ಸಡಿಲಿಕೆ ಲಾಕ್‍ಡೌನ್‍ಗೆ, ಕೊರೋನಾಕ್ಕಲ್ಲ; ಆಫೀಸ್‍ಗೆ ತೆರಳುವವರು ಎಚ್ಚರ ತಪ್ಪಿದ್ರೆ ಆಪತ್ತು

Suvarna News   | Asianet News
Published : May 25, 2020, 06:31 PM ISTUpdated : Jul 04, 2020, 01:51 PM IST
ಸಡಿಲಿಕೆ ಲಾಕ್‍ಡೌನ್‍ಗೆ, ಕೊರೋನಾಕ್ಕಲ್ಲ; ಆಫೀಸ್‍ಗೆ ತೆರಳುವವರು ಎಚ್ಚರ ತಪ್ಪಿದ್ರೆ  ಆಪತ್ತು

ಸಾರಾಂಶ

ಲಾಕ್‍ಡೌನ್ ಸಡಿಲಿಕೆ ಪರಿಣಾಮ ಕೆಲವರು ಆಫೀಸ್‍ಗೆ ತೆರಳಲೇಬೇಕಾದ ಅನಿವಾರ್ಯತೆಯಿದೆ. ಹಾಗಂತ ಕೊರೋನಾ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಪ್ರತಿ ಕ್ಷಣವೂ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. 

ಲಾಕ್‍ಡೌನ್ ಸಡಿಲಿಕೆ ಮಾಡಿರುವ ಕಾರಣ ಆಫೀಸ್‍ಗಳು ಹಾಗೂ ಉತ್ಪಾದನಾ ಘಟಕಗಳು ಮತ್ತೆ ಬಾಗಿಲು ತೆರೆದಿವೆ. ಹೀಗಾಗಿ ಇಷ್ಟು ದಿನ ಮನೆಯಲ್ಲೇ ಕುಳಿತು ಕೆಲಸ ನಿರ್ವಹಿಸುತ್ತಿದ್ದವರು ಹಾಗೂ ಖಾಲಿ ಕುಳಿತಿದ್ದವರು ಆಫೀಸ್‍ಗೆ ತೆರಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲಾಕ್‍ಡೌನ್ ಸಡಿಲಿಕೆ ಮಾಡಿದ್ದಾರೆ ಎಂದ ಮಾತ್ರಕ್ಕೆ ಕೊರೋನೋತ್ತರ ಕಾಲದಲ್ಲಿ ಹೇಗಿದ್ದೆವೋ ಹಾಗೆಯೇ ಇದ್ದರಾಯ್ತು ಎಂದು ಭಾವಿಸಿಕೊಂಡು ಮೈ ಮರೆತರೆ ಅಪಾಯ ತಪ್ಪಿದ್ದಲ್ಲ. ಅಷ್ಟಕ್ಕೂ ಸಡಿಲಿಕೆ ಮಾಡಿರೋದು ಲಾಕ್‍ಡೌನ್ ಅನ್ನು ಮಾತ್ರ, ಕೊರೋನಾವನ್ನಲ್ಲ. ಅಲ್ಲದೆ, ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಹೀಗಾಗಿ ಆಫೀಸ್‍ಗೆ ಹೋಗಲು ಪ್ರಾರಂಭಿಸಿರುವವರು ಒಂದಿಷ್ಟು ವೈಯಕ್ತಿಕ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳೋದು ಅಗತ್ಯ.

ಗಂಡ, ಮಕ್ಕಳನ್ನು ನೋಡದೆ ಒಂದು ತಿಂಗಳು, ಇದು ನರ್ಸ್‌ಗಳ ಕತೆ!

