ಬೆಳೆಯುವ ಸಮಯದಲ್ಲಿ ಹೆಣ್ಣುಮಕ್ಕಳಲ್ಲಿ ಉಂಟಾಗುವ ಪಿಸಿಒಎಸ್ ಸಮಸ್ಯೆಯನ್ನು ತಾಯಂದಿರು ಗುರುತಿಸಬೇಕು. ಇಲ್ಲವಾದರೆ ಇದು ಮುಂದೆ ಬಂಜೆತನಕ್ಕೆ ಕಾರಣವಾಗಬಹುದು. ಪಿಸಿಒಎಸ್ ಲಕ್ಷಣಗಳನ್ನು ಅರಿತು ಎಚ್ಚರಿಕೆ ತೆಗೆದುಕೊಳ್ಳಿ.
ಕಿಶೋರಾವಸ್ಥೆಯಲ್ಲಿರುವ ಮಕ್ಕಳ ಬಗ್ಗೆ ಸಾಮಾನ್ಯವಾಗಿ ಪಾಲಕರು ಹೆಚ್ಚಿನ ಗಮನ ಹರಿಸುವುದಿಲ್ಲ. ಚಿಕ್ಕ ಮಗುವಿದ್ದಾಗಿನ ಕೇರ್ ಇರುವುದಿಲ್ಲ. “ಬೆಳೆಯುವ ವಯಸ್ಸು’ ಎಂದು ಚಿಕ್ಕಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಕಂಡುಬರುತ್ತದೆ. ಹೆಣ್ಣುಮಕ್ಕಳಲ್ಲಿ ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಪಿಸಿಒಎಸ್ ಅಥವಾ ಪಾಲಿಸಿಸ್ಟಿಕ್ ಓವರೀಸ್ ಸಿಂಡ್ರೋಮ್ ಉಂಟಾಗಬಹುದು. ಇದನ್ನು ಕೆಲವು ಲಕ್ಷಣಗಳ ಮೂಲಕ ಅರಿತು ಕೊಳ್ಳಬಹುದು. ಆಗ ಸೂಕ್ತ ಔಷಧ, ಜೀವನಶೈಲಿ ಬದಲಾವಣೆಯಿಂದ ಮಗಳು ಈ ಸಮಸ್ಯೆಯಿಂದ ದೂರವಿರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಒಂದು ಅತಿ ಸಾಮಾನ್ಯ ಸಮಸ್ಯೆ. ಕಿಶೋರಾವಸ್ಥೆ ಅಥವಾ ಹರೆಯದ ವಯಸ್ಸಿನಲ್ಲೇ ಕಾಡುವುದು ಸಹ ಸಾಮಾನ್ಯ. ಹಾರ್ಮೋನ್ ಗಳ ಬಿಡುಗಡೆಯಲ್ಲಾಗುವ ವ್ಯತ್ಯಾಸದಿಂದ ಇದು ಉಂಟಾಗುತ್ತದೆ. ಹೀಗಾಗಿ, ಮಗಳಿಗೆ ಈ ಸಮಸ್ಯೆ ಇದ್ದರೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಜಾಗರೂಕತೆಯಿಂದ ಕಾಳಜಿ ತೋರುವುದು ಪಾಲಕರ ಕರ್ತವ್ಯ. ಬಹಳಷ್ಟು ತಾಯಂದಿರಿಗೆ ಮಗಳು ಸರಿಯಾಗಿ ಪೀರಿಯೆಡ್ಸ್ ಆಗುತ್ತಿದೆಯೋ ಇಲ್ಲವೋ ಎನ್ನುವುದೇ ಗೊತ್ತಿರುವುದಿಲ್ಲ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ, ಮಗಳಿಗೆ ಈ ಸಮಸ್ಯೆ ಬಗ್ಗೆ ಅರಿವಿಲ್ಲದೆ ಇರುವಾಗ ತಾಯಿ ಕೂಡ ಲಕ್ಷ್ಯ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ ಗಂಭೀರವಾಗುತ್ತದೆ.
