ಮಾಸ್ಕ್ ಧರಿಸೋದು ರಗಳೆ ಕೆಲ್ಸ. ನೀರು ಕುಡಿಯಲು, ಊಟ ಮಾಡಲು ಅದನ್ನು ತೆಗೆಯಬೇಕಲ್ಲ,ಇದು ರಿಸ್ಕ್ ಅಲ್ವಾ ಅನ್ನೋರಿಗೆ ಇಸ್ರೇಲ್ ಸಂಶೋಧಕರು ವಿನೂತನ ಮಾದರಿಯ ಮಾಸ್ಕ್ವೊಂದನ್ನು ಸಿದ್ಧಪಡಿಸಿದ್ದಾರೆ.
ರಸ್ತೆಯಲ್ಲಿ ಯಾರಾದ್ರೂ ಮೂಗು,ಬಾಯಿಗೆ ಬಟ್ಟೆ ಸುತ್ತಿಕೊಂಡು ಓಡಾಡುತ್ತಿದ್ರೆ ಅವರನ್ನು ವಿಚಿತ್ರವಾಗಿ ನೋಡುವ ಕಾಲವೊಂದಿತ್ತು. ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆ ಹೊಂದಿರುವವರು ಬೆಂಗಳೂರಿನಂತಹ ಮಹಾನಗರದಲ್ಲಿ ಮೂಗು, ಬಾಯಿಗೆ ಮಾಸ್ಕ್ ಇಲ್ಲವೆ ಬಟ್ಟೆ ಕಟ್ಟಿಕೊಂಡೇ ರಸ್ತೆಗಿಳಿಯೋದು ಅನಿವಾರ್ಯ. ಟ್ರಾಫಿಕ್ ಸಿಗ್ನಲ್‍ನಲ್ಲಿ ಆ ಕಡೆ ಈ ಕಡೆ ಕಣ್ಣು ಹಾಯಿಸುವಾಗ ಇಂಥವರು ಕಾಣಿಸಿದ್ರೆ ಮತ್ತೊಮ್ಮೆ ಇವರನ್ನು ದಿಟ್ಟಿಸಿ ನೋಡಿ ಓಹೋ ಇವರಿಗೇನೂ ಕಾಯಿಲೆ ಇರಬೇಕು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುವವರ ಸಂಖ್ಯೆಗೇನೋ ಕಡಿಮೆಯಿರಲಿಲ್ಲ. ಆದ್ರೆ ಕೊರೋನಾ ಬಂದ ಮೇಲೆ ಜಗತ್ತು ಎಷ್ಟು ಬದಲಾಗಿದೆ ನೋಡಿ, ಮೂಗು, ಬಾಯಿ ಕಟ್ಟಿಕೊಳ್ಳದೆ ಹೊರಗೆ ಕಾಲಿಟ್ಟರೆ ಅಂಥವರ ಹತ್ರ ಸುಳಿಯೋದು ಬಿಡಿ, ಇಂವ ಎಂಥಾ ಅಸಾಮಿ ಮರಾಯ್ರೆ ಮಾಸ್ಕ್ ಹಾಕಿಕೊಳ್ಳದೆ ಹೊರಗೆ ಬಂದಿದ್ದಾನೆ, ತಲೆಕೆಟ್ಟವನು ಎಂದು ಬೈಯದಿದ್ರೆ ಕೇಳಿ. ಇನ್ನು ಹೆಲ್ಮೆಟ್ ಧರಿಸದೆ ರಸ್ತೆಗಿಳಿದ್ರೆ ದ್ವಿಚಕ್ರ ವಾಹನ ಸವಾರರಿಗೆ ಹೇಗೆ ದಂಡ ಬೀಳುತ್ತಿತೋ ಹಾಗೆಯೇ ಈಗ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಟ್ಟರೆ ಜೇಬಿಗೆ ಬರೆ ಪಕ್ಕಾ. ಆಸ್ಪತ್ರೆಯ ಆಪರೇಷನ್ ಥಿಯೇಟರ್‍ನಲ್ಲಿ ವೈದ್ಯರ ಮುಖದ ಮೇಲಷ್ಟೇ ಕಾಣಸಿಗುತ್ತಿದ್ದ ಮಾಸ್ಕ್ ಇಂದು ಪ್ರತಿಯೊಬ್ಬರ ನಿತ್ಯ ಬಳಕೆಯ ವಸ್ತುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದೇ ಒಂದು ವೈರಸ್!
