ಬಾಚಣಿಗೆ ಸ್ವಚ್ಛಗೊಳಿಸೋದೆ ದೊಡ್ಡ ತಲೆನೋವಾ? ಇಲ್ಲಿದೆ ಸುಲಭ ವಿಧಾನ

By Suvarna News  |  First Published May 20, 2020, 3:01 PM IST

ಕೂದಲನ್ನು ತೊಳೆದ್ರೆ ಸಾಲದು, ಅದನ್ನು ಬಾಚುವ ಬಾಚಣಿಗೆಗೋ ಆಗಾಗ ಸ್ನಾನ ಮಾಡಿಸೋದು ಅಗತ್ಯ.ಇಲ್ಲವಾದ್ರೆ ಕೂದಲಿನ ಆರೋಗ್ಯ ಹದಗೆಡೋದು, ಅಂದಗೆಡೋದು ಪಕ್ಕಾ. 


ಬಾಚಣಿಗೆ ಶುಚಿಗೊಳಿಸೋದು ಕೂದಲು ಬಾಚಿದಷ್ಟು ಸುಲಭದ ಕೆಲಸವಲ್ಲ. ಪ್ರತಿದಿನ ಕೂದಲು ಬಾಚಿದ ಬಳಿಕ ಬಾಚಣಿಗೆಯನ್ನು ಎಲ್ಲೋ ಒಂದೆಡೆ ಎಸೆದು ಸುಮ್ಮನಾಗುತ್ತೇವೆ. ಆದ್ರೆ ಕ್ರಮೇಣ ಆ ಬಾಚಣಿಗೆಯಲ್ಲಿ ಧೂಳು, ಕೊಳೆ ಶೇಖರಗೊಳ್ಳುತ್ತದೆ. ಬಾಚಣಿಗೆಯಲ್ಲಿ ಕೊಳೆಯಿರೋದು ಕಣ್ಣಿಗೆ ಬಿದ್ರೂ ಯಾರಪ್ಪ ಇದನ್ನು ಸ್ವಚ್ಛಗೊಳಿಸೋದು ಎಂಬ ಉದಾಸೀನದಿಂದ ಅದರಲ್ಲೇ ಕೂದಲು ಬಾಚಿಕೊಳ್ಳುತ್ತೇವೆ. ಆದ್ರೆ ಕೊಳೆ ತುಂಬಿರುವ ಬಾಚಣಿಗೆಯಿಂದ ಕೂದಲು ಬಾಚೋದ್ರಿಂದ ಎಷ್ಟೆಲ್ಲ ಹಾನಿಯಾಗುತ್ತೆ ಎಂಬುದು ತಿಳಿಯುವಾಗ ಕಾಲ ಮಿಂಚಿ ಹೋಗಿರುತ್ತೆ. ತಲೆಯಲ್ಲಿರುವ ಕೂದಲುಗಳು ಉದುರಲು ಪ್ರಾರಂಭಿಸಿರುತ್ತವೆ. ತಲೆಹೊಟ್ಟು, ತುರಿಕೆಯಂತಹ ಸಮಸ್ಯೆಗಳಿಗೆ ಕೊಳೆಯಿಂದ ತುಂಬಿರುವ ಬಾಚಣಿಗೆಯನ್ನು ಬಳಸಿರೋದು ಕೂಡ ಕಾರಣವಾಗುತ್ತದೆ. ನೀವು ಅದ್ಯಾವ ಬ್ರ್ಯಾಂಡ್‍ನ ಶಾಂಪು ಬಳಸಿದ್ರು, ಗುಣಮಟ್ಟದ ಎಣ್ಣೆಯನ್ನೇ ಹಚ್ಚಿದ್ರೂ ನೀವು ಬಳಸುವ ಬಾಚಣಿಗೆಯಲ್ಲಿ ಕೊಳೆಯಿದ್ರೆ ಕೂದಲಿನ ಆರೈಕೆಗೆ ನಿಮ್ಮೆಲ್ಲ ಕಾಳಜಿ, ಪ್ರಯತ್ನಗಳು ವಿಫಲವಾಗುತ್ತವೆ. ಇದೆಲ್ಲ ಸರಿ, ಆದ್ರೆ ಕೊಳೆ ತುಂಬಿದ ಬಾಚಣಿಗೆಯನ್ನು ಶುಚಿಗೊಳಿಸಲು ಸಾಕಷ್ಟು ಸಮಯ ಹಿಡಿಯುತ್ತಲ್ಲ, ಇದಕ್ಕೇನು ಮಾಡೋದು ಎಂಬ ಯೋಚನೆ ನಿಮ್ಮ ತಲೆಯಲ್ಲಿ ಓಡುತ್ತಿದ್ರೆ, ಅದಕ್ಕೊಂದು ಸುಲಭದ ಕ್ಲೀನಿಂಗ್ ವಿಧಾನ ಇಲ್ಲಿದೆ.

