
ಇತ್ತೀಚಿನ ದಿನಗಳಲ್ಲಿ ಪುರುಷರ ಫಲವತ್ತತೆ ದರಗಳು(Male fertility rates) ಸ್ಥಿರವಾಗಿ ಕುಸಿಯುತ್ತಿದ್ದು, ಈ ಕುಸಿತಕ್ಕೆ ಪ್ರಮುಖ ಕಾರಣಗಳನ್ನು ಹುಡುಕುವ ಹೊಸ ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಕೃಷಿಯಲ್ಲಿ ವ್ಯಾಪಕವಾಗಿ ಬಳಸುವ ಸಾಮಾನ್ಯ ನಿಯೋನಿಕೋಟಿನಾಯ್ಡ್ಸ್ (Neonicotinoids) ಎಂಬ ಕೀಟನಾಶಕಗಳು ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿವೆ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ನಿರಂತರವಾಗಿ ಕಡಿಮೆ ಮಾಡುತ್ತಿವೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಈ ಕೀಟನಾಶಕಗಳು ಪ್ರಯೋಗಾಲಯದಲ್ಲಿ ಬೆಳೆಸಿದ ಗಂಡು ಪ್ರಾಣಿಗಳ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ ಮತ್ತು ಅವುಗಳ ಸಂತಾನೋತ್ಪತ್ತಿ ವ್ಯವಸ್ಥೆಗೆ ಹಾನಿ ಮಾಡುತ್ತವೆ ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ. ಈ ರಾಸಾಯನಿಕಗಳ ವ್ಯಾಪಕ ಬಳಕೆಯಿಂದಾಗಿ, ಅವು ಮಾನವರ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನಡೆದ ಅಧ್ಯಯನಗಳ ಸಾರಾಂಶವನ್ನು ಒಳಗೊಂಡಿರುವ ಹೊಸ ವಿಮರ್ಶೆಯು 'ಎನ್ವಿರಾನ್ಮೆಂಟಲ್ ರಿಸರ್ಚ್ ಜರ್ನಲ್'ನಲ್ಲಿ ಪ್ರಕಟಗೊಂಡಿದೆ. ಈ ವಿಮರ್ಶೆ 2005 ಮತ್ತು 2025 ರ ನಡುವೆ ನಡೆಸಲಾದ 21 ಪ್ರಯೋಗಗಳನ್ನು ವಿಶ್ಲೇಷಿಸಿದ್ದು, ನಿಯೋನಿಕೋಟಿನಾಯ್ಡ್ ರಾಸಾಯನಿಕಗಳಿಗೆ ಒಡ್ಡಿಕೊಂಡ ಗಂಡು ಇಲಿಗಳು ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ರಚನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಿವೆ. ಅಷ್ಟೇ ಅಲ್ಲದೆ, ಅವುಗಳಲ್ಲಿ ವೃಷಣ ಅಂಗಾಂಶಕ್ಕೆ ಹಾನಿಯಾಗಿರುವುದು ಸಹ ದೃಢಪಟ್ಟಿದೆ. ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಮತ್ತು ಅಧ್ಯಯನದ ಪ್ರಮುಖ ಲೇಖಕಿ ಸುಮೈಯಾ ಎಸ್. ಇರ್ಫಾನ್ ಅವರು, 'ಈ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ, ಹಾರ್ಮೋನುಗಳ ಅಸಮತೋಲನ ಉಂಟಾಗುತ್ತದೆ ಮತ್ತು ವೃಷಣ ಅಂಗಾಂಶಕ್ಕೆ ಹಾನಿಯಾಗುತ್ತದೆ' ಎಂದು ಹೇಳಿದ್ದಾರೆ. ಆಹಾರದಲ್ಲಿನ ಕೀಟನಾಶಕಗಳ ಉಳಿಯುವಿಕೆ ಕ್ರಮೇಣ ಫಲವತ್ತತೆಯ ಮೇಲೆ ಪರಿಣಾಮ ಬೀರುವುದರಿಂದ ಈ ಅಧ್ಯಯನವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಸಹೋದ್ಯೋಗಿ ವೆರೋನಿಕಾ ಜಿ. ಸ್ಯಾಂಚೆಜ್ ಹೇಳಿದ್ದಾರೆ.
ಈ ಸಂಶೋಧನೆಯು ಪ್ರಾಣಿಗಳ ಮೇಲೆ ನಡೆಸಿದ್ದರೂ, ಎಲ್ಲಾ ಸಸ್ತನಿಗಳಲ್ಲಿ ವೀರ್ಯ ಉತ್ಪಾದನೆಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ಆದ್ದರಿಂದ ಪ್ರಾಣಿಗಳಲ್ಲಿ ಕಂಡುಬರುವ ಪರಿಣಾಮಗಳು ಮನುಷ್ಯರ ಆರೋಗ್ಯಕ್ಕೂ ಕಳವಳಕಾರಿ ವಿಷಯವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಮೂರು ವರ್ಷಕ್ಕಿಂತ ಮೇಲ್ಪಟ್ಟ ಅರ್ಧದಷ್ಟು ಜನರ ದೇಹದಲ್ಲಿ ಈ ನಿಯೋನಿಕೋಟಿನಾಯ್ಡ್‌ಗಳ ರಾಸಾಯನಿಕ ಕುರುಹುಗಳು ಕಂಡುಬಂದಿವೆ ಮತ್ತು ಮಕ್ಕಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಿದೆ. ಈ ಕೀಟನಾಶಕಗಳು ಸಸ್ಯಗಳಲ್ಲಿ ಸಂಪೂರ್ಣವಾಗಿ ಹೀರಲ್ಪಡುವುದರಿಂದ, ಹಣ್ಣುಗಳು ಮತ್ತು ತರಕಾರಿಗಳನ್ನು ನೀರಿನಲ್ಲಿ ತೊಳೆದರೂ ಸಹ ಅವುಗಳ ಕುರುಹುಗಳು ಉಳಿದಿರುತ್ತವೆ. ಸಂಶೋಧನೆಯ ಪ್ರಕಾರ, ಈ ರಾಸಾಯನಿಕಗಳು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತವೆ. ಇದು ವೀರ್ಯ ಕೋಶಗಳು ಮತ್ತು ಡಿಎನ್‌ಎಗೆ ಹಾನಿಯನ್ನುಂಟುಮಾಡಿ, ಹಾರ್ಮೋನ್ ಸಿಗ್ನಲಿಂಗ್ ಮೇಲೆ ಪರಿಣಾಮ ಬೀರಿ, ವೀರ್ಯ ಉತ್ಪಾದನೆಯನ್ನು ಅಡ್ಡಿಪಡಿಸುತ್ತವೆ. ಅಂತಿಮವಾಗಿ ಇದು ವೀರ್ಯ ಚಲನಶೀಲತೆ ಮತ್ತು ಪುರುಷರ ಫಲವತ್ತತೆ ಕಡಿಮೆಯಾಗಲು ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.