Blood Circulation: ನಿಮ್ಮ ದೇಹದ ಬ್ಲಡ್‌ ಸರ್ಕ್ಯುಲೇಷನ್‌ ಸರಿಯಾಗಿದ್ಯಾ? ಚೆಕ್‌ ಮಾಡ್ಕೊಳಿ

By Contributor AsianetFirst Published Oct 1, 2022, 12:29 PM IST
Highlights

ದೇಹದೆಲ್ಲೆಡೆ ಸರಿಯಾಗಿ ರಕ್ತ ಪೂರೈಕೆ ಆಗುವುದು ಅತಿ ಅಗತ್ಯ. ಇಲ್ಲವಾದಲ್ಲಿ ಹಲವು ಗಂಭೀರ ಸಮಸ್ಯೆಗಳು ಉಂಟಾಗಬಲ್ಲವು. ದೇಹಕ್ಕೆ ಸರಿಯಾಗಿ ರಕ್ತಪೂರೈಕೆ ಆಗುತ್ತಿದೆಯೇ ಇಲ್ಲವೇ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಚೆಕ್‌ ಮಾಡಿಕೊಳ್ಳಿ.
 

ಪಾದಗಳು ಪದೇ ಪದೆ ಜೋಮು ಹಿಡಿಯುವುದು ಕೆಲವರಿಗೆ ಸಾಮಾನ್ಯ. ಹೆಚ್ಚು ಹೊತ್ತು ಕುಳಿತುಕೊಂಡಾಗ ಜೋಮು ಹಿಡಿಯುತ್ತದೆ. ಆಗ ಕಾಲುಗಳನ್ನು ಊರಲು ಸಾಧ್ಯವಾಗದಂತೆ ವಿಚಿತ್ರ ಭಾವನೆ ಉಂಟಾಗುತ್ತದೆ. ಇದು ರಕ್ತ ಸರಾಗವಾಗಿ ಹರಿಯದೆ ಇರುವುದನ್ನು ಸೂಚಿಸುತ್ತದೆ. ದೇಹದಲ್ಲಿ ಸರಿಯಾಗಿ ರಕ್ತಸಂಚಾರ ಆಗದಿರುವುದಕ್ಕೆ ಹಲವು ಕಾರಣಗಳಿವೆ. ಮುಖ್ಯ ಕಾರಣವೆಂದರೆ, ದೀರ್ಘಕಾಲದಿಂದ ಇರುವ ಆರೋಗ್ಯ ಸಮಸ್ಯೆಗಳು. ರಕ್ತನಾಳಗಳು ದೇಹದೆಲ್ಲೆಡೆ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆ ಮಾಡುತ್ತವೆ. ಆದರೆ, ಈ ನಾಳಗಳು ಅಲ್ಲಲ್ಲಿ ಸಂಕುಚಿತಗೊಂಡಾಗ ರಕ್ತಸಂಚಾರದಲ್ಲಿ ಅಡೆತಡೆ ಉಂಟಾಗುತ್ತದೆ. ಕಾಲುಗಳು ಮಾತ್ರವಲ್ಲ, ಕೆಲವೊಮ್ಮೆ ಒಂದೇ ಮಗ್ಗುಲಲ್ಲಿ ಹೆಚ್ಚು ಸಮಯ ಮಲಗಿದಾಗ ಕೈ, ಭುಜಗಳೂ ಜೋಮು ಹಿಡಿದಂತೆ ಆಗಬಹುದು. ಆದರೂ ಕಾಲುಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಹೀಗೆ ಜೋಮು ಹಿಡಿದಾಗ ಕೆಲವೊಮ್ಮೆ ಪಾದಗಳು  ತಣ್ಣಗಾದಂತೆಯೂ ಅನಿಸಬಹುದು. ಇದನ್ನು ಪೆರ್ಫರಿಲ್‌ ಆರ್ಟಿರಿಯಲ್‌ ಡಿಸೀಸ್‌ ಎಂದು ಕರೆಯುತ್ತಾರೆ. ಇದು ಸಾಮಾನ್ಯ ರೋಗವಾಗಿದ್ದು, ಭಾರತದಲ್ಲಿ ಲಕ್ಷಾಂತರ ಜನ ಇದರಿಂದ ಬಳಲುತ್ತಿದ್ದಾರೆ. ಈ ರೋಗದಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳಲು ಆರಂಭವಾಗುತ್ತವೆ. ಆಗ ದೇಹದ ವಿವಿಧ ಭಾಗಗಳಿಗೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ.

