Mosquito free Home: ಮೋಡವಾದರೆ ಹೆಚ್ಚುತ್ತೆ ಸೊಳ್ಳೆ, ಇಲ್ಲಿದೆ ಪರಿಹಾರ

By Suvarna NewsFirst Published Jun 21, 2022, 4:39 PM IST
Highlights


ಮೋಡ ಕವಿದ ವಾತಾವರಣವಿದ್ದಾಗ, ಮಳೆ ಆರಂಭವಾಗುತ್ತಿರುವ ಸಮಯದಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಮನೆಯೊಳಗನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸೊಳ್ಳೆ ಕಾಟ ನಿಯಂತ್ರಿಸಬಹುದು.
 

ಮಳೆಗಾಲದಲ್ಲಿ (Mansoon) ಕೆಲವು ಸಂಗತಿಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಸ್ವಲ್ಪ ಮಳೆ (Rain) ಬಿದ್ದ ನಂತರ ವಾತಾವರಣದಲ್ಲಿ ಸೊಳ್ಳೆಗಳು (Mosquito) ಹೆಚ್ಚುತ್ತವೆ. ಹಾಗೆಯೇ, ಕ್ರಿಮಿಕೀಟಗಳು (Insects) ಕೂಡ ಮನೆಯೊಳಗೆ ಪ್ರವೇಶಿಸುತ್ತವೆ. ಮನೆಯ ಸುತ್ತಮುತ್ತ ಗಿಡಗಂಟಿಗಳು ಇದ್ದರಂತೂ ಇನ್ನೂ ಎಚ್ಚರಿಕೆಯಿಂದ ಇರಬೇಕು. ಮಳೆಗಾಲದಲ್ಲಿ ಸೊಳ್ಳೆಮುಕ್ತ ಮನೆ ನಿಮ್ಮದಾಗಬೇಕಿದ್ದರೆ ಕೆಲವು ಸರಳವಾದ ಟಿಪ್ಸ್ (Tips) ಅನುಸರಿಸಿ. 

ಮಳೆಗಾಲ ಬಂತೆಂದರೆ ಬೇಸಿಗೆಯ (Summer) ಸೆಕೆಯಿಂದ ಮುಕ್ತಿ ದೊರೆಯುತ್ತದೆ. ಆದರೆ, ಸೊಳ್ಳೆಗಳ ಮೂಲಕ ವಿವಿಧ ರೋಗಗಳು (Diseases) ಹರಡುವ ಸಾಧ್ಯತೆಯೂ ಹೆಚ್ಚುತ್ತದೆ. ನಗರಗಳಲ್ಲಿ ಮಳೆಯಾದ ಬಳಿಕ ಸೊಳ್ಳೆಯ ಕಾಟ ಇನ್ನಷ್ಟು ಹೆಚ್ಚುತ್ತದೆ. ಬೇಸಿಗೆಯಲ್ಲೂ ಅವುಗಳ ಕಾಟ ಇದ್ದಿದ್ದೇ ಆದರೂ ಮಳೆಯ ಸಮಯದಲ್ಲಿ ಇನ್ನಷ್ಟು ಹೆಚ್ಚು. ಮನೆಯೊಳಗನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ಕಾಯ್ಲ್, ವಿವಿಧ ಸ್ಪ್ರೇ (Spray), ರಾಸಾಯನಿಕಭರಿತ (Chemical) ಔಷಧ ಮುಂತಾದ ಹಾನಿಕಾರಕಗಳನ್ನು ಬಳಸುವುದು ಕಂಡುಬರುತ್ತದೆ. ಇವುಗಳಿಂದ ಉಸಿರಾಟದ ಸಮಸ್ಯೆಗಳು ಆರಂಭವಾಗಬಹುದು, ಜ್ವರ (Fever) ಬರಬಹುದು, ಕ್ರಿಮಿಕೀಟಗಳ ಕಡಿತದಿಂದ ಚರ್ಮದಲ್ಲಿ ತುರಿಕೆ ಉಂಟಾಗಬಹುದು. ಹೀಗಾಗಿ, ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಅತ್ಯಂತ ನೈಸರ್ಗಿಕ ವಿಧಾನದಲ್ಲಿಯೇ ಮನೆಯೊಳಗನ್ನು ಶುದ್ಧವಾಗಿಟ್ಟುಕೊಳ್ಳುವುದು ಉತ್ತಮ ವಿಧಾನ.

