HIVಯೊಂದಿಗೆ ಬದುಕು ಅನಿವಾರ್ಯವಾದಾಗ, ಇರಲಿ ಗಮನ

By Web DeskFirst Published Oct 23, 2019, 12:59 PM IST
Highlights

ನಿಮಗೆ ಎಚ್ಐವಿ ಪಾಸಿಟಿವ್ ಪಾರ್ಟ್ನರ್ ಇದ್ದರೆ, ಈ ಕಾಯಿಲೆ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಂಡಿರುವುದು ನಿಮಗೂ ಕ್ಷೇಮ, ನಿಮ್ಮ ಸಂಗಾತಿಯನ್ನೂ ನೋಡಿಕೊಳ್ಳಲೂ ಉತ್ತಮ. 

ಎಚ್ಐವಿ ಎಂಬುದು ನೀವಂದುಕೊಂಡಷ್ಟು ಭಯಾನಕವಲ್ಲ. ಜಗತ್ತಿನಲ್ಲಿ ಶೇ.50ರಷ್ಟು ಎಚ್ಐವಿ ರೋಗಿಗಳು ಎಚ್ಐವಿ ನೆಗೆಟಿವ್ ಸಂಗಾತಿಯೊಂದಿಗೆ ಆರಾಮಾಗಿ ಬದುಕುತ್ತಿದ್ದಾರೆ. ನಿಮ್ಮ ಸಂಗಾತಿಗೆ ಎಚ್ಐವಿ ಇದೆ ಎಂದಾದರೆ ಅವರ ಅಳಲಿಗೆ ಕಿವಿ, ಹೆಗಲು ಎರಡೂ ಕೊಡಿ. ಅಷ್ಟೇ ಕಾಳಜಿಯಿಂದ ನಿಮಗೆ ಕಾಯಿಲೆ ಹರಡದಂತೆ ಮುಂಜಾಗೃತೆ ವಹಿಸಿ. ಕಾಯಿಲೆ ಕುರಿತು ಹೆಚ್ಚಿನ ಮಾಹಿತಿ ಹೊಂದಿದ್ದಾಗ ಆ ಬಗ್ಗೆ ಭಯ, ಚಿಂತೆ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಗಿದ್ದರೆ ಈ ಬಗ್ಗೆ ನೀವು ತಿಳಿದಿರಬೇಕಾದುದೇನು?

1. ಬೇಗ  ಪತ್ತೆ
ಸಾಮಾನ್ಯವಾಗಿ ಎಚ್ಐವಿ ಇದೆ ಎಂಬುದು ವ್ಯಕ್ತಿಯ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಸರಿಪಡಿಸಲಾಗದ ಹಾನಿಯಾಗುವವರೆಗೂ ಪತ್ತೆಯೇ ಆಗುವುದಿಲ್ಲ. ಏಕೆಂದರೆ ಎಚ್ಐವಿ ಇನ್ಫೆಕ್ಷನ್ ಆರಂಭದಲ್ಲಿ ಯಾವ ಲಕ್ಷಣಗಳೂ ಕಂಡುಬರುವುದಿಲ್ಲ. ಹಾಗಾಗಿಯೇ ಎಚ್ಐವಿಯ ಲಕ್ಷಣಗಳ ಕುರಿತು ಜಾಗೃತಿ ಅಗತ್ಯ. ಪ್ರತಿಯೊಬ್ಬರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಬೇಕು. ಕೆಲವೊಮ್ಮೆ ಭಯ ಹಾಗೂ ಮೂಢನಂಬಿಕೆಗಳಿಂದಾಗಿ ಎಚ್ಐವಿ ಪಾಸಿಟಿವ್ ವ್ಯಕ್ತಿಗಳು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಮತ್ತೆ ಕೆಲವರು ಆರಂಭಿಕ ಲಕ್ಷಣ ಕೆಲ ದಿನ ಮರೆಯಾಗುತ್ತಿದ್ದಂತೆಯೇ ಗುಣವಾದೆವೆಂದು ತಿಳಿದು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ, ನಿಮ್ಮ ಪಾರ್ಟ್ನರ್‌ಗೆ ಎಚ್ಐವಿ ಇರುವಾಗ ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ಲಕ್ಷಣಗಳನ್ನು ಕಡೆಗಣಿಸಬೇಡಿ. 