ಸರಿಯಾದ ಸಮಯಕ್ಕೆ ಈ ಸಮಸ್ಯೆಗೆ ಚಿಕಿತ್ಸೆ (Treatment) ಪಡೆಯದಿದ್ದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಗಂಭೀರ ಸ್ವರೂಪಕ್ಕೆ ತಿರುಗಬಹುದು. ಅಂದರೆ, ಇದರಿಂದ ಕೊರೊನರಿ ಹಾರ್ಟ್‌ ಡಿಸೀಸ್‌ (Coronary Heart Disease) ಅಥವಾ ಸೆರೆಬ್ರೊವಾಸ್ಕ್ಯುಲಾರ್‌ ಡಿಸೀಸ್‌ ಉಂಟಾಗಿ ಹೃದಯಾಘಾತ (Attack) ಮತ್ತು ಪಾರ್ಶ್ವವಾಯು (Stroke) ಉಂಟಾಗಬಹುದು. ಪೆರ್ಫರಿಲ್‌ ಆರ್ಟಿರಿಯಲ್‌ ಡಿಸೀಸ್‌ ಗೆ ಮುಖ್ಯ ಕಾರಣ ದೇಹದ ಎಲ್ಲ ಭಾಗಗಳಿಗೂ ಸರಿಯಾದ ರೀತಿಯಲ್ಲಿ ಮತ್ತು ಪ್ರಮಾಣದಲ್ಲಿ ರಕ್ತದ ಪೂರೈಕೆ (Blood Supply) ಆಗದೆ ಇರುವುದು. ಆಗ ವ್ಯಕ್ತಿಗೆ ನಡೆಯಲು ಕಷ್ಟವಾಗುತ್ತದೆ, ಪಾದ, ಕಾಲುಗಳಲ್ಲಿ ನೋವು (Pain in Leg) ಉಂಟಾಗುತ್ತದೆ. ರಕ್ತಸಂಚಾರ (Blood Flow) ಕೆಟ್ಟುನಿಂತಾಗ ದೇಹದ ಅಂಗಾಂಗಗಳಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ (Oxygen) ದೊರೆಯುವುದಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ಮತ್ತು ಮದ್ಯಪಾನಗಳಿಂದ ರಕ್ತನಾಳಗಳು ಸಂಕುಚಿತಗೊಳ್ಳಲು ಆರಂಭವಾಗುತ್ತವೆ. ಹೀಗಾಗಿ, ಕೆಲವು ಮುನ್ಸೂಚನೆಗಳನ್ನು ಗ್ರಹಿಸಿ ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: ಪ್ರಸವಾ ನಂತರ ಕಾಡುವ ಗ್ಯಾಸ್ಟಿಕ್ ಸಮಸ್ಯೆ! ಸರಳ ಪರಿಹಾರ ಮಾಡಿ ನೋಡಿ!

•    ಕಾಲುಗಳಲ್ಲಿ ಊತ (Welling) ಕಂಡುಬಂದರೆ ನಿರ್ಲಕ್ಷ್ಯ ಬೇಡ. ದೀರ್ಘಕಾಲ ಕುಳಿತುಕೊಂಡು ಪ್ರಯಾಣ ಮಾಡುವ ಸಮಯದಲ್ಲಿ ಕಾಲುಗಳಲ್ಲಿ ಊತ ಕಂಡುಬರುವುದು ಸಾಮಾನ್ಯ. ಆದರೆ, ಅಂತಹ ವಿಶೇಷ ಸಮಯ ಹೊರತುಪಡಿಸಿ ಬೇರೆ ಸಮಯದಲ್ಲೂ ಕಾಲುಗಳಲ್ಲಿ ಪದೇ ಪದೆ ಊತ ಕಂಡುಬಂದರೆ ತಪಾಸಣೆ ಮಾಡಿಸಿಕೊಳ್ಳಿ. ಇದು ರಕ್ತನಾಳಗಳ (Vessels) ಅಸಮರ್ಥತೆಯನ್ನು ಸೂಚಿಸುತ್ತದೆ. ಊತ ಕಂಡುಬರುತ್ತಿದ್ದರೆ ಕಾಲುಗಳನ್ನು ದಿಂಬಿನ ಮೇಲೆ ಇಟ್ಟುಕೊಂಡು ಮಲಗಿ. 

