New Year Resolutions: ಹೊಸವರ್ಷದ ಸಂಕಲ್ಪವನ್ನು ಕಾಪಾಡಿಕೊಳ್ಳುವುದು ಹೇಗೆ?

By Suvarna News  |  First Published Dec 30, 2021, 3:47 PM IST

ನಾವೆಲ್ಲರೂ ಹೊಸವರ್ಷದಿಂದ ಹೊಸ ವ್ಯಕ್ತಿಯಾಗಬೇಕು, ಸಿಗರೇಟ್ ಬಿಡಬೇಕು, ಮೈಮುರಿದು ದುಡಿಯಬೇಕು ಎಂದೆಲ್ಲಾ ರೆಸಲ್ಯೂಷನ್ ತೆಗೆದುಕೊಳ್ಳುತ್ತೇವೆ. ಆದರೆ ಒಂದೇ ವಾರದಲ್ಲಿ ಕೈಸೋತು ಬಿಟ್ಟುಬಿಡುತ್ತೇವೆ. ಹೀಗಾಗದಂತೆ ಕಾಪಾಡಿಕೊಳ್ಳುವುದು ಹೇಗೆ?


ಹೊಸ ವರ್ಷ (New year) ಏನೇನೋ ರೆಸಲ್ಯೂಷನ್ (Resolution) ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ (walking) ಮಾಡುತ್ತೇನೆ. ಆದರೆ ಎರಡನೇ ದಿನಕ್ಕೆ ಮುಂಜಾನೆ ಚಳಿಯಲ್ಲಿ ಏಳುವವರ್ಯಾರು, ಒಳ್ಳೇ ನಿದ್ದೆ (Sleep) ತೆಗೆಯೋಣ ಎಂದು ಬೆಚ್ಚಗೆ ಹೊದ್ದು ಮಲಗುತ್ತೀರಿ. ಅಲ್ಲಿಗೆ ನಿಮ್ಮ ಸಂಕಲ್ಪದ ಕತೆ ಮಟಾಷ್. ಹೀಗಾಗುವುದು ಯಾಕೆ, ಮತ್ತು ಹೀಗಾಗದಂತೆ ನೋಡಿಕೊಳ್ಳುವುದು ಹೇಗೆ?

ನಮ್ಮ ಮಿತಿ ತಿಳಿದುಕೊಳ್ಳೋಣ
ಸಂಕಲ್ಪಗಳು ಸಫಲವಾಗಬೇಕಾದರೆ ಕೈಗೊಂಡಿರುವ ನಿರ್ಧಾರವನ್ನು ಸಾಧಿಸುತ್ತೇನೆ ಎಂಬ ನಂಬಿಕೆ ಇರಬೇಕು. ನಮ್ಮ ಬದುಕಿನಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ನಿರ್ಧಾರ ಕೈಗೊಳ್ಳುವ ಮುನ್ನ ತಂತಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ಅಂದುಕೊಂಡ ಗುರಿ ಸಾಧಿಸಲು ಆತುರ ಇರಬಾರದು. ಒಂದು ತಿಂಗಳಲ್ಲಿ 5 ಕೆಜಿ ತೂಕ ಇಳಿಸುವುದಕ್ಕೆ ಸಾಧ್ಯವೆ? ಪ್ರತಿಯೊಬ್ಬರೂ ಪ್ರತಿಯೊಂದನ್ನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪರಿಸ್ಥಿತಿ, ನಿಮ್ಮ ಅಗತ್ಯ, ನಿಮ್ಮ ಸಾಮರ್ಥ್ಯ‌ ಅರಿತು ಒಂದೆರಡು ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಿ. ಅದನ್ನು ಆಚರಣೆಗೆ ತರಲು ಪ್ರಯತ್ನಿಸಿ. ಮತ್ತೊಬ್ಬರು ಎನೋ ಮಾಡುತ್ತಾರೆಂದು ನೀವು ಅದರಂತೆ ಮಾಡಲು ಯತ್ನಿಸಬೇಡಿ. ಮತ್ತೊಬ್ಬರ ಯಶಸ್ಸಿನಿಂದ ಪಾಠ ಕಲಿಯಬಹುದು. ಆದರೆ ಅವರ ಕ್ಷೇತ್ರವನ್ನೇ ನೀವು ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮವಿಲ್ಲ.

Tap to resize

Latest Videos

Bad Habits : 2022ರಲ್ಲಿ ಬದಲಾವಣೆ ಬೇಕಂದ್ರೆ ಇಂದೇ ಬಿಟ್ಬಿಡಿ ಈ ಹಠ, ಚಟ

ವಾತಾವರಣ
ಹೊಸ ವರ್ಷದ ನಿರ್ಧಾರಗಳು ವಿಫಲವಾಗಲು ಮತ್ತೊಂದು ಕಾರಣ, ನಿಮ್ಮ ಸುತ್ತಮುತ್ತಲಿನ ವಾತಾವರಣ. ದೂಮಪಾನ ಅಥವಾ ಮಧ್ಯಪಾನ ಮಾಡುವುದಿಲ್ಲ ಎಂದು ನಿರ್ಧರಿಸಿದ್ದರೆ, ಈ ಚಟ ಮುಂದುವರಿಯಲು ಕಾರಣವಾಗುವ ವಾತಾವರಣದಿಂದ ನೀವು ದೂರವಿರಬೇಕು.

