ಬಿಸಿ ತರಂಗಗಳಾಚೆಗೂ ಋತುಬಂಧ: ದೇಹ ಮತ್ತು ಮನಸ್ಸಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳೋಣ

Published : Oct 21, 2026, 05:09 PM IST
periods bleeding

ಸಾರಾಂಶ

ಋತುಬಂಧವು ಮಹಿಳೆಯರ ಜೀವನದ ಸಹಜ ಘಟ್ಟವಾಗಿದ್ದು, ಇದು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ತರುತ್ತದೆ. ಹಾರ್ಮೋನುಗಳ ವ್ಯತ್ಯಾಸದಿಂದ ಬಿಸಿ ತರಂಗಗಳು, ಕೀಲು ನೋವು ಮತ್ತು ಆತಂಕದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉತ್ತಮ ಜೀವನಶೈಲಿ ಮತ್ತು ಕುಟುಂಬದ ಬೆಂಬಲದಿಂದ ಈ ಹಂತವನ್ನು ಸುಲಭವಾಗಿ ಎದುರಿಸಬಹುದು.

ಋತುಬಂಧ ಅಥವಾ ಮುಟ್ಟುನಿಲ್ಲುವಿಕೆ ಮಹಿಳೆಯ ಜೀವನದ ಒಂದು ಸಹಜ ಘಟ್ಟ. ಇದು ಕೇವಲ ಮುಟ್ಟು ನಿಲ್ಲುವ ಘಟನೆಯಲ್ಲ; ದೇಹ, ಮನಸ್ಸು ಮತ್ತು ಭಾವನೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ಹೊಸ ಹಂತವಾಗಿದೆ. ಸಾಮಾನ್ಯವಾಗಿ 45 ರಿಂದ 55 ವರ್ಷಗಳ ನಡುವೆ ಋತುಚಕ್ರ ಶಾಶ್ವತವಾಗಿ ನಿಲ್ಲುತ್ತದೆ. ಸತತ ಒಂದು ವರ್ಷದವರೆಗೆ ಮುಟ್ಟು ಆಗದಿದ್ದಾಗ ಅದನ್ನು ಋತುಬಂಧ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ 40 ವರ್ಷಕ್ಕೂ ಮುನ್ನವೇ ಋತುಬಂಧ ಕಾಣಿಸಿಕೊಳ್ಳುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ. ಜೀವನಶೈಲಿಯ ಬದಲಾವಣೆ, ಒತ್ತಡ, ಆಟೋಇಮ್ಯೂನ್ ಸಮಸ್ಯೆಗಳು ಹಾಗೂ ಕೆಲವು ವೈದ್ಯಕೀಯ ಕಾರಣಗಳು ಇದಕ್ಕೆ ಸಂಬಂಧಿಸಿರಬಹುದು.

ಋತುಬಂಧದ ಸಂದರ್ಭದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರೋನ್ ಎಂಬ ಮಹಿಳಾ ಹಾರ್ಮೋನುಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಹಲವು ಬದಲಾವಣೆಗಳು ಆರಂಭವಾಗುತ್ತವೆ. ಬಹುತೇಕರಿಗೆ ಪರಿಚಿತವಾದ ಲಕ್ಷಣವೆಂದರೆ ‘ಹಾಟ್ ಫ್ಲಶಸ್’ ಅಥವಾ ಬಿಸಿ ತರಂಗಗಳು. ಇದ್ದಕ್ಕಿದ್ದಂತೆ ಮೈ ಬಿಸಿಯಾಗುವುದು, ಮುಖ ಕೆಂಪಾಗುವುದು, ಅತಿಯಾದ ಬೆವರುವಿಕೆ ಹಾಗೂ ರಾತ್ರಿ ನಿದ್ರೆಗೆ ಅಡ್ಡಿಯಾಗುವುದು ಸಾಮಾನ್ಯ.

ಆದರೆ ಋತುಬಂಧದ ಅನುಭವ ಬಿಸಿ ತರಂಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲುಬಿನ ಸಾಂದ್ರತೆ ಕಡಿಮೆಯಾಗುವುದರಿಂದ ಕೀಲು ನೋವು, ಬೆನ್ನುನೋವು ಹಾಗೂ ಅಸ್ಥಿಸವಕಳಿಯ ಅಪಾಯ ಹೆಚ್ಚಾಗಬಹುದು. ಕೆಲವು ಮಹಿಳೆಯರಲ್ಲಿ ತೂಕ ಹೆಚ್ಚಳ, ಜೀರ್ಣಕ್ರಿಯೆಯ ವ್ಯತ್ಯಾಸ, ಹೊಟ್ಟೆ ಉಬ್ಬರ ಮತ್ತು ಮೂತ್ರವಿಸರ್ಜನೆಗೆ ಸಂಬಂಧಿಸಿದ ತೊಂದರೆಗಳೂ ಕಾಣಿಸಬಹುದು. ಜೊತೆಗೆ ಯೋನಿಯ ಆರ್ದ್ರತೆ ಕಡಿಮೆಯಾಗುವುದು, ಲೈಂಗಿಕ ಆಸಕ್ತಿಯಲ್ಲಿ ವ್ಯತ್ಯಾಸ ಮತ್ತು ಅಸೌಕರ್ಯಗಳೂ ಉಂಟಾಗಬಹುದು.

