
ಗೊರಕೆ (Snore) ಹೊಡೆಯೋರು ಸುಖ ನಿದ್ರೆ (Sleep) ಯಲ್ಲಿರ್ತಾರೆ, ಆದ್ರೆ ಅವ್ರ ಪಕ್ಕ ಮಲಗಿರೋರಿಗೆ ನಿದ್ರೆ ಬರೋದಿಲ್ಲ. ಕೆಲವರ ಗೊರಕೆ ವಿಪರೀತವಾಗಿರುತ್ತದೆ. ಮನೆಯವರಿಗೆಲ್ಲ ಕೇಳುವಂತೆ ಗೊರಕೆ ಹೊಡೆಯುವವರಿದ್ದಾರೆ. ಬೆಳಿಗ್ಗೆ (morning) ಕೇಳಿದ್ರೆ ಅವರಿಗೆ ವಿಷ್ಯ ಗೊತ್ತಿರುವುದಿಲ್ಲ. ಆದ್ರೆ ಇವರಿಂದ ಮನೆಯಲ್ಲಿ ಯಾರಿಗೂ ಸರಿಯಾಗಿ ನಿದ್ರೆ ಬರೋದಿಲ್ಲ. ಪಕ್ಕದಲ್ಲಿ ಮಲಗಿರುವ ಸಂಗಾತಿ (Partner) ಗತಿ ಮುಗಿದೇ ಹೋಯ್ತು. ಒಂದೋ ಎರಡೋ ದಿನ ಈ ಗೊರಕೆ ಕಾಟ ತಡೆದುಕೊಳ್ಬಹುದು. ಪ್ರತಿ ದಿನ ನಿದ್ರೆಗೆಡಲು ಸಾಧ್ಯವೇ? ಹತ್ತಿ (Cotton) ಯನ್ನು ಕಿವಿ (Ears) ಗೆ ಹಾಕಿಕೊಂಡ್ರೂ ಗೊರಕೆ ಕೇಳಿಸುತ್ತದೆ. ಹಾಸಿಗೆ (bed) ಯಲ್ಲಿ ಅತ್ತಿಂದಿತ್ತ ಹೊರಳಾಡು ಸಂಗಾತಿ, ಸಾಕಪ್ಪ ಸಹವಾಸ ಎಂದುಕೊಳ್ತಾರೆ. ಗೊರಕೆ ವಿಷ್ಯಕ್ಕೆ ವಿಚ್ಛೇದನ (Divorce) ಕ್ಕೆ ಕೋರ್ಟ್ (Court) ನಲ್ಲಿ ಅರ್ಜಿ ಸಲ್ಲಿಸಿದ ಪ್ರಕರಣಗಳಿವೆ.
ಗೊರಕೆ, ಉಸಿರಾಟ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ ಕಾಡುತ್ತದೆ. ಮಲಗಿರುವಾಗ ಆಂತರಿಕ ಜೀವಕೋಶಗಳ ಕಂಪನದಿಂದ ಈ ಅನಗತ್ಯ ಧ್ವನಿಯು ಉತ್ಪತ್ತಿಯಾಗುತ್ತದೆ. ನಿಮ್ಮ ಸಂಗಾತಿಯೂ ಗೊರಕೆ ಹೊಡೆಯುತ್ತಿದ್ದು, ಅದರಿಂದ ತಪ್ಪಿಸಿಕೊಳ್ಳಬೇಕೆಂದ್ರೆ ಹತ್ತಿ ಬೇಡ. ಇಲ್ಲೊಂದಿಷ್ಟು ಮನೆ ಮದ್ದಿದೆ. ಅದರ ಉಪಯೋಗದ ಮೂಲಕ ನೀವು ಸಂಗಾತಿಯ ಗೊರಕೆ ನಿಲ್ಲಿಸಬಹುದು. ಈ ಮೂಲಕ ಸುಖ ನಿದ್ರೆಗೆ ಜಾರಬಹುದು.
