Warning: ಹಣೆಯಲ್ಲಿ ನೆರಿಗೆ ಮೂಡುತ್ತಿವೆಯೇ? ಕೂಡಲೇ ಹೃದಯ ತಪಾಸಣೆ ಮಾಡಿಸಿ..

By Suvarna NewsFirst Published Dec 29, 2021, 4:39 PM IST
Highlights

ಹಣೆಬರಹ ಬಲ್ಲವರ್ಯಾರು ಅಂತೀವಿ. ಆದರೆ, ಹಣೆಯಲ್ಲಿ ನೆರಿಗೆಗಳಿದ್ದರೆ ಅಂಥವರ ಹಣೆಬರಹವೇನು, ಆಯಸ್ಸೆಷ್ಟು, ಏನು ಕಾಯಿಲೆ ಇರಬಹುದು ಎಲ್ಲವನ್ನೂ ಹೇಳಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು. 

ಸುಕ್ಕು ಯಾರಿಗೆ ತಾನೇ ಇಷ್ಟವಾಗುತ್ತದೆ? ಆದರೆ, ವಯಸ್ಸನ್ನು ಹೇಗೆ ತಡೆಯಲು ಸಾಧ್ಯವಿಲ್ಲವೋ ಹಾಗೆಯೇ ಸುಕ್ಕನ್ನೂ ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ವಯಸ್ಸಾದಂತೆಲ್ಲ ಸುಕ್ಕು, ನೆರಿಗೆ ಬರುವುದು ಸಾಮಾನ್ಯ. ಆದರೆ, ವಯಸ್ಸಿಗೆ ಮೀರಿದ ನೆರಿಗೆಗಳು ಹಣೆಯಲ್ಲಿ ಮೂಡುತ್ತಿವೆ ಎಂದರೆ ಮಾತ್ರ ನೀವು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಏಕೆಂದರೆ ಅವು ಹೃದ್ರೋಗ(cardiovascular disease)ಗಳ ಕಾರಣ ಬೇಗ ಸಾವನ್ನು ಸೂಚಿಸುತ್ತಿರಬಹುದು! 

ಹೌದು, ಮುಖ ನೋಡಿಯೇ ಆರೋಗ್ಯದ ಅಪಾಯವನ್ನು ಹೇಳಬಹುದಾದ ಸೂಚನೆ ಇದು. ಇದು ನಿಮ್ಮನ್ನು ಹೆದರಿಸುವ ಯತ್ನವಲ್ಲ, ಹೊಸ ಸಂಶೋಧನೆಯೊಂದು ಕಂಡುಕೊಂಡ ಭಯಾನಕ ಸತ್ಯ. ಮುಖ ಮನಸ್ಸಿನ ಕನ್ನಡಿ ಎನ್ನುತ್ತೇವೆ. ಆದರೆ ಈ ಸಂಶೋಧನೆಯು ಮುಖ ಆರೋಗ್ಯದ ಕನ್ನಡಿ ಎಂದು ಪ್ರತಿಪಾದಿಸುತ್ತಿದೆ.

ಮ್ಯೂನಿಚ್‌ನಲ್ಲಿ ಯೂರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿದ ವಾರ್ಷಿಕ ಸಮ್ಮೇಳನ(annual conference)ದಲ್ಲಿ ಇಂಥದೊಂದು ಸಂಶೋಧನಾ ವರದಿ ಬಹಿರಂಗವಾಗಿದೆ. ಹಣೆಯಲ್ಲಿ ಮೂಡುವ ನೆರಿಗೆಗಳು ಅತೆರೋಸ್ಕ್ಲೀರೋಸಿಸ್‌(Atherosclerosis)ನಿಂದ ಬೇಗ ಸಂಭವಿಸಬಹುದಾದ ಸಾವನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ. ಈ ಅತೆರೋಸ್ಕ್ಲೀರೋಸಿಸ್ ಎಂದರೆ ಪ್ಲೇಕ್ ಕಟ್ಟಿಕೊಂಡು ಅಪಧಮನಿಗಳು(arteries) ಗಟ್ಟಿಯಾಗುವ ಕಾಯಿಲೆ. ಹೃದಯಾಘಾತಗಳಿಗೆ(heart attacks) ಈ ಅಥೆರೋಸ್ಕ್ಲೀರೋಸಿಸ್ ಮುಖ್ಯ ಕಾರಣವಾಗಿದೆ. 

