
ನವದೆಹಲಿ (ಮಾ.20): ವಿಶ್ವದಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ಸೆಮಾಗ್ಲುಟೈಡ್' (Semaglutide) ಎಂಬ ಮಧುಮೇಹ ಮತ್ತು ತೂಕ ಇಳಿಕೆಯ ಔಷಧದ ಬೆಲೆ ಭಾರತದಲ್ಲಿ ಶೇ. 50 ರಿಂದ 70 ರಷ್ಟು ಕುಸಿತ ಕಂಡಿದೆ. ಈ ಹಿಂದೆ ತಿಂಗಳಿಗೆ ಸುಮಾರು ₹11,000 ಇರುತ್ತಿದ್ದ ಇದರ ಬೆಲೆ ಈಗ ಕೇವಲ ₹3,000 ರಿಂದ ₹5,000 ಕ್ಕೆ ಇಳಿಕೆಯಾಗಿದೆ. ಅಚ್ಚರಿಯ ವಿಷಯವೆಂದರೆ, ಅಮೆರಿಕಾ ಮತ್ತು ಯುರೋಪ್ ದೇಶಗಳಲ್ಲಿ ಇದರ ಪೇಟೆಂಟ್ ಇನ್ನೂ ಚಾಲ್ತಿಯಲ್ಲಿರುವುದರಿಂದ ಅಲ್ಲಿನ ಜನ ಈಗಲೂ ದುಬಾರಿ ಬೆಲೆ ತೆರುತ್ತಿದ್ದಾರೆ.
ನೊವೊ ನಾರ್ಡಿಸ್ಕ್ ಕಂಪನಿಯ 'ಓಜೆಂಪಿಕ್', 'ವೆಗೋವಿ' ಮತ್ತು 'ರೈಬೆಲ್ಸಸ್' ಬ್ರ್ಯಾಂಡ್‌ಗಳ ಹಿಂದಿರುವ ಪ್ರಮುಖ ಅಣು ಈ 'ಸೆಮಾಗ್ಲುಟೈಡ್'. ಭಾರತದಲ್ಲಿ ಇದರ ಪೇಟೆಂಟ್ ಮಾರ್ಚ್ 20 ರಂದು ಮುಕ್ತಾಯಗೊಂಡಿದೆ. ಮಾರ್ಚ್ 21 ರಿಂದಲೇ ಭಾರತೀಯ ಕಂಪನಿಗಳು ಇದರ 'ಜೆನೆರಿಕ್' ಆವೃತ್ತಿಗಳನ್ನು ಬಿಡುಗಡೆ ಮಾಡಲು ಮುಕ್ತ ಅವಕಾಶ ಸಿಕ್ಕಿದೆ. ಸನ್ ಫಾರ್ಮಾ, ಡಾ. ರೆಡ್ಡೀಸ್, ಜೈಡಸ್, ಲುಪಿನ್ ಮತ್ತು ಮ್ಯಾನ್‌ಕೈಂಡ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ಮುಂದಿನ ಕೆಲವು ವಾರಗಳಲ್ಲಿ 50ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗೆ ತರಲಿವೆ. ಇದರಿಂದ ಬೆಲೆ ಇನ್ನೂ ಕುಸಿದು ₹1,500 ರಿಂದ ₹2,500 ಕ್ಕೆ ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ
ಸೆಮಾಗ್ಲುಟೈಡ್ ಕೇವಲ ರಕ್ತದ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೆ, ದೇಹದ ತೂಕವನ್ನು ಶೇ. 10-15 ರಷ್ಟು ಇಳಿಸಲು ಸಹಾಯ ಮಾಡುತ್ತದೆ. ಈ ಔಷಧವು ಹೃದಯಾಘಾತದ ಅಪಾಯವನ್ನು ಶೇ. 26 ರಷ್ಟು ಮತ್ತು ಪಾರ್ಶ್ವವಾಯು (Stroke) ಅಪಾಯವನ್ನು ಶೇ. 39 ರಷ್ಟು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗಗಳು ಸಾಬೀತುಪಡಿಸಿವೆ. ಇದು ಮೂತ್ರಪಿಂಡಕ್ಕೆ ರಕ್ಷಣೆ ನೀಡುವುದಲ್ಲದೆ, ಲಿವರ್ ಸಂಬಂಧಿತ ಸಮಸ್ಯೆಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. "ಇಲ್ಲಿಯವರೆಗೆ ನಾವು ಕೇವಲ ಮಧುಮೇಹವನ್ನು ನಿಯಂತ್ರಿಸುತ್ತಿದ್ದೆವು, ಆದರೆ ಈ ಔಷಧವು ಕಾಯಿಲೆಯನ್ನೇ ಮಾರ್ಪಡಿಸುವ ಶಕ್ತಿ ಹೊಂದಿದೆ (Disease Modifying)," ಎನ್ನುತ್ತಾರೆ ತಜ್ಞ ವೈದ್ಯರು.
ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಈ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ಬಳಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ವಾರಕ್ಕೊಮ್ಮೆ ತೆಗೆದುಕೊಳ್ಳುವ ಸಂಕೀರ್ಣ ಇಂಜೆಕ್ಷನ್ ಆಗಿದ್ದು, ಕಟ್ಟುನಿಟ್ಟಾದ ಆಹಾರ ಕ್ರಮದ ಅವಶ್ಯಕತೆ ಇರುತ್ತದೆ. ವಾಕರಿಕೆ ಸಾಮಾನ್ಯ ಅಡ್ಡಪರಿಣಾಮವಾಗಿದ್ದರೆ, ಕೆಲವೊಮ್ಮೆ ಮೇದೋಜ್ಜೀರಕ ಗ್ರಂಥಿಯ ಉರಿಯೂತ (Pancreatitis), ಪಿತ್ತಕೋಶ ಮತ್ತು ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
ಭಾರತದಲ್ಲಿ ಪೇಟೆಂಟ್ ಅವಧಿ ಮುಗಿಯುತ್ತಿದ್ದಂತೆ, ಮೂಲ ಕಂಪನಿಯಾದ ನೊವೊ ನಾರ್ಡಿಸ್ಕ್ ಕೂಡ ತನ್ನ ಬೆಲೆ ಇಳಿಕೆ ಮಾಡಲು ಮುಂದಾಗಿದೆ. ಅಬಾಟ್ ಇಂಡಿಯಾ ಮತ್ತು ಎಮ್‌ಕ್ಯೂರ್ ಅಂತಹ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅತ್ತ ಅಮೆರಿಕಾ ಮತ್ತು ಕೆನಡಾದಲ್ಲಿ ಪೇಟೆಂಟ್ ಇನ್ನೂ ಇರುವುದರಿಂದ ಅಲ್ಲಿನ ಜನರು ಹೆಚ್ಚಿನ ಬೆಲೆ ಪಾವತಿಸುವುದು ಅನಿವಾರ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.