ಬಾಚಣಿಗೆ ಸ್ವಚ್ಛಗೊಳಿಸೋದೆ ದೊಡ್ಡ ತಲೆನೋವಾ?
ಮಾಸ್ಕ್ ಹಾಕೊಂಡ್ರೂ ಹತ್ತಾರು ಪ್ರಾಬ್ಲಂ
ಮಾಸ್ಕ್ ಹಾಕೊಂಡು ಆರಾಮವಾಗಿ ಓಡಾಡಬಹುದು ಅಂದ್ಕೊಂಡವರೆಲ್ಲ ಕೆಲವೇ ದಿನಗಳಲ್ಲಿ ಇದರ ಸಹವಾಸ ಸಾಕಪ್ಪ ಅನ್ನುವಷ್ಟು ಬೇಸತ್ತಿದ್ದಾರೆ. ಮೂಗು, ಬಾಯಿ ಮುಚ್ಚಿಕೊಳ್ಳೋದು ಸುಲಭದ ಕೆಲಸವಲ್ಲ ಅನ್ನೋದನ್ನು ಮಾಸ್ಕ್ ಅರ್ಥ ಮಾಡಿಸುತ್ತಿದೆ. ಮಾಸ್ಕ್ ಧರಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಕೈ ನಮ್ಮ ಅರಿವಿಗೇ ಬಾರದಂತೆ ಮಾಸ್ಕ್ ಅನ್ನು ಮೂಗಿನಿಂದ ಸ್ವಲ್ಪ ಕೆಳಗೆ ಎಳೆದೆ ಬಿಡುತ್ತೆ. ಇನ್ನು ಯಾರೊಂದಿಗಾದ್ರೂ ಮಾತನಾಡುವಾಗ ಎದುರಾಗುವ ಪ್ರಾಬ್ಲಂ ಒಂದೆರಡಲ್ಲ. ಅದ್ರಲ್ಲೂ ಕಿವಿ ಸ್ವಲ್ಪ ಮಂದವಾಗಿರುವವರ ಪಾಡು ಕೇಳೋದೇ ಬೇಡ. ಮಾಸ್ಕ್ ಒಳಗಿಂದ ಬರುವ ಧ್ವನಿಯನ್ನು ಗ್ರಹಿಸಲು ಹರಸಾಹಸ ಪಡಬೇಕಾಗುತ್ತೆ. ಧ್ವನಿ ಕಡಿಮೆಯಿರುವವರ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಮಾಸ್ಕ್ ಒಳಗಿಂದ ಇವರೆಷ್ಟೇ ಧ್ವನಿಯೇರಿಸಿದ್ರೂ ಎದುರಿಗಿನ ವ್ಯಕ್ತಿಗೆ ಅದನ್ನು ಅರ್ಥ ಮಾಡಿಸುವಾಗ ಸಾಕುಸಾಕಾಗುತ್ತೆ. ಕೆಲವು ಮಾಸ್ಕ್ಗಳಂತೂ ಮಾತನಾಡುವಾಗ ಬಾಯಿಯೊಳಗೇ ತೂರಿಕೊಂಡು ಕಾಟ ಕೊಡ್ತವೆ.
ನಮ್ಮ ಹಿತ್ತಲ ಗಿಡದಲ್ಲೇ ಇದೆ ಕೊರೋನಾಗೆ ಮದ್ದು!