ದೇಕೆ ಆಗುತ್ತದೆ?
ಈ ಹೃದಯ ಸಮಸ್ಯೆ ಹಾಗೂ ಹಣೆಯ ನೆರಿಗೆಗಳ ನಡುವೆ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿರಬಹುದು. ಅದಕ್ಕೂ ಸಂಶೋಧಕರ ವಿವರಣೆ ಹೀಗಿದೆ.. ಹಣೆಯಲ್ಲಿರುವ ರಕ್ತ ನಾಳಗಳು ಬಹಳ ಸಣ್ಣವಿರುವುದರಿಂದ ಪ್ಲೇಕ್ ಕಟ್ಟಿಕೊಳ್ಳುವುದಕ್ಕೆ ಹೆಚ್ಚು ಸೆನ್ಸಿಟಿವ್ ಆಗಿವೆ. ಹಾಗಾಗಿ ಇವು ನಾಳಗಳಿಗೆ ಬೇಗ ವಯಸ್ಸಾಗಿರುವುದನ್ನು ಸೂಚಿಸುತ್ತವೆ. ಕೊಲ್ಯಾಜನ್ ಪ್ರೋಟೀನ್ ಹಾಗೂ ಆಕ್ಸಿಡೇಟಿವ್ ಒತ್ತಡದ ಕಾರಣದಿಂದ ಅತೆರೋಸ್ಕ್ಲೀರೋಸಿಸ್ ಹಾಗೂ ಹಣೆಯ ಆಳ ನೆರಿಗೆಗಳು ಕಂಡುಬರುತ್ತವೆ. 

ಹೇಗೆ ಸಂಶೋಧನೆ ನಡೆಸಿದ್ರು?
ಸಂಶೋಧನೆ(research)ಗಾಗಿ ಸುಮಾರು 3200 ಉದ್ಯೋಗಿಗಳನ್ನು ಪರೀಕ್ಷಿಸಲಾಯ್ತು. 20 ವರ್ಷಗಳ ಕಾಲ ಇವರ ಆರೋಗ್ಯ ಹಾಗೂ ಹಣೆಯ ನೆರಿಗೆಗಳನ್ನು ಗಮನಿಸಲಾಯ್ತು. ಹಣೆಯ ನೆರಿಗೆ ಜಾಸ್ತಿಯಾದಷ್ಟೂ ಹೃದ್ರೋಗ ಜಾಸ್ತಿಯಾಗಿ ಕಂಡುಬಂತು. ಹಣೆಯಲ್ಲಿ ನೆರಿಗೆ ಇಲ್ಲದವರು ಹೃದ್ರೋಗದಿಂದ ಸಾಯುವುದಕ್ಕಿಂತ 10 ಪಟ್ಟು ಹೆಚ್ಚು ಹಣೆಯಲ್ಲಿ ಆಳ ನೆರಿಗೆಯುಳ್ಳವರು ಹೃದ್ರೋಗದಿಂದ ಸಾವಿಗೀಡಾಗುವುದನ್ನು ಸಂಶೋಧಕರು ಕಂಡುಕೊಂಡರು. 

