
ಭಾರತದಲ್ಲಿ ಅನೇಕ ರೀತಿಯ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಕೃಷಿಯಲ್ಲಿ ಅನೇಕ ರೀತಿಯ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತದೆ. ಮರು ಬಳಕೆ ಮಾಡುವ ಮೂಲಕ ಅವುಗಳನ್ನು ಗೊಬ್ಬರ, ಮೇವು ಅಥವಾ ಇನ್ನಿತರ ಬಳಕೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಹೀಗೆ ನೈಸರ್ಗಿಕವಾಗಿ ಬೆಳೆಯುವ ಆಹಾರ ಪದಾರ್ಥಗಳನ್ನು ಮರುಬಳಕೆ ಮಾಡುವುದರಿಂದ ಅಥವಾ ಸುಡುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಎಂಬ ಕಲ್ಪನೆ ನಮಗಿರುತ್ತದೆ. ಇದು ಸುಳ್ಳು ಎನ್ನುವುದು ಇತ್ತೀಚಿನ ಕೆಲವು ಶೋಧನೆಯಿಂದ ಬೆಳಕಿಗೆ ಬಂದಿದೆ.
ಕಬ್ಬು (Sugarcane) , ಭತ್ತದ ಹೊಟ್ಟು ಸುಡುವುದು ಅತ್ಯಂತ ವಿಷ (Poison)ಕಾರಿ : ಕೃಷಿಕರು ತಮ್ಮ ಹೊಲಗಳಲ್ಲಿ ಬೆಳೆಯುವ ಕಬ್ಬು ಮತ್ತು ಭತ್ತದ ಹೊಟ್ಟುಗಳನ್ನು ಸುಡುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ಕೆಲವು ಅಧ್ಯಯನದ ಪ್ರಕಾರ ಕಬ್ಬು ಮತ್ತು ಭತ್ತದ ಹೊಟ್ಟನ್ನು ಸುಡುವುದರಿಂದ ವಿಷಕಾರಿ ವಸ್ತುಗಳು ವಾತಾವರಣದಲ್ಲಿ ಸೇರಿಕೊಳ್ಳುತ್ತವೆ. ಇದರಿಂದ ಕೃಷಿಕರಲ್ಲಿ ಮೂತ್ರಪಿಂಡದ ಖಾಯಿಲೆ ಉಂಟಾಗುತ್ತದೆ ಎನ್ನುವುದು ತಿಳಿದುಬಂದಿದೆ. ಅನೇಕ ಮಂದಿ ಕಬ್ಬು ಹಾಗೂ ಭತ್ತದ ಕೆಲಸ ಮಾಡುವವರಿಗೆ ಮೂತ್ರಪಿಂಡದ ವೈಫಲ್ಯವಾಗುತ್ತಿದ್ದು, ಹವಾಮಾನ ಬದಲಾವಣೆಯೇ ಇದಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ.
ಯಾವುದೇ ಕಾರಣ ಇಲ್ಲದೇ ದೇಹದ ಮೇಲೆ ಗಾಯದ ಗುರುತು ಕಾಣಿಸೋದು ಯಾಕೆ?
ಭಾರತ, ಶ್ರೀಲಂಕಾ, ಅಮೆರಿಕ ಸೇರಿದಂತೆ ಅನೇಕ ದೇಶದ ಕೃಷಿ ಕಾರ್ಮಿಕರಲ್ಲಿ ಈ ತೊಂದರೆ ಕಾಣಿಸಿಕೊಂಡಿದ್ದು, ಹೀಗೆ ಮೂತ್ರಪಿಂಡದ ವೈಫಲ್ಯವಾಗಲು ಕಬ್ಬು ಮತ್ತು ಭತ್ತದ ಹೊಟ್ಟನ್ನು ಸುಡುವುದೇ ಕಾರಣವಾಗಿರಬಹುದೆಂದು ತಜ್ಞರು ಹೇಳಿದ್ದಾರೆ. ಅನೇಕ ಭತ್ತದ ಬೆಳೆಗಾರರು ಕಟಾವಿನ ನಂತರ ಹೊಟ್ಟನ್ನು ಸುಡುತ್ತಾರೆ. ಈಗ ಕೂಲಿಕಾರರ ಸಮಸ್ಯೆಯಿಂದ ಕೃಷಿಕರು ಬೆಳೆಗಳ ಕಟಾವಿಗೆ ಮಷಿನ್ ಗಳನ್ನು ಅವಲಂಬಿಸಿದ್ದಾರೆ. ಮಷಿನ್ ಗಳ ಸಹಾಯದಿಂದ ಕಟಾವು ಮಾಡಿದಾಗ ಭತ್ತದ ಬುಡದ ಭಾಗಗಳು ಹೆಚ್ಚಿನ ಭಾಗ ಭೂಮಿಯನ್ನೇ ಉಳಿಯುತ್ತದೆ. ಕಟಾವಿನ ನಂತರ ಮತ್ತೆ ಭೂಮಿಯನ್ನು ಹದಗೊಳಿಸಲು ಅವುಗಳನ್ನು ಅಲ್ಲೇ ಸುಡಲಾಗುತ್ತದೆ. ಇದೇ ರೀತಿ ಕಬ್ಬನ್ನು ಕೂಡ ಸುಡಲಾಗುತ್ತದೆ. ಹೀಗೆ ತ್ಯಾಜ್ಯಗಳನ್ನು ಸುಡುವುದರಿಂದ ಅದರಲ್ಲಿನ ಚಿಕ್ಕ ಸಿಲಿಕಾ ಕಣಗಳು ಉಸಿರಾಟ ಹಾಗೂ ನೀರಿನ ಮೂಲಕ ಮನುಷ್ಯರ ಮೂತ್ರಪಿಂಡವನ್ನು ಸೇರಿ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗುತ್ತದೆ.