ಆಫೀಸ್‍ಗೆ ಹೊರಡುವ ಮುನ್ನ
-ಮನೆಯಿಂದ ಹೊರಗೆ ಕಾಲಿಡುವ ಮುನ್ನ ಫೇಸ್ ಮಾಸ್ಕ್ ಧರಿಸಲು ಮರೆಯಬೇಡಿ.
-ಆಲ್ಕೋಹಾಲ್ ಅಂಶವುಳ್ಳ ಹ್ಯಾಂಡ್ ಸ್ಯಾನಿಟೈಸರ್, ಸೋಪ್ ಪೇಪರ್ ಅಥವಾ ಚಿಕ್ಕ ಸೋಪ್ ಕೊಂಡು ಹೋಗಿ.
- ಆಫೀಸ್‍ನಲ್ಲಿ ಬಳಸಲು ಅಗತ್ಯವಾದ ಗ್ಲಾಸ್, ಮಗ್, ಬಾಟಲ್ ಹಾಗೂ ಚಮಚವನ್ನು ನಿಮ್ಮೊಂದಿಗೆ ಕೊಂಡು ಹೋಗಿ.
-ಮನೆಯಿಂದ ಹೊರಡುವಾಗ ಮೊಬೈಲ್ ಚಾರ್ಜ್ ಮಾಡಿಟ್ಟುಕೊಳ್ಳಿ. ಜೊತೆಗೆ ಚಾರ್ಜರ್ ಹಾಗೂ ಪವರ್ ಬ್ಯಾಂಕ್ ಕೊಂಡುಹೋಗಲು ಮರೆಯಬೇಡಿ. ಇದ್ರಿಂದ ಮೊಬೈಲ್ ಬ್ಯಾಟರಿ ಡೆಡ್ ಅಥವಾ ಲೋ ಆದಾಗ ಸಹೋದ್ಯೋಗಿಗಳ ಚಾರ್ಜರ್ ಅಥವಾ ಪವರ್ ಬ್ಯಾಂಕ್ ಮುಟ್ಟುವ ಅವಶ್ಯಕತೆ ಇರೋದಿಲ್ಲ.
-ಆಫೀಸ್ ಕ್ಯಾಬ್ ಬಳಸುವರಾಗಿದ್ರೆ ಅದರೊಳಗಿನ ಯಾವುದೇ ವಸ್ತುವನ್ನು ಅನಗತ್ಯವಾಗಿ ಮುಟ್ಟಬೇಡಿ. ಕ್ಯಾಬ್ ಡೋರ್ ಅಥವಾ ಇನ್ಯಾವುದೇ ಪಾರ್ಟ್ ಮುಟ್ಟಿದ ಬಳಿಕ ಸ್ಯಾನಿಟೈಸರ್‍ನಿಂದ ಕೈಗಳನ್ನು ಸ್ವಚ್ಛಗೊಳಿಸಿ.
-ಒಂದು ವೇಳೆ ನೀವು ನಿಮ್ಮ ಸ್ವಂತ ವಾಹನದಲ್ಲಿ ಆಫೀಸ್‍ಗೆ ಹೋಗುವರಾಗಿದ್ರೆ ಹೆಚ್ಚಾಗಿ ಮುಟ್ಟುವ ಡೋರ್, ಡೋರ್ ಹ್ಯಾಂಡಲ್, ಡ್ಯಾಶ್‍ಬೋರ್ಡ್, ಸ್ಟೇರಿಂಗ್ ವ್ಹೀಲ್, ಗೇರ್ ಲಿವರ್, ಸೀಟ್ ಹಾಗೂ ಸೀಟ್ ಬೆಲ್ಟ್‍ಗಳನ್ನು ಸೋಂಕುನಿವಾರಕ ಸ್ಪ್ರೆ ಅಥವಾ ಇನ್ಯಾವುದೇ ವಸ್ತುಗಳಿಂದ ಸ್ವಚ್ಛಗೊಳಿಸದ ಬಳಿಕವೇ ಬಳಸಿ. ಇದೇ ನಿಯಮವನ್ನು ಟೂ ವ್ಹೀಲರ್‍ಗೂ ಪಾಲಿಸಿ.

