ಎದೆಯಲ್ಲಿ ಸೂಜಿ ಚುಚ್ಚಿದಂತಹ ಅನುಭವ… ನಿಮಗೂ ಆಗಿದ್ಯಾ? ಇಗ್ನೋರ್ ಮಾಡಿದ್ರೆ ಜೀವಕ್ಕೂ ಅಪಾಯ!

Published : Nov 09, 2026, 04:45 PM IST
Heart attack

ಸಾರಾಂಶ

Pleuritic Pain: ಎದೆಯಲ್ಲಿ ಸೂಜಿ ಚುಚ್ಚಿದಂತೆ ನೋವು ಕಾಣಿಸಿಕೊಳ್ಳುತ್ತಿದೆಯೇ? ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ಎದೆನೋವು ಹೆಚ್ಚಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಗಂಭೀರ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಹಾಗಾಗಿ ಇಂತಹ ಸಮಸ್ಯೆ ಕಂಡು ಬಂದ ತಕ್ಷಣ, ವೈದ್ಯರಲ್ಲಿ ಭೇಟಿ ನೀಡೋದನ್ನು ಮರಿಬೇಡಿ.

ಎದೆಯಲ್ಲಿ ಸೂಜಿ ಚುಚ್ಚಿದ ಅನುಭವ ಆಗುತ್ತಾ?

ಮಹಾರಾಷ್ಟ್ರದ ನಾಯಕ ಹಾಗೂ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಆರೋಗ್ಯದ ಕುರಿತು ಇತ್ತೀಚೆಗೆ ಸುದ್ದಿಗಳು ಹೊರಬಂದಿದ್ದವು. ಕೆಲವು ದಿನಗಳ ಹಿಂದೆ ಅವರಿಗೆ ಎದೆಯಲ್ಲಿ ಚುಚ್ಚುವ ರೀತಿಯ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ತಪಾಸಣೆ ನಡೆಸಿ, ಅವರ ನೋವನ್ನು ಪ್ಲೂರಿಟಿಕ್ ಪೇನ್ (Pleuritic Pain) ಎಂದು ಗುರುತಿಸಿದ್ದರು. ನವೆಂಬರ್ 4ರಂದು ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಇದಾದ ಬಳಿಕ ಪ್ಲೂರಿಟಿಕ್ ಪೇನ್ ಬಗ್ಗೆ ಚರ್ಚೆ ಆರಂಭವಾಗಿದ್ದು, ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಅಷ್ಟಕ್ಕೂ ಪ್ಲೂರಿಟಿಕ್ ಪೇನ್ ಎಂದರೇನು? ಎದೆಯಲ್ಲಿ ಸೂಜಿ ಚುಚ್ಚಿದಂತೆ ನೋವು ಏಕೆ ಕಾಣಿಸಿಕೊಳ್ಳುತ್ತದೆ? ಇಲ್ಲಿದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ.

ಪ್ಲೂರಿಟಿಕ್ ಪೇನ್ ಎಂದರೇನು?