•    ಔಷಧೀಯ (Medicinal) ಸಸ್ಯಗಳನ್ನು ಬೆಳೆಸುವುದು
ಮನೆಯೊಳಗೆ ಕೆಲವು ಜಾತಿಯ ಔಷಧೀಯ ಸಸ್ಯಗಳನ್ನು (Plants) ಬೆಳೆಸುವುದರಿಂದ ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ. ಮನೆಯ ಸುತ್ತಮುತ್ತ, ಮನೆಯ ಎದುರು, ಬಾಲ್ಕನಿಗಳಲ್ಲಿ ಸಾಕಷ್ಟು ತುಳಸಿ (Basil) ಗಿಡಗಳನ್ನು ನೆಡಬೇಕು. ಹಾಗೆಯೇ, ಕರಿಬೇವು, ದೊಡ್ಡಪತ್ರೆ, ಮಜ್ಜಿಗೆ ಹುಲ್ಲಿನ (Lemon Grass) ಗಿಡಗಳನ್ನೂ ಬೆಳೆಸಿಕೊಳ್ಳಬಹುದು. ಒಂದೊಮ್ಮೆ ಸೊಳ್ಳೆಯ ಕಾಟ ಹೆಚ್ಚಿದ್ದರೆ ಇವುಗಳ ಎಲೆಯನ್ನು ಕೈಯಲ್ಲೇ ಅರೆದು ರಸವನ್ನು ಮೈಕೈಗಳಿಗೆ ಲೇಪಿಸಿಕೊಳ್ಳಬಹುದು. ಸಿಟ್ರೊನೆಲ್ಲಾ (Citronella), ಲ್ಯಾವೆಂಡರ್ (Lavender), ರೋಸ್ಮೆರಿ (Rosemary) ಮುಂತಾದವುಗಳನ್ನು ಸಹ ಇಲ್ಲಿ ಪ್ರಯೋಜನಕ್ಕೆ ಬರುತ್ತವೆ. 

ಮಕ್ಕಳಿಗೆ ಸೊಳ್ಳೆ ಕಚ್ಚಿದರೆ ಹೀಗ್ ಮಾಡಿ

•    ಕರ್ಪೂರ ಚಿಕಿತ್ಸೆ (Camphor)
ಕರ್ಪೂರವನ್ನು ಬಹಳ ಹಿಂದಿನಿಂದಲೂ ಸೊಳ್ಳೆನಿರೋಧಕವಾಗಿ ಬಳಕೆ ಮಾಡುವುದು ಕಂಡುಬರುತ್ತದೆ. ಸಂಜೆಯ ವೇಳೆ ಕರ್ಪೂರವನ್ನು ಉರಿಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕೃತಕ ಕರ್ಪೂರಗಳನ್ನು ಬಳಕೆ ಮಾಡುವುದು ಅಪಾಯಕಾರಿ. ಶುದ್ಧವಾದ ಕರ್ಪೂರದ ಬಳಕೆ ಮಾಡುವುದು ಮುಖ್ಯ. ಕರ್ಪೂರ ಅಥವಾ ನೆಫ್ತಲೀನ್ ಬಾಲ್ (Napthalene Ball) ಎಂದು ಕರೆಯಲಾಗುವ ಡಾಂಬರಿ ಗುಳಿಗೆಯನ್ನು ನೀರಿನಲ್ಲಿ ಹಾಕಿಡಬಹುದು. ಬಾತ್ ರೂಮ್, ಟಾಯ್ಲೆಟ್ ಗಳಲ್ಲೂ ಈ ವಿಧಾನ ಅನುಸರಿಸಬಹುದು.