ಬಂಜೆತನಕ್ಕೆ ಸಂಬಂಧಿಸಿದ 4 ಮಿಥ್ಯೆಗಳು, ಹಿಂದಿನ ಸತ್ಯ ತಿಳ್ಕೊಂಡಿರಿ
ಹೀಗೆ ಕಬ್ಬು ಮತ್ತು ಭತ್ತದ ತ್ಯಾಜ್ಯಗಳನ್ನು ಸುಡುವುದರಿಂದ ವಾಯುಮಾಲಿನ್ಯವಾಗಿ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸುತ್ತಲಿನ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಕೊಲೊರಾಡೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇರೆಡ್ ಬ್ರೌನ್ ಹೇಳಿದ್ದಾರೆ. ಇದರ ಬಗ್ಗೆ ಯಾರೂ ಹೆಚ್ಚು ಗಮನ ಹರಿಸುತ್ತಿಲ್ಲ ಮತ್ತು ಈ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಸುದೀರ್ಘ ಅಧ್ಯಯನಗಳೂ ನಡೆದಿಲ್ಲ. ಆದರೆ ಉಳಿದ ಕಾರ್ಮಿಕರಿಗೆ ಹೋಲಿಸಿದರೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರ ಕಿಡ್ನಿ ಕೋಶಗಳಲ್ಲಿ ಸಿಲಿಕಾ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿದೆ ಎಂದಿದ್ದಾರೆ. ಇದು ಹವಾಮಾನ ಬದಲಾವಣೆಯಿಂದ ಉಂಟಾಗುವ ಹೊಸ ರೋಗ ಎಂದು ಪರಿಗಣಿಸಲಾಗಿದೆ.
ಹೊಲದ ಅಕ್ಕಪಕ್ಕ ಇರುವವರು ಕೂಡ ಜಾಗರೂಕರಾಗಿರಬೇಕು : ಕಬ್ಬು ಅಥವಾ ಭತ್ತವನ್ನು ಸುಡುವುದರಿಂದ ಹವಾಮಾನ ಬದಲಾವಣೆಯ ಮೇಲೆ ಯಾವ ರೀತಿ ಪರಿಣಾಮವಾಗುತ್ತಿದೆ ಎನ್ನುವುದು ಖಚಿತವಾಗಿ ತಿಳಿದಿಲ್ಲವಾದರೂ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾ ಬೀರುತ್ತಿರುವುದು ನಿಜ ಎಂದು ಅಧ್ಯಯನಕಾರ ಜಾನ್ಸನ್ ಹೇಳಿದ್ದಾರೆ. ಈ ಕಾರಣಕ್ಕಾಗಿ ಗದ್ದೆಯ ಅಕ್ಕ ಪಕ್ಕದಲ್ಲಿ ವಾಸಿಸುವ ಜನರು ಕೂಡ ಅತ್ಯಂತ ಜಾಗರೂಕರಾಗಿರಬೇಕೆಂದು ಅವರು ತಿಳಿಸಿದ್ದಾರೆ. ಈಗಾಗಲೇ ಅನೇಕ ಕಡೆಗಳಲ್ಲಿ ಕಬ್ಬು ಮತ್ತು ಭತ್ತದ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗೆ ಲಕ್ಷಗಟ್ಟಲೆ ಟನ್ ತ್ಯಾಜ್ಯಗಳು ಬೆಂಕಿಗೆ ಆಹುತಿಯಾಗುವುದರಿಂದ ಉತ್ಪನ್ನವಾಗುವ ವಿಷಗಾಳಿಯನ್ನು ತಡೆಯಲು ಕೃಷಿ ಇಲಾಖೆ ಸೇರಿದಂತೆ ಅನೇಕರು ಕ್ರಮ ಕೈಗೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.