ಮಾರ್ಗದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ
-ಮನೆಯಿಂದ ಆಫೀಸ್‍ಗೆ ಟೂ ವ್ಹೀಲರ್‍ನಲ್ಲಿ ಹೊರಡುವ ಸಂದರ್ಭದಲ್ಲಿ ನಿಮ್ಮ ನೆರೆಮನೆಯ ಅಂಕಲ್ ಅಥವಾ ನಿಮ್ಮ ಸ್ನೇಹಿತ ಎದುರಾದರೂ ಅವರನ್ನು ಹತ್ತಿಸಿಕೊಂಡು ಹೋಗುವ ಸಾಹಸಕ್ಕೆ ಮುಂದಾಗಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಂಥದೊಂದು ಅಭ್ಯಾಸ ರೂಢಿಸಿಕೊಳ್ಳೋದು ಅಗತ್ಯ. ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಟೂ ವ್ಹೀಲರ್‍ನಲ್ಲಿ ಒಬ್ಬರೇ ಪ್ರಯಾಣಿಸೋದು ಒಳ್ಳೆಯದು.
-ಕಾರ್‍ನಲ್ಲಿ ಆಫೀಸ್‍ಗೆ ತೆರಳೋದಾದ್ರೆ ಒಬ್ಬರನ್ನು ಕೂರಿಸಿಕೊಂಡ್ರೆ ತೊಂದರೆಯಿಲ್ಲ. ಆದ್ರೆ ನೆನಪಿರಲಿ, ಅವರಿಗೆ ಹಿಂದಿನ ಸೀಟಿನಲ್ಲಿ ಡ್ರೈವರ್ ಹಿಂದಿನ ಸೀಟ್ (ನೀವು ಕುಳಿತುಕೊಳ್ಳುವ ಸೀಟು) ಬಿಟ್ಟು ಪಕ್ಕದಲ್ಲಿ ಕೂರುವಂತೆ ತಿಳಿಸಿ.

ಕೊರೋನಾ ಲಕ್ಷಣಗಳಿಲ್ಲದಿದ್ದರೆ ಹೋಂ ಐಸೋಲೇಷನ್

ಆಫೀಸ್‍ನಲ್ಲಿ ಹೇಗೆ?
-ಆಫೀಸ್‍ನಲ್ಲಿ ಲಿಫ್ಟ್ ಬಳಸುವ ಅಗತ್ಯವಿದ್ದಾಗ ಲಿಫ್ಟ್ ಬಟನ್‍ಗಳನ್ನು ಕೈಗಳಿಂದ ಮುಟ್ಟಬೇಡಿ. ಟಿಶ್ಯೂ ಅಥವಾ ಅದಕ್ಕಾಗಿಯೇ ಇರುವ ಸ್ಟಿಕ್ ಮೂಲಕ ಮುಟ್ಟಿ. ಮೆಟ್ಟಿಲುಗಳನ್ನು ಹತ್ತುವಾಗ ಆಧಾರಕ್ಕೆಂದಿರುವ ಗೋಡೆ ಅಥವಾ ರೈಲಿಂಗ್ ಅನ್ನು ಯಾವುದೇ ಕಾರಣಕ್ಕೂ ಕೈಗಳಿಂದ ಮುಟ್ಟಬೇಡಿ.
-ಲಿಫ್ಟ್ ಒಳಗೆ 2-3 ಜನರಿಗಿಂತ ಹೆಚ್ಚಿದ್ರೆ ಹೋಗಬೇಡಿ. ಹಾಗೆಯೇ ಲಿಫ್ಟ್‍ನೊಳಗೆ ಇನ್ನೊಬ್ಬರಿಗೆ ಎದುರಾಗಿ ನಿಲ್ಲಬೇಡಿ. 
-ಯಾವುದೇ ಕಾರಣಕ್ಕೂ ಫೇಸ್ ಮಾಸ್ಕ್ ತೆಗೆಯಬೇಡಿ. ಹಾಗೆಯೇ ಪದೇಪದೆ ಕೈಗಳಿಂದ ಮಾಸ್ಕ್ ಅನ್ನು ಮುಟ್ಟಬೇಡಿ. ಪ್ರತಿದಿನ ಒಂದೇ ಮಾಸ್ಕ್ ಬಳಸಬಾರದು ಎಂಬ ಸೂಚನೆ ಆರೋಗ್ಯ ಇಲಾಖೆಯಿಂದ ಇದೆ. ಹಾಗಾಗಿ 2-3 ಮಾಸ್ಕ್‍ಗಳನ್ನಿಟ್ಟುಕೊಂಡು ಒಂದಾದ ಬಳಿಕ ಇನ್ನೊಂದನ್ನು ಬಳಸೋದು ಸುರಕ್ಷಿತ.
-ಆಫೀಸ್‍ನಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ನಿಮ್ಮ ಡೆಸ್ಕ್, ಲ್ಯಾಪ್‍ಟಾಪ್‍ಗಳನ್ನು ಸೋಂಕುಮುಕ್ತಗೊಳಿಸಿ. ನೀವು ಮತ್ತು ನಿಮ್ಮ ಸಹೋದ್ಯೋಗಿಯ ಸೀಟ್ ನಡುವೆ ಅಂತರವಿರಲಿ.
-ಜನರೊಂದಿಗೆ ಮಾತನಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೈ ಕುಲುಕುವುದನ್ನು ಆದಷ್ಟು ನಿರ್ಲಕ್ಷಿಸಿ. ಮೀಟಿಂಗ್ ಸಮಯದಲ್ಲಿ ಕೋಣೆಯಲ್ಲಿ ಹೆಚ್ಚಿನ ಜನರು ಇರದಂತೆ ಎಚ್ಚರ ವಹಿಸಿ. ಇದ್ರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತದೆ.
-ಆಫೀಸ್‍ನಲ್ಲಿ ಡೋರ್ ಹ್ಯಾಂಡಲ್ ಮುಟ್ಟಿದ್ರೆ ತಕ್ಷಣ ನಿಮ್ಮ ಕೈಗಳನ್ನು ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸಿ.
-ಊಟ ಅಥವಾ ಯಾವುದೇ ತಿನಿಸು ತಿನ್ನುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಗುಂಪಿನಲ್ಲಿ ಊಟ ಮಾಡುವಾಗ ಇತರರಿಂದ ಅಂತರ ಕಾಯ್ದುಕೊಳ್ಳಿ.