2. ಕಾಂಡೋಮ್ಸ್‌ ಬಳಕೆ ಮಸ್ಟ್
ಇಂದು ಎಚ್ಐವಿ ಸಂಬಂಧ ಪರಿಣಾಮಕಾರಿ ಮಾತ್ರೆಔಷಧಿಗಳು ಎಷ್ಟೇ ಬಂದಿರಬಹುದು. ಆದರೆ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡಬಾರದೆಂದರೆ ಲೈಂಗಿಕ ಚಟುವಟಿಕೆ ಸಂದರ್ಭದಲ್ಲಿ ನಿರೋಧ್ ಬಳಕೆ ಕಡ್ಡಾಯ.  ನಿರೋಧ್ ಬಳಕೆಯಿಂದ ಶೇ.93ರಷ್ಟು ಕಾಯಿಲೆಯಿಂದ ದೂರವುಳಿವುದು ಸಾಧ್ಯ. 

3. ಸುರಕ್ಷಿತ ಗರ್ಭಧಾರಣೆ ಸಾಧ್ಯ
ವಿಶ್ವಸಂಸ್ಥೆಯು ಏಡ್ಸ್ ಜೊತೆ  ನಡೆಸಿದ ಜಂಟಿ ಕಾರ್ಯಕ್ರಮದ ಪ್ರಕಾರ, ಈ ಜಗತ್ತಿನಲ್ಲಿರುವ ಶೇ.50ರಷ್ಟು ಎಚ್ಐವಿ ಪಾಸಿಟಿವ್ ವ್ಯಕ್ತಿಗಳ ಸಂಗಾತಿ ಎಚ್ಐವಿ ನೆಗೆಟಿವ್. ಅಂದರೆ ಕಾಯಿಲೆ ಇಲ್ಲದ ಪಾರ್ಟ್ನರ್ ಜೊತೆ ಬದುಕು ನಡೆಸುವ ಎಚ್ಐವಿ ಪಾಸಿಟಿವ್ ರೋಗಿಗಳ ಸಂಖ್ಯೆ ದೊಡ್ಡದೇ ಇದೆ. ಈಗ ಆ್ಯಂಟಿರೆಟ್ರೋವೈರಲ್ ಥೆರಪಿ(ಎಆರ್‌ಟಿ)ಯ ಆಧುನೀಕರಣ ಹಾಗೂ ಇತರೆ ಕಾಯಿಲೆ ತಡೆವ ಮಾರ್ಗಗಳ ಬಳಕೆಯಿಂದಾಗಿ ಕಾಯಿಲೆ ಇಲ್ಲದ ಸಂಗಾತಿ ಹಾಗೂ ಹುಟ್ಟುವ ಮಗುವಿಗೆ ರೋಗ ಹರಡದಂತೆ ನೋಡಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳಿವೆ. 

4. ಪ್ರೆಪ್(ಪಿಆರ್‌ಇಪಿ)ನಿಂದಾಗಿ ಎಚ್ಐವಿ ದೂರವಿಡುವುದು ಸಾಧ್ಯ
ಪ್ರಿ-ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ ಎಂಬ ಎಚ್ಐವಿ ತಡೆ ಮಾರ್ಗೋಪಾಯದಿಂದಾಗಿ ಎಚ್ಐವಿ ಬರುವುದನ್ನು ಶೇ.70ರಿಂದ ಶೇ.92ರಷ್ಟು ತಡೆಯಬಹುದು. ಇದರಲ್ಲಿ ಪ್ರತಿದಿನ ಆ್ಯಂಟಿರೆಟ್ರೋವೈರಲ್ ಮೆಡಿಕೇಶನ್ ತೆಗೆದುಕೊಳ್ಳುವುದು ಅಗತ್ಯ. ಇದರೊಂದಿಗೆ ನಿರೋಧ್ ಬಳಕೆ ಹಾಗೂ ಏಕ ಸಂಗಾತಿಯೊಂದಿಗೆ ಜೀವನ ನಡೆಸುವುದು ಕೂಡಾ ಮುಖ್ಯವಾಗುತ್ತದೆ.