ಸ್ಪಷ್ಟತೆ ಇರಲಿ
ಅಸ್ಪಷ್ಟತೆಯೂ ನಿರ್ಧಾರಗಳ ವೈಫಲ್ಯಕ್ಕೆ ಮತ್ತೊಂದು ಕಾರಣ. ಹೊಸ ವರ್ಷದಲ್ಲಿ ಏನನ್ನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ದಿನವೊಂದಕ್ಕೆ 10 ಸಿಗರೇಟ್‌ ಸೇದುತಿದ್ದರೆ, ಇನ್ನು ಮುಂದೆ ದಿನವೊಂದಕ್ಕೆ 5 ಸಿಗರೇಟ್‌ ಮಾತ್ರ ಸೇದುತ್ತೇನೆ ಎಂದು ನಿರ್ಧರಿಸಿ ಅದರಂತೆ ನಡೆದುಕೊಳ್ಳಿ. ಒಂದೆರಡು ತಿಂಗಳು ಕಳೆದನಂತರ ನಿಮ್ಮಲ್ಲಿ ವಿಶ್ವಾಸ ಉಂಟಾಗಿ ಆನಂತರ ಸಂಪೂರ್ಣವಾಗಿ ಆ ದುರಬ್ಯಾಸದಿಂದ ಹೊರಬರಲು ಸಾಧ್ಯ. ನಿರ್ಧಾರಗಳನ್ನು ಬರೆದಿಟ್ಟುಕೊಳ್ಳುವುದೂ ಇದಕ್ಕೆ ಬಹಳ ಪೂರಕ.

ಸಿದ್ಧತೆ
ನಿರ್ಧಾರ ಕೈಗೊಳ್ಳುವ ಮುನ್ನ ಮತ್ತು ನಂತರ ಅದಕ್ಕೆ ಅಗತ್ಯವಾದ ಸಿದ್ದತೆ ಮಾಡಿಕೊಳ್ಳದಿರುವುದು ವಿಫಲತೆಗೆ ಮತ್ತೊಂದು ಕಾರಣ. ಈ ವರ್ಷ ಹೊಸ ಮನೆ ಕಟ್ಟುತ್ತೇವೆಂದು ನೀವು ನಿರ್ಧರಿಸಿದರೆ, ಅದಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕಲ್ಲವೆ? ಹೊಸ ಪದವಿ ಪಡೆಯಬೇಕಾದರೆ ಅಥವಾ ಹೊಸ ಭಾಷೆ ಕಲಿಯಬೇಕಾದರೆ ಎನೆಲ್ಲಾ ಸಿದ್ದತೆ ಅಗತ್ಯವೋ ಅದನ್ನು ಮಾಡಿಕೊಳ್ಳದಿದ್ದರೆ, ನಿಮ್ಮ ನಿರ್ಧಾರ ಫಲ ನೀಡುವುದಿಲ್ಲ.

ಸಂತೋಷದಿಂದ ಮಾಡಿ
ನಿಮ್ಮ ಹೊಸ ವರ್ಷದ ನಿರ್ಧಾರಗಳು ಕೈಗೂಡಬೇಕಾದರೆ ಅದರ ಆಚರಣೆಯಲ್ಲಿ ನೀವು ಸಂತೋಷವನ್ನು ಕಾಣಬೇಕು. ನೀವೇ ಕೈಗೊಂಡ ನಿರ್ಧಾರವನ್ನು ಶಪಿಸಬಾರದು. ಅದನ್ನು ಒಂದು ಹೊರೆ ಎಂದು ಭಾವಿಸಬಾರದು. ಬೆಳಗ್ಗೆ 5 ಗಂಟೆಗೆ ಎದ್ದು ಜಾಗಿಂಗ್‌ ಮಾಡುತ್ತೇನೆಂದು ನಿರ್ಧರಿಸಿದ್ದರೆ, ಬೆಳಗ್ಗೆ ಏಳುವುದಕ್ಕೆ ಸಂತೋಷವಿರಬೇಕು. ಯಾಕಪ್ಪಾ ಏಳಬೇಕು ಎಂದು ನಿಮ್ಮನ್ನೇ ನೀವು ಶಪಿಸಿಕೊಳ್ಳಬಾರದು. ಅರ್ಥಾತ್‌ ನೀವು ಯಾವುದನ್ನು ಮಾಡಲು ಹೊರಟದ್ದೀರೋ ಅದರಲ್ಲಿ ನಿಮ್ಮ ಸಾರ್ಥಕತೆ ಕಾಣಬೇಕು.

