ವಿಶ್ವದಲ್ಲಿ ಮಂಕಿಪಾಕ್ಸ್ ಪ್ರಕರಣದ ಆತಂಕ ಹೆಚ್ಚಾಗುತ್ತಿದೆ. ಈ ಮಧ್ಯೆ ಭಾರತದಲ್ಲೂ ಮಂಗನಕಾಯಿಲೆಯ ಆತಂಕ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಪತ್ತೆಯಾದ 2ನೇ ಕೇಸ್ ಇದಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಪತ್ತೆಯಾದ 2ನೇ ಕೇಸ್ ಇದಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುತ್ತಿರುವ ಇತ್ತೀಚಿಗೆ ವಿದೇಶ ಪ್ರಯಾಣದ ಇತಿಹಾಸವನ್ನು ಹೊಂದಿರದ 35 ವರ್ಷದ ನೈಜೀರಿಯಾದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನೈಜೀರಿಯನ್ ಪ್ರಜೆಯನ್ನು ಸೋಂಕಿನ ಚಿಕಿತ್ಸೆಗಾಗಿ ನೋಡಲ್ ಆಸ್ಪತ್ರೆಯಾದ ದೆಹಲಿ ಸರ್ಕಾರ ನಡೆಸುವ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಐದು ದಿನಗಳಿಂದ ಅವರಿಗೆ ಗುಳ್ಳೆಗಳು ಮತ್ತು ಜ್ವರದ ಲಕ್ಷಣವಿದೆ. ಅವರ ಮಾದರಿಗಳನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿದೆ. ಸೋಮವಾರ ಸಂಜೆ ಬಂದ ವರದಿಯು ಅವರಿಗೆ ಪಾಸಿಟಿವ್ ಎಂದು ತೋರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಫ್ರಿಕನ್ ಮೂಲದ ಮಂಕಿಪಾಕ್ಸ್ ನ ಇಬ್ಬರು ಶಂಕಿತ ರೋಗಿಗಳನ್ನೂ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಕಿಪಾಕ್ಸ್ ಅಲರ್ಟ್; ಪುರುಷ ಸಲಿಂಗಕಾಮಿಗಳು ಲೈಂಗಿಕ ಸಂಬಂಧ ಮಿತಿಗೊಳಿಸಿ, WHO ವಾರ್ನಿಂಗ್
ಭಾರತದಲ್ಲಿ ಮಂಗನ ಕಾಯಿಲೆಯ ಆರು ಪ್ರಕರಣಗಳು ವರದಿ
ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಪ್ರಕರಣ ಜುಲೈ 24ರಂದು ವರದಿಯಾಗಿದೆ. ಇಲ್ಲಿಯವರೆಗೆ, ಭಾರತದಲ್ಲಿ ಮಂಗನ ಕಾಯಿಲೆಯ (Monkeypox) ಆರು ಪ್ರಕರಣಗಳು ವರದಿಯಾಗಿವೆ. ಕೇರಳದಿಂದ ಮೂರು ಸೋಂಕುಗಳು (Virus) ವರದಿಯಾಗಿದ್ದು, ಈ ಪೈಕಿ 22 ವರ್ಷದ ಯುವಕ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ. ಜುಲೈ 30ರಂದು ಸಾವನ್ನಪ್ಪಿದ 22 ವರ್ಷದ ಯುವಕನ ಪರೀಕ್ಷೆಗಳು ಮನುಷ್ಯನಿಗೆ ಮಂಗನ ಕಾಯಿಲೆ ಇದೆ ಎಂದು ತೋರಿಸಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವಾಲಯ (Kerala Health Ministry) ಹೇಳಿದೆ. ಈ ಸಾವು ಆಫ್ರಿಕಾದ ಹೊರಗೆ ನಾಲ್ಕನೇ ಮಂಕಿಪಾಕ್ಸ್-ಸಂಬಂಧಿತ ಸಾವಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ರಾಜಸ್ಥಾನವು ಮಂಗನ ಕಾಯಿಲೆಯ ಮೊದಲ ಶಂಕಿತ ಪ್ರಕರಣವನ್ನು ವರದಿ ಮಾಡಿದೆ. ಕಿಶನ್‌ಗಢದ 20 ವರ್ಷದ ಯುವಕನನ್ನು ಜೈಪುರದ ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ರೋಗಿಯು ಜ್ವರದಿಂದ ಬಳಲುತ್ತಿದ್ದರು ಮತ್ತು ಅವರ ದೇಹದಲ್ಲಿ ಗಾಯ (Injury) ಗಳಿವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಅವರ ಮಾದರಿಗಳನ್ನು ಸೋಮವಾರ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಮಂಕಿಪಾಕ್ಸ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ರೋಗನಿರ್ಣಯ ಸೌಲಭ್ಯಗಳ ವಿಸ್ತರಣೆಗೆ ಸಹಾಯ ಮಾಡಲು ಕೇಂದ್ರವು ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿದೆ. NITI ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪಾಲ್ ಅವರು ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಸದಸ್ಯರು ಸಚಿವಾಲಯದ ಅಧಿಕಾರಿಗಳು ಮತ್ತು ದೇಶದ ಪ್ರಮುಖ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತಾರೆ.
ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು, ಎಚ್ಚರ !
ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.
ಮಂಕಿಪಾಕ್ಸ್ ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು (symptoms) ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಜನರು ತಪ್ಪು ಮಾಡುತ್ತಾರೆ.