5. ಮನೆಯಲ್ಲೇ ಮಾಡಿಕೊಳ್ಳುವ ಎಚ್ಐವಿ ಟೆಸ್ಟ್ ನಂಬಲರ್ಹ
ನೀವು ಮನೆಯಲ್ಲೇ ಹೇಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳಬಹುದೋ ಹಾಗೆಯೇ ಎಚ್ಐವಿ ಇದೆಯೇ ಇಲ್ಲವೇ ಎಂದು ತಿಳಿಯಲು ಕೂಡಾ ಮನೆಯಲ್ಲೇ ಟೆಸ್ಟ್ ಮಾಡಿಕೊಳ್ಳಬಹುದು. ಓರಾಕ್ವಿಕ್ ಇನ್ ಹೋಂ ಎಚ್ಐವಿ ಟೆಸ್ಟ್ ಎಂಬುದು ಓರಲ್ ಟೆಸ್ಟ್ ಆಗಿದ್ದು(ಬಾಯಿಯ ಮುಖೇನ) 20 ನಿಮಿಷದೊಳಗೆ ಪಾಸಿಟಿವ್ವೋ ನೆಗೆಟಿವ್ವೋ ತಿಳಿಸುತ್ತದೆ. ನಿಮಗೆ ಡೌಟ್ ಇದ್ದಲ್ಲಿ ಮೊದಲಿಗೆ ಮನೆಯಲ್ಲೇ ಈ ಸಂಬಂಧ ಪರೀಕ್ಷೆ ಮಾಡಿಕೊಳ್ಳಬಹುದು. 

6. ಎಚ್ಐವಿ ಟೆಸ್ಟ್ ಯಾರು ಬೇಕಾದರೂ ಮಾಡಿಸಬಹುದು


ಎಚ್ಐವಿಯಿಂದ ಬಳಲುವವರಲ್ಲಿ ಶೇ.20-25ರಷ್ಟು ಮಂದಿಗೆ ತಮಗೆ ಕಾಯಿಲೆ ಇರುವುದು ತಿಳಿದೇ ಇರುವುದಿಲ್ಲ. ಇದರಿಂದ ಆ ಕಾಯಿಲೆ ಮತ್ತೊಬ್ಬರಿಗೆ ಹರಡುವ ಸಂಭವವೂ ಹೆಚ್ಚಾಗುತ್ತದೆ. ಹಾಗಾಗಿ, 15ರಿಂದ 65 ವರ್ಷ ವಯೋಮಾನದ ಪ್ರತಿಯೊಬ್ಬರೂ ವೈದ್ಯರ ಬಳಿ ಎಚ್ಐವಿ ರೆಗುಲರ್ ಚೆಕಪ್ ಮಾಡಿಸಬಹುದು. ಮತ್ತೊಂದು ಪ್ರಯೋಜನವೆಂದರೆ ಬೇಗ ಕಾಯಿಲೆ ಗುರುತಿಸಿದಷ್ಟೂ ಬೇಗ ಆ್ಯಂಟಿರೆಟ್ರೋವೈರಲ್ ಥೆರಪಿ ನೀಡಬಹುದು. ಇದರಿಂದ ಕಾಯಿಲೆಯ ಹಲವಾರು ಗಂಭೀರತೆಯನ್ನು ತಡೆಯಬಹುದು. ಅಷ್ಟೇ ಅಲ್ಲ, ಇನ್ಫೆಕ್ಷನ್ ಕಡಿಮೆ ಮಾಡಬಹುದು.

7. ರೋಗ ಪತ್ತೆಯಾದ ಕೂಡಲೇ ಚಿಕಿತ್ಸೆ ಆರಂಭಿಸಿದರೆ ಉತ್ತಮ
ರೋಗದ ಪತ್ತೆಯಾದ ತಕ್ಷಣವೇ ಆ್ಯಂಟಿ ರೆಟ್ರೋವೈರಲ್ ಥೆರಪಿ ಆರಂಭಿಸುವುದರಿಂದ ವ್ಯಕ್ತಿಯ ಜೀವಿತಾವಧಿ ಹಿಗ್ಗಿಸಬಹುದು. ಜೊತೆಗೆ, ಶೇ.50ರಷ್ಟು ಎಚ್ಐವಿ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು ಎಂಬುದು ಅಧ್ಯಯನಗಳ ಮೂಲಕ ಸಾಬೀತಾಗಿದೆ. ಹಾಗಾಗಿ, ದೇಹದಲ್ಲಿ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಚಿಕಿತ್ಸೆ ಆಱಂಭಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. 

click me!