ನಮ್ಮ ಹಿತ್ತಲ ಗಿಡದಲ್ಲೇ ಇದೆ ಕೊರೋನಾಗೆ ಮದ್ದು!

Tap to resize

Latest Videos

ಕ್ಲೀನಿಂಗ್‍ಗೆ ಅಗತ್ಯವಾದ ವಸ್ತುಗಳು
-ಹಳೆಯ ಟೂಥ್‍ಬ್ರಷ್
-ಬೇಕಿಂಗ್ ಸೋಡಾ
-ಶ್ಯಾಂಪು
-ಕೊಳೆಯಿಂದ ತುಂಬಿರುವ ಬಾಚಣಿಗೆ

ಶುಚಿಗೊಳಿಸುವ ವಿಧಾನ
-ಮೊದಲಿಗೆ ಬಾಚಣಿಗೆಯ ಹಲ್ಲುಗಳಲ್ಲಿ ಸಿಲುಕಿಕೊಂಡಿರುವ ಕೂದಲುಗಳನ್ನು ಬಿಡಿಸಿ ತೆಗೆಯಿರಿ. ಪ್ರತಿ ಬಾರಿ ನೀವು ಕೂದಲು ಬಾಚಿದ ಬಳಿಕ ಬಾಚಣಿಗೆಯ ಹಲ್ಲುಗಳ ನಡುವೆ ಸಿಕ್ಕಿ ಹಾಕೊಂಡಿರುವ ಕೂದಲುಗಳನ್ನು ತೆಗೆಯುವ ಅಭ್ಯಾಸ ಹೊಂದಿದ್ರೆ, ಕ್ಲೀನಿಂಗ್ ಸಮಯದಲ್ಲಿ ಸುಲಭವಾಗುತ್ತದೆ. ಒಂದು ವೇಳೆ ಪ್ರತಿ ಬಾರಿ ಕೂದಲು ಬಾಚಿದ ಬಳಿಕ ಅದನ್ನು ತೆಗೆಯುವ ಅಭ್ಯಾಸ ಇಲ್ಲದಿದ್ರೆ ಈ ಪ್ರಕ್ರಿಯೆಗೆ ಒಂದಿಷ್ಟು ಸಮಯ ಹಿಡಿಯೋದಂತೂ ಗ್ಯಾರಂಟಿ. ಇನ್ನು ಪುಟ್ಟ ಕೂದಲು, ಕೊಳೆ, ಮಣ್ಣು ಎಲ್ಲ ಸೇರಿ ಬಾಚಣಿಗೆಯ ಹಲ್ಲುಗಳ ನಡುವೆ ಭದ್ರವಾಗಿ ಸಿಲುಕಿಕೊಂಡಿರುತ್ತವೆ. ಇವನ್ನು ತೆಗೆಯೋದು ಅಂದ್ಕೊಂಡಷ್ಟು ಸುಲಭದ ಕೆಲಸವಂತೂ ಅಲ್ಲ. ತೆಳ್ಳಗಿನ ಕಡ್ಡಿ ಮೂಲಕ ಇವುಗಳನ್ನು ನಿಧಾನವಾಗಿ ಬಿಡಿಸಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿದು ನಿಮ್ಮ ಸಹನೆಯ ಕಟ್ಟೆಯೊಡೆಯಬಹುದು. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟನ್ನು ಬಿಡಿಸಿ ಉಳಿದವನ್ನು ಬಿಟ್ಟುಬಿಡಿ. 
-ಮುಂದಿನ ಹಂತ ಬಾಚಣಿಗೆ ತೊಳೆಯೋದು. ಒಂದು ಅಗಲವಾದ ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಶಾಂಪು ಹಾಕಿ ನೊರೆ ಬರಿಸಿ. ಇದರಲ್ಲಿ ಬಾಚಣಿಗೆಯನ್ನು ಅರ್ಧ ಗಂಟೆ ನೆನೆಹಾಕಿ. ಇದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಸೇರಿಸಿ. ಯಾವುದೇ ಕಾರಣಕ್ಕೂ ಈ ನೀರನ್ನು ಕುದಿಸೋದು ಅಥವಾ ಬ್ಲೀಚಿಂಗ್ ಪೌಡರ್ ಸೇರಿಸೋದು ಮಾಡ್ಬೇಡಿ.