New Year 2022 : ಜನವರಿ ಒಂದರಿಂದ್ಲೇ ಏಕೆ ಶುರುವಾಗುತ್ತೆ ಹೊಸ ವರ್ಷ?

ನಿರಂತರತೆ ಕಾಪಾಡಿಕೊಳ್ಳಿ
ದಿನ ಕಳೆದಂತೆ, ನಮ್ಮ ಹೊಸ ವರ್ಷವನ್ನು ಪ್ರಾರಂಭಿಸಿದ ಶಕ್ತಿ ಮತ್ತು ಉತ್ಸಾಹವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹೀಗಾಗಿ, ನಮ್ಮ ಗುರಿಗಳನ್ನು ಸಾಧಿಸಲು ನಾವು ಅಗತ್ಯವಿರುವ ಪ್ರಮಾಣದ ಪ್ರಯತ್ನವನ್ನು ಹರಿಸಲು ವಿಫಲರಾಗುತ್ತೇವೆ. ಯಾರಾದರೂ ಕೆಲವು ಕಿಲೋ ತೂಕ ಕಡಿಮೆ ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದರೆ, ಅವರು ನಿಯಮಿತವಾಗಿ ವ್ಯಾಯಾಮ ಮಾಡಲು ವಿಫಲರಾಗುತ್ತಾರೆ. ನಿರಂತರತೆ ಕಾಪಾಡಿಕೊಳ್ಳುವುದರಲ್ಲಿ ಕೊರತೆಯೇ ನಮ್ಮ ಗುರಿಗಳಿಗೆ ನ್ಯಾಯ ಸಲ್ಲಿಸಲು ವಿಫಲರಾಗಲು ಕಾರಣಗಳಲ್ಲಿ ಒಂದು.

ದೃಢವಾದ ನಂಬಿಕೆ
ನಾವು ಹೊಸದನ್ನು ಪ್ರಾರಂಭಿಸಿದಾಗ ತಪ್ಪುಗಳು ಸಂಭವಿಸುತ್ತವೆ. ಆಯಾ ಕ್ಷೇತ್ರಗಳಲ್ಲಿ ಬಹುತೇಕ ಎಲ್ಲಾ ಯಶಸ್ವಿ ವ್ಯಕ್ತಿಗಳು ಸಾಕಷ್ಟು ನಿರಾಕರಣೆ ಮತ್ತು ನಕಾರಾತ್ಮಕ ಕಾಮೆಂಟ್‌ಗಳನ್ನು ಅನುಭವಿಸಿದ್ದಾರೆ. ತಮ್ಮ ಮೇಲಿನ ದೃಢವಾದ ನಂಬಿಕೆಯಿಂದಾಗಿ ಅವರು ಇನ್ನೂ ಖ್ಯಾತಿಗೆ ಏರಿದರು. ಆದ್ದರಿಂದ, ನೀವು ಏನನ್ನಾದರೂ ಕೆಲಸ ಮಾಡುವಾಗ ನಿಮ್ಮ ಬಗ್ಗೆ ನಂಬಿಕೆಯೊಂದಿಗೆ ಪ್ರಾರಂಭಿಸಿ.

ಆತುರ ಬೇಡ
ಒಳ್ಳೆಯ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ನೀವು ಒಂದು ನಿರ್ದಿಷ್ಟ ನಿರ್ಣಯವನ್ನು ಮಾಡಿದ್ದರೆ, ಅದನ್ನು ಸಾಧಿಸಲು ನಿಮ್ಮ ವರ್ತನೆಯಲ್ಲಿ ದೊಡ್ಡ ಬದಲಾವಣೆಯ ಅಗತ್ಯವಿರುತ್ತದೆ. ನಿಧಾನವಾಗಿ ಮತ್ತು ಕ್ರಮೇಣ, ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ತ್ವರಿತ ಫಲಿತಾಂಶಗಳನ್ನು ಪಡೆಯಲು ಚಿಂತಿಸಬೇಡಿ ಮತ್ತು ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ.

ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಿ
ಒಂದು ಪೆನ್ ಮತ್ತು ನೋಟ್ಬುಕ್ ಇಟ್ಟುಕೊಂಡು, ನಿಮ್ಮ ದೈನಂದಿನ ಪ್ರಯತ್ನಗಳ ಮೇಲೆ ನಿಗಾ ಇರಿಸಿ. ಇದು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಖಚಿತಪಡಿಸುತ್ತದೆ. ಇದು ನಿಮ್ಮ ಮನಸ್ಸಿನಲ್ಲಿ ಸಂತೃಪ್ತಿಯ ಭಾವವನ್ನು ಮೊಳಕೆಯೊಡೆಯಿಸುತ್ತದೆ.

click me!