ಈ ಸಮಸ್ಯೆ ಇರುವವರು ಜಗತ್ತಿನಲ್ಲಿ ಹತ್ತಿರತ್ತಿರ ನೂರು ಮಂದಿ ಮಾತ್ರ!

ಮನೆಗೆ ಹಿಂತಿರುಗಿದ ಬಳಿಕ
-ಮನೆಗೆ ಬಂದ ತಕ್ಷಣ ಸ್ನಾನ ಮಾಡಿ. ನೀವು ಧರಿಸಿರುವ ಬಟ್ಟೆಗಳನ್ನು ವಾಷ್ ಮಾಡಿ ಅಥವಾ ವಾಷಿಂಗ್ ಮಷಿನ್‍ಗೆ ಹಾಕಿ. ಇತರ ಬಟ್ಟೆಗಳೊಂದಿಗೆ ಈ ಬಟ್ಟೆಯನ್ನು ವಾಷಿಂಗ್ ಮಷಿನ್‍ಗೆ ಹಾಕಲೇಬೇಡಿ.
--ಶೂಗಳನ್ನು ಮನೆಯ ಹೊರಗೇ ಕಳಚಿಡಿ.
-ಸಾಕ್ಸ್, ಹ್ಯಾಂಡ್ ಕರ್ಚಿಫ್‍ಗಳನ್ನು ಕೂಡ ವಾಷ್ ಮಾಡಿ.
-ಮಾಸ್ಕ್ ವಾಷ್ ಮಾಡಿ ಒಣಗಿಸಿ. ಇಲ್ಲವೆ ಅದನ್ನು ಒಂದು ದಿನ ಬಿಟ್ಟು ಬಳಸಿ.
-ಮೊಬೈಲ್ ಹಾಗೂ ಆಫೀಸ್‍ಗೆ ತೆಗೆದುಕೊಂಡು ಹೋದ ಇತರ ವಸ್ತುಗಳನ್ನು ಸ್ಯಾನಿಟೈಸರ್ ಅಥವಾ ಸೋಂಕು ನಿವಾರಕ ಲಿಕ್ವಿಡ್‍ನಿಂದ ಕ್ಲೀನ್ ಮಾಡಿ.
-ಎಲ್ಲಕ್ಕಿಂತ ಮುಖ್ಯವಾಗಿ ಜ್ವರ, ಶೀತ, ಕೆಮ್ಮು ಸೇರಿದಂತೆ ಅನಾರೋಗ್ಯವಿರುವಾಗ ಯಾವುದೇ ಕಾರಣಕ್ಕೂ ಆಫೀಸ್‍ಗೆ ಹೋಗಬೇಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..