುಳಿಗೆ ನಿದ್ದೆ ಮಾಡಲು ನೀಡುವ ಪ್ರಬಲ ಸಿಗ್ನಲ್ ಆಗಿದೆ.
ಜಪಾನ್‌ನಲ್ಲಿ ಕೆಲಸದ ಮಧ್ಯೆ ಸುಸ್ತಾದಾಗ ವಿಶ್ರಾಂತಿ ಪಡೆಯುವುದನ್ನು 'ಇನೆಮೂರಿ' ಎನ್ನುತ್ತಾರೆ. ಅಲ್ಲಿ ನಿದ್ದೆ ಮಾಡುವುದನ್ನು ಸೋಮಾರಿತನ ಎಂದು ಕರೆಯುವ ಬದಲು, ಆ ವ್ಯಕ್ತಿ ಕಷ್ಟಪಟ್ಟು ದುಡಿದಿದ್ದಾನೆ ಎಂದು ಗೌರವಿಸುತ್ತಾರೆ. ನಾವು ಸುಸ್ತಾದಾಗ ಟೀ-ಕಾಫಿ ಕುಡಿದು ನಿದ್ದೆ ಓಡಿಸಲು ಪ್ರಯತ್ನಿಸುತ್ತೇವೆ, ಇದು ರಾತ್ರಿಯ ನಿದ್ದೆಯನ್ನು ಹಾಳು ಮಾಡುತ್ತದೆ.
ಜಪಾನೀಯರು ಮಧ್ಯಾಹ್ನ 15 ರಿಂದ 20 ನಿಮಿಷಗಳ ಸಣ್ಣ ನಿದ್ದೆ ಮಾಡುತ್ತಾರೆ. ವಿಜ್ಞಾನದ ಪ್ರಕಾರ, 20 ನಿಮಿಷಕ್ಕಿಂತ ಕಡಿಮೆ ಮಲಗಿದರೆ ನೀವು ಡೀಪ್ ಸ್ಲೀಪ್ ಹಂತಕ್ಕೆ ಹೋಗುವುದಿಲ್ಲ, ಆದರೆ ಮೆದುಳಿನಲ್ಲಿ ಶೇಖರಣೆಯಾಗಿರುವ ಸುಸ್ತು ಮಾಡುವ ರಾಸಾಯನಿಕಗಳು (Adenosine) ಕ್ಲಿಯರ್ ಆಗುತ್ತವೆ. ಇದರಿಂದ ಎದ್ದ ತಕ್ಷಣ ಬ್ಯಾಟರಿ 100% ಚಾರ್ಜ್ ಆದ ಅನುಭವವಾಗುತ್ತದೆ.
ಮೊಬೈಲ್‌ನಿಂದ ಬರುವ ಬ್ಲೂ ಲೈಟ್ ನಿದ್ದೆಗೆ ಬೇಕಾದ 'ಮೆಲೋಟೋನಿನ್' ಎಂಬ ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ. ಜಪಾನೀಯರು ಮಲಗುವ ಒಂದು ಗಂಟೆ ಮುನ್ನವೇ ಫೋನ್, ಲ್ಯಾಪ್ಟಾಪ್‌ಗಳಿಂದ ದೂರವಿರುತ್ತಾರೆ. ರೀಲ್ಸ್ ನೋಡುವ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಸಹಜವಾದ ನಿದ್ದೆ ಆವರಿಸುತ್ತದೆ.
ಜಪಾನೀಯರು ಅತಿ ಮೃದುವಾದ ದಿಂಬಿನ ಬದಲು 'ಸೋಬಾ ಕಾವ' (Buckwheat hull pillows) ಬಳಸುತ್ತಾರೆ. ಇದು ಕುತ್ತಿಗೆಯ ನೈಸರ್ಗಿಕ ಬಾಗುವಿಕೆಗೆ ತಕ್ಕಂತೆ ಆಕಾರ ಪಡೆದುಕೊಳ್ಳುತ್ತದೆ. ಇದರಿಂದ ರಕ್ತಚಲನೆ ಸುಗಮವಾಗಿ, ಬೆಳಗ್ಗೆ ಎದ್ದಾಗ ಕುತ್ತಿಗೆ ನೋವು ಅಥವಾ ಭುಜದ ಬಿಗಿತ ಇರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.