ಗೊರಕೆಗೆ ಮನೆ ಮದ್ದುಗಳು :
ಪುದೀನಾ : ಪುದೀನಾ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಹಲವಾರು ರೋಗಗಳಿಗೆ ರಾಮಬಾಣ ಎನ್ನಬಹುದು. ಪುದೀನಾವನ್ನು ಬೇಸಿಗೆಯಲ್ಲಿ ಹೆಚ್ಚು ಬಳಕೆ ಮಾಡ್ಬೇಕೆಂದು ತಜ್ಞರು ಹೇಳ್ತಾರೆ. ಪುದೀನಾ ಎಲೆಗಳ ಮೂಲಕ ಸಂಗಾತಿ ಗೊರಕೆ ಸಮಸ್ಯೆ ಕಡಿಮೆ ಮಾಡ್ಬಹುದು. ಪುದೀನಾದ ಹಸಿರು ಎಲೆಗಳನ್ನು ನೀರಿಗೆ ಹಾಕಿ ಕುದಿಸಬೇಕು. ನಂತ್ರ ಕುದಿಸಿದ ನೀರನ್ನು ಕುಡಿಯಬೇಕು. ಈ ಪುದೀನಾ ನೀರು ಗೊರಕೆಯನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಕೆಲವು ಹನಿ ಪುದೀನಾ ಎಣ್ಣೆಯನ್ನು ಮೂಗಿಗೆ ಹಾಕಿದರೆ ಉಸಿರಾಟದ ತೊಂದರೆ ಇರುವುದಿಲ್ಲ. ಇದ್ರಿಂದ ಗೊರಕೆ ಸಮಸ್ಯೆಯಿಂದ ನೀವು ಹೊರಗೆ ಬರಬಹುದು. ಕೆಲವು ದಿನಗಳ ಕಾಲ ನಿರಂತರವಾಗಿ ಈ ಮನೆ ಮದ್ದನ್ನು ಮಾಡ್ಬೇಕಾಗುತ್ತದೆ.
ಇದನ್ನೂ ಓದಿ: HEALTH TIPS : ಹಾರ್ಟ್ ಗಟ್ಟಿಯಾಗಿರ್ಬೇಕೆಂದ್ರೆ ಇದರ ಬೀಜ ಕಸಕ್ಕೆ ಎಸಿಬೇಡಿ
ಅರಿಶಿನ : ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಅರಿಶಿನವು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಗೊರಕೆಯ ಸಮಸ್ಯೆಗೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಲಗುವ ಮುನ್ನ ಒಂದು ಲೋಟ ಹಾಲಿಗೆ ಅರಿಶಿನವನ್ನು ಹಾಕಬೇಕು. ಬಿಸಿ ಹಾಲಿಗೆ ಅರಿಶಿನ ಬೆರೆಸಿ, ಕುಡಿದು ಮಲಗಬೇಕು. ಹೀಗೆ ಕೆಲ ದಿನಗಳ ಕಾಲ ಮಾಡ್ತಾ ಬಂದ್ರೆ ಗೊರಕೆ ಕಡಿಮೆಯಾಗುತ್ತದೆ. ಅರಿಶಿನ ಮಸಾಲೆಯಲ್ಲಿ ಉರಿಯೂತದ ಮತ್ತು ಪ್ರತಿಜೀವಕ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಮೂಗಿನ ದಟ್ಟಣೆಯನ್ನು ತೆಗೆದುಹಾಕುತ್ತದೆ. ಇದರಿಂದ ಗೊರಕೆ ಸಮಸ್ಯೆ ನಿಲ್ಲುತ್ತದೆ.
ಆಲಿವ್ ಎಣ್ಣೆ : ಆಲಿವ್ ಎಣ್ಣೆಯಲ್ಲೂ ಕೂಡ ಸಾಕಷ್ಟು ಔಷಧೀಯ ಗುಣಗಳಿವೆ. ಇದು ಚರ್ಮಕ್ಕೆ ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದೆ. ಆದರೆ ಆಲಿವ್ ಎಣ್ಣೆಯು ಗೊರಕೆ ಕಡಿಮೆ ಮಾಡುತ್ತದೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ರಾತ್ರಿ ಮಲಗುವಾಗ ಆಲಿವ್ ಎಣ್ಣೆಯ ಕೆಲವು ಹನಿಗಳನ್ನು ಮೂಗಿಗೆ ಹಾಕಬೇಕು. ಇದರಿಂದ ಮೂಗಿನ ಊತ ನಿವಾರಣೆಯಾಗುತ್ತದೆ ಮತ್ತು ಉಸಿರಾಟದ ತೊಂದರೆ ಇರುವುದಿಲ್ಲ. ಇದರಿಂದ ಗೊರಕೆ ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ: ಮಧುಮೇಹಿಗಳಿಗೆ ಸೂಪರ್ ಫುಡ್ ಈ ಎಲೆಯ ಚಹಾ..
ಬೆಳ್ಳುಳ್ಳಿ : ಮೂಗಿನ ಸೈನಸ್ ಗೊರಕೆಗೆ ಕಾರಣವಾಗುತ್ತದೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಬೆಳ್ಳುಳ್ಳಿಯಲ್ಲೂ ಔಷಧಿ ಗುಣವಿದ್ದು, ಗೊರಕೆ ವಿಪರೀತವಾಗಿದೆ ಎನ್ನುವವರು ಬೆಳ್ಳುಳ್ಳಿಯ ಕೆಲವು ಮೊಗ್ಗುಗಳನ್ನು ಸೇವಿಸುವುದು ಅವಶ್ಯಕ. ಬೆಳ್ಳುಳ್ಳಿಯನ್ನು ಹುರಿದು ನೀರಿನೊಂದಿಗೆ ಸೇವಿಸಿದರೆ ಗೊರಕೆ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.