ಬೇಸಿಗೆಯಲ್ಲಿ ಮಕ್ಕಳಿಗೆ ಈ ಜ್ಯೂಸ್ ನೀಡಲು ಮರೆಯಬೇಡಿ

-ಹಳೆಯ ಟೂಥ್‍ಬ್ರಷ್ ತೆಗೆದುಕೊಂಡು ಅರ್ಧಗಂಟೆ ನೆನೆಹಾಕಿದ ಬಾಚಣಿಗೆಯ ಒಂದೊಂದೇ ಹಲ್ಲುಗಳನ್ನು ಬುಡದಿಂದ ತುದಿಯ ತನಕ ಉಜ್ಜಬೇಕು. ಈ ರೀತಿ ಸ್ಕ್ರಬ್ ಮಾಡುವಾಗ ಟೂಥ್‍ಬ್ರಷ್‍ಗೆ ಕೂಡ ಸ್ವಲ್ಪ ಶಾಂಪು ಹಾಕಿಕೊಂಡ್ರೆ ಬಾಚಣಿಗೆ ಚೆನ್ನಾಗಿ ಕ್ಲೀನ್ ಆಗುತ್ತೆ.
-ಈಗ ನಿಮ್ಮ ಕೈಗಳಿಂದ ಬಾಚಣಿಗೆಯನ್ನು ತಿಕ್ಕಿ ತೊಳೆಯಿರಿ. ಆ ಬಳಿಕ ಟ್ಯಾಪ್ ನೀರಿನಡಿಗೆ ಬಾಚಣಿಗೆಯನ್ನು ಹಿಡಿದು ಶಾಂಪು ನೊರೆ ಸಂಪೂರ್ಣವಾಗಿ ಹೋಗುವ ತನಕ ತೊಳೆಯಿರಿ. ಬಾಚಣಿಗೆಯನ್ನು ಟವೆಲ್‍ನಿಂದ ಒರೆಸಿ. ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಒಣಗಿಸಿದರೆ ಇನ್ನೂ ಉತ್ತಮ. ಬಾಚಣಿಗೆ ಸಂಪೂರ್ಣವಾಗಿ ಒಣಗಿದ ಬಳಿಕವೇ ಅದನ್ನು ಉಪಯೋಗಿಸಿ. ಹೇರ್‍ಬ್ರಷ್ ಅನ್ನು ಕೂಡ ಇದೇ ವಿಧಾನದಲ್ಲಿ ಸ್ವಚ್ಛಗೊಳಿಸಬಹುದು. ಆದ್ರೆ ಹೇರ್‍ಬ್ರಷ್ ಒಣಗಲು ಬಾಚಣಿಗೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದಕಾರಣ ಕ್ಲೀನ್ ಮಾಡಿದ ಬಳಿಕ ಬ್ರಷ್ ಇರುವ ಭಾಗ ಕೆಳಗಿರುವಂತೆ ಒಣಗಲು ಇಡೋದು ಉತ್ತಮ. ಇದ್ರಿಂದ ನೀರು ಸಂಪೂರ್ಣವಾಗಿ ಇಳಿದು ಹೋಗಿ ಬ್ರಷ್ ಬೇಗ ಒಣಗುತ್ತದೆ. 

click me!