ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ನಗರದಲ್ಲಿ ಕೇವಲ ಒಂದು ತಿಂಗಳಲ್ಲಿ 1400ಕ್ಕೂ ಅಧಿಕ ಡೆಂಘೀ ಪ್ರಕರಣ ಕಾಣಿಸಿಕೊಂಡಿವೆ.
ಬೆಂಗಳೂರು (ಡಿ.13): ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ನಗರದಲ್ಲಿ ಕೇವಲ ಒಂದು ತಿಂಗಳಲ್ಲಿ 1400ಕ್ಕೂ ಅಧಿಕ ಡೆಂಘೀ ಪ್ರಕರಣ ಕಾಣಿಸಿಕೊಂಡಿವೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ನಗರದಲ್ಲಿ ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅತ್ಯಂತ ಅನುಕೂಲವಾಗಿ ಪರಿಸರ ಸೃಷ್ಟಿಯಾಗಿದೆ. ಹೀಗಾಗಿ, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ.
ಕಳೆದ ನವೆಂಬರ್ 1ರಿಂದ ಡಿಸೆಂಬರ್ 8ರವರೆಗೆ ನಗರದಲ್ಲಿ ಒಟ್ಟು 7,642 ಮಂದಿಯಲ್ಲಿ ಡೆಂಘೀ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 1,468 ಮಂದಿಯಲ್ಲಿ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಆರ್‌ಆರ್‌ನಗರ ವಲಯ, ಪಶ್ಚಿಮ ವಲಯ, ದಕ್ಷಿಣ ವಲಯ ಹಾಗೂ ಪೂರ್ವ ವಲಯದ ವ್ಯಾಪ್ತಿಯಲ್ಲಿ ಡೆಂಘೀ ಪ್ರರಕಣಗಳ ಪಾಸಿಟಿವಿಟಿ ದರ ಹೆಚ್ಚಾಗಿದೆ. ಇನ್ನು ನಗರದ ದಕ್ಷಿಣ ವಲಯದ ಕೋರಮಂಗಲ ವಾರ್ಡ್‌ನಲ್ಲಿ ಅತಿ ಹೆಚ್ಚು 41 ಡೆಂಘೀ ಪ್ರಕರಣಗಳಿವೆ. ಉಳಿದಂತೆ ಬಿಬಿಎಂಪಿಯ ವಲಯವಾರು ಅತಿ ಹೆಚ್ಚು ಡೆಂಘೀ ಪ್ರಕರಣ ಕಾಣಿಸಿಕೊಂಡ ವಾರ್ಡ್‌ಗಳನ್ನು ಗುರುತಿಸಿಕೊಂಡು ನಿಯಂತ್ರಣ ಕಾರ್ಯಗಳನ್ನು ನಡೆಸಲಾಗುತ್ತಿದೆ.
ಜಾಗೃತಿ, ತಪಾಸಣೆ: ಡೆಂಘೀ ಹಾಗೂ ಚಿಕೂನ್ ಗುನ್ಯಾ ಪ್ರಕರಣ ಕಾಣಿಸಿಕೊಂಡ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜತೆಗೆ, ಸೊಳ್ಳೆ ನಾಶಕ್ಕೆ ನಿಯಮಿತವಾಗಿ ನಗರದಲ್ಲಿ ಫಾಗಿಂಗ್ ಕಾರ್ಯವನ್ನು ಮಾಡಲಾಗುತ್ತಿದೆ. ಮನೆಯ ಅಕ್ಕ-ಪಕ್ಕದಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ತೆಂಗಿನ ಚಿಪ್ಪು, ಟೈಯರ್, ಹೂವಿನ ಕುಂಡ ಸೇರಿದಂತೆ ಇನ್ನಿತರೆ ವಸ್ತುಗಳಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕು, ಸೊಳ್ಳೆ ಪರದೆ ಬಳಕೆ, ನೀರು ಶೇಖರಣೆ ಮಾಡುವ ತೊಟ್ಟಿ, ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರದೃಷ್ಟಿಗೆ ಎಂ.ಎಸ್.ರಾಮಯ್ಯ ಸಾಕ್ಷಿ: ಕೇಂದ್ರ ಸಚಿವ ನಿತಿನ್ ಗಡ್ಕರಿ
ವಲಯವಾರು ಡೆಂಘೀ ಪ್ರಕರಣ
ವಲಯ ಡೆಂಘೀ ಪ್ರಕರಣ
ಬೊಮ್ಮನಹಳ್ಳಿ 180
ದಾಸರಹಳ್ಳಿ 3
ಪೂರ್ವ 343
ಮಹದೇವಪುರ 182
ಆರ್‌ಆರ್‌ನಗರ 149
ದಕ್ಷಿಣ 299
ಪಶ್ಚಿಮ 168
ಯಲಹಂಕ 144
ಒಟ್ಟು 1,468