ಮಾಸ್ಕ್ನೊಳಗೊಂದು ಬಾಯಿ
ಮಾಸ್ಕ್ ಹಾಕೊಂಡು ಆಫೀಸ್‍ಗೆ ಅಥವಾ ಇನ್ಯಾವುದೋ ಕೆಲಸಕ್ಕೆ ಮನೆಯಿಂದ ಹೊರಹೋದವರ ಪ್ರಶ್ನೆ ಏನಪ್ಪ ಅಂದ್ರೆ ಊಟ, ತಿಂಡಿ, ನೀರು ಕುಡಿಯುವಾಗ ಮಾಸ್ಕ್ ತೆಗೆಯೋದು ಅನಿವಾರ್ಯ. ಇಂಥ ಸಮಯದಲ್ಲಿ ಮಾಸ್ಕ್ ಅನ್ನು ಕೈಯಿಂದ ಮುಟ್ಟಬೇಕು, ಇದು ರಿಸ್ಕ್ ಅಲ್ವಾ? ನಿಜ, ಇದನ್ನು ಅರ್ಥೈಸಿಕೊಂಡಿರುವ ಇಸ್ರೇಲ್ ಸಂಶೋಧಕರು ಪರಿಹಾರವೊಂದನ್ನು ಕಂಡುಹಿಡಿದಿದ್ದಾರೆ. ಇವರು ವಿನೂತನವಾದ ಕೊರೋನಾ ವೈರಸ್ ಮಾಸ್ಕ್ ಅಭಿವೃದ್ಧಿಪಡಿಸಿದ್ದು, ಅದರಲ್ಲಿ ಬಾಯಿ ಆಕೃತಿಯನ್ನು ರಚಿಸಿದ್ದು, ಮಾಸ್ಕ್ ತೆಗೆಯದೆ ಆಹಾರ ಸೇವಿಸಬಹುದಾಗಿದೆ. ಇದ್ರಿಂದ ಹೋಟೆಲ್ ಅಥವಾ ಹೊರಗಡೆ ಆಹಾರ ಸೇವಿಸುವಾಗ ರಿಸ್ಕ್ ತಗ್ಗಲಿದೆ. ಇನ್ನು ಮಾಸ್ಕ್ನಲ್ಲಿರುವ ಬಾಯಿ ಆಕೃತಿಯನ್ನು ತೆರೆಯಲು ಕೂಡ ಕೈ ಬಳಸಬೇಕಾಗಿಲ್ಲ. ರಿಮೋಟ್ ಮೂಲಕ ಇಲ್ಲವೆ ಸ್ಪೂನ್ ಅನ್ನು ಬಾಯಿ ಬಳಿ ಕೊಂಡುಹೋದ ತಕ್ಷಣ ತೆರೆಯುವ ವ್ಯವಸ್ಥೆಯಿದೆ. ಇದರ ಮೂಲಕ ನಿಮ್ಮಿಷ್ಟದ ತಿನಿಸುಗಳು, ನೀರು ಹಾಗೂ ಜ್ಯೂಸ್ ಸೇವಿಸಬಹುದು. ಆದ್ರೆ ಐಸ್‍ಕ್ರೀಂ ಹಾಗೂ ಸಾಸ್ ತಿನ್ನುವಾಗ ಸ್ವಲ್ಪ ಎಚ್ಚರಿಕೆ ಬೇಕು. ಇಲ್ಲವಾದ್ರೆ ಮಾಸ್ಕ್ ತುಂಬಾ ಕಲೆಗಳಾಗುವ ಸಾಧ್ಯತೆಯಿದೆ. ಇಸ್ರೇಲ್ ಕಂಪನಿಯೊಂದು ಈಗಾಗಲೇ ಇದರ ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಿದೆ. ಅಲ್ಲದೆ, ತಿಂಗಳೊಳಗೆ ಈ ಮಾಸ್ಕ್ ಉತ್ಪಾದನೆ ಪ್ರಾರಂಭಿಸೋದಾಗಿ ಕೂಡ ಹೇಳಿದೆ. ಈ ಮಾಸ್ಕ್‍ಗೆ 65 ರೂ.ನಿಂದ 216 ರೂ. ತನಕ ದರ ನಿಗದಿಪಡಿಸುವ ಸಾಧ್ಯತೆಯಿದೆಯಂತೆ. ಸೋ, ಈ ಮಾಸ್ಕ್ ಹಾಕೊಂಡ್ರೆ ಇನ್ನು ಮುಂದೆ ಮನೆಯಿಂದ ಹೊರಗಡೆಯಿರುವಾಗ ನೀರು ಕುಡಿಯೋಕೆ, ಊಟ ಮಾಡೋಕೆ ಚಿಂತೆ ಮಾಡ್ಬೇಕಾದ ಅಗತ್ಯವಿಲ್ಲ.