ಪಿಸಿಒಎಸ್ (Polycystic Ovarian Syndrome) ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಕೆಲವೊಮ್ಮೆ ಸಾಧ್ಯವಾಗದೆ ಇರಬಹುದು. ಆದರೆ, ಜೀವನಶೈಲಿ (Lifestyle) ಬದಲಿಸಿಕೊಳ್ಳುವ ಮೂಲಕ, ಚಿಕಿತ್ಸೆಯ ಮೂಲಕ ಖಂಡಿತ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹರೆಯದ ಮಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವುದು ತಾಯಂದಿರ ಜವಾಬ್ದಾರಿ. ಕಿಶೋರಾವಸ್ಥೆಯಲ್ಲಿ (Puberty) ಹುಡುಗಿಯರು ಮತ್ತು ಹುಡುಗರಲ್ಲಿ ಸೆಕ್ಸ್ ಹಾರ್ಮೋನ್ (Sex Hormone) ಸ್ರವಿಕೆಯಾಗುತ್ತದೆ. ಇಬ್ಬರಲ್ಲೂ ಇದು ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಎಂಡ್ರೋಜನ್ ಎನ್ನುವ ಹಾರ್ಮೋನು ಪುರುಷರಲ್ಲಿ ಇರುತ್ತದೆ. ಅಡ್ರಿನಲ್ ಗ್ರಂಥಿ ಎಂಡ್ರೋಜನ್ ಅನ್ನು ಉತ್ಪಾದಿಸುತ್ತದೆ. ಪಿಸಿಒಎಸ್ ಸಮಸ್ಯೆ ಇರುವ ಹುಡುಗಿಯರಲ್ಲಿ ಈ ಎಂಡ್ರೋಜನ್ (Androgen) ಹಾರ್ಮೋನ್ ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಒಂದೊಮ್ಮೆ ತಾಯಂದಿರಿಗೆ ಪಿಸಿಒಎಸ್ ಸಮಸ್ಯೆ ಇದ್ದರೆ ಅಥವಾ ಇದ್ದಿದ್ದರೆ ಹೆಣ್ಣುಮಕ್ಕಳಿಗೂ ಸಹಜವಾಗಿ ಬರುತ್ತದೆ. ಇದಕ್ಕೆ ಆನುವಂಶಿಕತೆಯ ನಂಟೂ ಇದೆ. ಹೀಗಾಗಿ, ಹಿಂದೊಮ್ಮೆ ಸಮಸ್ಯೆ ಅನುಭವಿಸಿದ್ದ ತಾಯಂದಿರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಗಮನ ನೀಡುವುದು ಅಗತ್ಯ.
Kids Health: ಈ ವಯಸ್ಸಿನ ಹುಡುಗಿಯರಿಗೆ ಡೇಂಜರಸ್ ಸಾಮಾಜಿಕ ಜಾಲತಾಣ
undefined
ಎಂಡ್ರೋಜನ್ ಪ್ರಭಾವ
ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರಲ್ಲಿ ಎಂಡ್ರೋಜನ್ ಹಾರ್ಮೋನ್ ಅಧಿಕವಾಗಿ ಸ್ರವಿಕೆಯಾಗುತ್ತದೆ. ಇದು ಮಹಿಳೆಯರಲ್ಲಿ ಅಂಡಾಣು (Egg) ಬಿಡುಗಡೆಯಾಗಲು ಸಮಸ್ಯೆ ಒಡ್ಡುತ್ತದೆ. ಈ ಸಮಸ್ಯೆ ಇದ್ದಾಗ ಅಂಡಾಣು ಪರಿಪಕ್ವವಾಗುವ ಬದಲು ಕೆಲವೊಮ್ಮೆ ಸಿಸ್ಟ್ ಆಗಿ ಪರಿವರ್ತನೆ ಆಗಿಬಿಡುತ್ತದೆ. ಈ ಸಮಯದಲ್ಲಿ ಅಂಡಾಣು ಬಿಡುಗಡೆಯಾಗುವ ಬದಲು ಸಿಸ್ಟ್ (Cyst) ಉಂಟಾಗುವುದರಿಂದ ಪೀರಿಯೆಡ್ಸ್ (Periods) ಸರಿಯಾಗಿ ಆಗುವುದಿಲ್ಲ. ಹೀಗಾಗಿ, ಮಾಸಿಕ ಋತುಸ್ರಾವ ಅನಿಯಮಿತವಾಗುವುದು ಇದರ ಮೊದಲ ಲಕ್ಷಣ. ಇದನ್ನು ಹಗುರವಾಗಿ ಪರಿಗಣಿಸಬಾರದು.