•    ಕಾಲುಗಳಲ್ಲಿ ನೀಲಿ (Blue) ಅಥವಾ ಕಪ್ಪು (Black) ಕಲೆ ಆಗುತ್ತಿದ್ದರೆ ಗಮನ ನೀಡಿ. ಇದೂ ಸಹ ರಕ್ತನಾಳಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದನ್ನು ತೋರುತ್ತದೆ. ಚರ್ಮದ ಮೇಲಿನ ಇಂತಹ ಬದಲಾವಣೆ ಹಿಮೋಗ್ಲೊಬಿನ್‌ ನಿಂದ ಆಕ್ಸಿಡೈಸ್ಡ್‌ ಆಗಿರುವ ಕಬ್ಬಿಣಾಂಶದಿಂದ ಉಂಟಾಗುತ್ತದೆ. ದೀರ್ಘಕಾಲದಿಂದ ದೇಹದ ಮೇಲ್ಭಾಗಕ್ಕೆ ಚಲಿಸದೆ ರಕ್ತನಾಳಗಳಲ್ಲಿ ಸ್ಥಗಿತವಾಗಿಬಿಟ್ಟಾಗ ಕಲೆಗಳು ಕಂಡುಬರುತ್ತವೆ. 

•    ದೇಹದ ಭಾಗಗಳಲ್ಲಿ ಜೋಮು (Stun) ಹಿಡಿಯುವುದು ಒಳ್ಳೆಯದಲ್ಲ.  ಕೈಕಾಲುಗಳು ಪದೇ ಪದೆ ಜೋಮು ಹಿಡಿಯುತ್ತಿದ್ದರೆ ಎಚ್ಚರಿಕೆ ವಹಿಸಿ. ಒಂದೇ ಕಡೆ ಹೆಚ್ಚು ಸಮಯ ಕುಳಿತುಕೊಳ್ಳಬೇಡಿ, ದಿನವೂ ವ್ಯಾಯಾಮ ಮಾಡಿ. 

•    ಕಾಲುಗಳಲ್ಲಿ ನೋವಾಗುತ್ತಿದೆಯೇ? ನಡೆಯುತ್ತಿರುವಾಗ ಕಾಲುಗಳಲ್ಲಿ ತೀವ್ರ ನೋವಾಗಿ, ನಡೆಯುವುದನ್ನು ಆಗಾಗ ನಿಲ್ಲಿಸಿ ಮುಂದೆ ಸಾಗಬೇಕೆ? ಇದು ಸಹ ರಕ್ತದ ಹರಿವು ಸುಗಮವಾಗಿ ಇಲ್ಲದಿರುವುದನ್ನು ಸೂಚಿಸುತ್ತದೆ. ಆ ಸಮಯದಲ್ಲಿ  ಮಾಂಸಖಂಡಗಳಿಗೆ ಬೇಕಾದ ರಕ್ತದ ಪೂರೈಕೆ ಆಗುವುದಿಲ್ಲ.

•    ಬೆರಳುಗಳು ಹಳದಿ (Yellow) ಬಣ್ಣಕ್ಕೆ ತಿರುಗುತ್ತಿದೆಯೇ ಚೆಕ್ ಮಾಡಿಕೊಳ್ಳಿ. ದೇಹದ ಮೇಲ್ಭಾಗದ ರಕ್ತಸಂಚಾರಕ್ಕೆ ಸಮಸ್ಯೆ ಆಗುವುದು ಅತಿ ಕಡಿಮೆ. ಈ ತೊಂದರೆ ಕೆಲವೇ ಜನರಲ್ಲಿ ಕಂಡುಬರುತ್ತದೆ. ಒಂದೊಮ್ಮೆ ಹಾಗಾದರೆ ಕೈಬೆರಳುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.  

click me!