Heart Attack Risk: ಈ ಸ್ವಭಾವ ಇದ್ದೋರಿಗೆ, ಹೃದ್ರೋಗ ಕಾಡೋದು ಹೆಚ್ಚು

Published : Jun 03, 2022, 05:23 PM IST
Heart Attack Risk: ಈ ಸ್ವಭಾವ ಇದ್ದೋರಿಗೆ, ಹೃದ್ರೋಗ ಕಾಡೋದು ಹೆಚ್ಚು

ಸಾರಾಂಶ

ನಿಮ್ಮದು ಟೈಪ್‌ ಎ ವ್ಯಕ್ತಿತ್ವವೇ? ಅಂದರೆ, ನೀವು ಶಾಂತ ಮನಸ್ಥಿತಿ ಹೊಂದಿಲ್ಲವೇ? ಸ್ವಲ್ಪ ಆತುರಾತುರದ ಸ್ವಭಾವ ನಿಮ್ಮದೇ? ಗಡಿಬಿಡಿಯ ಜೀವನಶೈಲಿ ಹೊಂದಿದ್ದೀರಾ? ಡೆಡ್‌ ಲೈನ್‌ ನಲ್ಲಿ ಕೆಲಸ ಮುಗಿಸಬೇಕಾದ ಒತ್ತಡವಿದೆಯೇ? ಹಾಗಿದ್ದರೆ ನಿಮಗೆ ಹೃದಯಾಘಾತದ ಅಪಾಯ ಹೆಚ್ಚು.  

'ನಿನ್ನೆ ಚೆನ್ನಾಗಿದ್ದ ವ್ಯಕ್ತಿ ಇಂದಿಲ್ಲವಂತೆʼ ಎನ್ನುವ ಸುದ್ದಿಯನ್ನು ದಿನದಿನವೂ ಕೇಳುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಿ (Heart Attack)  ಸಾವಿಗೀಡಾಗುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೋನಾ (Corona) ಬಳಿಕ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿರುವುದು ಎಲ್ಲರ ಗಮನಕ್ಕೂ ಬಂದಿರುವ ಸಂಗತಿ. ಇದಕ್ಕೆ ನಿಖರ ಕಾರಣ ಅರಿಯುವ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಾಮಾನ್ಯವಾಗಿ, ಕೆಲವು ಸ್ವಭಾವದ ಜನರಿಗೆ ಹೃದಯಾಘಾತದ ಆತಂಕ ಹಾಗೂ ಸಮಸ್ಯೆ ಹೆಚ್ಚು ಎನ್ನುವುದು ಇದುವರೆಗಿನ ಅನುಭವ ಮತ್ತು ಅಧ್ಯಯನಗಳಿಂದ (Study) ತಿಳಿದುಬಂದಿರುವ ವಿಚಾರ.
ಕಾರ್ಡಿಯಾಕ್‌ ಅರೆಸ್ಟ್‌ (Cardiac Arrest) ಹಾಗೂ ಹೃದಯಾಘಾತ ಇಂದು ಎಷ್ಟು ಸಾಮಾನ್ಯವಾಗಿದೆ ಎಂದರೆ ಪ್ರತಿ ಕುಟುಂಬಕ್ಕೂ ಒಂದಲ್ಲ ಒಂದು ರೀತಿ ಇದರ ಅನುಭವವಾಗುತ್ತಿದೆ. ತಾಳ್ಮೆಯಿಲ್ಲದ (Impatient), ಆಕ್ರಮಣಕಾರಿ (Aggressive) ಹಾಗೂ ಹೆಚ್ಚು ಸ್ಪರ್ಧಾತ್ಮಕ ಮನೋಭಾವ (Competitive) ಹೊಂದಿರುವವರನ್ನು ಟೈಪ್‌ ಎ ವ್ಯಕ್ತಿತ್ವ (Type A Personality) ಎಂದು ಪರಿಗಣಿಸಲಾಗುತ್ತದೆ. ಇವರಿಗೆ ಹೃದಯಾಘಾತದ ಸಮಸ್ಯೆ ಹೆಚ್ಚು. ಜತೆಗೆ, ಕೆಲವು ಪರಿಸ್ಥಿತಿಗಳೂ ಇದರ ಅಪಾಯವನ್ನು ಹೆಚ್ಚಿಸುತ್ತವೆ.