ದೈಹಿಕ ಬದಲಾವಣೆಗಳಷ್ಟೇ ಮಾನಸಿಕ ಬದಲಾವಣೆಗಳೂ ಪ್ರಮುಖವಾಗಿವೆ. ಕಾರಣವಿಲ್ಲದ ಆತಂಕ, ಒಂಟಿತನ, ಖಿನ್ನತೆ, ಕಿರಿಕಿರಿ, ಮರೆವು ಹಾಗೂ ಏಕಾಗ್ರತೆಯ ಕೊರತೆ ಕೆಲವರಲ್ಲಿ ಕಂಡುಬರಬಹುದು. ಈ ಹಂತದಲ್ಲಿ ಕುಟುಂಬದ ಭಾವನಾತ್ಮಕ ಬೆಂಬಲ ಮಹಿಳೆಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ನೆರವಾಗುತ್ತದೆ.

ಋತುಬಂಧವನ್ನು ಕೇವಲ ವೈದ್ಯಕೀಯ ಬದಲಾವಣೆಯಾಗಿ ನೋಡದೆ, ಜೀವನದ ಒಂದು ಭಾವನಾತ್ಮಕ ಪರಿವರ್ತನೆಯಾಗಿಯೂ ಅರ್ಥಮಾಡಿಕೊಳ್ಳಬೇಕು. ಮಕ್ಕಳು ಸ್ವತಂತ್ರರಾಗುವುದು, ಉದ್ಯೋಗದ ಒತ್ತಡ, ಕುಟುಂಬದ ಜವಾಬ್ದಾರಿಗಳ ಬದಲಾವಣೆ ಹಾಗೂ ವಯಸ್ಸಿನ ಅರಿವು ಇವೆಲ್ಲವೂ ಈ ಸಮಯದಲ್ಲಿ ಮಹಿಳೆಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಕುಟುಂಬದವರು ಈ ಹಂತವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಂಡು, ಭಾವನಾತ್ಮಕ ಬೆಂಬಲ ನೀಡುವುದು ಬಹಳ ಮುಖ್ಯ. ಮಹಿಳೆಯ ಆರೋಗ್ಯವು ಕೇವಲ ಅವರ ವೈಯಕ್ತಿಕ ವಿಷಯವಲ್ಲ; ಅದು ಕುಟುಂಬದ ಸಮಗ್ರ ಆರೋಗ್ಯ ಮತ್ತು ಸಂತೋಷಕ್ಕೂ ನಿಕಟವಾಗಿ ಸಂಬಂಧಿಸಿದೆ.

ಋತುಬಂಧ ಯಾವುದೇ ರೋಗವಲ್ಲ. ಇದು ಬದುಕಿನ ಸಹಜ ಪರಿವರ್ತನೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಯೋಗ, ಪ್ರಾಣಾಯಾಮ, ಗುಣಮಟ್ಟದ ನಿದ್ರೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಮೂಲಕ ಈ ಹಂತವನ್ನು ಸುಲಭವಾಗಿ ಎದುರಿಸಬಹುದು. ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆದು ರಕ್ತಪರೀಕ್ಷೆ, ಎಲುಬಿನ ಆರೋಗ್ಯ ಹಾಗೂ ಸ್ತ್ರೀರೋಗ ಸಂಬಂಧಿತ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ.

ಋತುಬಂಧವನ್ನು ಭಯದಿಂದ ನೋಡುವುದಕ್ಕಿಂತ ಅರಿವಿನಿಂದ ಸ್ವೀಕರಿಸಿದಾಗ, ಅದು ಜೀವನದ ಅಂತ್ಯವಲ್ಲ; ಆರೋಗ್ಯಕರ ಮತ್ತು ಆತ್ಮವಿಶ್ವಾಸಭರಿತ ಹೊಸ ಅಧ್ಯಾಯದ ಆರಂಭವಾಗುತ್ತದೆ.

ಡಾ. ಮಮತಾ ಕೆ.ವಿ, ಪ್ರಾಂಶುಪಾಲರು, ಆಯುರ್ವೇದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಎಸ್‌ಡಿಎಂ ಕಾಲೇಜ್ ಆಫ್ ಆಯುರ್ವೇದ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Skin Care Secret Tips: ನಿಮ್ಮ ಸ್ಕಿನ್ ರೇಷ್ಮೆಯಂತೆ ಹೊಳೆಯಬೇಕೇ? ಹಾಗಿದ್ರೆ ನಿಮ್ಮ ಡಯಟ್ ಹೀಗಿರಲಿ
ಗೋಧಿ ರವೆ vs ಬಾಂಬೆ ರವೆ: ಸಕ್ಕರೆ ಕಾಯಿಲೆ ಇರುವವರಿಗೆ ಯಾವ ಉಪ್ಪಿಟ್ಟು ಬೆಸ್ಟ್? ಇಲ್ಲಿದೆ ವೈದ್ಯರ ಸಲಹೆ