ಪ್ಲೂರಿಟಿಕ್ ಪೇನ್ ಎದೆಯಲ್ಲಿ ಕಾಣಿಸಿಕೊಳ್ಳುವ ಒಂದು ನಿರ್ದಿಷ್ಟ ರೀತಿಯ ನೋವು. ಸಾಮಾನ್ಯವಾಗಿ ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ಈ ನೋವು ಹೆಚ್ಚಾಗುತ್ತದೆ. ಎದೆಯ ಒಳಗೆ ಯಾರೋ ಸೂಜಿ ಚುಚ್ಚುತ್ತಿರುವಂತೆ ವ್ಯಕ್ತಿಗೆ ಅನುಭವವಾಗಬಹುದು. ನಮ್ಮ ಶ್ವಾಸಕೋಶಗಳ ಸುತ್ತಲೂ ಒಂದು ತೆಳುವಾದ ಪೊರೆ ಇರುತ್ತದೆ. ಇದನ್ನು ಪ್ಲೂರಾ (Pleura) ಎಂದು ಕರೆಯಲಾಗುತ್ತದೆ. ಈ ಪೊರೆಯು ಎರಡು ಪದರಗಳನ್ನು ಹೊಂದಿರುತ್ತದೆ. ಈ ಎರಡು ಪದರಗಳ ನಡುವೆ ಸ್ವಲ್ಪ ಪ್ರಮಾಣದ ದ್ರವವಿರುತ್ತದೆ. ನಾವು ಉಸಿರಾಡುವಾಗ ಎರಡೂ ಪದರಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ಈ ದ್ರವವು ಸಹಾಯ ಮಾಡುತ್ತದೆ. ಆದರೆ, ಈ ಪೊರೆಯಲ್ಲಿ ಉರಿಯೂತ ಅಥವಾ ಕಿರಿಕಿರಿ ಉಂಟಾದಾಗ ಉಸಿರಾಡುವ ಸಮಯದಲ್ಲಿ ಎರಡೂ ಪದರಗಳು ಪರಸ್ಪರ ಘರ್ಷಣೆಗೆ ಒಳಗಾಗಿ ಇದರಿಂದ ಎದೆಯಲ್ಲಿ ತೀವ್ರವಾದ ಮತ್ತು ಚುಚ್ಚುವ ರೀತಿಯ ನೋವು ಕಾಣಿಸಿಕೊಳ್ಳುತ್ತದೆ. ಆದರೆ, ಪ್ಲೂರಿಟಿಕ್ ಪೇನ್ ಸ್ವತಃ ಒಂದು ಕಾಯಿಲೆಯಲ್ಲ. ಇದು ದೇಹದಲ್ಲಿ ಬೇರೊಂದು ಆರೋಗ್ಯ ಸಮಸ್ಯೆ ಇರುವುದರ ಸೂಚನೆಯಾಗಿರಬಹುದು.

ಪ್ಲೂರಿಟಿಕ್ ಪೇನ್ ಕಾಣಿಸಿಕೊಳ್ಳಲು ಕಾರಣಗಳೇನು?

1.ಪ್ಲೂರಿಸಿ (Pleurisy)

ಪ್ಲೂರಿಸಿ ಸಮಸ್ಯೆಯಲ್ಲಿ ಶ್ವಾಸಕೋಶಗಳನ್ನು ಆವರಿಸಿರುವ ಪೊರೆಯಲ್ಲಿ ಉರಿಯೂತ ಉಂಟಾಗುತ್ತದೆ. ಇದರಿಂದ ಉಸಿರಾಡುವಾಗ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಈ ನೋವು ಭುಜ ಮತ್ತು ಬೆನ್ನಿನವರೆಗೂ ಹರಡಬಹುದು.

2. ನ್ಯುಮೋನಿಯಾ (Pneumonia)

ನ್ಯುಮೋನಿಯಾ ಶ್ವಾಸಕೋಶಗಳಲ್ಲಿ ಉಂಟಾಗುವ ಸೋಂಕು. ಈ ಸೋಂಕಿನಿಂದ ಶ್ವಾಸಕೋಶಗಳಲ್ಲಿ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ರೋಗಿಗಳಲ್ಲಿ ಸೋಂಕು ಪ್ಲೂರಾ ಪೊರೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಉಸಿರಾಡುವಾಗ ಅಥವಾ ಕೆಮ್ಮುವಾಗ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

3. ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Pulmonary Embolism)

ಪ್ಲೂರಿಟಿಕ್ ಪೇನ್‌ಗೆ ಇದು ಒಂದು ಗಂಭೀರ ಕಾರಣವಾಗಿರಬಹುದು. ದೇಹದ ಯಾವುದಾದರೂ ಭಾಗದಲ್ಲಿ ಉಂಟಾದ ರಕ್ತದ ಹೆಪ್ಪುಗಟ್ಟುವಿಕೆ ಶ್ವಾಸಕೋಶದ ರಕ್ತನಾಳಕ್ಕೆ ತಲುಪಿ ರಕ್ತದ ಹರಿವನ್ನು ತಡೆಯಬಹುದು. ಇದರಿಂದ ಹಠಾತ್ ಎದೆನೋವು, ಉಸಿರಾಟದ ತೊಂದರೆ ಮತ್ತು ಕೆಲವೊಮ್ಮೆ ಕೆಮ್ಮುವಾಗ ರಕ್ತ ಬರುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.