ನೀವು ಚಿಂತಿಸಬೇಕೇ?
ನೆರಿಗೆಗಳು ವಯಸ್ಸಾದಂತೆ ಸಾಮಾನ್ಯ ಎಂಬುದು ಗಮನದಲ್ಲಿರಲಿ. ಆದರೂ, ಹಣೆಯ ನೆರಿಗೆಗಳು ಹೃದ್ರೋಗ ಸೂಚಕವಾಗಿರಬಹುದು ಎಂಬುದನ್ನು ತಿಳಿದುಕೊಂಡಿರುವುದು ಒಳಿತು. ನಿಮಗೂ ಹಣೆಯಲ್ಲಿ ಆಳ ನೆರಿಗೆಗಳಿದ್ದರೆ  ಯಾವುದಕ್ಕೂ ಇರಲಿ ಎಂದು ವೈದ್ಯರ ಬಳಿ ತಪಾಸಣೆ ಮಾಡಿಸುವುದೂ ಉತ್ತಮ. ಹಾಗಂಥ ಆತಂಕಕ್ಕೀಡಾಗುವ ಅಗತ್ಯವಿಲ್ಲ. 

ನೀವೇನು ಮಾಡಬೇಕು?
ಆರೋಗ್ಯಕರ ಜೀವನಶೈಲಿ ಹಾಗೂ ಆರೋಗ್ಯ ತಪಾಸಣೆ, ಚಿಕಿತ್ಸೆಗಳಿಂದ ಆಯಸ್ಸು ಹಿಗ್ಗಿಸಬಹುದು. ಹೀಗಾಗಿ, ಮೊದಲು ನಿಮ್ಮ ಹಣೆಯಲ್ಲಿ ನೆರಿಗೆಗಳಿದ್ದರೆ ಆಹಾರಕ್ರಮ ಬದಲಿಸಿಕೊಳ್ಳಿ. ಹಣ್ಣು, ತರಕಾರಿ, ಪ್ರೋಟೀನ್ ಹೆಚ್ಚಿರುವ ಆರೋಗ್ಯಕರ ಆಹಾರ ಸೇವನೆ ರೂಢಿ ಮಾಡಿಕೊಳ್ಳಿ. ಜಂಕ್ ಆಹಾರಗಳ ಕಡೆ ತಿರುಗಿಯೂ ನೋಡಬೇಡಿ. ಇದರೊಂದಿಗೆ ವ್ಯಾಯಾಮದ ಬದುಕಿಗೆ ಹೊರಳಿಕೊಳ್ಳಿ. ಈಗಾಗಲೇ ತೂಕ(weight) ಹೆಚ್ಚಿದ್ದರೆ ಮೊದಲು ಅದನ್ನು ಕಡಿಮೆ ಮಾಡಿಕೊಳ್ಳಿ. ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಕಾರ್ಡಿಯೋ ಎಕ್ಸರ್ಸೈಸ್ ಮಾಡಲು ಮರೆಯದಿರಿ. ವಾಕಿಂಗ್(walking) ಮಾಡಿದರೂ ನಡೆಯುತ್ತದೆ. 
ಇನ್ನು ನೆರಿಗೆಗಳು ವಯಸ್ಸಿಗಿಂತಾ ಹೆಚ್ಚಾಗಿ ಹಣೆಯಲ್ಲಿವೆ ಎನಿಸಿದರೆ ಮೊದಲು ಮಾಡಬೇಕಾದ ಕೆಲಸ ನಿಮ್ಮ ಬಿಪಿ(blood pressure) ಹಾಗೂ ಸಕ್ಕರೆ ಕಾಯಿಲೆ(blood sugar)ಗಳನ್ನು ತಪಾಸಣೆ ಮಾಡಿಸುವುದು. ಲಿಪಿಡ್ ಟೆಸ್ಟ್ ಮಾಡಿಸಿ. ಜೊತೆಗೆ, ಹಾರ್ಟ್ ಸಮಸ್ಯೆಯನ್ನು ಕೂಡಾ ಪರೀಕ್ಷೆಗೊಳಪಡಿಸಿ. ವೈದ್ಯರು ಹೇಳಿದ ಚಿಕಿತ್ಸೆಯನ್ನು ಪಡೆದುಕೊಳ್ಳಿ. 

click me!