Parenting Tips: ಹದಿಹರೆಯದಲ್ಲಿ ಮಕ್ಕಳು ತಪ್ಪು ಮಾಡ್ಬಾರ್ದು ಅಂದ್ರೆ ಪೋಷಕರು ಹೀಗಿರ್ಬೇಕು
ಪಿಸಿಒಎಸ್ ಲಕ್ಷಣಗಳನ್ನು (Symptoms) ಗುರುತಿಸಿ
• ಮೊದಲ ಲಕ್ಷಣವೆಂದರೆ, ಅನಿಯಮಿತ ಮುಟ್ಟಿನ ಸಮಸ್ಯೆ. ಅಂಟಾಣು ಬಿಡುಗಡೆಯಾಗದೆ ಇರುವುದರಿಂದ ಸರಿಯಾಗಿ ಮುಟ್ಟಾಗುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದೆ ಮಕ್ಕಳಾಗಲು ಸಮಸ್ಯೆ ಆಗುತ್ತದೆ. ಬಂಜೆತನಕ್ಕೆ (Infertility) ಕಾರಣವಾಗುತ್ತದೆ. ಒಂದೊಮ್ಮೆ ಪಿಸಿಒಎಸ್ ಸಮಸ್ಯೆ ಉಂಟಾದರೂ ಒಂದು ವರ್ಷದಲ್ಲಿ ಅದನ್ನು ಮ್ಯಾನೇಜ್ (Manage) ಮಾಡಿದರೆ, ಪೀರಿಯೆಡ್ಸ್ ನಿಯಮಿತವಾಗುವಂತೆ ನೋಡಿಕೊಂಡರೆ ಮುಂದೆ ಮಕ್ಕಳಾಗಲು ಯಾವುದೇ ಸಮಸ್ಯೆ ಆಗುವುದಿಲ್ಲ.
• ಈ ಸಮಸ್ಯೆ ಶುರುವಾಗುವ ಸಮಯದಲ್ಲಿ ಹೆಣ್ಣುಮಕ್ಕಳಲ್ಲಿ ಬೊಜ್ಜು (Obese) ಉಂಟಾಗುತ್ತದೆ. ಬೊಜ್ಜಿನಿಂದಾಗಿ ಮೆಟಬಾಲಿಸಂ ನಿಧಾನವಾಗುತ್ತದೆ. ಇದರಿಂದ ಹಾರ್ಮೋನ್ ವ್ಯತ್ಯಾಸವುಂಟಾಗುತ್ತದೆ. ಹೀಗಾಗಿ, ತೂಕ ಹೆಚ್ಚದಂತೆ ನೋಡಿಕೊಳ್ಳುವುದು ಆದ್ಯತೆ ಆಗಬೇಕು.
• ಚರ್ಮ (Skin) ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಮುಖದಲ್ಲಿ ಕೂದಲು ಬೆಳೆಯುವುದು, ಮೊಡವೆ (Acne) ಹೆಚ್ಚುತ್ತವೆ. ಇದರಿಂದಾಗಿ ಮುಜುಗರಕ್ಕೆ ಒಳಗಾಗಿ ಮಾನಸಿಕವಾಗಿ ಕುಸಿಯಬಹುದು.