ಕಾರವಾರ (ಆ.25) : ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯವರು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಕುರಿತು ಮನೆಮನೆಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ಈ ಕಾರ್ಡ್ ಪಡೆದುಕೊಳ್ಳುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ತಾಲೂಕಿನ ಅಂಗಡಿ ಶಿವನಾಥ ದೇವಸ್ಥಾನ ಸಭಾಂಗಣಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಡ್ ಹೊಂದಿದ್ದರೆ ಅನಾರೋಗ್ಯ ಪೀಡಿತರಿಗೆ ಹಾಲಿ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ .5 ಲಕ್ಷದವರೆಗೆ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ.30ರಷ್ಟುಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ. ಈ ಚಿಕಿತ್ಸಾ ಮೊತ್ತವನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಹೆಚ್ಚು ಮಾಡುವ ಸಾಧ್ಯತೆಯಿದೆ. ಸರ್ಕಾರದ ಉತ್ತಮ ಯೋಜನೆ ಪ್ರತಿಯೊಬ್ಬ ನಾಗರಿಕನಿಗೂ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಬೇಕು ಎಂದರು.
ಮಕ್ಕಳ ರಕ್ಷಣೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು: ಡಿಸಿ ಮುಗಿಲನ್
ಸ್ಥಳೀಯ ಗ್ರಾಪಂ ಸದಸ್ಯ ನಂದಕಿಶೋರ ನಾಯ್ಕ ಮಾತನಾಡಿ, ಈ ಕಾರ್ಡ್ ಹೊಂದಿದವರು ಬೇರೆ ಖಾಸಗಿ ಆಸ್ಪತ್ರೆಗೆ ನೇರವಾಗಿ ತೆರಳಿದರೆ ಆಯಾ ಜಿಲ್ಲಾಸ್ಪತ್ರೆಯಿಂದ ಪತ್ರ ಬೇಕು ಎನ್ನುತ್ತಾರೆ. ಇದರಿಂದ ರೋಗಿ ವಾಪಸ್ ಬಂದರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಬೇಕಿತ್ತು ಎನ್ನುತ್ತಾರೆ. ಇದರಿಂದ ತೊಂದರೆ ಆಗುತ್ತಿದೆ. ಜನರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ ಎಂದು ಡಿಸಿ ಗಮನಕ್ಕೆ ತಂದರು.
ಟಿಎಚ್‌ಒ ಡಾ. ಸೂರಜಾ ನಾಯಕ ಮಾತನಾಡಿ, ಒಂದು ರೋಗಕ್ಕೆ ಸಂಬಂಧಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತಿದ್ದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕಿಲ್ಲ. ಹೀಗಾಗಿಯೇ ಜಿಲ್ಲಾಸ್ಪತ್ರೆ ಪತ್ರ ಬೇಕು ಎನ್ನುವ ಆದೇಶವಿದೆ. 165 ವಿಭಾಗದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಿಕಿತ್ಸೆಗೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ ಎಂದರು. ಸ್ಥಳೀಯರು ಅಂಗಡಿ, ಮುಡಗೇರಿ ಮೊದಲಾದ ಭಾಗಕ್ಕೆ ಸೇರಿ ಆ್ಯಂಬುಲೆನ್ಸ್ ನೀಡುವಂತೆ ಡಿಸಿ ಬಳಿ ಕೋರಿದರು. ಜತೆಗೆ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 24ಗಿ7 ವೈದ್ಯರನ್ನು ನೇಮಕ ಮಾಡುವಂತೆ ಮನವಿ ಸಲ್ಲಿಸಿದರು. ಟಿಎಚ್‌ಒ ಡಾ.ಸೂರಜಾ, ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲಾಗಿದ್ದು, ಸಮುದಾಯ ಆರೋಗ್ಯ ಕೇಂದ್ರವಾಗಿದೆ. ಶೀಘ್ರದಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುತ್ತದೆ. ನಿಯೋಜಿತ ವೈದ್ಯರು ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದ್ದು, ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ವಾರದಲ್ಲಿ ಎರಡು ದಿನ ಅಂಗಡಿಗೆ ಭೇಟಿ ನೀಡಲು ಸೂಚಿಸಲಾಗಿದೆ ಎಂದರು.
ವಿದ್ಯುತ್, ರಸ್ತೆ ಸಮಸ್ಯೆ, ಜಾಗದ ಭಿನ್ನಾಭಿಪ್ರಾಯ ಒಳಗೊಂಡು ಹಲವು ರೀತಿಯ ಅರ್ಜಿಗಳನ್ನು ಸಾರ್ವಜನಿಕರು ನೀಡಿದರು. ಇದೇ ವೇಳೆ ವಿವಿಧ ಮಾಸಾಶನ, ಶಿಶು ಅಭಿವೃದ್ಧಿ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ತಾಪಂ ಇಒ ಡಾ.ಆನಂದಕುಮಾರ ಬಾಲಪ್ಪನವರ್, ತಹಸೀಲ್ದಾರ ನಿಶ್ಚಲ್ ನರೋನ್ಹ, ಗ್ರಾಪಂ ಅಧ್ಯಕ್ಷೆ ಸೀಮಾ ನಾಯ್ಕ, ಉಪಾಧ್ಯಕ್ಷ ಸುನೀಲ ನಾಯ್ಕ ಮೊದಲಾದವರು ಇದ್ದರು.
ಉತ್ತರಕನ್ನಡ: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಗೆ ಡಿಸಿ ಪ್ರಸ್ತಾವ
165 ವಿಭಾಗದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚಿಕಿತ್ಸೆಗೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.
ಡಾ. ಸೂರಜಾ ನಾಯಕ, ಟಿಎಚ್‌ಒ
ಚಿತ್ತಾಕುಲದಲ್ಲಿ ಗೋಶಾಲೆ ನಿರ್ಮಾಣ: ಡಿಸಿ: ಬೀಡಾಡಿ ಜಾನುವಾರುಗಳ ಸಮಸ್ಯೆ ಜಿಲ್ಲೆಯ ಹಲವೆಡೆ ಇರುವುದು ಗಮನಕ್ಕೆ ಬಂದಿದೆ. ಚಿತ್ತಾಕುಲ ಗ್ರಾಪಂ ವ್ಯಾಪ್ತಿಯಲ್ಲಿ ಗೋ ಶಾಲೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮೋದನೆಯಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದ ಸುಜಯ ಅವರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೀಘ್ರದಲ್ಲಿ ಗೋಶಾಲೆ ನಿರ್ಮಿಸಿ ಬೀಡಾಡಿ ಜಾನುವಾರುಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ವಿವರಿಸಿದರು.