•    ಕೆಲವು ಸಾರಭೂತ ತೈಲಗಳ ಬಳಕೆ 
ಲ್ಯಾವೆಂಡರ್ ಮತ್ತು ಚಹಾ ಸಸ್ಯದ (Tea Tree) ಎಸೆನ್ಷಿಯಲ್ ಆಯಿಲ್ ಅನ್ನು ಬಳಕೆ ಮಾಡುವುದರಿಂದ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಶುದ್ಧ ತೈಲವನ್ನು ವಾತಾವರಣದಲ್ಲಿ ಸ್ವಲ್ಪ ಸ್ಪ್ರೇ ಮಾಡುವುದರಿಂದ ಮನೆಯೊಳಗಿನ ವಾತಾವರಣವೂ ಶುದ್ಧವಾಗುತ್ತದೆ. ಇವು ಸೊಳ್ಳೆಯ ವಿರುದ್ಧ ನೈಸರ್ಗಿಕ ಮದ್ದಿನಂತೆ ಕೆಲಸ ಮಾಡುತ್ತವೆ. ಈ ತೈಲದ ಒಂದೆರಡು ಹನಿಗಳನ್ನು ಲೇಪಿಸಿಕೊಳ್ಳಬಹುದು.

•    ನಿಂತ ನೀರನ್ನು (Standing Water) ಸೂಕ್ತವಾಗಿ ನಿಭಾಯಿಸಿ
ನಿಂತ ನೀರಿನಲ್ಲಿ ಸೊಳ್ಳೆಗಳು ವೃದ್ಧಿಯಾಗುತ್ತವೆ. ಫ್ರಿಡ್ಜ್ (Fridge) ಹಿಂಭಾಗದಲ್ಲಿ ಶೇಖರವಾಗುವ ನೀರಿನಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ, ಮನೆಯೊಳಗೆ ಇರುವ ನಿಂತ ನೀರಿನ ಬಗ್ಗೆ ಎಚ್ಚರಿಕೆ ಇರಲಿ. ನಿಗದಿತ ಸಮಯದಲ್ಲಿ ಅದನ್ನು ಬದಲಿಸಿ ಅಥವಾ ಸ್ವಚ್ಛಗೊಳಿಸಿ. ಮನೆಯ ಸುತ್ತಮುತ್ತ ನೀರು ನಿಲ್ಲುವ ತಾಣವಿದ್ದರೆ ಅದನ್ನು ಸ್ವಚ್ಛಗೊಳಿಸಿ. ಕಾಲಕಾಲಕ್ಕೆ ಸುಣ್ಣ ಅಥವಾ ಬ್ಲೀಚಿಂಗ್ ಪೌಡರ್ ಏನಾದರೂ ಸಿಂಪಡಿಸಿ. ಮನೆಯ ಬಾಲ್ಕನಿ, ಗಾರ್ಡನ್, ಬಾತ್ ರೂಮ್, ಟಾಯ್ಲೆಟ್ (Toilet) ಗಳಲ್ಲಿ ನೀರು ನಿಲ್ಲದಂತೆ, ಅವುಗಳ ಡ್ರೈನೇಜ್ ವ್ಯವಸ್ಥೆಯ ಕುರಿತು ಎಚ್ಚರಿಕೆ ವಹಿಸಿ. ಮನೆಯ ಹೊರಗೆ ಪ್ಲಾಸ್ಟಿಕ್ (Plastic) ಮುಂತಾದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಇಲ್ಲದಂತೆ ನೋಡಿಕೊಳ್ಳಿ. 

ರಾಸಾಯನಿಕವಿಲ್ಲದೇ ಸೊಳ್ಳೆ ಓಡಿಸಲು ಇಲ್ಲಿವೆ ಟಿಪ್ಸ್

click me!