•    ಸಮಯದ ಒತ್ತಡ (Time Pressure)
ಡೆಡ್‌ ಲೈನ್‌ ಒತ್ತಡವಿರುವ ಕೆಲಸಗಳಲ್ಲಿ ಕೆಲಸ ಮಾಡುವವರಿಗೆ ಹೃದಯದ ಸಮಸ್ಯೆ ಹೆಚ್ಚು. ಯಾವುದೇ ಕೆಲಸವಾದರೂ ಅಷ್ಟೆ, ಸಮಯದ ಮಿತಿಯಲ್ಲಿ ಮಾಡಬೇಕಾದಾಗ ಅದರಿಂದ ಒಂದಿಷ್ಟು ಒತ್ತಡ ನಿರ್ಮಾಣವಾಗುವುದು ಸಹಜ. ಇದರೊಂದಿಗೆ ನೀವು ತಾಳ್ಮೆಯಿಲ್ಲದ, ಸಹನೆ ಹೊಂದಿರದ, ಅಗ್ರೆಸಿವ್‌ ಮತ್ತು ಅತಿಯಾದ ಸ್ಪರ್ಧಾತ್ಮ ಗುಣ ಹೊಂದಿದ್ದರೆ ಇನ್ನಷ್ಟು ರಿಸ್ಕ್‌ ಖಚಿತ. ಯಾವುದೋ ಒಂದು ಬೇಡಿಕೆಯನ್ನು ಪೂರೈಸಲು ನಿಮ್ಮ ಮೇಲೆ ಅಧಿಕವಾದ ಒತ್ತಡ ನಿರ್ಮಾಣಗುತ್ತಿದ್ದರೆ ಹೃದಯದ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಕೆಲಸ ಯಾವುದೇ ಇರಲಿ, ಒತ್ತಡವಿಲ್ಲದೆ ಮಾಡುವುದಕ್ಕೆ ಆದ್ಯತೆ ನೀಡಬೇಕು.

•    ಮಲ್ಟಿ ಟಾಸ್ಕಿಂಗ್‌ (Multitasking)
ಮಲ್ಟಿಟಾಸ್ಕಿಂಗ್‌ ಶಬ್ದ ಮಹಿಳೆಯರ ವಿಚಾರದಲ್ಲಿ ಹೆಚ್ಚು ಬಳಕೆಯಾಗುತ್ತಿರುತ್ತದೆ. ಅಂದರೆ, ಏಕಕಾಲದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸುವುದು. ಮಕ್ಕಳ ಪಾಲನೆ, ಉದ್ಯೋಗ, ಮನೆ ಎಲ್ಲವನ್ನೂ ನಿಭಾಯಿಸುವವರಿಗೆ ಹೇಳುವುದು ಹೆಚ್ಚು. ಪುರುಷರಾಗಲೀ ಮಹಿಳೆಯಾಗಲೀ ಎಲ್ಲರಿಗೂ ಮಲ್ಟಿಟಾಸ್ಕಿಂಗ್‌ ಜವಾಬ್ದಾರಿ ಇದ್ದೇ ಇರುತ್ತದೆ. ಅದರಿಂದ ಒಂದಿಷ್ಟು ಒತ್ತಡವಾಗುವುದು ಸಹಜ. ಜತೆಗೆ, ಡ್ರೈವ್‌ ಮಾಡುವಾಗ ಮೆಸೇಜ್‌ ಮಾಡುವ, ಫೋನ್‌ ನಲ್ಲಿ ಮಾತನಾಡುವ ಅಥವಾ ಊಟ ಮಾಡುತ್ತ ಟಿವಿ ವೀಕ್ಷಣೆ ಮಾಡುವ ಗುಣ ನಿಮ್ಮದಾಗಿದ್ದರೆ ಇದೂ ಸಹ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ, ಈ ಅಭ್ಯಾಸಗಳಿಂದ ಗೊತ್ತಿಲ್ಲದೆ ಒತ್ತಡ ಹೆಚ್ಚಾಗುತ್ತದೆ. 