4. ನ್ಯುಮೋಥೊರಾಕ್ಸ್ (Pneumothorax)

ಈ ಸಮಸ್ಯೆಯಲ್ಲಿ ಶ್ವಾಸಕೋಶ ಮತ್ತು ಎದೆಯ ಗೋಡೆಯ ನಡುವಿನ ಜಾಗದಲ್ಲಿ ಗಾಳಿ ಸಂಗ್ರಹವಾಗುತ್ತದೆ. ಇದರಿಂದ ಶ್ವಾಸಕೋಶವು ಸಂಪೂರ್ಣವಾಗಿ ಕುಗ್ಗಬಹುದು. ಹಠಾತ್ ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

5. ಕಾಸ್ಟೋಕಾಂಡ್ರೈಟಿಸ್ (Costochondritis)

ಈ ಸಮಸ್ಯೆಯಲ್ಲಿ ಪಕ್ಕೆಲುಬುಗಳು ಮತ್ತು ಎದೆಯ ಮೂಳೆಯನ್ನು ಸಂಪರ್ಕಿಸುವ ಕಾರ್ಟಿಲೆಜ್‌ನಲ್ಲಿ ಉರಿಯೂತ ಉಂಟಾಗುತ್ತದೆ. ಇದರಿಂದ ಎದೆಯಲ್ಲಿ ನೋವು ಅಥವಾ ಚುಚ್ಚುವ ಅನುಭವವಾಗಬಹುದು.

ಪ್ಲೂರಿಟಿಕ್ ಪೇನ್‌ನ ಲಕ್ಷಣಗಳೇನು?

  • ಆಳವಾಗಿ ಉಸಿರಾಡುವಾಗ ಎದೆಯಲ್ಲಿ ಸೂಜಿ ಚುಚ್ಚಿದಂತೆ ನೋವು.
  • ಕೆಮ್ಮುವಾಗ ಅಥವಾ ಸೀನುವಾಗ ನೋವು ಹೆಚ್ಚಾಗುವುದು.
  • ಎದೆಯ ಒಂದು ಭಾಗದಲ್ಲಿ ತೀವ್ರವಾದ ನೋವು.
  • ನೋವು ಭುಜ ಅಥವಾ ಬೆನ್ನಿನವರೆಗೆ ಹರಡುವುದು.
  • ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
  • ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುವುದು.
  • ಚಳಿ ಅಥವಾ ನಡುಕ ಉಂಟಾಗುವುದು.
  • ದೌರ್ಬಲ್ಯ ಅನುಭವವಾಗುವುದು.

ಯಾರಿಗೆ ಪ್ಲೂರಿಟಿಕ್ ಪೇನ್ ಅಪಾಯ ಹೆಚ್ಚಿರುತ್ತದೆ?

  • ಈ ನೋವು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ವ್ಯಕ್ತಿಯ ಜೀವನಶೈಲಿ, ಆರೋಗ್ಯ ಸ್ಥಿತಿ ಮತ್ತು ವಯಸ್ಸಿನ ಮೇಲೆ ಇದರ ಅಪಾಯ ಅವಲಂಬಿತವಾಗಿರುತ್ತದೆ.
  • ಈ ಕೆಳಗಿನ ಆರೋಗ್ಯ ಸಮಸ್ಯೆಗಳಿರುವವರಿಗೆ ಪ್ಲೂರಿಟಿಕ್ ಪೇನ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರಬಹುದು:
  • ಶ್ವಾಸಕೋಶದ ಸೋಂಕು ಅಥವಾ ನ್ಯುಮೋನಿಯಾ.
  • ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದು.
  • ರಕ್ತ ಹೆಪ್ಪುಗಟ್ಟುವ ಸಮಸ್ಯೆ.
  • ಕ್ಷಯರೋಗ (ಟಿಬಿ).
  • ಶ್ವಾಸಕೋಶದ ಕಾಯಿಲೆಗಳು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೀಪಾವಳಿಗೆ ಬಗೆ ಬಗೆಯ ಸ್ವೀಟ್ಸ್, ತಿಂಡಿ ತಿಂದು ಹೊಟ್ಟೆ, ದೇಹ ಎರಡೂ ಹಾಳಾಗಿದ್ಯಾ? ಹೀಗೆ ಡಿಟಾಕ್ಸ್ ಮಾಡಿ!
ತಂಗಳನ್ನ ದೇವಲೋಕದ ಅಮೃತಕ್ಕೆ ಸಮಾನ; ಹೇಗೆ ತಿಂದರೆ ದೇಹಕ್ಕೆ ಪ್ರಯೋಜನ? ಯಾರು ತಿನ್ನಬಾರದು?