•    ಭಾವನೆಗಳ ನಿಯಂತ್ರಣ (Emotional Control)
ಬಹಳಷ್ಟು ಜನರು ಮುಖ್ಯವಾಗಿ ಪುರುಷರು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು, ಹತ್ತಿಕ್ಕುವುದು ಹೆಚ್ಚು. ಯಾರೊಂದಿಗೂ ಮನಬಿಚ್ಚಿ ಮಾತನಾಡದೆ ಇರುವುದು, ಭಾವನೆಗಳನ್ನು ನಿಯಂತ್ರಣ ಮಾಡುವುದು, ಅಳುವುದಕ್ಕೆ ಹಿಂದೇಟು ಹಾಕುವುದು, ಕೋಪ-ನಿರಾಸೆಗಳನ್ನು ಹತ್ತಿಕ್ಕುವುದನ್ನು ಮಾಡುತ್ತಾರೆ. ಇದರಿಂದ ಅವರ ಹೃದಯಕ್ಕೆ ಸಮಸ್ಯೆಯಾಗುತ್ತದೆ. ನಿಮಗೆ ನಿಮ್ಮ ಮನೆಯವರಲ್ಲಿ, ಸಂಗಾತಿಯಲ್ಲಿ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗದಿದ್ದರೆ ಸ್ನೇಹಿತರ ಬಳಿಯಾದರೂ ಹೇಳಿಕೊಳ್ಳಬೇಕು. ಅಥವಾ ಆಪ್ತಸಮಾಲೋಚಕರ ಬಳಿಯಾದರೂ ಮಾತನಾಡಬೇಕು.

ಖುಷಿಯಾಗಿರಿ (Be Happy)
ಒತ್ತಡವನ್ನು (Stress) ಕಡಿಮೆ ಮಾಡಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಕಚೇರಿಯಲ್ಲಾಗಲೀ ಮನೆಯಲ್ಲಾಗಲೀ ನಿಮಗೆ ತೀರ ಇಷ್ಟವೇ ಆಗದ ಕೆಲಸ ಮಾಡಲು ಒಪ್ಪಿಕೊಳ್ಳಬೇಡಿ. ಕೆಲವು ಪರಿಸ್ಥಿತಿಗಳಿಂದ ಬಚಾವಾಗಲು ನೀವು “ಇಲ್ಲʼ ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅಂದರೆ, ಇಷ್ಟವಿಲ್ಲದ ಕೆಲವು ಕೆಲಸ ಮಾಡಲೇಬೇಕಾದ ಅನಿವಾರ್ಯ ಸ್ಥಿತಿಗೆ ನಿಮ್ಮನ್ನು ಒಡ್ಡಿಕೊಳ್ಳಬೇಡಿ. ಆರಂಭದಲ್ಲಿ ಇದರಿಂದ ಹಿಂಸೆಯಾದರೂ ಕ್ರಮೇಣ ಅಭ್ಯಾಸವಾಗಿ ನಿಮಗೇ ಹಿತವೆನಿಸುತ್ತದೆ. ನಿಮ್ಮ ಸ್ವಾಭಿಮಾನಕ್ಕೂ ಪೆಟ್ಟು ಬೀಳುವುದಿಲ್ಲ. ರಿಲ್ಯಾಕ್ಸ್‌ (Relax) ಆಗಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಧಾನವಾದ ನಡಿಗೆ (Walking) ಮಾಡಿ. ಉಸಿರಾಟದ ಪ್ರಾಣಾಯಾಮ (Pranayama), ಧ್ಯಾನ ಮಾಡಿ. ಧ್ಯಾನ ಮಾಡುವಷ್ಟು ತಾಳ್ಮೆ ಇಲ್ಲವಾದರೆ ಕೇವಲ ಕೆಲವು ರೀತಿಯ ಮುದ್ರೆ, ಪ್ರಾಣಾಯಾಮ ಮಾಡಿದರೂ ಎಷ್ಟೋ ಅನುಕೂಲವಾಗುತ್ತದೆ. ಹಾಗೆಯೇ, ವ್ಯಾಯಾಮ ಅತಿ ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